ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿರತೆ ದಾಳಿಯಿಂದ ಮಾಲೀಕನ ಜೀವ ಉಳಿಸಿದ ಹಸು!

ಚನ್ನಗಿರಿ ತಾಲ್ಲೂಕು ಕೊಡಕಿಕೆರೆ ಗ್ರಾಮದ ಬಳಿ ಅಪರೂಪದ ಘಟನೆ
Published 8 ಜೂನ್ 2023, 15:47 IST
Last Updated 8 ಜೂನ್ 2023, 15:47 IST
ಅಕ್ಷರ ಗಾತ್ರ

ಚನ್ನಗಿರಿ: ಹಸುವೊಂದು ತನ್ನ ಮಾಲೀಕನನ್ನು ಚಿರತೆ ದಾಳಿಯಿಂದ ರಕ್ಷಿಸಿದ ಅಪರೂಪದ ಘಟನೆ ತಾಲ್ಲೂಕಿನ ಉಬ್ರಾಣಿ ಹೋಬಳಿಯ ಕೊಡಕಿಕೆರೆ ಗ್ರಾಮದ ಬಳಿಯ ಅರಣ್ಯ ಪ್ರದೇಶದಲ್ಲಿ ಬುಧವಾರ ನಡೆದಿದೆ.

ಕೊಡಕಿಕೆರೆ ನಿವಾಸಿ, ಕರಿಹಾಲಪ್ಪ (58) ತಮ್ಮ ಹಸುವನ್ನು ಮೇಯಿಸಲು ಗ್ರಾಮದ ಸನಿಹದಲ್ಲಿರುವ ಅರಣ್ಯ ಪ್ರದೇಶಕ್ಕೆ ಹೋಗಿದ್ದರು. ಈ ವೇಳೆ ಪೊದೆಯೊಂದರಲ್ಲಿ ಅಡಗಿ ಕುಳಿತಿದ್ದ ಚಿರತೆಯು ಅವರ ಮೇಲೆ ದಿಢೀರ್‌ ದಾಳಿ ನಡೆಸಿದೆ. ಇದನ್ನು ಕಂಡು ಓಡಿಬಂದ ಹಸು, ಕೊಂಬಿನಿಂದ ಚಿರತೆಗೆ ತಿವಿದು ಅದನ್ನು ಓಡಿಸಿ ಕರಿಹಾಲಪ್ಪ ಅವರನ್ನು ರಕ್ಷಿಸಿದೆ.

‘ಚಿರತೆಯು ಏಕಾಏಕಿ ನನ್ನ ಮೇಲೆ ಎರಗಿ ಬೆನ್ನು ಮತ್ತು ಕೈಯನ್ನು ಪರಚಿತು. ಕೈಯಲ್ಲಿದ್ದ ಕೋಲಿನಿಂದ ಹೊಡೆದು ಅದನ್ನು ಓಡಿಸಲು ಪ್ರಯತ್ನಿಸಿದೆ. ಆದರೆ ಚಿರತೆ ಬೆದರದೆ ದಾಳಿ ಮುಂದುವರಿಸಿತ್ತು. ಸನಿಹದಲ್ಲೇ ಮೇಯುತ್ತಿದ್ದ ಹಸು ನನ್ನ ಅಸಹಾಯಕತೆ ಕಂಡು ನೆರವಿಗೆ ಧಾವಿಸಿ, ಕೊಂಬಿನಿಂದ ತಿವಿಯುತ್ತಿದ್ದಂತೆಯೇ ಹೆದರಿದ ಚಿರತೆಯು ಸ್ಥಳದಿಂದ ಕಾಲ್ಕಿತ್ತಿತು. ಹಸುವಿನಿಂದಾಗಿ ನನ್ನ ಜೀವ ಉಳಿಯಿತು’ ಎಂದು ಕರಿಹಾಲಪ್ಪ ‘ಪ್ರಜಾವಾಣಿ’ಎದುರು ಭಾವುಕರಾಗಿ ನುಡಿದರು.

ಚಿರತೆ ಪರಚಿರುವುದರಿಂದ ಕರಿಹಾಲಪ್ಪ ಅವರ ಬೆನ್ನು ಮತ್ತು ಕೈಗೆ ಮೇಲೆ ಗಾಯಗಳಾಗಿದ್ದು, ತಾವರಕೆರೆಯ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದಾರೆ. ಚನ್ನಗಿರಿ ಅರಣ್ಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಿರತೆ ಸೆರೆಗೆ ಬೋನ್ ಅಳವಡಿಸಿದ್ದಾರೆ.

‘ಕಳೆದ ಎರಡು ವರ್ಷಗಳಿಂದ ಚಿರತೆಯೊಂದು ಈ ಭಾಗದ ಹಲವು ತೋಟಗಳಲ್ಲಿ ಓಡಾಡುತ್ತಿತ್ತು. ಆದರೆ ಯಾರ ಮೇಲೂ ದಾಳಿ ನಡೆಸಿರಲಿಲ್ಲ. ಕರಿಹಾಲಪ್ಪ ಅವರ ಮೇಲೆ ದಾಳಿ ನಡೆಸಿರುವುದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ಮಾಲೀಕನ ರಕ್ಷಣೆಗೆ ಧಾವಿಸಿದ ಹಸುವಿನ ಸಾಹಸವನ್ನು ಗ್ರಾಮದ ಜನ ಕೊಂಡಾಡುತ್ತಿದ್ದಾರೆ’ ಎಂದು ಗ್ರಾಮದ ಕೆ.ಬಿ.ಮಾರುತಿ ತಿಳಿಸಿದರು.

‘ಪ್ರಾಣಿಗಳು ಆಹಾರ ಮತ್ತು ನೀರು ಅರಸಿ ಕಾಡಂಚಿನ ಗ್ರಾಮಗಳಿಗೆ ಬರುತ್ತಿವೆ. ಚಿರತೆ ಸೆರೆಗೆ ಕಾರ್ಯಾಚರಣೆ ಕೈಗೊಂಡಿದ್ದು, ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ’ ಎಂದು ಚನ್ನಗಿರಿ ವಲಯ ಅರಣ್ಯಾಧಿಕಾರಿ ಎಚ್. ಸತೀಶ್ ಹೇಳಿದರು.

ಕರಿ ಹಾಲಪ್ಪ ಅವರ ಬೆನ್ನಿಗೆ ಚಿರತೆ ದಾಳಿಯಿಂದ ಪರಚಿದ ಗಾಯಗಳಾಗಿರುವುದು
ಕರಿ ಹಾಲಪ್ಪ ಅವರ ಬೆನ್ನಿಗೆ ಚಿರತೆ ದಾಳಿಯಿಂದ ಪರಚಿದ ಗಾಯಗಳಾಗಿರುವುದು
ಚಿರತೆಯಿಂದ ತನ್ನ ಮಾಲೀಕನ ಜೀವ ಉಳಿಸಿದ ಹಸು
ಚಿರತೆಯಿಂದ ತನ್ನ ಮಾಲೀಕನ ಜೀವ ಉಳಿಸಿದ ಹಸು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT