ಗುರುವಾರ , ನವೆಂಬರ್ 14, 2019
18 °C
ಅಭ್ಯರ್ಥಿಗಳಿಗೆ ಸೂಚನೆ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ

ಚುನಾವಣಾ ವೆಚ್ಚದ ಲೆಕ್ಕ ಕೊಡಿ

Published:
Updated:
Prajavani

ದಾವಣಗೆರೆ: ಪಾಲಿಕೆ ಚುನಾವಣೆಯಲ್ಲಿ ಸ್ಪರ್ಧಿಸಿದವರು ಮಾಡಿದ ವೆಚ್ಚವನ್ನು ಪ್ರತಿದಿನ ನಿರ್ವಹಣೆ ಮಾಡಬೇಕು. ನ.7, 9 ಮತ್ತು 11ರಂದು ನೀಡಬೇಕು. ತಪ್ಪಿದರೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಅವಕಾಶ ಸಿಗುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದರು.

ಜಿಲ್ಲಾಡಳಿತ ಭವನದಲ್ಲಿ ಬುಧವಾರ ವಿವಿಧ ಪಕ್ಷಗಳು ಮತ್ತು ಸ್ಪರ್ಧಾಳುಗಳಿಗೆ ಚುನಾವಣೆ ವೆಚ್ಚ ನಿರ್ವಹಣೆ ಕುರಿತು ಮಾಹಿತಿ ನೀಡಿದರು.

ಒಬ್ಬ ಅಭ್ಯರ್ಥಿ ಅಧಿಕ ಅಂದರೆ ₹ 3 ಲಕ್ಷ ವೆಚ್ಚ ಮಾಡಲು ಅವಕಾಶ ಇದೆ. ಅದನ್ನು ಮೀರಬಾರದು. ಯಾವುದೇ ಅಭ್ಯರ್ಥಿ ಲೆಕ್ಕ ನೀಡದೇ ಹೋದರೆ 30 ದಿನಗಳ ಒಳಗೆ ಚುನಾವಣಾಧಿಕಾರಿಗಳು ವೆಚ್ಚದ ಮಾಹಿತಿ ಪಡೆಯಬೇಕು. ಪಡೆಯದಿದ್ದರೆ ಅಧಿಕಾರಿಗಳ ವಿರುದ್ಧವೂ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿ ಮತ್ತು ಅಭ್ಯರ್ಥಿಗಳ ಕಡೆಯವರು ಯಾವುದೇ ರೀತಿಯ ಚುನಾವಣಾ ಅಕ್ರಮಗಳಲ್ಲಿ ಭಾಗಿಯಾಗಬಾರದು. ಜಿಲ್ಲಾಡಳಿತ, ಜಿಲ್ಲಾ ಪೊಲೀಸ್ ಇಲಾಖೆಯು ಚುನಾವಣಾಧಿಕಾರಿಗಳ ಸಹಕಾರದೊಂದಿಗೆ ನಿರ್ಭೀತ, ಶಾಂತಿಯುತ ಚುನಾವಣೆ ನಡೆಸಲಾಗುವುದು. ಯಾವುದೇ ವ್ಯಕ್ತಿಗಳು, ಸಂಘಗಳು ಯಾರನ್ನಾದರೂ ಹೆದರಿಸಿ, ಬೆದರಿಸುವುದು ಕಂಡು ಬಂದಲ್ಲಿ ನನಗೆ ಅಥವಾ ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ ಎಂದು ಸೂಚಿಸಿದರು.

ಅಭ್ಯರ್ಥಿ ನಾಮಪತ್ರ ಸಲ್ಲಿಸಿದ ದಿನದಿಂದ ಲೆಕ್ಕಪತ್ರ ನಿರ್ವಹಣೆ ಆರಂಭವಾಗುತ್ತದೆ. ಅಭ್ಯರ್ಥಿಗಳು ತಾವು ಪ್ರಚಾರಕ್ಕೆ ಬಳಸುವ ವಾಹನ ಸ್ವಂತದ್ದೇ ಆಗಿದ್ದರೂ ಚುನಾವಣಾಧಿಕಾರಿಗಳಿಂದ ಅನುಮತಿ ಪಡೆದು ಅದಕ್ಕೆ ಬಳಸುವ ಡೀಸೆಲ್ ಹಾಗೂ ಪ್ರಚಾರದ ವೆಚ್ಚವನ್ನು ಸಲ್ಲಿಸಬೇಕು ಎಂದರು.

ಪಾಲಿಕೆ ಚುನಾವಣೆ ವೆಚ್ಚ ವೀಕ್ಷಕ ವರದರಾಜ್, ‘ಅಭ್ಯರ್ಥಿಗಳು ತಮಗೆ ಸಂಬಂಧಿಸಿದ ವೆಚ್ಚದ ವಿವರಗಳನ್ನು ನಿಗದಿತ ನಮೂನೆಯಲ್ಲಿ ನಮೂದಿಸಿ ತಮ್ಮ ಚುನಾವಣಾಧಿಕಾರಿಗಳಿಗೆ ಸಲ್ಲಿಸ‌ಬೇಕು. ಕರಪತ್ರ ಮುದ್ರಿಸಲು, ಚುನಾವಣಾ ಪ್ರಚಾರ ನಡೆಸುವ ವಾಹನಗಳಿಗೆ ಅನುಮತಿ ಪಡೆಯಬೇಕು. ಪ್ರತಿದಿನ ಚುನಾವಣಾ ಪ್ರಚಾರಕ್ಕೆ ತಗಲುವ ವೆಚ್ಚವನ್ನು ವೋಚರ್ ಬಿಲ್ ಸಮೇತ ನಮೂನೆಯಲ್ಲಿ ಭರ್ತಿ ಮಾಡಿ ಖರ್ಚಿನ ವಿವರನ್ನು ಏಜೆಂಟರ ಮೂಲಕ ವೆಚ್ಚ ವಿಭಾಗಕ್ಕೆ ಸಲ್ಲಿಸಬೇಕು’ ಎಂದರು.

ದೇಶದ ಮಹಾನ್ ವ್ಯಕ್ತಿಗಳ ಚಿತ್ರವನ್ನು ತಮ್ಮ ಕರಪತ್ರದಲ್ಲಿ ಬಳಸಬಹುದೇ ಎಂದು ಪಕ್ಷೇತರ ಅಭ್ಯರ್ಥಿ ಸುರಭಿ ಶಿವಮೂರ್ತಿ ಪ್ರಶ್ನಿಸಿದರು.

ಸಂವಿಧಾನ ಮತ್ತು ಆರ್‌ಪಿ ಕಾಯ್ದೆ ಪ್ರಕಾರ ಚುನಾವಣೆ ನಡೆಯುತ್ತದೆ. ಇದರನ್ವಯ ಚುನಾವಣೆಯಲ್ಲಿ ಮಹಾನ್ ವ್ಯಕ್ತಿಗಳ ಚಿತ್ರ ಬಳಸಲು ಅವಕಾಶವಿಲ್ಲ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು.

ವೆಚ್ಚ ನಿರ್ವಹಣೆ ಕುರಿತು ಪ್ರಭಾರ ಹೆಚ್ಚುವರಿ ಜಿಲ್ಲಾಧಿಕಾರಿ ಜಿ. ನಜ್ಮಾ, ಚುನಾವಣಾ ತಹಶೀಲ್ದಾರ್ ಪ್ರಸಾದ್ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)