ಮಂಗಳವಾರ, ಅಕ್ಟೋಬರ್ 27, 2020
28 °C
ಮುಸ್ಲಿಮರು ಕಾಂಗ್ರೆಸ್‌ಗೆ, ಹಿಂದೂಗಳು ಬಿಜೆಪಿಗೆ ಮತ ನೀಡಲು ತೀರ್ಮಾನ: ಸಚಿವ ಈಶ್ವರಪ್ಪ ಪ್ರತಿಪಾದನೆ

ಬೇಳೆ ಬೇಯಿಸಿಕೊಳ್ಳಲು ಸಿದ್ದರಾಮಯ್ಯ, ದೇವೇಗೌಡರಿಂದ ಜಾತಿ ರಾಜಕಾರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ‘ಚುನಾವಣೆಗಳಲ್ಲಿ ಮುಸ್ಲಿಮರು ಕಾಂಗ್ರೆಸ್‌ಗೆ ಹಾಗೂ ಹಿಂದೂಗಳು ಬಿಜೆಪಿಗೆ ಮತ ಹಾಕುವುದು ಎಂದು ತೀರ್ಮಾನವಾಗಿಬಿಟ್ಟಿದೆ. ಎಚ್.ಡಿ. ದೇವೇಗೌಡ, ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಬೇಕು ಎನ್ನುವ ಸ್ಥಿತಿ ಈಗ ಇಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಾಜಕೀಯಕ್ಕಾಗಿ ತಮ್ಮ ಬೇಳೆ ಬೇಯಿಸಿಕೊಳ್ಳಲು ಜಾತಿ ರಾಜಕಾರಣ ಮಾಡುವಲ್ಲಿ ಸಿದ್ದರಾಮಯ್ಯ, ಎಚ್.ಡಿ.ದೇವೇಗೌಡ ಹಾಗೂ ಕುಮಾರಸ್ವಾಮಿ ನಿಪುಣರು. ಆದರೆ, ಅವರ ಜಾತಿಗಾಗಿ ಏನೂ ಮಾಡಿಲ್ಲ. ಅವರದ್ದು ಕ್ಷು‌ಲ್ಲಕ ರಾಜಕಾರಣ’ ಎಂದು ಟೀಕಿಸಿದರು.

‘ಚುನಾವಣೆ ಸಮಯದಲ್ಲಿ ಮಾತ್ರ ಹಿಂದುಳಿದವರು, ಅಲ್ಪಸಂಖ್ಯಾತರು ಹಾಗೂ ಪರಿಶಿಷ್ಟ ಜಾತಿಯವರು ಎಂಬ ಪದಗಳನ್ನು ಬಳಸಿಕೊಳ್ಳುತ್ತಾರೆ. ‘ಜಾತಿವಾದಿ’ ಎಂದು ಒಬ್ಬರಿಗೊಬ್ಬರು ಆರೋಪಿಸುತ್ತಿದ್ದಾರೆ. ಅವರಿಗೆ ವೋಟು ಬೇಕು ಅಷ್ಟೇ. ಸಿದ್ದರಾಮಯ್ಯ ‘ಅಹಿಂದ’ ನಾಯಕ ಎಂದು ಹೇಳಿ ಹೊರಟರು. ಈಗ ಅವರ ಜೊತೆ ಕುರುಬರು ಬಿಟ್ಟರೆ ಯಾರೂ ಇಲ್ಲ. ಪರಿಶಿಷ್ಟ ಜಾತಿಯವರು ಅವರ ಹತ್ತಿರ ಸುಳಿಯುವುದಿಲ್ಲ’ ಎಂದು ಕುಟುಕಿದ ಈಶ್ವರಪ್ಪ, ‘ನಾವು ರಾಷ್ಟ್ರವಾದಿಗಳು, ರಾಷ್ಟ್ರವಾದವನ್ನು ಎಲ್ಲರೂ ಒಪ್ಪಿಕೊಂಡಿದ್ದಾರೆ’ ಎಂದರು.

ಸಾಮಾಜಿಕ ನ್ಯಾಯಕ್ಕಾಗಿ ಖಾತೆ ಬದಲಾವಣೆ: ‘ಶೋಷಿತರಿಗೆ ಸೇವೆ ಮಾಡಲು ಸಚಿವ ಶ್ರೀರಾಮುಲು ಸೂಕ್ತ ವ್ಯಕ್ತಿ. ಸಾಮಾಜಿಕ ನ್ಯಾಯ ಕೊಡಬೇಕು ಎಂಬ ಕಾರಣದಿಂದ ಅವರಿಗೆ ಸಮಾಜ ಕಲ್ಯಾಣ ಖಾತೆ ನೀಡಲಾಗಿದೆ’ ಎಂದು ಈಶ್ವರಪ್ಪ ಸಮರ್ಥಿಸಿಕೊಂಡರು.

‘ಸಮಾಜ ಕಲ್ಯಾಣ ಇಲಾಖೆಯೂ ದೊಡ್ಡದು. ಜನರಿಗೆ ಸಾಮಾಜಿಕ ನ್ಯಾಯ ಕೊಡಬೇಕು ಎನ್ನುವ ದೃಷ್ಟಿಯಿಂದ ಅನೇಕ ದಿವಸಗಳಿಂದ ಚರ್ಚೆ ನಡೆಯುತ್ತಿದ್ದು, ಅದಕ್ಕೆ ಅರ್ಹ ವ್ಯಕ್ತಿ ಶ್ರೀರಾಮುಲು ಎಂಬ ಲೆಕ್ಕಾಚಾರದಲ್ಲಿ ಅವರಿಗೆ ಖಾತೆ ನೀಡಲಾಗಿದೆ. ಕೊರೊನಾ ಸಂದರ್ಭವನ್ನು ಸಮರ್ಥವಾಗಿ ನಿಭಾಯಿಸಬೇಕು ಎನ್ನುವ ಕಾರಣದಿಂದ ವೈದ್ಯಕೀಯ ಹಾಗೂ ಆರೋಗ್ಯ ಖಾತೆಗಳನ್ನು ಕೆ.ಸುಧಾಕರ್ ಅವರಿಗೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೀಡಿದ್ದಾರೆ’ ಎಂದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.