ಬುಧವಾರ, ನವೆಂಬರ್ 25, 2020
18 °C

ದಾವಣಗೆರೆ: ದೈವಜ್ಞ ಬ್ರಾಹ್ಮಣ ಸಮಾಜದ ಬಗ್ಗೆ ಕೆಪಿ. ನಂಜುಂಡಿ ಹೇಳಿಕೆಗೆ ಖಂಡನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ದೈವಜ್ಞ ಬ್ರಾಹ್ಮಣ ಸಮಾಜದ ಬಗ್ಗೆ ವಿಧಾನ ಪರಿಷತ್‌ ಸದಸ್ಯ ಕೆ.ಪಿ. ನಂಜುಂಡಿ ಹಗುರವಾಗಿ ಹೇಳಿಕೆ ನೀಡಿರುವುದು ಖಂಡನೀಯ. ಅವರು ಸಮಾಜದ ಕ್ಷಮೆ ಕೇಳಬೇಕು’ ಎಂದು ಕರ್ನಾಟಕ ಸ್ವರ್ಣಕಾರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ರಮೇಶ್‌ ಡಿ. ರಾಯ್ಕರ್‌ ಒತ್ತಾಯಿಸಿದರು.

‘ನಂಜುಂಡಿ ಅವರು ಪದೇ ಪದೇ ಸಮಾಜದ ಬಗ್ಗೆ ಇಲ್ಲಸಲ್ಲದ ಹೇಳಿಕೆ ನೀಡುತ್ತಾ ಬಂದಿದ್ದಾರೆ. ದೈವಜ್ಞರು ಮುದ್ದೆ ಕದಿಯುವವರು, ಅವರನ್ನು ವಿಶ್ವಕರ್ಮ ನಿಗಮದಿಂದ ಕಿತ್ತೊಗೆಯಬೇಕು. ಪ್ರವರ್ಗ 2 ‘ಎ’ ಮಾನ್ಯತೆ ಕಿತ್ತುಕೊಳ್ಳಬೇಕು ಎಂದು ಹೇಳಿರುವುದು ಖಂಡನೀಯ. ಅವರು ಯಾವ ಆಧಾರದ ಮೇಲೆ ಹೇಳಿಕೆ ನೀಡುತ್ತಿದ್ದಾರೆ’ ಎಂದು ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.

ಸಮಾಜದ ಮುಖಂಡ, ಬಿಜೆಪಿ ಯುವ ಮೋರ್ಚಾ (ಉತ್ತರ ವಲಯ) ಅಧ್ಯಕ್ಷ ಸಚಿನ್‌ ವರ್ಣೇಕರ್‌, ‘ನಂಜುಂಡಿ ಅವರು ಇಂತಹ ಹೇಳಿಕೆಗಳನ್ನು ನೀಡುವ ಮೂಲಕ ಸಮಾಜದಲ್ಲಿ ಒಡಕು ಮೂಡಿಸಲು ಯತ್ನಿಸುತ್ತಿದ್ದಾರೆ. ಇದು ಖಂಡನೀಯ. ದೈವಜ್ಞ ಸಮಾಜವನ್ನು ಪ್ರವರ್ಗ 2 ‘ಎ’ ಯಿಂದ ತೆಗೆಯುವಂತೆ ಹೇಳಲು ಅವರಿಗೆ ಏನು ಅಧಿಕಾರವಿದೆ. ಅವರನ್ನು ನಮ್ಮ ನಾಯಕರು ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಉದ್ದೇಶಪೂರ್ವಕವಾಗಿ ಅವರು ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ’ ಎಂದು ದೂರಿದರು.

‘ನಂಜುಂಡಿ ಸಮಾಜದವರ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ಅವರ ವಿರುದ್ಧ ಉಗ್ರ ಪ್ರತಿಭಟನೆ ನಡೆಸುತ್ತೇವೆ. ಸರ್ಕಾರ ಅವರ ವಿರುದ್ಧ ಕ್ರಮ ಕೈಗೊಂಡು ಅವರನ್ನು ವಿಧಾನಪರಿಷತ್‌ ಸ್ಥಾನದಿಂದ ವಜಾ ಮಾಡಬೇಕು’ ಎಂದು ಆಗ್ರಹಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಹಯಗ್ರೀವ ದೈವಜ್ಞ ಯುವ ವೇದಿಕೆ ಕಾರ್ಯದರ್ಶಿ ಯೋಗರಾಜ್‌ ಅಣ್ವೇಕರ್‌, ದೈವಜ್ಞ ಬ್ರಾಹ್ಮಣ ಸಮಾಜದ ನಿರ್ದೇಶಕ ಪ್ರಕಾಶ್‌ ಎಲ್‌. ದೈವಜ್ಞ, ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಜಗನ್ನಾಥ ವರ್ಣೇಕರ್‌ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.