ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಚುನಾವಣೆಗೆ ಕಾಯುತ್ತಿರುವ ಅಭ್ಯರ್ಥಿಗಳು

ಮೇ 9ಕ್ಕೆ ನಡೆಯಬೇಕಿದ್ದ ಚುನಾವಣೆ ಕೊರೊನಾ ಕಾರಣದಿಂದ ಮುಂದೂಡಿಕೆ
Last Updated 22 ಜುಲೈ 2021, 7:11 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕಿನ ಎರಡನೇ ಅಲೆ ಬಾರದೇ ಇರುತ್ತಿದ್ದರೆ ಕನ್ನಡ ಸಾಹಿತ್ಯ ಪರಿಷತ್ತಿಗೆ ಚುನಾವಣೆ ಮುಗಿದು ಮೂರು ತಿಂಗಳಾಗುತ್ತಿತ್ತು. ಆಗ ನಾಮಪತ್ರ ಸಲ್ಲಿಸಿ ಅಂತಿಮವಾಗಿ ಕಣದಲ್ಲಿ ಇರುವ ಅಭ್ಯರ್ಥಿಗಳು ಈಗ ಚುನಾವಣೆ ಎಂದು ನಡೆಯುತ್ತದೆಯೋ ಎಂದು ಕಾದು ಕುಳಿತಿದ್ದಾರೆ.

ಮೇ 9ಕ್ಕೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಗೆ ದಿನಾಂಕ ನಿಗದಿಯಾಗಿತ್ತು. ಪರಿಷತ್ತಿನ ಅಧ್ಯಕ್ಷರ ಜತೆಗೆ ಜಿಲ್ಲಾ ಘಟಕಗಳ ಅಧ್ಯಕ್ಷರ ಆಯ್ಕೆಯೂ ಮತದಾನದ ಮೂಲಕ ಆಗುತ್ತಿತ್ತು. ನೋಟಿಫಿಕೇಶನ್‌, ನಾಮಪತ್ರ ಸಲ್ಲಿಕೆ, ಪರಿಶೀಲನೆ, ಹಿಂಪಡೆಯುವ ದಿನಗಳೆಲ್ಲ ಮುಗಿದಿದ್ದವು. ಪ್ರಚಾರಕ್ಕೆ 13 ದಿನಗಳು, ಚುನಾವಣೆ ದಿನ ಇಷ್ಟೇ ಬಾಕಿ ಇದ್ದವು. ಅಷ್ಟು ಹೊತ್ತಿಗೆ ಲಾಕ್‌ಡೌನ್‌ ಆಗಿ ಚುನಾವಣೆಯನ್ನೇ ಮುಂದೂಡಲಾಗಿತ್ತು. ಕೊರೊನಾ ಸೋಂಕು ಕಡಿಮೆ ಆದ ಬಳಿಕ ಚುನಾವಣೆ ನಡೆಸಲಾಗುವುದು ಎಂದು ತಿಳಿಸಲಾಗಿತ್ತು.

ಕೊರೊನಾ ಸೋಂಕು ಕಡಿಮೆಯಾಗಿದೆ. ಸಹಕಾರ ಸಂಘಗಳ ಚುನಾವಣೆ ನಡೆಸಬಹುದು ಎಂದು ಸರ್ಕಾರ ತಿಳಿಸಿದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನೂ ನಡೆಸಿದೆ. ಆದರೆ ಕನ್ನಡ ಸಾಹಿತ್ಯ ಪರಿಷತ್ತಿನ ಚುನಾವಣೆಯ ಬಗ್ಗೆ ಯಾವುದೇ ನಿರ್ದೇಶನಗಳು ಬಂದಿಲ್ಲ ಎಂಬುದು ಅಭ್ಯರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದೆ.

‘ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ 8.75 ಲಕ್ಷ ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. ಪರೀಕ್ಷೆ ನಡೆಸಲು 1.4 ಲಕ್ಷ ಸಿಬ್ಬಂದಿ ಕಾರ್ಯನಿರ್ವಹಿಸಿದ್ದಾರೆ. ಪದವಿ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಲಾಗಿದೆ. ಆದರೆ ಕಸಾಪ ಚುನಾವಣೆ ಬಗ್ಗೆ ಮಾತ್ರ ಯಾವುದೇ ಸೂಚನೆಗಳು ಬಂದಿಲ್ಲ’ ಎಂದು ದಾವಣಗೆರೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಭ್ಯರ್ಥಿ ಬಿ. ವಾಮದೇವಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ಅಧ್ಯಕ್ಷರ ನಿಗದಿತ ಅವಧಿ ಮುಗಿದ ಬಳಿಕ ಆರು ತಿಂಗಳ ಒಳಗೆ ಚುನಾವಣೆ ನಡೆಸಬೇಕು. ಅಲ್ಲಿವರೆಗೆ ಅವರೇ ಅಧ್ಯಕ್ಷರಾಗಿ ಮುಂದುವರಿಯುತ್ತಾರೆ. 6 ತಿಂಗಳು ದಾಟಿದರೆ ಆಡಳಿತಾಧಿಕಾರಿಯ ನೇಮಕವಾಗಿತ್ತದೆ. ಸೆಪ್ಟೆಂಬರ್‌ಗೆ ಆರು ತಿಂಗಳ ಅವಧಿ ಮುಗಿಯುವುದರಿಂದ ಅದರ ಒಳಗೆ ಚುನಾವಣೆ ನಡೆಸಬೇಕು’ ಎಂದು ಒತ್ತಾಯಿಸಿದ್ದಾರೆ.

ಜಿಲ್ಲಾಧಿಕಾರಿ, ಪರಿಷತ್ತಿನ ಚುನಾವಣಾಧಿಕಾರಿ, ಸರ್ಕಾರಕ್ಕೆ ಈ ಬಗ್ಗೆ ಗುರುವಾರ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

‘ಸಹಕಾರ ಸಂಘಗಳ ಚುನಾವಣೆ ನಡೆಸಬಹುದಾದರೆ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾಗಿರುವ ಸಾಹಿತ್ಯ ಪರಿಷತ್ತಿಗೆ ಯಾಕೆ ಚುನಾವಣೆ ನಡೆಸಬಾರದು ಎಂಬುದು ಗೊತ್ತಾಗುತ್ತಿಲ್ಲ. ಆಗಸ್ಟ್‌ನಲ್ಲಿಯೇ ಚುನಾವಣೆ ನಡೆಸಬೇಕು ಎಂದು ಜಿಲ್ಲಾಧಿಕಾರಿಗೆ ಈ ಬಗ್ಗೆ ಈಗಾಗಲೇ ಮನವಿ ಸಲ್ಲಿಸಿದ್ದೇನೆ. ಪರಿಷತ್ತಿಗೆ, ಸರ್ಕಾರಕ್ಕೆ ಕೂಡ ಮನವಿ ನೀಡಿದ್ದೇನೆ. ಯಾವುದೇ ಪ್ರತಿಕ್ರಿಯೆ ನೀಡಿಲ್ಲ’ ಎಂದು ಜಿಲ್ಲಾ ಕಸಾಪದ ಇನ್ನೊಬ್ಬ ಅಧ್ಯಕ್ಷಾಕಾಂಕ್ಷಿ ಆರ್‌. ಶಿವಕುಮಾರಸ್ವಾಮಿ ಕುರ್ಕಿ ಬೇಸರ ವ್ಯಕ್ತಪಡಿಸಿದ್ದಾರೆ.

‘ಚುನಾವಣೆಯನ್ನು ಶುರುವಿಂದ ಆರಂಭಿಸಬೇಕು ಎಂದು ನಾನು ಹೇಳುವುದಿಲ್ಲ. ಪರಿಷತ್ತಿನ ನಿಯಮಾವಳಿ ಪ್ರಕಾರ ಆದಷ್ಟು ಬೇಗ ಚುನಾವಣೆ ನಡೆಸಬೇಕು’ ಎಂದು ಕಸಾಪ ಜಿಲ್ಲಾಧ್ಯಕ್ಷ ಡಾ. ಎಚ್.ಎಸ್‌. ಮಂಜುನಾಥ ಕುರ್ಕಿ ಒತ್ತಾಯಿಸಿದ್ದಾರೆ.

ನಿಂತಲ್ಲಿಂದಲೇ ಚುನಾವಣೆ ಮುಂದುವರಿಕೆ’

ಒಮ್ಮೆ ಚುನಾವಣೆ ಘೋಷಣೆಯಾಗಿ ಚುನಾವಣಾ ಪ್ರಕ್ರಿಯೆಗಳು ಆರಂಭಗೊಂಡರೆ ಅದು ರದ್ದಾಗುವುದಿಲ್ಲ. ಹಾಗಾಗಿ ಚುನಾವಣೆ ಎಲ್ಲಿಗೆ ನಿಂತಿದೆಯೋ ಅಲ್ಲಿಂದಲೇ ಮುಂದುವರಿಸಲಾಗುತ್ತದೆ. ಸ್ಪರ್ಧೆಯಲ್ಲಿ ಇರುವವರು ಯಾರು ಎಂಬುದು ಏಪ್ರಿಲ್‌ನಲ್ಲಿ ಅಂತಿಮಗೊಂಡಿತ್ತು. ಅವರಿಗೆ ಪ್ರಚಾರಕ್ಕೆ ಅವಕಾಶ ಸಿಕ್ಕಿರಲಿಲ್ಲ. ಮುಂದೆ ಚುನಾವಣೆ ಮಾಡಲು ಅನುಮತಿ ಸಿಕ್ಕಿದರೆ ಅಲ್ಲಿಂದಲೇ ಮುಂದುವರಿಯಲಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ರಾಜ್ಯ ಚುನಾವಣಾಧಿಕಾರಿ ಗಂಗಾಧರ ಸ್ವಾಮಿ ‘ಪ್ರಜಾವಾಣಿ’ಗೆ ಸ್ಪಷ್ಟಪಡಿಸಿದ್ದಾರೆ.

ಚುನಾವಣೆ ಬಗ್ಗೆ ಸ್ಪಷ್ಟ ನಿರ್ದೇಶನ ನೀಡಬೇಕು. ಯಾವಾಗ ಚುನಾವಣೆ ನಡೆಸಬೇಕು ಎಂಬುದರ ಬಗ್ಗೆಯೂ ತಿಳಿಸಬೇಕು ಎಂದು ಸರ್ಕಾರಕ್ಕೆ ಪತ್ರ ಬರೆದಿದ್ದೇನೆ. ಅಲ್ಲಿಂದ ಉತ್ತರ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT