ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಾತಿ ಪದ್ಧತಿ ಸಮಾಜಕ್ಕೆ ಪೂರಕವಲ್ಲ

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರೋಹಿತ್‌ ಚಕ್ರತೀರ್ಥ
Last Updated 29 ಡಿಸೆಂಬರ್ 2022, 4:43 IST
ಅಕ್ಷರ ಗಾತ್ರ

ತೀರ್ಥಹಳ್ಳಿ: ‘ವರ್ಣಾಶ್ರಮ ಪದ್ಧತಿ ಧಾರ್ಮಿಕತೆಗೆ ಪೂರಕವಾಗಿದೆ. ಜಾತಿ ಪದ್ಧತಿ ಮಾತ್ರ ಸಮಾಜಕ್ಕೆ ಪೂರಕವಾಗಿಲ್ಲ. ಸಂಸ್ಕಾರ, ಸಂಸ್ಕೃತಿಗಳನ್ನು ಒಳಗೊಳ್ಳದ ಕುಟುಂಬಗಳು ಸುಡುಗಾಡಿಗಿಂತಲೂ ಕೀಳು ಎಂದು ಕುವೆಂಪು ಪ್ರತಿಪಾದಿಸಿದ್ದರು’ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಸದಸ್ಯ ರೋಹಿತ್‌ ಚಕ್ರತೀರ್ಥ ಹೇಳಿದರು.

ಪಟ್ಟಣದ ಶಾಂತವೇರಿ ಗೋಪಾಲಗೌಡ ರಂಗಮಂದಿರದಲ್ಲಿ ಕಡಗೋಲು ವಿಚಾರ ಮಂಥನ ವೇದಿಕೆ ಆಯೋಜಿಸಿದ್ದ ‘ಕುವೆಂಪು ಸಾಹಿತ್ಯದಲ್ಲಿ ರಾಷ್ಟ್ರೀಯತೆ’ ವಿಚಾರ‌ ಕುರಿತು ಅವರು ಉಪನ್ಯಾಸ ನೀಡಿದರು.

ವೇದ, ಪುರಾಣಗಳನ್ನು ರಾಷ್ಟ್ರಕವಿ ಕುವೆಂಪು ವಿರೋಧಿಸಿರಲಿಲ್ಲ. ವರ್ಣಾಶ್ರಮ ಪದ್ಧತಿಯನ್ನು ಅವರು ಒಪ್ಪಿ ಬೆಂಬಲಿಸಿದ್ದರು ಎಂದರು.

ಡಾ.ಜೀವಂಧರ್‌ ಜೈನ್‌, ನಂಬಳ ಮುರುಳಿ ಇದ್ದರು.

ಕಡಿದಾಳು ದಿವಾಕರ್‌ ಗೈರು: ಕಡಗೋಲು ವಿಚಾರ ಮಂಥನ ಕಾರ್ಯಕ್ರಮ ಉದ್ಘಾಟಿಸಬೇಕಿದ್ದ ಮಾಜಿ ಶಾಸಕ ಕಡಿದಾಳು ದಿವಾಕರ್‌ ಕಾರ್ಯಕ್ರಮಕ್ಕೆ ಗೈರಾಗಿದ್ದರು.

‘ರೋಹಿತ್‌ ಚಕ್ರತೀರ್ಥ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಮಾಹಿತಿ ಇಲ್ಲದೇ ಕಾರ್ಯಕ್ರಮ ಭಾಗವಹಿಸಲು ಒಪ್ಪಿದ್ದೆ. ಆತ ಕುವೆಂಪು, ನಾರಾಯಣಗುರು, ನಾಡಗೀತೆ, ನಾಡಧ್ವಜಕ್ಕೆ ಅವಮಾನಿಸಿದ್ದು ಅರಿವಿಗೆ ಬಂದಿರಲಿಲ್ಲ. ಕುವೆಂಪು ಅವಮಾನಿಸಿದ ವ್ಯಕ್ತಿಯ ಜೊತೆ ವೇದಿಕೆ ಹಂಚಿಕೊಳ್ಳಲು ಇಷ್ಟವಿರಲಿಲ್ಲ’ ಎಂದು ದಿವಾಕರ್‌ ಪ್ರತಿಕ್ರಿಯಿಸಿದರು.

ಪ್ರತಿಭಟನಕಾರರ ಬಂಧನ: ಬಿಡುಗಡೆ

ತೀರ್ಥಹಳ್ಳಿ: ‘ನಾಡಗೀತೆಗೆ ಅವಮಾನ ಮಾಡಿದ ರೋಹಿತ್‌ ಚಕ್ರತೀರ್ಥ ತೀರ್ಥಹಳ್ಳಿಗೆ ಭೇಟಿ ನೀಡಬಾರದು’ ಎಂದು ಪಟ್ಟಣದ ಕುವೆಂಪು ವೃತ್ತದಲ್ಲಿ ಪ್ರತಿಭಟನೆ ನಡೆಸಿದ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಮುಖಂಡರನ್ನು ಬಂಧಿಸಿದ ಪೊಲೀಸರು ನಂತರ ಬಳಿಕ ಬಿಡುಗಡೆಗೊಳಿಸಿದರು.

ಲೇಖಕಿ ಗಾಯತ್ರಿ ಶೇಷಗಿರಿ ಕುವೆಂಪು ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿದರು.

ಚಕ್ರತೀರ್ಥ ಉಪನ್ಯಾಸ ನೀಡಲಿರುವ ಕಾರ್ಯಕ್ರಮದಲ್ಲಿ ಕಪ್ಪು ಬಾವುಟ ಪ್ರದರ್ಶಿಸಲು ಮುನ್ನುಗ್ಗಿದವರನ್ನು ಪೊಲೀಸರು ತಡೆದರು. ಆಗ ಪ್ರತಿಭಟನಕಾರರು ರಸ್ತೆಯ ಮೇಲೆ ಮಲಗಿ ಪ‍್ರತಿರೋಧ ವ್ಯಕ್ತಪಡಿಸಿದರು.

ಮಾಜಿ ಸಚಿವ ಕಿಮ್ಮನೆ ರತ್ನಾಕರ, ಚಿಂತಕ ನೆಂಪೆ ದೇವರಾಜ್‌, ವಕೀಲ ಕೆ.ಪಿ. ಶ್ರೀಪಾಲ್‌, ಕೆಳಕೆರೆ ಪೂರ್ಣೇಶ್‌, ನಿಶ್ಚಲ್‌ ಜಾದೂಗಾರ್‌, ನೆಂಪೆ ದೇವರಾಜ್‌, ಕೆ.ಪಿ. ಶ್ರೀಪಾಲ್‌, ವೆಂಕಟೇಶ ಹೆಗಡೆ, ಅಮರನಾಥಶೆಟ್ಟಿಮ ಪಡುವಳ್ಳಿ ಹರ್ಷೇಂದ್ರ, ಕುರುವಳ್ಳಿ ನಾಗರಾಜ್‌ ಅವರನ್ನು ಬಂಧಿಸಿದ ಪೊಲೀಸರು ಬಳಿಕ ಬಿಡುಗಡೆಗೊಳಿಸಿದರು.

ಮೊದಲ ದೇಶದ್ರೋಹಿ ಗೋಡ್ಸೆ:

‘ರಾಷ್ಟ್ರೀಯತೆಯ ಹೆಸರಿನಲ್ಲಿ ಭಾಷೆ, ಧರ್ಮ, ಜಾತಿಗೆ ಸೀಮಿತಗೊಳಿಸುವ ಮನೋಭಾವ ಬೆಳೆಸಲಾಗುತ್ತಿದ್ದು, ಸನಾತನ ಧರ್ಮದ ಮೂಲ ಸಿದ್ಧಾಂತವಾದ ಮನುಸೃತಿ ಅನುಷ್ಠಾನದ ಪ್ರಯತ್ನ ನಡೆಸಲಾಗುತ್ತಿದೆ. ಭಾರತ ಮೊದಲ ದೇಶದ್ರೋಹಿ ನಾಥೂರಾಂ ಗೋಡ್ಸೆ’ ಎಂದು ದೂರಿದ ಕಿಮ್ಮನೆ ರತ್ನಾಕರ, ‘ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಮಿತಿ ತೆಗೆದುಕೊಂಡ ತೀರ್ಮಾನ ಸರಿಯಾಗಿಲ್ಲ. ಕಾಂಗ್ರೆಸ್‌ ಆಡಳಿತಕ್ಕೆ ಬಂದ ತಕ್ಷಣ ಸಾಹಿತಿ ಬರಗೂರು ರಾಮಚಂದ್ರಪ್ಪ ಅವರ ಪಠ್ಯ ಕ್ರಮವನ್ನೇ ಜಾರಿಗೊಳಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT