ಮಂಗಳವಾರ, ಜನವರಿ 28, 2020
23 °C

ಹಿರೇಕೋಗಲೂರಿನಲ್ಲಿ ಬೆಳೆದ ಕನ್ನಡದ ಕಟ್ಟಾಳು ಚಿ.ಮೂ

ಕೆ.ಎಸ್.ವೀರೇಶ್ ಪ್ರಸಾದ್ Updated:

ಅಕ್ಷರ ಗಾತ್ರ : | |

Prajavani

ಸಂತೇಬೆನ್ನೂರು: ಖ್ಯಾತ ಸಂಶೋಧಕ, ವಿಮರ್ಶಕ ಡಾ.ಚಿದಾನಂದ ಮೂರ್ತಿ ಅವರಿಗೆ ಹುಟ್ಟೂರಾದ ಚನ್ನಗಿರಿ ತಾಲ್ಲೂಕಿನ ಹಿರೇಕೋಗಲೂರಿನ ಮೇಲೆ ಅಪಾರ ಪ್ರೀತಿ. ಪ್ರತಿ ಬಾರಿ ಬಂದಾಗಲೂ ಸಂಬಂಧಿಕರ ಹಾಗೂ ಸ್ನೇಹಿತರ ಮನೆಗಳಿಗೆ ಭೇಟಿ ನೀಡಿ ಹಳೆಯ ನೆನಪುಗಳನ್ನು ಮೆಲುಕು ಹಾಕುತ್ತಿದ್ದರು.

ಸೋದರ ಮಾವ ಪಂಚಾಕ್ಷರಯ್ಯ ಅವರ ಮಗ ಮಹಾಂತೇಶ್ ಮನೆಗೆ ಭೇಟಿ ನೀಡಿದ್ದ ಎಲ್ಲರನ್ನೂ ಗ್ರಾಮೀಣ ಭಾಷೆಯಲ್ಲಿಯೇ ಮಾತನಾಡಿಸುತ್ತಿದ್ದರು. ‘ಚೆನ್ನಾಗಿದ್ದೀಯ ಎನ್ನುವ ಬದಲು, ವತಂಗಿದೀಯಾ ಅಂತಿದ್ರು. ಎಲ್ಲಾ ದೇಗುಲಗಳಿಗೆ ಹೋಗುತ್ತಿದ್ದರು. ಸೂಳೆಕೆರೆ, ನೀತಿಗೆರೆ, ಮಲ್ಲಾಪುರ ಗ್ರಾಮಗಳಿಗೆ ಭೇಟಿ ಕೊಡುತ್ತಿದ್ದರು. ದಾವಣಗೆರೆಗೆ ಎತ್ತಿನಗಾಡಿಯಲ್ಲಿ ಓಡಾಡಿದ ಅನುಭವ ಬಿಚ್ಚಿಡುತ್ತಿದ್ದರು’ ಎಂದು ಮಹಾಂತೇಶ್‌ ಸ್ಮರಿಸಿಕೊಂಡರು.

‘ಪ್ರಜಾವಾಣಿ’ಯ ವಾಚಕರ ವಾಣಿ ಹಾಗೂ ಚುಟುಕುಗಳಲ್ಲಿ ಗೀತಾ ಕೋಗಲೂರು ಎಂಬ ನಾಮಾಂಕಿತದಲ್ಲಿ ನಾನು ಲೇಖನ ಬರೆಯುತ್ತಿದೆ. ಇದನ್ನು ಗಮನಿಸಿದ್ದ ಚಿದಾನಂದ ಮೂರ್ತಿ ಅವರು ತಾವು ಕೂಡ ಹೆಸರಿನ ಜೊತೆ ಕೋಗಲೂರು ಸೇರಿಸಿಕೊಳ್ಳಬೇಕಿತ್ತು ಎನ್ನುತ್ತಿದ್ದರು. ಮನೆಗೆ ಭೇಟಿ ನೀಡಿದಾಗ ನನ್ನ ಬರಹಗಳನ್ನು ನೋಡಿ, ಆಶೀರ್ವಾದ ನೀಡುತ್ತಿದ್ದರು. ಪತ್ರ ಮುಖೇನ ಸಂಪರ್ಕಿಸಿ ಬರವಣಿಗೆ ಬಗ್ಗೆ ಕೇಳುತ್ತಿದ್ದರು’ ಎಂದು ಸಾಹಿತಿ ಗೀತಾ ಕೋಗಲೂರು ಅವರು, ಚಿ.ಮೂ ಅವರ ಅಗಲಿಕೆಯ ನೋವು ಹಂಚಿಕೊಂಡರು.

‘ಸಂತೇಬೆನ್ನೂರಿನ ಸಂತೆಗೆ ಬಾಲ್ಯದಲ್ಲಿ ಪ್ರತಿ ಗುರುವಾರ ಬರುತ್ತಿದ್ದೆವು. ಪುಷ್ಕರಣಿ ಬಳಿ ಖಾರ, ಮಂಡಕ್ಕಿ, ವಡೆ ತಿನ್ನುತ್ತಿದ್ದೆವು. ಅದೇ ನೀರನ್ನು ಕುಡಿಯುತ್ತಿದ್ದೆವು ಎಂದು ಭೇಟಿ ನೀಡಿದಾಗಲೆಲ್ಲ ಹೇಳುತ್ತಿದ್ದರು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ವಾಗೀಶ್ ಸ್ಮರಿಸಿದರು.

‘ಕೋಗಲೂರಿಗೆ ಕೋಗಿಲೆಗಳ ವಾಸಸ್ಥಾನದಿಂದ ನಾಮಾಂಕಿತಗೊಂಡಿದೆ. ಅವರ ತಂದೆ ಶಿಕ್ಷಕರಾಗಿದ್ದರು. ನಮಗೆ ಮೂರನೇ ತರಗತಿಯಲ್ಲಿ ಮೇಷ್ಟ್ರು. ಓದಿನಲ್ಲಿ ಚುರುಕಾಗಿದ್ದರು’ ಎಂದು ಗ್ರಾಮದ ಎಚ್.ಮರುಳಸಿದ್ದಪ್ಪ ಮೆಲುಕು ಹಾಕಿದರು.

ಚಿದಾನಂದ ಮೂರ್ತಿ ಅವರು 1931ರ ಮೇ 10ರಂದು ಹಿರೇಕೋಗಲೂರಿನಲ್ಲಿ ಜನಿಸಿದ್ದರು. ತಂದೆ ಮಠದ ಕೊಟ್ಟೂರಯ್ಯ, ತಾಯಿ ಪಾರ್ವತಮ್ಮ. ಬಡತನದಲ್ಲಿಯೇ ಶಿಕ್ಷಣದ ತನ್ಮಯತೆ. ಹಿರೇಕೋಗಲೂರಿನಲ್ಲಿಯೇ ಪ್ರಾಥಮಿಕ ಶಿಕ್ಷಣ ಪಡೆದಿದ್ದರು. ಇಂಟರ್ ಮೀಡಿಯೇಟ್‌ ದಾವಣಗೆರೆ ಸರ್ಕಾರಿ ಶಾಲೆಯಲ್ಲಿ ಪೂರೈಸಿದ್ದರು.

ಮೈಸೂರು ಮಹಾರಾಜ ಕಾಲೇಜಿನಲ್ಲಿ 1953ರಲ್ಲಿ ಬಿ.ಎ. ಪದವಿ ಪಡೆದಿದ್ದರು. ಸ್ವರ್ಣ ಪದಕದೊಂದಿಗೆ 1957ರಲ್ಲಿ ಸ್ನಾತಕೋತ್ತರ ಪದವಿಯನ್ನೂ ಗಳಿಸಿದ್ದರು. ತೀನಂಶ್ರೀ ಗರಡಿಯಲ್ಲಿ ಪಿಎಚ್‌ಡಿ ಪಡೆದಿದ್ದರು.

ಗಣಿತ, ವಿಜ್ಞಾನ ಓದಿನಲ್ಲಿ ಮುಂದಿದ್ದರೂ ಹಣದ ಮಾಡುವ ಆಸೆಗೆ ಬೀಳದೆ, ಹುಟ್ಟೂರಿನ ಕನ್ನಡ ಭಾಷೆಯ ಮಾಧುರ್ಯ, ಕನ್ನಡ ವ್ಯಾಸಂಗದತ್ತ ಅವರನ್ನು ಕೈಬೀಸಿ ಕರೆದಿತ್ತು.

ಪ್ರತಿಕ್ರಿಯಿಸಿ (+)