ಚನ್ನಗಿರಿ ಪುರಸಭೆ: ಮೀಸಲಾತಿ ಬದಲಾವಣೆ, ಮತ್ತೆ ಗರಿಗೆದರಿದ ರಾಜಕೀಯ ಚಟುವಟಿಕೆ

7
ಅಧ್ಯಕ್ಷ ಸ್ಥಾನ ಮೀಸಲಾತಿ

ಚನ್ನಗಿರಿ ಪುರಸಭೆ: ಮೀಸಲಾತಿ ಬದಲಾವಣೆ, ಮತ್ತೆ ಗರಿಗೆದರಿದ ರಾಜಕೀಯ ಚಟುವಟಿಕೆ

Published:
Updated:
Deccan Herald

ಚನ್ನಗಿರಿ: ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದ್ದ ಇಲ್ಲಿನ ಪುರಸಭೆ ಅಧ್ಯಕ್ಷ ಸ್ಥಾನ ಮತ್ತೆ ಸಾಮಾನ್ಯ ಮಹಿಳೆಗೆ ಮೀಸಲಾತಿ ಮಾಡಿ, ಬದಲಾವಣೆ ಮಾಡಿದ್ದರಿಂದ ಕಾಂಗ್ರೆಸ್, ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ.

ಈ ಹಿಂದೆ ಪುರಸಭೆಯ ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿದೆ ಎಂದು ಪ್ರಕಟಿಸಲಾಗಿತ್ತು. ಈ ಮೀಸಲಾತಿಯ ಪ್ರಕಾರ 3 ಸ್ಥಾನಗಳನ್ನು ಗೆದ್ದುಕೊಂಡ ಜೆಡಿಎಸ್ ಪಕ್ಷದಲ್ಲಿ 15 ನೇ ವಾರ್ಡ್‌ನಿಂದ ಗೆದ್ದ ಆರ್. ಬಸವರಾಜ್ ಅಭ್ಯರ್ಥಿಯಾಗುವ ಅರ್ಹತೆಯನ್ನು ಹೊಂದಿದ್ದರು.

ಅವರು ಅವಿರೋಧವಾಗಿ ಆಯ್ಕೆಯಾಗುತ್ತಾರೆ ಎಂಬ ಕಾರಣದಿಂದ ಕಾಂಗ್ರೆಸ್ ಹಾಗೂ ಬಿಜೆಪಿ ಯಾವುದೇ ಕಾರ್ಯತಂತ್ರವನ್ನು ಮಾಡದೆ ಸುಮ್ಮನಿದ್ದವು. ಆದರೆ ಈಗ ಮೀಸಲಾತಿ ಪಟ್ಟಿ ಪ್ರಕಟಗೊಂಡ ಮೂರು ದಿನಗಳ ನಂತರ ಮತ್ತೆ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ ಎಂದು ಆದೇಶ ಬಂದಿರುವುದರಿಂದ ಜೆಡಿಎಸ್ ನಾಯಕರಿಗೆ ನಿರಾಸೆಯಾಗಿದೆ.

ಬದಲಾದ ಮೀಸಲಾತಿಯಂತೆ ಕಾಂಗ್ರೆಸ್‌ನಿಂದ 3, ಬಿಜೆಪಿಯಿಂದ 4 ಹಾಗೂ ಜೆಡಿಎಸ್ ನಿಂದ 2 ಸದಸ್ಯರು ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವನ್ನು ಹೊಂದಿದ್ದಾರೆ. ಪಕ್ಷಗಳು ಅಧಿಕಾರದ ಗದ್ದುಗೆ ಹಿಡಿಯಲು ಇನ್ನಿಲ್ಲದ ಕಸರತ್ತನ್ನು ಪ್ರಾರಂಭಿಸಿವೆ. 3 ಸ್ಥಾನಗಳಲ್ಲಿ ಗೆದ್ದಿರುವ ಜೆಡಿಎಸ್ ನಿರ್ಣಾಯಕ ಪಾತ್ರವನ್ನು ವಹಿಸಲಿದೆ.

ವಾರ್ಡ್ 1ರಲ್ಲಿ ಅವಿರೋಧವಾಗಿ ಆಯ್ಕೆಯಾದ ಆರ್. ಲತಾ, 13ನೇ ವಾರ್ಡ್‌ನ ರುಹಿನಾ ತಾಜ್ ಹಾಗೂ 22 ನೇ ವಾರ್ಡ್‌ನ ಕೆ. ಸರ್ವಮಂಗಳ ಕಾಂಗ್ರೆಸ್‌ನಿಂದ, ಬಿಜೆಪಿಯಿಂದ ವಾರ್ಡ್ 6ರ ಬಿ.ಎಚ್. ಸವಿತಾ ರಾಘವೇಂದ್ರ ಶೆಟ್ಟಿ, ವಾರ್ಡ್ 16ರ ಯಶೋಧ ಬುಳ್ಳಿ, ವಾರ್ಡ್ 17ರ ಟಿ.ಎಸ್. ಕಮಲ, ವಾರ್ಡ್ 20ರಲ್ಲಿ ಗೆದ್ದ ಜಯಲಕ್ಷ್ಮೀ ಪರಮೇಶ್ವರಪ್ಪ ಹಾಗೂ ವಾರ್ಡ್ 11ರಲ್ಲಿ ನೂರ್ ಜಹಾನ್ ಹಾಗೂ ವಾರ್ಡ್ 4ರಲ್ಲಿ ಜೆಡಿಎಸ್‌ನಿಂದ ಗೆದ್ದ ಜರೀನಾಬೀ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವನ್ನು ಹೊಂದಿದ್ದಾರೆ.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಮಾಡಿಕೊಳ್ಳುವ ಮೂಲಕ ಪುರಸಭೆಯ ಅಧಿಕಾರದ ಗದ್ದುಗೆಯನ್ನು ಹಿಡಿಯಲಿವೆಯೇ ಎಂಬ ಚರ್ಚೆ ಶರುವಾಗಿದೆ. ಅಧ್ಯಕ್ಷ ಸ್ಥಾನವನ್ನು ಪಡೆದುಕೊಳ್ಳಲು ಕಾಂಗ್ರೆಸ್‌ ಜೆಡಿಎಸ್ ಮುಖಂಡರೊಂದಿಗೆ ಮಾತುಕತೆ ನಡೆಸಿದೆ.

ಬಿಜೆಪಿಯ 10 ಸದಸ್ಯರು ಗೆದ್ದಿದ್ದು, ಶಾಸಕ ಹಾಗೂ ಸಂಸದರು ಮತ ಹಾಕುವ ಹಕ್ಕನ್ನು ಹೊಂದಿದ್ದು, ಬಿಜೆಪಿಯ ಪರವಾಗಿ ಒಟ್ಟು 12 ಮತಗಳು ಆಗಲಿವೆ. ಬಹುಮತಕ್ಕೆ ಒಬ್ಬ ಸದಸ್ಯರ ಬೆಂಬಲದ ಅವಶ್ಯಕತೆ ಇದ್ದು, ಪುರಸಭೆ ಅಧಿಕಾರವನ್ನು ಪಡೆದುಕೊಳ್ಳಲೇಬೇಕು ಎಂದು ಬಿಜೆಪಿಯ ಮುಖಂಡರು ಜೆಡಿಎಸ್‌ ಬೆಂಬಲ ಪಡೆಯಲು ತೆರೆಮರೆಯ ಕಸರತ್ತನ್ನು ಪ್ರಾರಂಭಿಸಿದ್ದಾರೆ.

ಈಗಾಗಲೇ ಜೆಡಿಎಸ್ ನಾಯಕ ಹೊದಿಗೆರೆ ರಮೇಶ್ ಅವರೊಂದಿಗೆ ಬಿಜೆಪಿ ಹಾಗೂ ಕಾಂಗ್ರೆಸ್ ಮುಖಂಡರು ಮಾತುಕತೆಯನ್ನು ನಡೆಸಲು ಮುಂದಾಗಿದ್ದಾರೆ. ಆದರೆ ಜೆಡಿಎಸ್ ಮುಖಂಡರು ಯಾರಿಗೆ ಬೆಂಬಲ ಕೊಡುತ್ತೇವೆ ಎಂಬ ಬಗ್ಗೆ ಪ್ರಚುರಪಡಿಸದೇ ತಟಸ್ಥವಾಗಿದ್ದು, ರಾಜಕೀಯ ಚಟುವಟಿಕೆಯನ್ನು ನಡೆಸಿದ್ದಾರೆ.

ಮಾಜಿ ಶಾಸಕರಾದ ವಡ್ನಾಳ್ ರಾಜಣ್ಣ ಹಾಗೂ ಇತರೆ ಮುಖಂಡರು ಜೆಡಿಎಸ್ ಮುಖಂಡರ ಜತೆ ಮಾತುಕತೆಯನ್ನು ನಡೆಸಿದ್ದಾರೆ.

‘ಅಧ್ಯಕ್ಷ ಸ್ಥಾನ ನಮ್ಮ ಪಕ್ಷಕ್ಕೆ ಒಲಿಯಲಿದ್ದು, ಪಟ್ಟಣದ ಅಭಿವೃದ್ಧಿಗೆ ಶ್ರಮಿಸುತ್ತೇವೆ’ ಎಂದು ತಾಲ್ಲೂಕು ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸಿ.ಎಚ್. ಶ್ರೀನಿವಾಸ್ ಹೇಳಿದರು.

‘ನಮ್ಮ ಪಕ್ಷದಿಂದ 10 ಸದಸ್ಯರು ಗೆದ್ದಿದ್ದಾರೆ. ಶಾಸಕ ಹಾಗೂ ಸಂಸದರು ಮತ ಹಾಕುವ ಹಕ್ಕನ್ನು ಹೊಂದಿದ್ದು ಒಟ್ಟು 12 ಮತಗಳು ಆಗಲಿದ್ದು, ಕೊರತೆಯಾಗುವ ಒಬ್ಬ ಸದಸ್ಯರ ಬೆಂಬಲಕ್ಕಾಗಿ ಪ್ರಯತ್ನವನ್ನು ನಡೆಸಿದ್ದೇವೆ. ಈ ನಿಟ್ಟಿನಲ್ಲಿ ಶಾಸಕ ಮಾಡಾಳ್ ವಿರೂಪಾಕ್ಷಪ್ಪ ಜೆಡಿಎಸ್ ಮುಖಂಡರ ಜತೆ ಮಾತುಕತೆ ನಡೆಸುವುದಾಗಿ ಹೇಳಿದ್ದಾರೆ. ಶೀಘ್ರ ಎಲ್ಲ ನಿರ್ಧಾರವಾಗಲಿದೆ’ ಎಂದು ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಎಸ್. ಸಿದ್ದೇಶ್ ಹೇಳಿದರು.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !