ಬುಧವಾರ, ನವೆಂಬರ್ 13, 2019
21 °C
cheetah captured

ದಿಗ್ಗೆನಹಳ್ಳಿ: ಬೋನಿಗೆ ಬಿದ್ದ ಚಿರತೆ

Published:
Updated:
Prajavani

ಚನ್ನಗಿರಿ (ದಾವಣಗೆರೆ): ಸಮೀಪದ ದಿಗ್ಗೇನಹಳ್ಳಿಯ ಬಳಿ ಭಾನುವಾರ ಬೆಳಗಿನ ಜಾವ ಚಿರತೆ ಬೋನಿಗೆ ಬಿದ್ದಿದೆ. ಸೆರೆ ಸಿಕ್ಕ ಚಿರತೆಯನ್ನು ಮಧ್ಯಾಹ್ನ ಚನ್ನಗಿರಿ ತಾಲ್ಲೂಕಿನ ಮಾವಿಕಟ್ಟೆ ವಲಯದ ಅರಣ್ಯ ಇಲಾಖೆಗೆ ಸಾಗಿಸಲಾಯಿತು.

ಮಾವಿನಕಟ್ಟೆ ಅರಣ್ಯವಲಯಾಧಿಕಾರಿ ಡಿ.ಮಾವಿನಹೊಳೆಯಪ್ಪ, ‘ತಿಂಗಳ ಹಿಂದೆಯಷ್ಟೆ ಚಿಲಾಪುರ ಬಳಿ ಹೆಣ್ಣು ಚಿರತೆಯನ್ನು ಸೆರೆ ಹಿಡಿದು, ಶಿವಮೊಗ್ಗ ಲಯನ್ ಸಫಾರಿಗೆ ಸಾಗಿಸಲಾಗಿತ್ತು. ಹೆಣ್ಣು ಚಿರತೆ ಜತೆಯಲ್ಲಿದ್ದ ಗಂಡು ಚಿರತೆಯು ತಪ್ಪಿಸಿಕೊಂಡು ಅಲ್ಲಲ್ಲಿ ಓಡಾಡುತ್ತಿತ್ತು. ಈ ಚಿರತೆಯು ಕರಡಿ ಕ್ಯಾಂಪ್, ದಿಗ್ಗೇನಹಳ್ಳಿ, ಆದ್ರಹಳ್ಳಿ, ಅರಸನಗಟ್ಟ ತಾಂಡ ಭಾಗದಲ್ಲಿ ಕಾಣಿಸಿಕೊಂಡು ಆಡು, ಕುರಿ, ನಾಯಿಗಳನ್ನು ಹಿಡಿದು ತಿನ್ನುತ್ತಿತ್ತು. ಈ ಬಗ್ಗೆ ದಿಗ್ಗೇನಹಳ್ಳಿ ಗ್ರಾಮಸ್ಥರ ಮನವಿ ಮೇರೆಗೆ ವಾರದ ಹಿಂದೆ ದಿಗ್ಗೇನಹಳ್ಳಿ ಕಾಂಡಂಚಿನ ಸೈದರ ಕಲ್ಲಹಳ್ಳಿ ರಸ್ತೆಯ ಬಲಭಾಗದಲ್ಲಿ ಬೋನು ಅಳವಾಡಿಸಲಾಗಿತ್ತು’ ಎಂದರು.

ಸಿಬ್ಬಂದಿ ಪ್ರತಿದಿನ ಸ್ಥಳ ಪರಿಶೀಲಿಸುತ್ತಿದ್ದರು. ಭಾನುವಾರ ಬೆಳಗಿನ ಜಾವ ಗಂಡು ಚಿರತೆ ಬೋನಿಗೆ ಬಿದ್ದಿರುವ ಮಾಹಿತಿ ಲಭಿಸಿತು’ ಎಂದು ತಿಳಿಸಿದರು.

ಪ್ರತ್ಯಕ್ಷದರ್ಶಿ ದಿಗ್ಗೇನಹಳ್ಳಿ ಹಾಲೇಶಪ್ಪ, ಇಲ್ಲಿ ಚಿರತೆಯ ಮರಿಗಳು ಓಡಾಡಿಕೊಂಡಿವೆ. ಇನ್ನು ಎರಡು ಚಿರತೆಗಳು ಇರಬಹುದು. ಈ ಬಗ್ಗೆ ಮಾಹಿತಿ ಸಿಕ್ಕ ತಕ್ಷಣ ಅರಣ್ಯ ಇಲಾಖೆಗೆ ತಿಳಿಸುತ್ತೇವೆ’ ಎಂದರು.

ಚಿರತೆ ಬೋನಿಗೆ ಬಿದ್ದ ವಿಷಯ ತಿಳಿದ ಸುತ್ತಮುತ್ತಲ ಗ್ರಾಮಸ್ಥರು ಸ್ಥಳಕ್ಕೆ ಧಾವಿಸಿ ಚಿರತೆಯನ್ನು ನೋಡಿ, ಮೋಬೈಲ್‌ಗಳಲ್ಲಿ ಫೊಟೋ ಸೆರೆ ಹಿಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. 

ಪ್ರತಿಕ್ರಿಯಿಸಿ (+)