ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದಲಾದ ಭತ್ತ ಖರೀದಿ ವ್ಯವಸ್ಥೆ, ಖಾಲಿ ಬಿದ್ದ ಉಗ್ರಾಣ

Last Updated 15 ಡಿಸೆಂಬರ್ 2018, 11:56 IST
ಅಕ್ಷರ ಗಾತ್ರ

ಬಸವಾಪಟ್ಟಣ: ಈ ಭಾಗದ ಪ್ರಮುಖ ಆಹಾರ ಉತ್ಪನ್ನವಾದ ಭತ್ತದ ಖರೀದಿ ವ್ಯವಸ್ಥೆಯಲ್ಲಿ ಈ ವರ್ಷ ಬದಲಾವಣೆಯಾಗಿರುವುದರಿಂದ ರೈತರಿಗೆ ತೊಂದರೆಯಾಗಿದ್ದು, ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಉಗ್ರಾಣಗಳು ಖಾಲಿಯಾಗಿವೆ.

ಚನ್ನಗಿರಿ ತಾಲ್ಲೂಕಿನ ಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಸುಮಾರು 12 ಸಾವಿರ ಹೆಕ್ಟೇರ್‌ನಲ್ಲಿ ಭತ್ತ ಬೆಳೆಯಲಾಗುತ್ತಿದೆ. ಬಸವಾಪಟ್ಟಣ ಹೋಬಳಿಯ ಎರಡು ವಿಭಾಗಗಳಲ್ಲಿ ಸುಮಾರು 8 ಸಾವಿರ ಹೆಕ್ಟೇರ್‌ನಲ್ಲಿ ಭತ್ತದ ಉತ್ಪಾದನೆಯಾಗುತ್ತಿದೆ. ಆದರೆ ಹಲವು ವರ್ಷಗಳಿಂದ ಸರ್ಕಾರ ಈ ಭಾಗದಲ್ಲಿ ಖರೀದಿ ಕೇಂದ್ರವನ್ನು ತೆರೆದಿಲ್ಲ.

ಸಮೀಪದ ಸಾಗರಪೇಟೆಯಲ್ಲಿ ಹಿಂದೆ 1ಸಾವಿರ ಟನ್‌ ಸಾಮರ್ಥ್ಯದ ಉಗ್ರಾಣವಿದ್ದು, ಅಲ್ಲಿ ಕಳೆದ ವರ್ಷ ಮೂರು ಸಾವಿರ ಟನ್‌ ಸಾಮರ್ಥ್ಯದ ಮತ್ತೊಂದು ಉಗ್ರಾಣವನ್ನು ನಿರ್ಮಿಸಲಾಗಿದೆ. ಈಗ ಅಲ್ಲಿ ಒಟ್ಟು ನಾಲ್ಕು ಸಾವಿರ ಟನ್‌ ಸಾಮರ್ಥ್ಯದ ಎರಡು ಉಗ್ರಾಣಗಳು ಇವೆ. ಈಚೆಗೆ ಸಮೀಪದ ಹೊಸಳ್ಳಿಯಲ್ಲಿ 12 ಸಾವಿರ ಟನ್‌ ಸಾಮರ್ಥ್ಯದ ಎರಡು ಬೃಹತ್‌ ಉಗ್ರಾಣಗಳನ್ನು ರಾಜ್ಯ ಉಗ್ರಾಣ ನಿಗಮ ನಿರ್ಮಿಸಿದೆ. ಆದರೂ ಇವು ಪ್ರಯೋಜನವಾಗದೆ ಖಾಲಿ ಬಿದ್ದಿವೆ.

ಹಿಂದೆ ಸಾಗರಪೇಟೆಯ ಉಗ್ರಾಣಗಳಲ್ಲಿ ಭತ್ತ ಹಾಗೂ ಮೆಕ್ಕೆಜೋಳ ಖರೀದಿ ಕೇಂದ್ರಗಳನ್ನು ತೆರೆಯಲಾಗಿತ್ತು. ಇಲ್ಲಿ ಸ್ಥಳಾವಕಾಶದ ಕೊರತೆಯನ್ನು ಗಮನಿಸಿ ಸಮೀಪದ ಹೊಸಳ್ಳಿಯಲ್ಲಿ ಕೃಷಿ ಇಲಾಖೆಗೆ ಸೇರಿದ ನಿವೇಶನದಲ್ಲಿ ಸುಮಾರು ₹12 ಕೋಟಿ ವೆಚ್ಚದಲ್ಲಿ ಎರಡು ಬೃಹತ್‌ ಉಗ್ರಾಣಗಳನ್ನು ನಿಗಮ ನಿರ್ಮಿಸಿದೆ. ಇಲ್ಲಿ ಎರಡೂವರೆ ಲಕ್ಷ ಚೀಲಗಳಷ್ಟು ಧಾನ್ಯಗಳನ್ನು ಸಂಗ್ರಹ ಮಾಡಬಹುದಾಗಿದೆ. ಆದರೆ ಈ ವರ್ಷ ನೊಂದಾಯಿಸಿದ ರೈತರು ಚನ್ನಗಿರಿಯ ಎಪಿಎಂಸಿ ಉಗ್ರಾಣಕ್ಕೆ ಭತ್ತವನ್ನು ತೆಗೆದುಕೊಂಡು ಹೋಗಿ ಮಾರಾಟ ಮಾಡುವ ವ್ಯವಸ್ಥೆ ಮಾಡಲಾಗಿದೆ. ಇದರ ಉಸ್ತುವಾರಿಯನ್ನು ಭಾರತ ಆಹಾರ ನಿಗಮ ಮತ್ತು ನಾಗರಿಕ ಆಹಾರ ಪೂರೈಕೆ ಇಲಾಖೆಗೆ ವಹಿಸಲಾಗಿದೆ. ಇದರಿಂದ ಸಾಗರಪೇಟೆ ಮತ್ತು ಹೊಸಳ್ಳಿಯ ಉಗ್ರಾಣಗಳ ನಿರ್ಮಾಣ ನಿರ್ವಹಣೆಯ ವ್ಯವಸ್ಥೆಗೆ ಧಕ್ಕೆಯಾಗಿದೆ.

ಚನ್ನಗಿರಿ 30 ರಿಂದ 35 ಕಿ.ಮೀ ದೂರವಾಗಿದ್ದು, ಅಲ್ಲಿಗೆ ತೆಗೆದುಕೊಂಡು ಹೋಗಿ ಭತ್ತ ಮಾರಾಟ ಮಾಡುವುದು ಕಷ್ಟ ಎನ್ನುವುದು ರೈತರ ಅಳಲು.

ರಾಜ್ಯ ಉಗ್ರಾಣ ನಿಗಮವು ಬಸವಾಪಟ್ಟಣ ಭಾಗದ ರೈತರ ಅನುಕೂಲಕ್ಕಾಗಿಯೇ ಭಾರಿ ಬಂಡವಾಳ ತೊಡಗಿಸಿ ಈ ಉಗ್ರಾಣಗಳನ್ನು ನಿರ್ಮಿಸಿತ್ತು. ಆದರೆ ಈ ವರ್ಷ ಭತ್ತ ಖರೀದಿಯ ನೀತಿ ಬದಲಾವಣೆಯಾಗಿರುವುದರಿಂದ ಖಾಲಿಯಾಗಿರುವ ಉಗ್ರಾಣಗಳನ್ನು ಸಾರ್ವಜನಿಕರಿಗೆ ಉಪಯುಕ್ತವಾಗುವಂತೆ ಬಳಸಿಕೊಳ್ಳಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ತೇಜಸ್ವಿ ಪಟೇಲ್‌ ಒತ್ತಾಯಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT