ಸೋಮವಾರ, 9 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಘಾತ ವಲಯಕ್ಕೆ ಸಿಸಿಟಿವಿ ಕ್ಯಾಮೆರಾ ಕಣ್ಗಾವಲು

ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ತೀರ್ಮಾನ, ನಿರ್ವಹಣೆ ‘ಸ್ಮಾರ್ಟ್‌ಸಿಟಿ’ ಹೆಗಲಿಗೆ
Published 17 ಆಗಸ್ಟ್ 2024, 11:36 IST
Last Updated 17 ಆಗಸ್ಟ್ 2024, 11:36 IST
ಅಕ್ಷರ ಗಾತ್ರ

ದಾವಣಗೆರೆ: ಜಿಲ್ಲೆಯಲ್ಲಿ ಗುರುತಿಸಿರುವ ಅಪಘಾತ ವಲಯಗಳ ಮೇಲೆ ನಿಗಾ ಇಡಲು ಸಿಸಿಟಿವಿ ಕ್ಯಾಮೆರಾ ಕಣ್ಗಾವಲು ವ್ಯವಸ್ಥೆ ರೂಪಿಸಲು ಜಿಲ್ಲಾ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಶನಿವಾರ ತೀರ್ಮಾನ ಕೈಗೊಳ್ಳಲಾಯಿತು. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮತ್ತು ನಿರ್ವಹಣೆಯ ಹೊಣೆಯನ್ನು ‘ಸ್ಮಾರ್ಟ್‌ ಸಿಟಿ’ ಯೋಜನೆಯ ಅಧಿಕಾರಿಗಳಿಗೆ ನೀಡಲಾಯಿತು.

ಅಪಘಾತ ತಡೆಯ ಕುರಿತ ಚರ್ಚೆಯಲ್ಲಿ ‘ಸ್ಮಾರ್ಟ್‌ಸಿಟಿ’ ಯೋಜನೆಯ ಡಿಜಿಎಂ ಮಮತಾ ನೀಡಿದ ಸಲಹೆಗೆ ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ಒಪ್ಪಿಗೆ ಸೂಚಿಸಿದರು. ಪೊಲೀಸ್‌ ಹಾಗೂ ಲೋಕೋಪಯೋಗಿ ಇಲಾಖೆಯ ನೆರವು ಪಡೆದು ಕ್ಯಾಮೆರಾ ಅಳವಡಿಸಿ ‘ಕಮಾಂಡ್‌ ಕಂಟ್ರೋಲ್‌ ರೂಮ್‌’ನಿಂದ ನಿರ್ವಹಿಸುವಹಿಸುವಂತೆ ಸೂಚಿಸಿದರು.

ಅಪಘಾತ ವಲಯಗಳಲ್ಲಿ ಸೂಚನಾ ಫಲಕ ಅಳವಡಿಕೆ, ರಸ್ತೆ ಉಬ್ಬು (ಹಂಪ್ಸ್) ನಿರ್ಮಾಣ ಹಾಗೂ ವಿದ್ಯುತ್‌ ದೀಪ ಅಳವಡಿಕೆಗೆ ಸಂಬಂಧಿಸಿದಂತೆ ಚರ್ಚೆ ನಡೆಯಿತು. ಅವೈಜ್ಞಾನಿಕ ರಸ್ತೆ ನಿರ್ಮಾಣ, ಚಾಲಕರ ನಿರ್ಲಕ್ಷ್ಯ ಸೇರಿ ಅನೇಕ ವಿಚಾರಗಳನ್ನು ಅಧಿಕಾರಿಗಳು ಸಭೆಯ ಮುಂದಿಟ್ಟರು. ಕೆಲ ಅವೈಜ್ಞಾನಿಕ ರಸ್ತೆ ಉಬ್ಬುಗಳ ತೆರವಿಗೂ ಪೊಲೀಸರು ಮನವಿ ಮಾಡಿದರು.

‘ಅಪಘಾತ ವಲಯಗಳಲ್ಲಿ ಚಿಕ್ಕ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸಾಧ್ಯವಿದೆ. ಇವುಗಳ ನಿರ್ವಹಣೆಗೆ ಕೇಂದ್ರೀಕೃತ ವ್ಯವಸ್ಥೆ ಇರುವುದರಿಂದ ಅಪಘಾತ ಕಾರಣ ಪತ್ತೆಗೆ ಅನುಕೂಲವಾಗಲಿದೆ’ ಎಂದು ಸ್ಮಾರ್ಟ್‌ ಸಿಟಿ ಯೋಜನೆಯ ಡಿಜಿಎಂ ಮಮತಾ ಸಭೆಗೆ ವಿವರಿಸಿದರು. ಪೊಲೀಸ್‌ ಇಲಾಖೆ ಗುರುತಿಸಿದ ಸುಮಾರು 20 ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಸಭೆ ಸಮ್ಮತಿ ನೀಡಿತು.

ಹೆದ್ದಾರಿ ಪ್ರಾಧಿಕಾರ ವಿರುದ್ಧ ಕಿಡಿ:

ಹೆದ್ದಾರಿ ನಿರ್ಮಾಣ, ನಿರ್ವಹಣೆ ಹಾಗೂ ಅಪಘಾತ ನಿಯಂತ್ರಣಕ್ಕೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಆಸಕ್ತಿ ತೋರದಿರುವ ಬಗ್ಗೆ ಸಭೆಯಲ್ಲಿ ಆರೋಪ ಕೇಳಿಬಂದಿತು. ಸಭೆಗೆ ಹಾಜರಾಗದ ಪ್ರಾಧಿಕಾರದ ಅಧಿಕಾರಿಯ ವಿರುದ್ಧ ಜಿಲ್ಲಾಧಿಕಾರಿ ತೀವ್ರ ಅಸಮಾಧಾನ ಹೊರಹಾಕಿದರು. ಹಿಂದಿನ ಸಭೆಯಲ್ಲಿ ಕೈಗೊಂಡ ತೀರ್ಮಾನಗಳ ಅನುಷ್ಠಾನದಲ್ಲಿ ನಿರ್ಲಕ್ಷ್ಯ ತೋರಿರುವುದಕ್ಕೆ ಕಿಡಿಕಾರಿದರು. ಈ ಸಂಬಂಧ ಸರ್ಕಾರಕ್ಕೆ ಪತ್ರ ಬರೆಯುವುದಾಗಿ ಎಚ್ಚರಿಕೆ ನೀಡಿದರು.

‘ದಾವಣಗೆರೆ–ಹರಿಹರ ನಡುವಿನ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಸರ್ವಿಸ್‌ ರಸ್ತೆ ನಿರ್ಮಾಣ ವಿಳಂಬವಾಗುತ್ತಿದೆ. ಜಿಲ್ಲಾಡಳಿತ ಮತ್ತು ಪೊಲೀಸ್‌ ಇಲಾಖೆಯ ಗಮನಕ್ಕೆ ತರದೇ ಪ್ರಾಧಿಕಾರ ಹಲವು ನಿರ್ಧಾರಗಳನ್ನು ಕೈಗೊಳ್ಳುತ್ತಿದೆ. ಹೆದ್ದಾರಿ ಕಾಮಗಾರಿ ಪ್ರಗತಿಯಲ್ಲಿರುವ ಕುರಿತು ವಾಹನ ಸವಾರರಿಗೆ ಸರಿಯಾದ ಸೂಚನೆಗಳನ್ನು ನೀಡುತ್ತಿಲ್ಲ. ಇದು ಅಪಘಾತಕ್ಕೆ ಕಾರಣವಾಗುತ್ತಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಉಮಾ ಪ್ರಶಾಂತ್‌ ಬೇಸರ ವ್ಯಕ್ತಪಡಿಸಿದರು.

‘ಟೋಲ್‌ ಬಳಿ ಶೌಚಾಲಯಗಳನ್ನು ನಿರ್ಮಿಸಲಾಗಿದೆ. ಆದರೆ, ನಿರ್ವಹಣೆ ಸರಿಯಾಗಿಲ್ಲ. ಸಾರ್ವಜನಿಕರ ಬಳಕೆಗೆ ಇವು ಯೋಗ್ಯವಾಗಿಲ್ಲ. ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿಲ್ಲ. ಪೊಲೀಸ್‌ ಇಲಾಖೆಯ ಸೂಚನೆಗಳನ್ನು ಹೆದ್ದಾರಿ ಪ್ರಾಧಿಕಾರ ಪಾಲನೆ ಮಾಡುತ್ತಿಲ್ಲ’ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಸಭೆಯ ಮುಂದಿಟ್ಟರು. ‘ಟೋಲ್‌ ಬಳಿ ಶುಲ್ಕ ವಸೂಲಿ ಕ್ಯಾಮೆರಾಗಳು ಮಾತ್ರ ಸುಸ್ಥಿತಿಯಲ್ಲಿವೆ. ಸಿಸಿಟಿವಿ ಕ್ಯಾಮೆರಾ ನಿರ್ವಹಣೆ, ವಿಡಿಯೊ ಸಂಗ್ರಹ ವಿಚಾರದಲ್ಲಿ ಪ್ರಾಧಿಕಾರ ನಿರ್ಲಕ್ಷ್ಯ ತೋರಿದೆ’ ಎಂದು ಮತ್ತೊಬ್ಬ ಪೊಲೀಸ್‌ ಅಧಿಕಾರಿ ಧ್ವನಿಗೂಡಿಸಿದರು.

ಪರವಾನಗಿ ರದ್ದತಿಗೆ ತಾಕೀತು

ರಾಷ್ಟ್ರೀಯ ಹೆದ್ದಾರಿಯಲ್ಲಿ ಪಥ ಶಿಸ್ತು ಪಾಲನೆ ಮಾಡದಿರುವ ವಾಹನಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ವಾಹನ ರಹದಾರಿ ಹಾಗೂ ಚಲನಾ ಪರವಾನಗಿ ರದ್ದತಿಗೆ ಸಂಬಂಧಪಟ್ಟ ರಾಜ್ಯದ ಸಾರಿಗೆ ಇಲಾಖೆಗೆ ಪತ್ರ ಬರೆಯಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರಸ್ವಾಮಿ ತಾಕೀತು ಮಾಡಿದರು.

‘ಭಾರಿ ವಾಹನಗಳು ಹೆದ್ದಾರಿ ಪಥ ಶಿಸ್ತು ಪಾಲಿಸುತ್ತಿಲ್ಲ. ಇದರಿಂದ ಅಪಘಾತ ಸಂಖ್ಯೆ ಹೆಚ್ಚಾಗುತ್ತಿದೆ. ಪಥ ಶಿಸ್ತು ಪಾಲಿಸದ ವಾಹನಗಳಿಗೆ ದಂಡ ವಿಧಿಸುವ ಕಾರ್ಯವೂ ನೆಪಮಾತ್ರಕ್ಕೆ ನಡೆಯುತ್ತಿದೆ. ದಂಡ ವಸೂಲಿಯ ಜೊತೆಗೆ ಇತರ ಕ್ರಮಗಳನ್ನು ಕೈಗೊಳ್ಳಬೇಕು. ಕರ್ನಾಟಕದ ಹೆದ್ದಾರಿ ಶಿಸ್ತಿನ ಬಗ್ಗೆ ಹೊರರಾಜ್ಯದ ಜನರಿಗೂ ಗೊತ್ತಾಗಬೇಕು’ ಎಂದು ಹೇಳಿದರು.

ಅಸಹಾಯಕತೆ ವ್ಯಕ್ತಪಡಿಸಿದ ಅಧಿಕಾರಿ

ಜಗಳೂರು ತಾಲ್ಲೂಕಿನ ದೊಣೆಹಳ್ಳಿಯ ಬಳಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 50ರ ನಿರ್ಮಾಣದಲ್ಲಿ ಉಂಟಾಗಿರುವ ಲೋಪ ಸರಿಪಡಿಸುವ ನಿಟ್ಟಿನಲ್ಲಿ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದರು.

‘ದೊಣೆಹಳ್ಳಿ ಸಮೀಪ ಹೆದ್ದಾರಿಯ ವಿನ್ಯಾಸ ಅವೈಜ್ಞಾನಿಕವಾಗಿದೆ. ಚರಂಡಿಯಲ್ಲಿ ಸರಾಗವಾಗಿ ನೀರು ಹರಿದು ಹೋಗುತ್ತಿಲ್ಲ. ಸಣ್ಣ ಮಳೆ ಸುರಿದರೂ ಸರ್ವಿಸ್‌ ರಸ್ತೆಯಲ್ಲಿ ಐದು ಅಡಿಯವರೆಗೆ ನೀರು ನಿಲ್ಲುತ್ತಿದೆ. ಬಸ್‌ ತಂಗುದಾಣವೂ ಇದೇ ಸ್ಥಳದಲ್ಲಿರುವುದರಿಂದ ಪ್ರಯಾಣಿಕರು ಪರದಾಡುವಂತೆ ಆಗಿದೆ. ಚಿತ್ರದುರ್ಗ–ಹೊಸಪೇಟೆ ನಡುವೆ ಸಂಚರಿಸುವ ಬಸ್‌ಗಳಿಗೆ ತೊಂದರೆ ಉಂಟಾಗುತ್ತಿದೆ’ ಎಂದು ಪೊಲೀಸರು ಸಭೆಯ ಗಮನ ಸೆಳೆದರು. ‘ಬಸ್‌ ತಂಗುದಾಣವನ್ನು ಬೇರೆಡೆ ಸ್ಥಳಾಂತರಿಸಿ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸೂಚಿಸಿದರು.

ಜಿಲ್ಲಾ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿಜಯಕುಮಾರ್‌ ಸಂತೋಷ್‌, ಲೋಕೋಪಯೋಗಿ ಇಲಾಖೆಯ ಕಾರ್ಯಪಾಲಕ ಎಂಜಿನಿಯರ್‌ ನರೇಂದ್ರಬಾಬು, ಡಿಯುಡಿಸಿ ಯೋಜನಾ ನಿರ್ದೇಶಕ ಎನ್.ಮಹಾಂತೇಶ್‌, ಮಹಾನಗರ ಪಾಲಿಕೆಯ ಆಯುಕ್ತೆ ರೇಣುಕಾ ಇದ್ದರು.

‘ಜಲಸಿರಿ’ ಯೋಜನೆ ಕಾಮಗಾರಿಗೆ ಮಹಾನಗರ ಪಾಲಕೆ ವ್ಯಾಪ್ತಿಯ ಹಲವು ರಸ್ತೆಗಳನ್ನು ಅಗೆಯಲಾಗಿದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಸುಸ್ಥಿಗೆ ತರುತ್ತಿಲ್ಲ. ಇದರಿಂದ ವಾಹನ ಸಂಚಾರಕ್ಕೆ ತೊಂದರೆಯುಂಟಾಗಿದೆ.
ಉಮಾ ಪ್ರಶಾಂತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT