ಸೋಮವಾರ, ಅಕ್ಟೋಬರ್ 14, 2019
22 °C

‘ಕ್ಯಾನ್ಸರ್ ನಡೆ’ ಜಾಗೃತಿ ಜಾಥಾ

Published:
Updated:

ದಾವಣಗೆರೆ: ದಾವಣಗೆರೆ ಕ್ಯಾನ್ಸರ್ ಫೌಂಡೇಷನ್, ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಅ.13ರಂದು ದಾವಣಗೆರೆಯಲ್ಲಿ ‘ಕ್ಯಾನ್ಸರ್ ನಡೆ’ ಜಾಥಾ ಆಯೋಜಿಸಲಾಗಿದೆ ಎಂದು ಕ್ಯಾನ್ಸರ್‌ಮುಕ್ತ ಕಲಾವಿದ ಆರ್.ಟಿ. ಅರುಣ್‌ಕುಮಾರ್ ತಿಳಿಸಿದರು.

ಕ್ಯಾನ್ಸರ್ ಬಂದಾಕ್ಷಣ ಭಯ ಪಡಬೇಕಿಲ್ಲ. ಆಧುನಿಕ ಕಾಲದಲ್ಲಿ ಸೂಕ್ತ ಚಿಕಿತ್ಸೆಗಳಿವೆ. ಈ ಬಗ್ಗೆ ಜಾಥಾ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ವಿಶ್ವದಲ್ಲಿ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿರುವ ರೋಗವಾಗಿದೆ. ಶೇ 33ರಷ್ಟು ಮಹಿಳೆಯರು ಸ್ತನ ಕ್ಯಾನ್ಸರ್‌ಗೆ ತುತ್ತಾಗುತ್ತಿದ್ದಾರೆ. ಒಮ್ಮೆ ಕ್ಯಾನ್ಸರ್ ಆವರಿಸಿದರೆ ಇಡೀ ದೇಹವನ್ನೇ ವ್ಯಾಪಿಸಲಿದೆ. ಮುಂಜಾಗರೂಕತೆ ಹಾಗೂ ಆರಂಭಿಕ ಹಂತದಿಂದಲೇ ಸೂಕ್ತ ಚಿಕಿತ್ಸೆ ಪಡೆದರೆ ರೋಗದಿಂದ ಮುಕ್ತರಾಗಬಹುದು ಎಂದರು.

ಭಾರತೀಯ ರೆಡ್‌ಕ್ರಾಸ್‌ನ ಸ್ಥಳೀಯ ಘಟಕ, ಲೈಫ್‌ಲೈನ್ ಸಂಸ್ಥೆ, ದಾವಣಗೆರೆ ವಿವಿ, ಜಿಲ್ಲಾ ವರದಿಗಾರರ ಕೂಟ, ಹೈದ್ರಾಬಾದ್‌ನ ಗ್ರೇಸ್ ಕ್ಯಾನ್ಸರ್ ಫೌಂಡೇಷನ್, ಭಾರತೀಯ ವೈದ್ಯಕೀಯ ಸಂಘ ಈ ಜಾಥಾಕ್ಕೆ ಬೆಂಬಲಿಸಿವೆ. ನಗರದ ವೈದ್ಯಕೀಯ ಹಾಗೂ ಇತರೆ ಕಾಲೇಜು ವಿದ್ಯಾರ್ಥಿಗಳು ಸೇರಿ ಸುಮಾರು 1ಸಾವಿರಕ್ಕೂ ಹೆಚ್ಚು ಜನರು ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದರು.

ಅಂದು ಬೆಳಗ್ಗೆ 7-30ಕ್ಕೆ ಮೋತಿ ವೀರಪ್ಪ ಪಪೂ ಕಾಲೇಜು ಮೈದಾನದಲ್ಲಿ ಜಾಥಾಕ್ಕೆ ಜಿಲ್ಲಾಧಿಕಾರಿ  ಮಹಾಂತೇಶ್ ಬೀಳಗಿ ಚಾಲನೆ ನೀಡಲಿದ್ದು, ಮೋದಿ ಸರ್ಕಲ್, ಚಿಗಟೇರಿ ಆಸ್ಪತ್ರೆಯಿಂದ ವಿದ್ಯಾರ್ಥಿ ಭವನ ಸರ್ಕಲ್, ಅಂಬೇಡ್ಕರ್ ವೃತ್ತ, ಜಯದೇವ ವೃತ್ತ, ಗಾಂಧಿ ವೃತ್ತ ಹಾಗೂ ನಗರಪಾಲಿಕೆಯಿಂದ ಎವಿಕೆ ಕಾಲೇಜು ರಸ್ತೆಗೆ ತಲುಪಿ ಅಲ್ಲಿಂದ ರಾಮ್‌ ಅಂಡ್ ಕೊ ಸರ್ಕಲ್, ಚರ್ಚ್‌ ರಸ್ತೆ, ಡಾ.ಎಂ.ಸಿ. ಮೋದಿಯ ಮೂಲಕ ಮೋತಿ ವೀರಪ್ಪ ಕಾಲೇಜು ತಲುಪಲಾಗುವುದು. ವಿವಿಧ ರಸ್ತೆಗಳಲ್ಲಿ ಒಟ್ಟು 4 ಕಿಮೀ ವ್ಯಾಪ್ತಿಯ ಜಾಥಾದಲ್ಲಿ ಫಲಕಗಳನ್ನು ಪ್ರದರ್ಶಿಸಲಾಗುವುದು ಎಂದು ತಿಳಿಸಿದರು.

ದಾವಣಗೆರೆ ಕ್ಯಾನ್ಸರ್ ಫೌಂಡೇಷನ್ ಅಧ್ಯಕ್ಷ ಡಾ.ಶ್ರೀಶೈಲ ಎಂ ಬ್ಯಾಡಗಿ ಮಾತನಾಡಿ, ‘ಕ್ಯಾನ್ಸರ್ ಪೀಡಿತರಿಗೆ ಚಿಕಿತ್ಸೆ ನೀಡಲೆಂದು 8 ತಿಂಗಳಿಂದ ಫೌಂಡೇಷನ್ ಆರಂಭಿಸಿದ್ದೇವೆ. ನಗರದಲ್ಲಿ ರೇಡಿಯೇಷನ್ ಕೇಂದ್ರದ ಕೊರತೆ ಇದೆ. ನಮ್ಮ ಕೇಂದ್ರದಲ್ಲಿ ಬಡವರು ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗುವುದು’ ಎಂದರು.

ಇಎನ್‌ಟಿ ತಜ್ಞ, ರೆಡ್‌ಕ್ರಾಸ್ ಸಂಸ್ಥೆ ಚೇರ್ಮನ್ ಡಾ. ಎ.ಎಂ. ಶಿವಕುಮಾರ್ ಮಾತನಾಡಿ, ‘ಭಾರತೀಯ ವೈದ್ಯಕೀಯ ಸಂಸ್ಥೆ ಸಭಾಂಗಣದಲ್ಲಿ ಪ್ರತಿ 15 ದಿನಕ್ಕೊಮ್ಮೆ 40 ವರ್ಷ ಮೇಲ್ಪಟ್ಟವರಿಗೆ ಎಂಡೋಸ್ಕಪಿ ಮೂಲಕ ಉಚಿತವಾಗಿ ಕ್ಯಾನ್ಸರ್ ತಪಾಸಣೆ ಶಿಬಿರ ನಡಸುವ ಉದ್ದೇಶವಿದೆ’ ಎಂದರು.

ಗೋಷ್ಠಿಯಲ್ಲಿ ಡಾ. ಸುನೀಲ್ ಬ್ಯಾಡಗಿ, ಜಿಲ್ಲಾ ವರದಿಗಾರರ ಕೂಟದ ಅಧ್ಯಕ್ಷ ಬಿ.ಎನ್.ಮಲ್ಲೇಶ್ ಇದ್ದರು.

Post Comments (+)