ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚನ್ನಗಿರಿ: ಶೌಚಾಲಯ ನಿರ್ಮಾಣ ರದ್ದುಪಡಿಸಿ

ಕೋರ್ಟ್‌ ಆವರಣದ ಬದಲು, ಶಾಲೆಗಳ ಬಳಿ ಕಾಮಗಾರಿಗೆ ಪುರಸಭೆ ಸದಸ್ಯರ ಒತ್ತಾಯ
Last Updated 23 ಜೂನ್ 2022, 2:21 IST
ಅಕ್ಷರ ಗಾತ್ರ

ಚನ್ನಗಿರಿ: 2022-23ನೇ ಸಾಲಿನ ಅಮೃತ ನಗರ ಯೋಜನೆ ಅಡಿಯಲ್ಲಿ ಕೋರ್ಟ್ ಆವರಣ ಅಥವಾ ಸಾರ್ವಜನಿಕ ಗ್ರಂಥಾಲಯದ ಆವರಣದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಅನುಮೋದನೆ ಪಡೆದಿದ್ದು, ಅದನ್ನು ರದ್ದುಪಡಿಸಬೇಕು ಎಂದು ಪುರಸಭೆ ಸದಸ್ಯರು ಒತ್ತಾಯಿಸಿದರು.

ಪಟ್ಟಣದ ಪುರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಒತ್ತಾಯಿಸಿದ ಸದಸ್ಯರಾದ ಅಮೀರ್ ಅಹಮದ್, ಸೈಯದ್ ಗೌಸ್ ಪೀರ್, ಗಾದ್ರಿ ರಾಜು, ಜಿ. ನಿಂಗಪ್ಪ, ‘ಕಾಮಗಾರಿಯನ್ನು ರದ್ದುಪಡಿಸಿ, ಬದಲಿ ಕಾಮಗಾರಿ ಕೈಗೊಳ್ಳಬೇಕು ಎಂದರು.

ಪುರಸಭೆ ಸದಸ್ಯರ ಗಮನಕ್ಕೆ ಬಾರದಂತೆ ಶೌಚಾಲಯ ನಿರ್ಮಿಸಲು ಅಧ್ಯಕ್ಷರು ಒಪ್ಪಿಗೆ ನೀಡಿದ್ದಾರೆ. ಇದರಿಂದ ಸದಸ್ಯರ ಮಾತಿಗೆ ಬೆಲೆ ಇಲ್ಲದಂತಾಗಿದೆ. ಪಟ್ಟಣದ ಅನೇಕ ಶಾಲೆಗಳಲ್ಲಿ ಶೌಚಾಲಯಗಳು ಇಲ್ಲ. ಶಾಲೆಗಳ ಮುಖ್ಯಶಿಕ್ಷಕರು ನಮ್ಮ ಶಾಲೆಗೆ ಶೌಚಾಲಯವನ್ನು ನಿರ್ಮಿಸಿಕೊಡಿ ಎಂದು ಮನವಿ ಮಾಡಿಕೊಂಡಿದ್ದಾರೆ. ಈ ಕಾಮಗಾರಿಯನ್ನು ರದ್ದು‌ಪಡಿಸಿ ಶಾಲೆಗಳಲ್ಲಿ ಶೌಚಾಲಯ ನಿರ್ಮಿಸಲು ಮುಂದಾಗಬೇಕು ಎಂದು ಆಗ್ರಹಿಸಿದರು.

202-23ನೇ ಸಾಲಿಗೆ 15ನೇ ಹಣಕಾಸು ಯೋಜನೆಗೆ ₹ 92 ಲಕ್ಷ ಅನುದಾನ ಮಂಜೂರಾಗಿದ್ದು, ಈ ಅನುದಾನದಲ್ಲಿ ಶೇ 30ರಷ್ಟು ಅನುದಾನವನ್ನು ಕುಡಿಯುವ ನೀರು ನಿರ್ವಹಣೆಗೆ, ₹ 27.50 ಲಕ್ಷ ಘನತ್ಯಾಜ್ಯ ಘಟಕದ ನಿರ್ವಹಣೆಗೆ ಮೀಸಲಿಡಬೇಕಾಗಿದೆ. ₹ 36.80 ಲಕ್ಷ ಉಳಿಯಲಿದ್ದು, ಇದರಲ್ಲಿ ₹ 5 ಲಕ್ಷ ವಿದ್ಯುತ್ ಬಿಲ್ ಪಾವತಿಗೆ ನೀಡಿ, ಉಳಿದ ₹ 31.80 ಲಕ್ಷ ಅನುದಾನ ಕಾಮಗಾರಿಗಳಿಗೆ ಬಳಸಬೇಕಾಗಿದೆ. ಅದಕ್ಕಾಗಿ ಕ್ರಿಯಾಯೋಜನೆ ತಯಾರಿಸಿ, ಜಿಲ್ಲಾಧಿಕಾರಿ ಅನುಮೋದನೆಗೆ ಕಳುಹಿಸಬೇಕಾಗಿದೆ ಎಂದು ಮುಖ್ಯಾಧಿಕಾರಿ ಕೆ. ಪರಮೇಶ್ ಸಭೆಯ ಗಮನಕ್ಕೆ ತಂದರು.

ಪಟ್ಟಣದಲ್ಲಿ ಸ್ವಚ್ಛತೆ ಇಲ್ಲ. ಚರಂಡಿಗಳು ತುಂಬಿವೆ. ವಾರ್ಡ್‌ಗಳಲ್ಲಿ ಜನರ ಮುಂದೆ ಹೋಗುವುದು ಕಷ್ಟವಾಗಿದೆ. ಸ್ವಚ್ಛತೆಗೆ ಒತ್ತು ನೀಡಬೇಕು ಎಂದು ಸದಸ್ಯರಾದ ಚಿಕ್ಕಪ್ಪ, ಪಟ್ಲಿ ನಾಗರಾಜ್, ಅಣ್ಣಯ್ಯ, ಸವಿತಾ ರಾಘವೇಂದ್ರ, ಸರ್ವಮಂಗಳಮ್ಮ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಮುಖ್ಯಾಧಿಕಾರಿ ಪರಮೇಶ್, ‘ಪ್ರತಿ ದಿನ 10ರಿಂದ 12 ಪೌರ ಕಾರ್ಮಿಕರು ವಿವಿಧ ಕಾರಣಗಳಿಂದ ಕೆಲಸಕ್ಕೆ ಹಾಜರಾಗುತ್ತಿಲ್ಲ. ಸ್ವಚ್ಛತಾ ಕಾರ್ಯಕ್ಕೆ ಸಿಬ್ಬಂದಿ ಕೊರತೆ ಇದೆ. ಹೀಗಾಗಿ ವಾರ್ಡ್‌ಗಳಲ್ಲಿ ಸ್ವಚ್ಛತೆಗೆ ತೊಂದರೆಯಾಗಿದೆ’ ಎಂದರು.

ಕೊಳಚೆ ನಿರ್ಮೂಲನಾ ಮಂಡಳಿಯಿಂದ ಕೊಳಚೆ ಪ್ರದೇಶಗಳಲ್ಲಿ ಬಡ ವರ್ಗದವರಿಗೆ ಮನೆಗಳನ್ನು ನಿರ್ಮಿಸಿಕೊಡಲು 1002 ಮನೆಗಳು ಸರ್ಕಾರದಿಂದ ಮಂಜೂರಾಗಿವೆ. ಪ್ರತಿ ಮನೆಯನ್ನು ₹ 7.50 ಲಕ್ಷ ವೆಚ್ಚದಲ್ಲಿ ಕೊಳಚೆ ನಿರ್ಮೂಲನಾ ಮಂಡಳಿಯೇ ನಿರ್ಮಿಸುತ್ತಿದೆ. ಆದರೆ ಮನೆಗಳ ಗುತ್ತಿಗೆ ಪಡೆದಿರುವ ಗುತ್ತಿಗೆದಾರರು ಕಳಪೆ ಕಾಮಗಾರಿ ನಡೆಸಿದ್ದಾರೆ ಎಂಬ ದೂರುಗಳು ಬಂದಿವೆ. ಸಂಬಂಧಪಟ್ಟ ಎಂಜಿನಿಯರ್ ನಿಗಾ ವಹಿಸಬೇಕು ಎಂದು ಸದಸ್ಯರಾದ ಪರಮೇಶ್ ಪಾರಿ, ಚ.ಮ. ಗುರುಸಿದ್ದಯ್ಯ, ಜಿ.ನಿಂಗಪ್ಪ, ಬಿ.ಆರ್. ಹಾಲೇಶ್ ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಕೊಳಚೆ ನಿರ್ಮೂಲನಾ ಮಂಡಳಿಯ ಸಹಾಯಕ ಎಂಜಿನಿಯರ್, ‘ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಲಾಗುವುದು. ಒಂದು ಮನೆಗೆ ಎಷ್ಟು ಪ್ರಮಾಣದ ಸಾಮಗ್ರಿಗಳನ್ನು ಬಳಸಬೇಕು ಎಂಬುದರ ಬಗ್ಗೆ ವಾರ್ಡ್‌ ಸದಸ್ಯರಿಗೆ ಮಾಹಿತಿ ನೀಡಲಾಗುವುದು’ ಎಂದರು

ಪುರಸಭೆ ಅಧ್ಯಕ್ಷೆ ಲಕ್ಷ್ಮೀದೇವಮ್ಮ, ಉಪಾಧ್ಯಕ್ಷೆ ಜರೀನಾಬೀ, ಸ್ಥಾಯಿ ಸಮಿತಿ ಅಧ್ಯಕ್ಷ ಅಸ್ಲಾಂ ಬೇಗ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT