ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆತ್ತವರಿಗೆ ಮಗು ಹಸ್ತಾಂತರ: ಆರೋಪಿ ಮಹಿಳೆಯ ಬಂಧನ

ನವಜಾತ ಶಿಶುವನ್ನು ಬೆಂಗಳೂರುವರೆಗೆ ಹೊತ್ತೊಯ್ದು ಮಗಳಿಗೆ ನೀಡಿದ್ದ ಆರೋಪಿ
Last Updated 7 ಏಪ್ರಿಲ್ 2022, 3:56 IST
ಅಕ್ಷರ ಗಾತ್ರ

ದಾವಣಗೆರೆ: ಕಳವಾಗಿದ್ದ ಮಗು ಮಂಗಳವಾರ ಪತ್ತೆಯಾಗಿ ಬುಧವಾರ ಹೆತ್ತವರ ಮಡಿಲು ಸೇರಿದೆ. ಮಗುವನ್ನು ಕಳವು ಮಾಡಿದ್ದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.

ಆಜಾದ್‌ನಗರ 1ನೇ ಮೇನ್‌ 15ನೇ ಕ್ರಾಸ್‌ ನಿವಾಸಿ ಜಿಲಾನಿ ಅವರ ಪತ್ನಿ ಗುಲ್ಜರ್‌ಬಾನು (44) ಬಂಧಿತ ಆರೋಪಿ.

ಜಿಲಾನಿ–ಗುಲ್ಜರ್‌ಬಾನು ದಂಪತಿಗೆ ಮೂವರು ಮಕ್ಕಳು. ಅದರಲ್ಲಿ ಮೊದಲ ಮಗಳಾದ ಫರ್ಹಾನ್ ಖಾನ್‌ ಅವರನ್ನು ಬೆಂಗಳೂರಿನ ತೌಸೀಫ್‌ ಅವರಿಗೆ ಮದುವೆ ಮಾಡಿ ಕೊಡಲಾಗಿತ್ತು. ಮದುವೆಯಾಗಿ ಕೆಲವು ವರ್ಷಗಳಾದರೂ ಈ ದಂಪತಿಗೆ ಮಕ್ಕಳಾಗಿರಲಿಲ್ಲ.

ಹರಪನಹಳ್ಳಿ ಗುಂಡಿನಕೆರೆಯ ಇಸ್ಮಾಯಿಲ್‌ ಜಬೀವುಲ್ಲಾ ಅವರ ಪತ್ನಿ ಉಮೇಸಲ್ಮಾ (22) ಅವರಿಗೆ ಚಾಮರಾಜಪೇಟೆ ಬಳಿ ಇರುವ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ (ಹೆರಿಗೆ ಆಸ್ಪತ್ರೆ) ಮಾರ್ಚ್‌ 16ರಂದು ಹೆರಿಗೆಯಾಗಿತ್ತು. ಹೆರಿಗೆಯಾಗಿ ಕೆಲವೇ ಗಂಟೆಗಳಲ್ಲಿ ಆರೋಪಿ ಗುಲ್ಜರ್‌ಬಾನು ಮಗುವನ್ನು ತಗೊಂಡು ಹೋಗಿದ್ದರು. ಆಸ್ಪತ್ರೆಯಿಂದ ಆಟೋದಲ್ಲಿ ಹೋಗಿದ್ದ ಅವರು ಆ ಮಗುವನ್ನು ನೇರವಾಗಿ ಬೆಂಗಳೂರಿಗೆ ಒಯ್ದು ಮಗಳ ಕೈಗೆ ನೀಡಿ ವಾಪಸ್ಸಾಗಿದ್ದರು.

ಮಹಿಳೆ ಮಗುವನ್ನು ಒಯ್ಯುತ್ತಿರುವುದು ಆಸ್ಪತ್ರೆಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಅದರ ಆಧಾರದಲ್ಲಿ ಮನೆ ಮನೆ ಹುಡುಕಾಟ ಆರಂಭವಾಗಿತ್ತು. ಆಜಾದ್‌ನಗರದ ಗುಲ್ಜರ್‌ಬಾನು ಮತ್ತು ಸಿಸಿಟಿವಿ ಕ್ಯಾಮೆರಾದಲ್ಲಿ ಕಂಡು ಬಂದ ಮಹಿಳೆಯ ನಡುವೆ ಹೋಲಿಕೆ ಕಂಡು ಬಂದಿತ್ತು. ಸುತ್ತಮುತ್ತಲಿನ ಮನೆಗಳಿವರಿಗೆ ಸಿಸಿಟಿವಿ ಕ್ಯಾಮೆರಾದ ವಿಡಿಯೊ ತೋರಿಸಿ ಖಚಿತಪಡಿಸಿಕೊಳ್ಳಲಾಗಿತ್ತು. ಬಳಿಕ ನೆರಳು ಬೀಡಿ ಸಂಘಟನೆಯವರು ಮತ್ತು ಪೊಲೀಸರು ಆ ಮನೆಗೆ ಹೋಗಿ ವಿಚಾರಿಸಿದ್ದರು. ಆದರೆ ಮಗು ಒಯ್ದಿರುವುದನ್ನು ಮಹಿಳೆ ಒಪ್ಪಿರಲಿಲ್ಲ.

ಮರುದಿನ ಅಂದರೆ ಮಂಗಳವಾರ ಠಾಣೆಗೆ ಕರೆಸಿ ವಿಚಾರಣೆ ಮಾಡಿದಾಗಲೂ ಬಾಯಿ ಬಿಟ್ಟಿರಲಿಲ್ಲ. ಈ ನಡುವೆ ಮಂಗಳವಾರ ಸಂಜೆ ಮಗು ಹೈಸ್ಕೂಲ್‌ ಫೀಲ್ಡ್‌ನಲ್ಲಿರುವ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದ ಬಳಿ ಕುಳಿತಿದ್ದ ಅಜ್ಜಿಗೆ ಮಗುವನ್ನು ನೀಡಿ ‘ಬಾತ್‌ರೂಂಗೆ ಹೋಗಿ ಬರ್ತೇನೆ ಎಂದು ಹೇಳಿ ಬುರ್ಕಾಧಾರಿ ಮಹಿಳೆ ನಾಪತ್ತೆಯಾಗಿದ್ದರು. ಬಡಾವಣೆ ಪೊಲೀಸ್‌ ಠಾಣೆಯಲ್ಲಿ ಮಗು ಪತ್ತೆ ಪ್ರಕರಣ ದಾಖಲಾಗಿತ್ತು.

ಮಗುವೇನೋ ಪತ್ತೆಯಾಯಿತು. ಆದರೆ ಕಳವು ಮಾಡಿದವರು ಸಿಗದೇ ಇದ್ದರೆ, ಅವರು ಒಪ್ಪದೇ ಇದ್ದರೆ ಡಿಎನ್‌ಎ ಪರೀಕ್ಷೆ ನಡೆಸಿ ಅದರ ವರದಿ ಬರುವವರೆಗೆ ಕಾಯಬೇಕು. ಅದಕ್ಕೆ ಕನಿಷ್ಠ ಒಂದೂವರೆ ತಿಂಗಳು ಬೇಕಾಗುತ್ತದೆ. ಮಗುವನ್ನು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಜಿಲ್ಲಾ ಆರೋಗ್ಯ ಇಲಾಖೆಯ ಅಡಿಯಲ್ಲಿ ಸಿಜಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಮಗು ಒಯ್ದಿಲ್ಲ ಎಂದು ಹೇಳುತ್ತಿದ್ದ ಗುಲ್ಜರ್‌ಬಾನು ಅವರ ಮೊಬೈಲ್‌ ಕರೆಗಳ ದಾಖಲೆ ಪರಿಶೀಲಿಸಿದಾಗ ಆಕೆಯೇ ಒಯ್ದಿರುವುದು ಪೊಲೀಸರಿಗೆ ಖಚಿತವಾಗಿತ್ತು. ಬುಧವಾರ ಆಕೆಯನ್ನು ಬಂಧಿಸಿದಾಗ ಆಕೆ ಮಗು ಕಳವು ಮಾಡಿರುವುದನ್ನು ಒಪ್ಪಿಕೊಂಡಿದ್ದಾರೆ.

ಹೆತ್ತವರ ಮಡಿಲಿಗೆ: ಬುಧವಾರ ಸಂಜೆ 4.30ಕ್ಕೆ ಮಗುವನ್ನು ಹೆತ್ತವರಿಗೆ ಪೊಲೀಸರು, ಆರೋಗ್ಯ ಇಲಾಖೆಯ ಅಧಿಕಾರಿಗಳು, ಸಿ.ಜಿ. ಆಸ್ಪತ್ರೆಯ ಅಧಿಕಾರಿಗಳು, ಮಹಿಳಾ ಮತ್ತು ಮಕ್ಕಳ ಇಲಾಖೆಯ ಅಧಿಕಾರಿಗಳು ಒಪ್ಪಿಸಿದರು. ಇಸ್ಮಾಯಿಲ್‌ ಜಬೀವುಲ್ಲಾ– ಉಮೇಸಲ್ಮಾ ದಂಪತಿ ಮಗುವನ್ನು ಸ್ವೀಕರಿಸಿ ಸಂಭ್ರಮಪಟ್ಟರು. ಶಿರಿನ್‌ ಬಾನು, ಜಬೀನಾಖಾನಂ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT