ಚನ್ನಗಿರಿ: ‘ಇತ್ತೀಚಿನ ದಿನಗಳಲ್ಲಿ ಯುವಕರು ದುಶ್ಚಟಗಳಿಗೆ ದಾಸರಾಗಿ ಅಮೂಲ್ಯವಾದ ಜೀವನ ಹಾಗೂ ಆರೋಗ್ಯ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ತಾವರೆಕೆರೆ ಶಿಲಾಮಠದ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ತಾವರೆಕೆರೆ ಶಿಲಾಮಠ ಹಾಗೂ ಎಡೆಯೂರು ಮಠದ ಪೀಠಾಧ್ಯಕ್ಷ ರೇಣುಕ ಶಿವಾಚಾರ್ಯರ 77ನೇ ಜನ್ಮ ದಿನದ ಅಂಗವಾಗಿ ಶುಕ್ರವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ನಡೆದ ಜನ ಜಾಗೃತಿ ಕಾರ್ಯಕ್ರಮದ ನೇತೃತ್ವ ವಹಿಸಿ ಮಾತನಾಡಿದರು.
‘ಈಗ ಮಾದಕ ವಸ್ತುಗಳು ಸುಲಭವಾಗಿ ಜನರಿಗೆ ಸಿಗುವಂತಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ಜನ ಕೂಡ ಜಾಗೃತರಾಗಬೇಕು. ಪಾಲಕರು ಮಕ್ಕಳ ಬಗ್ಗೆ ತುಂಬಾ ಕಾಳಜಿ ವಹಿಸಬೇಕು. ವ್ಯಸನ ಮುಕ್ತ ಸಮಾಜಕ್ಕಾಗಿ ಎಲ್ಲರೂ ದುಶ್ಚಟಗಳಿಂದ ದೂರವಿರಬೇಕು’ ಎಂದರು.
‘ತಾವರೆಕೆರೆ ಮಠದಿಂದ ಇಂತಹ ಕಾರ್ಯಕ್ರಮ ಹಮ್ಮಿಕೊಂಡಿರುವುದು ಶ್ಲಾಘನೀಯ. ಮಠ ಮಾನ್ಯಗಳು ಇಂತಹ ಸಾಮಾಜಿಕ ಪಿಡುಗುಗಳ ಬಗ್ಗೆ ಜಾಗೃತಿ ಮೂಡಿಸುವುದು ಅತ್ಯವಶ್ಯಕ’ ಎಂದು ಬಿಜೆಪಿ ಯುವ ಮುಖಂಡ ಮಾಡಾಳ್ ಮಲ್ಲಿಕಾರ್ಜುನ್ ಹೇಳಿದರು.
ನವೀನ್ ಕುಮಾರ್, ಕುಮಾರಪ್ಪ, ಕೆ.ಆರ್.ಗೋಪಿ. ಸಿ.ಎನ್. ರಮೇಶ್, ಎಚ್.ವಿ. ಮಲ್ಲಿಕಾರ್ಜುನ್, ಕನ್ನಡನಾಡು ಹಿತ ರಕ್ಷಣಾ ಸಮಿತಿ ಅಧ್ಯಕ್ಷ ಅಣ್ಣೋಜಿರಾವ್ ಉಪಸ್ಥಿತರಿದ್ದರು.