ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇ 23ರ ಬಳಿಕ ರಾಜ್ಯದಲ್ಲಿ ಬದಲಾವಣೆ: ರಾಜೂಗೌಡ

Last Updated 30 ಏಪ್ರಿಲ್ 2019, 15:37 IST
ಅಕ್ಷರ ಗಾತ್ರ

ದಾವಣಗೆರೆ: ಮೇ 23ರ ಬಳಿಕ ರಾಜ್ಯದಲ್ಲಿ ಬದಲಾವಣೆ ಆಗಲಿದೆ. ಕಾಂಗ್ರೆಸ್, ಜೆಡಿಎಸ್‌ನಲ್ಲಿ ಎಲ್ಲವೂ ಸರಿಯಿಲ್ಲ. ಬಿಜೆಪಿ ಯಾವುದೇ ಆಪರೇಷನ್‌ ಮಾಡುವುದಿಲ್ಲ. ಕಾಂಗ್ರೆಸ್‌, ಜೆಡಿಎಸ್‌ ಮೈತ್ರಿ ಲೋಕಸಭಾ ಚುನಾವಣೆ ಬಳಿಕ ಮುರಿದು ಬೀಳಲಿದೆ ಎಂದು ಬಿಜೆಪಿ ಶಾಸಕ ರಾಜೂಗೌಡ (ನರಸಿಂಹನಾಯಕ) ಹೇಳಿದರು.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಆಪರೇಷನ್‌ ಮಾಡಲು ಬಿಜೆಪಿಯಲ್ಲಿ ಡಾಕ್ಟರ್‌ ಇಲ್ಲ, ನಾಟಿ ವೈದ್ಯರೂ ಇಲ್ಲ. ಕಾಂಗ್ರೆಸ್‌, ಜೆಡಿಎಸ್‌ನಲ್ಲಿ ರೋಗಿಗಳು ಹೆಚ್ಚಾಗಿದ್ದಾರೆ. ಹಾಗಾಗಿ ರೋಗಿಗಳಿಂದಲೇ ಮೈತ್ರಿ ಮುರಿದು ಬೀಳಲಿದೆ’ ಎಂದು ಹೇಳಿದರು.

ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪರ ಜನರಿಂದ ಉತ್ತಮ ಪ್ರತಿಕ್ರಿಯೆ ಇದೆ. ನರೇಂದ್ರ ಮೋದಿಯನ್ನು ಮತ್ತೊಮ್ಮೆ ಪ್ರಧಾನಿ ಮಾಡಬೇಕು ಎಂಬ ಹುಮ್ಮಸ್ಸಿನಲ್ಲಿ ಜಿಲ್ಲೆಯ ಜನರಿದ್ದಾರೆ. ಈ ಬಾರಿ ಬಿಜೆಪಿ ಅಭ್ಯರ್ಥಿ ಜಿ.ಎಂ. ಸಿದ್ದೇಶ್ವರ ಹೆಚ್ಚಿನ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ. ಸಿದ್ದೇಶ್ವರ ಜಿಲ್ಲೆಯ ಅಭಿವೃದ್ಧಿಗೆ ಅನುದಾನ ತಂದಿದ್ದಾರೆ. ಹತ್ತು ಹಲವು ಅಭಿವೃದ್ಧಿ ಯೋಜನೆ ಜಾರಿಗೆ ತಂದಿದ್ದಾರೆ. ರಾಜ್ಯದ 27 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ಕಾಂಗ್ರೆಸ್‌, ಜೆಡಿಎಸ್‌ ನಾಯಕರು ಅಭಿವೃದ್ಧಿ ಮಾಡದೆ ಸುಮ್ಮನೆ ಆರೋಪ ಮಾಡುತ್ತಾರೆ. ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರು ಬಾಗಲಕೋಟೆ ಮಾತ್ರ ಗೊತ್ತು. ಬಾಲಾಕೋಟ್‌ ಗೊತ್ತಿಲ್ಲ ಎಂದು ಹೇಳುತ್ತಾರೆ. ಅವರಿಗೆ ಬಾಗಲಕೋಟೆಯೂ ಗೊತ್ತಿಲ್ಲ. ಅವರಿಗೆ ಗೊತ್ತಿರುವುದು ಕೇವಲ ಮಂಡ್ಯ, ಹಾಸನ, ಮೈಸೂರು ಮಾತ್ರ ಎಂದು ಆರೋಪಿಸಿದರು.

ಮಂಡ್ಯ, ಹಾಸನ ಬಿಟ್ಟರೆ ಬೇರೆಲ್ಲೂ ರೈತರ ಸಾಲ ಮನ್ನಾ ಆಗಿಲ್ಲ. ಹೈದರಾಬಾದ್‌ ಕರ್ನಾಟಕ, ಉತ್ತರ ಕರ್ನಾಟಕ, ದಾವಣಗೆರೆಯಲ್ಲೂ ಸಾಲ ಮನ್ನಾ ಆಗಿಲ್ಲ ಎಂದು ದೂರಿದರು.

ಈ ಚುನಾವಣೆ ಬಳಿಕ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌. ಯಡಿಯೂರಪ್ಪ ಬಿಜೆಪಿ ರಾಜ್ಯ ಘಟಕದಲ್ಲಿ ಇರುವುದಿಲ್ಲ ಎಂದು ಶಾಮನೂರು ಶಿವಶಂಕರಪ್ಪ ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಡಿಯೂರಪ್ಪ ಅವರು ಚುನಾವಣೆ ಬಳಿಕ ಮುಖ್ಯಮಂತ್ರಿ ಆಗುತ್ತಾರೆ. ರಾಜ್ಯ ಘಟಕದ ಅಧ್ಯಕ್ಷ ಸ್ಥಾನ ಹಾಗೂ ಮುಖ್ಯಮಂತ್ರಿ ಎರಡೂ ಹುದ್ದೆಯನ್ನು ನಿಭಾಯಿಸಲು ಅವರಿಗೆ ಆಗುವುದಿಲ್ಲ ಎಂಬ ಅರ್ಥದಲ್ಲಿ ಶಾಮನೂರು ಪ್ರತಿಕ್ರಿಯಿಸಿದ್ದಾರೆ’ ಎಂದು ಅವರು ಹೇಳಿದರು.

ಮೈತ್ರಿ ಪಕ್ಷದವರು ಮೋದಿ ಮುಖ ನೋಡಿ ಮತ ಕೇಳುತ್ತಾರೆ ಎನ್ನುತ್ತಾರೆ. ಹೌದು ನಮಗೆ ಮೋದಿ ಹೆಸರು ಹೇಳಲು ಹೆಮ್ಮೆ ಇದೆ. ಅವರೇ ಪ್ರಧಾನಿ ಎಂದ ಮೇಲೆ ಅವರ ಹೆಸರಲ್ಲಿ ಕೇಳದೆ ಬೇರೆ ಯಾರ ಹೆಸರಲ್ಲಿ ಕೇಳಬೇಕು ಎಂದು ಪ್ರಶ್ನಿಸಿದ ಅವರು, ಅವರು ಬೇಕಾದರೆ ರಾಹುಲ್‌ ಹೆಸರಲ್ಲಿ ಮತ ಕೇಳಲಿ. ಯಾರೂ ಬೇಡ ಎನ್ನುವುದಿಲ್ಲ ಎಂದು ಕುಟುಕಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT