ಚೆನ್ನೈನ ಶಿಕ್ಷಕಿಯಿಂದ ದೇಶ ಪರ್ಯಟನೆ

7
‘ಮೋದಿ ಮತ್ತೆ ಪ್ರಧಾನಿಯಾಗಲಿ’ ಅಭಿಯಾನ * ಲಾರಿ ಎಳೆದು ಗಮನ ಸೆಳೆದ ಮಹಿಳೆ

ಚೆನ್ನೈನ ಶಿಕ್ಷಕಿಯಿಂದ ದೇಶ ಪರ್ಯಟನೆ

Published:
Updated:
Prajavani

ದಾವಣಗೆರೆ: ಪ್ರಧಾನಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಬೇಕು ಎಂದು ಆಶಿಸಿ ಚೆನ್ನೈನ ಶಿಕ್ಷಕಿ ರಾಜಲಕ್ಷ್ಮಿ ಮಾಂಡ ಅವರು ಬೈಕ್‌ನಲ್ಲಿ ಎಂಟು ರಾಜ್ಯಗಳನ್ನು ಸುತ್ತಿ ತಮ್ಮ ನೆಚ್ಚಿನ ನಾಯಕನ ಬಗ್ಗೆ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಬೆಂಗಳೂರಿನಿಂದ ದೆಹಲಿಗೆ ರಾಯಲ್‌ ಎನ್‌ಫೀಲ್ಡ್‌ ಬೈಕ್‌ನಲ್ಲಿ ಹೊರಟಿರುವ ಅವರು ಶನಿವಾರ ನಗರದಲ್ಲಿ ಐಷರ್‌ ವಾಹನವನ್ನು ಎಳೆಯುವ ಮೂಲಕ ತಮ್ಮ ಭುಜಬಲ ಪರಾಕ್ರಮವನ್ನೂ ಪ್ರದರ್ಶಿಸಿ ನಗರದ ಮೆಚ್ಚುಗೆಗೆ ಪಾತ್ರರಾದರು.

‘ಕಹೋ ದಿಲ್‌ ಸೆ ಮೋದಿಜಿ ಫಿರ್‌ಸೆ’ ಘೋಷವಾಕ್ಯದಡಿ ರಾಜಲಕ್ಷ್ಮಿ ಮಾಂಡ ಅವರು 25 ಸಹವರ್ತಿಗಳೊಂದಿಗೆ ಜನವರಿ 15ರಂದು ಬೆಂಗಳೂರಿನಿಂದ ಬೈಕ್‌ನಲ್ಲಿ ಹೊರಟಿದ್ದ, ಮಾರ್ಗದುದ್ದಕ್ಕೂ ಮೋದಿ ಪರ ಪ್ರಚಾರ ಕೈಗೊಳ್ಳುತ್ತಿದ್ದಾರೆ. ಶುಕ್ರವಾರ ಸಂಜೆ ನಗರಕ್ಕೆ ಬಂದಿದ್ದ ಅವರು, ಶನಿವಾರ ಬೆಳಿಗ್ಗೆ ಬಂಬೂ ಬಜಾರ್‌ನ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ರಾಜಲಕ್ಷ್ಮಿ ಅವರಿಗೆ ಆರತಿ ಬೆಳಗಿ, ತಿಲಕವನ್ನಿಟ್ಟರು. ಬಳಿಕ ತಮಟೆ ವಾದನ, ‘ಭಾರತ ಮಾತಾಕಿ ಜೈ ಘೋಷಣೆ, ಜನರ ಕೇಕೆಗಳ ನಡುವೆ ರಾಜಲಕ್ಷ್ಮಿ ಅವರು ನೋಡ ನೋಡುತ್ತಿದ್ದಂತೆ ಐಷರ್‌ ಲಾರಿಯನ್ನು ಹಗ್ಗದಿಂದ 30 ಅಡಿಗೂ ಹೆಚ್ಚು ದೂರ ಎಳೆದುಕೊಂಡು ಬಂದರು. ಅವರ ಜೊತೆಗೆ ನಿಂತು ಫೋಟೊ ತೆಗೆಸಿಕೊಳ್ಳಲು ಕಾರ್ಯಕರ್ತರು ಮುಗಿ ಬಿದ್ದಿದ್ದರು.

ಈ ವೇಳೆ ಮಾತನಾಡಿದ ರಾಜಲಕ್ಷ್ಮಿ, ‘ಚೆನ್ನೈನಲ್ಲಿ ಖಾಸಗಿ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದೇನೆ. ಮೋದಿ ಅವರ ನಾಲ್ಕು ವರ್ಷಗಳ ಸ್ವಚ್ಛ ಆಡಳಿತದಿಂದಾಗಿ ದೇಶ ಅಭಿವೃದ್ಧಿ ಸಾಧಿಸುತ್ತಿದೆ. ನಾನು ಯಾವುದೇ ಪಕ್ಷದ ಕಾರ್ಯಕರ್ತನಲ್ಲ; ಆದರೆ, ಮೋದಿ ಅವರ ಅಭಿಮಾನಿ. ಅವರು ಮತ್ತೆ ಪ್ರಧಾನಿಯಾದರೆ ದೇಶ ಇನ್ನಷ್ಟು ಅಭಿವೃದ್ಧಿ ಸಾಧಿಸುತ್ತದೆ ಎಂಬ ಕಾರಣಕ್ಕೆ ಅವರ ಪರ ಈ ಅಭಿಯಾನವನ್ನು ಆರಂಭಿಸಿದ್ದೇನೆ’ ಎಂದು ಹೇಳಿದರು.

‘ಕೋಟ್ಯಂತರ ಬಡ ಜನರಿಗೆ ಮನೆ ಸಿಕ್ಕಿದೆ. ಹೆಣ್ಣುಮಕ್ಕಳಿಗಾಗಿ, ಆರೋಗ್ಯ, ಶಿಕ್ಷಣ ಕ್ಷೇತ್ರಗಳಲ್ಲಿ ಅವರು ರೂಪಿಸಿದ ಯೋಜನೆ ಅವಿಸ್ಮರಣೀಯವಾಗಿದೆ. ಗಾಂಧೀಜಿ, ಸ್ವಾಮಿ ವಿವೇಕಾನಂದರಂತೆ ಮೋದಿ ಅವರೂ ಒಬ್ಬ ಯುಗ ಪುರುಷ’ ಎಂದು ಅಭಿಪ್ರಾಯಪಟ್ಟರು.

‘ಕರ್ನಾಟಕ, ಗೋವಾ, ಮಹಾರಾಷ್ಟ್ರ, ಗುಜರಾತ್‌, ಮಧ್ಯಪ್ರದೇಶ, ಉತ್ತರ ಪ್ರದೇಶ, ಉತ್ತರಾಖಂಡ, ಹರಿಯಾಣ ಮೂಲಕ ಸಾಗಿ ದೆಹಲಿಯಲ್ಲಿ ಮಾರ್ಚ್‌ 11ಕ್ಕೆ ಅಭಿಯಾನವನ್ನು ಕೊನೆಗೊಳಿಸುತ್ತೇನೆ. 56 ದಿನಗಳಲ್ಲಿ ಒಟ್ಟು 15,225 ಕಿ.ಮೀ ದೂರವನ್ನು ಕ್ರಮಿಸುತ್ತೇನೆ. ಕಳೆದ ವರ್ಷ ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗೆ ಚೆನ್ನೈನಿಂದ ದೆಹಲಿವರೆಗೆ 12,000 ಕಿ.ಮೀ ದೂರವನ್ನು ಕ್ರಮಿಸಿದ್ದೆ. ಮೋದಿ ಅವರ ಗೆಲುವು ಈ ದೇಶದ ಜನರ ಗೆಲುವಾಗಿದೆ’ ಎಂದು ಅವರು ತಿಳಿಸಿದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಯಶವಂತರಾವ್‌ ಜಾಧವ್‌, ‘ರಾಜಕೀಯ ಪಕ್ಷದೊಂದಿಗೆ ಗುರುತಿಸಿಕೊಳ್ಳದ ರಾಜಲಕ್ಷ್ಮಿ ಅವರು ಮೋದಿ ಪರ ಪ್ರಚಾರ ನಡೆಸಲು ಇಲ್ಲಿಗೆ ಬಂದಿರುವುದು ಕಾರ್ಯಕರ್ತರಲ್ಲಿ ಇನ್ನಷ್ಟು ಸ್ಫೂರ್ತಿ ತಂದಿದೆ. ಮೋದಿ ಅವರನ್ನು ಮತ್ತೊಮ್ಮೆ ಪ್ರಧಾನಿ ಮಾಡಲು ಜಿಲ್ಲೆಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸಲಾಗುವುದು’ ಎಂದು ಹೇಳಿದರು.

ಬಳಿಕ ಬಿಜೆಪಿ ಕಾರ್ಯಕರ್ತರು ಸಂಗೊಳ್ಳಿ ರಾಯಣ್ಣ ವೃತ್ತದವರೆಗೂ ಬೈಕ್‌ ರ‍್ಯಾಲಿಯಲ್ಲಿ ತೆರಳಿ ರಾಜಲಕ್ಷ್ಮಿ ಅವರನ್ನು ಹಾವೇರಿಗೆ ಬೀಳ್ಕೊಟ್ಟರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜಶೇಖರ್‌, ಜಿಲ್ಲಾ ಎಸ್‌.ಸಿ. ಮೋರ್ಚಾ ಅಧ್ಯಕ್ಷ ಗೋಣೆಪ್ಪ, ಮಹಿಳಾ ಮೋರ್ಚಾ ಅಧ್ಯಕ್ಷೆ ಜಯಮ್ಮ, ಸವಿತಾ ರವಿಕುಮಾರ್‌, ಭಾಗ್ಯ ಪಿಸಾಳೆ, ರೇಖಾ ರಾಜು, ದೇವೀರಮ್ಮ, ರಾಜನಹಳ್ಳಿ ಶಿವಕುಮಾರ್‌, ತರಕಾರಿ ಶಿವಕುಮಾರ್‌, ಶಿವನಗೌಡ ಪಾಟೀಲ, ಗೌತಮ್‌ ಜೈನ್‌ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !