ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಹ, ಮನಸ್ಸು ಶುದ್ಧಿಗೊಳಿಸುವ ‘ರೋಜಾ’

ಜಿಲ್ಲೆಯಲ್ಲಿ ರಮ್ಜಾನ್ ಉಪವಾಸ; ಗುಟುಕು ನೀರನ್ನೂ ಸೇವಿಸದೆ ಕಟ್ಟುನಿಟ್ಟಿನ ವ್ರತ ಪಾಲನೆ
Last Updated 12 ಜೂನ್ 2018, 12:02 IST
ಅಕ್ಷರ ಗಾತ್ರ

ಕಾರವಾರ: ‘ರಮ್ಜಾನ್‌ ಮಾಸದಲ್ಲಿ ಕೈಗೊಳ್ಳುವ ಉಪವಾಸ ವ್ರತ (ರೋಜಾ) ದೇಹ ಹಾಗೂ ಮನಸ್ಸನ್ನು ಶುದ್ಧಿಗೊಳಿಸುತ್ತದೆ. ಈ ವೇಳೆ ಒಂದು ಗುಟುಕು ನೀರನ್ನೂ ಗಂಟಲಿಗಿಳಿಸದೆ ಕಟ್ಟುನಿಟ್ಟಾಗಿ ವ್ರತ ಮಾಡುತ್ತೇವೆ’ ಎಂದು ಮಾತಿಗಿಳಿದರು ಸಂಕ್ರಿವಾಡದ ನಿವಾಸಿ ಮೊಹಮ್ಮದ್ ಮುಜಾಮಿಲ್ ಮಾಂಡ್ಲೀಕ್.

ನಗರದ ‘ಕರಾವಳಿ ಡೆಕೋರೇಟರ್ಸ್‌’ ಮಾಲೀಕ ಮಾಂಡ್ಲೀಕ್ ಅವರದ್ದು ಮೊಮ್ಮಕ್ಕಳನ್ನೂ ಕೂಡಿಕೊಂಡಿರುವ ಒಂದು ಪುಟ್ಟ ಸಂಸಾರ. ಪುತ್ರರಾದ ಮುಬಷೀರ್‌ ಮಾಂಡ್ಲೀಕ್ ಹಾಗೂ ಅವರ ಪತ್ನಿ ಅಲಿಯಾ ಮಾಂಡ್ಲೀಕ್, ಮುಜಕ್ಕೀರ್ ಮಾಂಡ್ಲೀಕ್ ಹಾಗೂ ಅವರ ಪತ್ನಿ ನಿಲೋಫರ್ ಮಾಂಡ್ಲೀಕ್ ಇವರ ಜತೆಗಿದ್ದಾರೆ. ಇನ್ನೊಬ್ಬರು ಪುತ್ರಿ ಮುಬೀನಾ ಕೌಸರ್ ದುಬೈನಲ್ಲಿ ಇದ್ದಾರೆ. ಮೊಮ್ಮಕ್ಕಳಾದ ಮೊಹಮ್ಮದ್ ಹಾನಿ ಮಾಂಡ್ಲೀಕ್ ಹಾಗೂ ಷರೀಫಾ ಮಾಂಡ್ಲೀಕ್ ಪ್ರಾಯೋಗಿಕ ಉಪವಾಸ ವ್ರತದಲ್ಲಿದ್ದಾರೆ (ಹತ್ತು ವರ್ಷದ ಒಳಗಿನ ಮಕ್ಕಳಿಗೆ ಪೂರ್ಣ ಉಪವಾಸದಿಂದ ವಿನಾಯಿತಿ ಇದೆ).

ಬೆಳಿಗ್ಗೆ 4 ಗಂಟೆಯಿಂದಲೇ ರಮ್ಜಾನ್ ಉಪವಾಸದ ಆಚರಣೆಗಳು ಶುರುವಾಗುತ್ತವೆ. ಉಪವಾಸ ಆರಂಭಿಸುವುದಕ್ಕೆ ‘ಸಹರಿ’ ಎಂದು ಕರೆಯಲಾಗುತ್ತದೆ. ಮಾಂಡ್ಲೀಕ್ ಅವರ ಮನೆಯ ಡೈನಿಂಗ್ ಟೇಬಲ್‌ನ ಮೇಲೆ ಪೂರಿ ಬಾಜಿ, ಫಿಶ್ ಫ್ರೈ, ಫಿಶ್ ಕರಿ, ಚಿಕನ್ ಕಬಾಬ್, ಚೈನಾಗ್ರಾಸ್ ಸೇರಿದಂತೆ ಸಿಹಿ ತಿಂಡಿಗಳು ಹಾಗೂ ಹಣ್ಣುಗಳು ಸಿದ್ಧವಾಗಿದ್ದವು. ಮನೆಯ ಸದಸ್ಯರೆಲ್ಲರೂ ಕುಳಿತು
ಒಟ್ಟಿಗೆ ಉಪಾಹಾರ ಸೇವಿಸಿದರು. ಬಳಿಕ ‘ರೋಜಾ’ ಮಹತ್ವವನ್ನು ವಿವರಿಸಿದರು. ಅಷ್ಟೊತ್ತಿಗೆ ಸಮೀಪದ ಮಸೀದಿಯಲ್ಲಿ ‘ನಮಾಜ್’ (ಶಾಸ್ತ್ರ) ಪ್ರಾರಂಭವಾಗಿತ್ತು.

ರಮ್ಜಾನ್‌ ಆಚರಣೆಯ ಮಹತ್ವ: ‘ಉರ್ದು ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳನ್ನು ರಮ್ಜಾನ್‌ ಮಾಸವಾಗಿ ಅಚರಿಸಲಾಗುತ್ತದೆ. ಪವಿತ್ರ ಗ್ರಂಥ ಕುರಾನ್‌ನಲ್ಲಿ ಉಪವಾಸ ವ್ರತದ ಬಗ್ಗೆ ಉಲ್ಲೇಖವಿದೆ. ಅದರಂತೆ ಪ್ರತಿಯೊಬ್ಬ ಮುಸಲ್ಮಾನರು ಕಡ್ಡಾಯವಾಗಿ ಈ ತಿಂಗಳಲ್ಲಿ ಉಪವಾಸ ವ್ರತ (ರೋಜಾ) ಮಾಡುತ್ತಾರೆ. ಈ ಬಾರಿ ಮೇ 17 ರಿಂದ ಜೂನ್ 15ರ ವರೆಗೆ ಈ ವ್ರತ ನಡೆಯಲಿದೆ. ಸೂರ್ಯೋದಯಕ್ಕೂ ಮುನ್ನ ಈ ವ್ರತ ಆರಂಭಿಸಿ, ಸೂರ್ಯಾಸ್ತದ ಬಳಿಕ ಅದನ್ನು ಅಂತ್ಯಗೊಳಿಸಲಾಗುತ್ತದೆ. ಈ ವೇಳೆ ಮಸೀದಿಗೆ ತೆರಳಿ ‘ತರಬಿ’ಯನ್ನು (ಪ್ರಾರ್ಥನೆ) ಮಾಡಲಾಗುತ್ತದೆ. ಈ ವ್ರತ ಮಾಡುವುದರಿಂದ ಬಡವರ ಹಸಿವಿನ ಅರಿವಾಗುತ್ತದೆ. ಅವರ ಮೇಲೆ ಕನಿಕರ ಮೂಡುತ್ತದೆ’ ಎಂದು ಮಾಂಡ್ಲೀಕ್ ವಿವರಿಸಿದರು. ‘ಸಾಮಾನ್ಯವಾಗಿ ಈ ವ್ರತ ಬೆಳಿಗ್ಗೆ 4.43ರಿಂದ ಆರಂಭವಾಗಿ ಸಂಜೆ 7.08ರ ವರೆಗೆ ಇರುತ್ತದೆ. ಈ ನಡುವೆ ಒಂದು ತೊಟ್ಟು ನೀರನ್ನೂ ಸೇವಿಸಲ್ಲ.

ರೋಜಾ ಅಂತ್ಯಗೊಳಿಸಿದ ಮೇಲೆ ಎಲ್ಲರೂ ರಾತ್ರಿ ಊಟಕ್ಕೆ (ಇಫ್ತಾರ್‌) ಸಿದ್ಧರಾಗುತ್ತೇವೆ. ಬಿರಿಯಾನಿ ಸೇರಿದಂತೆ ವಿವಿಧ ಭಕ್ಷ್ಯಗಳನ್ನು ಸಿದ್ಧಪಡಿಸಲಾಗುತ್ತದೆ. ಸಂಬಂಧಿಕರು, ಸ್ನೇಹಿತರು ಈ ಇಫ್ತಾರ್‌ ಕೂಟದಲ್ಲಿ ಭಾಗವಹಿಸುತ್ತಾರೆ’ ಎಂದು ಮಾಹಿತಿ ನೀಡಿದರು.

‘ಜಕಾತ್‌, ಕೈರಾತ್‌, ಫಿತ್ರಾದಿಂದ ಪುಣ್ಯ ಪ್ರಾಪ್ತಿ’

ಇಸ್ಲಾಂ ಧರ್ಮದ ಪ್ರಕಾರ ಮುಸ್ಲಿಮರು ತಮ್ಮ ಆದಾಯದ ಶೇ 2.5ರಷ್ಟನ್ನು ಬಡವರಿಗೆ ದಾನ (ಜಕಾತ್‌) ನೀಡುವುದು ಕಡ್ಡಾಯ. ರಮ್ಜಾನ್‌ ತಿಂಗಳಲ್ಲಿ ಬಡವರು, ನೆರೆ ಹೊರೆಯವರು, ಅಶಕ್ತರಿಗೆ ಆದ್ಯತೆ ಮೇರೆಗೆ ದಾನ ಮಾಡುತ್ತೇವೆ. ಚಿನ್ನ, ಬೆಳ್ಳಿ ಇದ್ದರೆ ಅದರ ಮೌಲ್ಯವನ್ನೂ ಲೆಕ್ಕಹಾಕಿ ಶೇ 2.5ರಷ್ಟನ್ನು ಹಣದ ರೂಪದಲ್ಲಿ ದಾನ ಮಾಡಲಾಗುವುದು ಎಂದು ಮೊಹಮ್ಮದ್ ಮುಜಾಮಿಲ್ ಮಾಂಡ್ಲೀಕ್ ತಿಳಿಸಿದರು.

ರಮ್ಜಾನ್‌ ಮಾಸದಲ್ಲಿ ಕಡು ಬಡವರು ಮನೆ ಮನೆಗೆ ತೆರಳಿ ನೆರವು ಕೇಳುತ್ತಾರೆ. ಆ ಸಮಯದಲ್ಲಿ ಕೈಲಾದಷ್ಟು ಹಣವನ್ನು ಅವರಿಗೆ ಕೊಡುತ್ತೇವೆ. ಅದಕ್ಕೆ ‘ಕೈರಾತ್‌’ ಎನ್ನಲಾಗುತ್ತದೆ. ರಮ್ಜಾನ್‌ ಮಾಸದ ಕೊನೆಯ ದಿನ ಚಂದ್ರನನ್ನು ನೋಡಿದ ನಂತರ ಹಾಗೂ ಮರುದಿನ ಬೆಳಿಗ್ಗೆ ಈದ್‌ ಪ್ರಾರ್ಥನೆ ಸಲ್ಲಿಸುವ ನಡುವಿನ ಅಂತರದಲ್ಲಿ ಬಡವರಿಗೆ ಮನೆಯಲ್ಲಿ ಬಳಸುವ ಆಹಾರಧಾನ್ಯಗಳನ್ನು ಕೊಡುವುದನ್ನು ‘ಫಿತ್ರಾ’ ಎನ್ನುತ್ತೇವೆ ಎಂದು ಮೂರು ವಿಧಾನಗಳ ಮಹತ್ವ ವಿವರಿಸಿದರು.

ಐದು ತತ್ವ ಬೋಧಿಸುವ ಇಸ್ಲಾಂ

ಪ್ರಮುಖ ಐದು ತತ್ವಗಳನ್ನು ಆಧರಿಸಿರುವ ಇಸ್ಲಾಂ ಧರ್ಮ, ಖಲೀಮಾ (ಮನದಲ್ಲೇ ದೇವರ ಸ್ಮರಣೆ), ನಮಾಜ್ (ಪ್ರಾರ್ಥನೆ), ರೋಜಾ (ಉಪವಾಸ), ಜಕಾತ್ (ದಾನ) ಹಾಗೂ ಹಜ್ (ಮೆಕ್ಕಾಗೆ ಪವಿತ್ರ ಯಾತ್ರೆ) ಕುರಿತು ಬೋಧಿಸುತ್ತದೆ ಎಂದು ಮಾಂಡ್ಲೀಕ್ ಅವರ ಪುತ್ರ ಮುಬಷೀರ್ ಮಾಂಡ್ಲೀಕ್ ಹೇಳಿದರು.

ದೇವರಾಜ ನಾಯ್ಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT