ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕ್ಯಾನ್ಸರ್‌: ಗುಣಮುಖವಾದರೂ ನಿರ್ಲಕ್ಷ್ಯ ಬೇಡ’

Last Updated 3 ಫೆಬ್ರುವರಿ 2023, 4:34 IST
ಅಕ್ಷರ ಗಾತ್ರ

ದಾವಣಗೆರೆ: ‘ಕ್ಯಾನ್ಸರ್‌ಗೆ ತುತ್ತಾಗಿ ಚಿಕಿತ್ಸೆ ಪಡೆದುಕೊಂಡ ನಂತರದಲ್ಲಿ ಸಂಪೂರ್ಣ ಗುಣಮುಖರಾಗಿರುವಿರಿ ಎಂದು ವೈದ್ಯರು ಹೇಳಿದ ಮೇಲೂ ಮುಂದಿನ ಮೂರು ವರ್ಷಗಳವರೆಗೆ ನಿಯಮಿತ ತಪಾಸಣೆ, ವೈದ್ಯರು ಹೇಳಿದ್ದನ್ನು ಪಾಲಿಸುವುದು ಅತ್ಯಗತ್ಯ’

2009ರಲ್ಲಿ ಕೋಲನ್‌ ಕ್ಯಾನ್ಸರ್‌ಗೆ ಗುರಿಯಾಗಿ, ಸತತ ಚಿಕಿತ್ಸೆಯಿಂದ ಗುಣಮುಖರಾಗಿ, ಇದೀಗ ಕ್ಯಾನ್ಸರ್‌ ರೋಗಿಗಳಲ್ಲಿ ಕ್ಯಾನ್ಸರ್‌ ಗೆಲ್ಲುವಂತೆ ಆತ್ಮವಿಶ್ವಾಸ, ಜಾಗೃತಿ ಮೂಡಿಸುತ್ತಿರುವ ದಾವಣಗೆರೆಯ ಹಿರಿಯ ಕಲಾವಿದ ಆರ್‌.ಟಿ. ಅರುಣ್‌ಕುಮಾರ್‌ ನೀಡುವ ಸಲಹೆ ಇದು.

ಇವರಲ್ಲಿ ಕ್ಯಾನ್ಸರ್‌ ಕಾಣಿಸಿಕೊಳ್ಳುವ ಮೊದಲು ಬೆಂಗಳೂರಿನಲ್ಲಿ ಸಂಭವಿಸಿದ ಅಪಘಾತದಿಂದ ಎರಡೂವರೆ ತಿಂಗಳುಗಳ ಕಾಲ ಕೋಮಾದಲ್ಲಿದ್ದರು. ಮೊದಲ ಅಲೆಯಲ್ಲಿಯೇ ಕೊರೊನಾ ಕಾಣಿಸಿಕೊಂಡಿತ್ತು. ಈ ಮೂರೂ ಸಂದರ್ಭಗಳಲ್ಲಿ ಆತ್ಮವಿಶ್ವಾಸದಿಂದಲೇ ಸಾವನ್ನು ಗೆದ್ದು, ಹಲವು ಕ್ಷೇತ್ರಗಳಲ್ಲಿ ಇಂದಿಗೂ ಕ್ರಿಯಾಶೀಲರಾಗಿದ್ದಾರೆ.

ಅಪಘಾತದ ನಂತರ ನಡೆಯಲೂ ಕಷ್ಟಪಡುವ ಸ್ಥಿತಿಯಲ್ಲಿದ್ದ ಅರುಣ್‌ಕುಮಾರ್‌, ಸ್ನೇಹಿತರ ಆಹ್ವಾನದ ಮೇರೆಗೆ ಕನ್ನಡ ಕಾರ್ಯಕ್ರಮದಲ್ಲಿ ಭಾಗವಹಿಸಲು ದುಬೈಗೆ ತೆರಳಿದ್ದರು. ದುಡಿದು ಬದುಕಬೇಕು ಎಂಬ ಛಲದೊಂದಿಗೆ ಸ್ನೇಹಿತರ ಸಹಕಾರದಿಂದ ಅಲ್ಲಿಯೇ ಕೆಲಸದಲ್ಲಿ ತೊಡಗಿದ್ದರು. ಕಾರ್ಯಕ್ರಮದಲ್ಲಿ ಭಾಗವಹಿಸಲೆಂದು ದಾವಣಗೆರೆಗೆ ಬಂದಾಗ ಕ್ಯಾನ್ಸರ್‌ ಇರುವುದು ತಿಳಿಯಿತು. ಸ್ನೇಹಿತರ ಸಲಹೆ ಮೇರೆಗೆ ಬೆಂಗಳೂರಿನ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆದ ಆರು ತಿಂಗಳಲ್ಲಿ ಗುಣಮುಖರಾದರೂ, ವರ್ಷದೊಳಗೆ ಮತ್ತೆ ಕ್ಯಾನ್ಸರ್‌ ಮರುಕಳಿಸಿತ್ತು. ವೈದ್ಯರು ಹೇಳಿದ್ದನ್ನು ಚಾಚೂ ತಪ್ಪದೇ ಪಾಲಿಸುವ ಮೂಲಕ ಇದೀಗ ಸಂಪೂರ್ಣ ಗುಣಮುಖರಾಗಿದ್ದಾರೆ.

‘ಕ್ಯಾನ್ಸರ್‌ನಿಂದ ಗುಣಮುಖರಾದ ಬಹಳಷ್ಟು ಜನರು ನಂತರದಲ್ಲಿ ನಿರ್ಲಕ್ಷ್ಯ ವಹಿಸುತ್ತಾರೆ. ಈ ಧೋರಣೆಯ ಕಾರಣ ಅತ್ಯಾಪ್ತರನ್ನು ಕಳೆದುಕೊಂಡಿದ್ದೇನೆ. ಆದಕಾರಣ ಸದಾ ಜಾಗರೂಕರಾಗಿರಬೇಕು. ಗೆಳೆಯರಂತಹ ಸಹೋದರರು, ಸಹೋದರರಂತಹ ಗೆಳೆಯರು, ಮಾತೃ ಸ್ವರೂಪಿಣಿಯರಾದ ಅತ್ತಿಗೆಯರು, ದಾವಣಗೆರೆಯ ಎಲ್ಲ ವೈದ್ಯರು ಮತ್ತು ಸ್ನೇಹಿತರ ಸಹಕಾರದಿಂದ ಮೂರು ಸಲ ಸಾವು ಗೆದ್ದು ಜೀವಿಸುತ್ತಿದ್ದೇನೆ’ ಎಂದು ಅವರು ಸ್ಮರಿಸಿದರು.

‘ಸುಕ್ಷೇಮ ಆಸ್ಪತ್ರೆಯ ಕ್ಯಾನ್ಸರ್‌ ತಜ್ಞರಾದ ಡಾ.ಸುನಿಲ್‌ ಬ್ಯಾಡಗಿ ಅವರು ನನಗೆ ಚಿಕಿತ್ಸೆ ನೀಡಿದರು. ಅವರ ಜತೆಗೂಡಿ ಆರಂಭಿಸಿರುವ ದಾವಣಗೆರೆ ಕ್ಯಾನ್ಸರ್‌ ಫೌಂಡೇಷನ್‌ ಮೂಲಕ ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದೇನೆ. ಭಾರತೀಯ ರೆಡ್‌ ಕ್ರಾಸ್‌ ಹಾಗೂ ಲೈಫ್‌ಲೈನ್‌ನ ಎ.ಎಂ. ಶಿವಕುಮಾರ್‌ ಅವರ ಬೆಂಬಲವೂ ನನಗೆ ಇದೆ. ಕ್ಯಾನ್ಸರ್‌ಗೆ ಚಿಕಿತ್ಸೆ ಇದ್ದು, ಆತ್ಮವಿಶ್ವಾಸವಿದ್ದರೆ ಗೆಲ್ಲಬಹುದು’ ಎಂದು ಅವರು ಕಿವಿಮಾತು
ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT