ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸ ಎತ್ತದೆ ಬಿಸಿ ಮುಟ್ಟಿಸಿದ ಪೌರಕಾರ್ಮಿಕರು

ಗುತ್ತಿಗೆ ಆಧಾರ ರದ್ದುಗೊಳಿಸಲು, ಸೌಲಭ್ಯಗಳನ್ನು ನೀಡಲು ಆಗ್ರಹಿಸಿ ನಡೆಯುತ್ತಿರುವ ಹೋರಾಟ
Last Updated 5 ಜುಲೈ 2022, 4:27 IST
ಅಕ್ಷರ ಗಾತ್ರ

ದಾವಣಗೆರೆ: ಪೌರಕಾರ್ಮಿಕರ ಧರಣಿ ನಿಧಾನಕ್ಕೆ ನಗರಕ್ಕೆ ಬಿಸಿ ಮುಟ್ಟಿಸುತ್ತಿದೆ. ಜುಲೈ 1ರಂದು ಬೆಳಿಗ್ಗೆ ಕಸ ಎತ್ತಿದ ಬಳಿಕ ಧರಣಿ ಆರಂಭವಾಗಿತ್ತು. ಶನಿವಾರ, ಭಾನುವಾರ ಜನರು ತಲೆ ಕೆಡಿಸಿಕೊಂಡಿರಲಿಲ್ಲ. ಸೋಮವಾರ ಕಸ ವಿಲೇವಾರಿ ನಡೆದಿಲ್ಲ.

ಕಾಯಂ ನೌಕರರಿಗೆ ಇರುವ ಸವಲತ್ತುಗಳನ್ನು ನೇರ ನೇಮಕಾತಿ ಪೌರಕಾರ್ಮಿಕರಿಗೆ ನೀಡುತ್ತಿಲ್ಲ. ನೇರ ನೇಮಕಾತಿ ಆದವರಿಗೆ ವೇತನವಾದರೂ ನೇರವಾಗಿ ಖಾತೆಗೆ ಬರುತ್ತದೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವವರಿಗೆ ಅದೂ ಇಲ್ಲ. ಹಾಗಾಗಿ ಗುತ್ತಿಗೆ ಪದ್ಧತಿಯನ್ನು ತೆಗೆದು ಅಲ್ಲಿರುವವರನ್ನು ನೇರ ನೇಮಕಾತಿಗೆ ತರಬೇಕು. ಎಲ್ಲ ಸೌಲಭ್ಯಗಳನ್ನು ಕಲ್ಪಿಸಬೇಕು. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬುದೂ ಸೇರಿ ಅನೇಕ ಬೇಡಿಕೆಗಳನ್ನು ಇಟ್ಟುಕೊಂಡು ರಾಜ್ಯದ ಎಲ್ಲ ನಗರ ಸ್ಥಳೀಯಾಡಳಿತಗಳ ಮುಂದೆ ‍ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಅಧಿಕಾರಿಗಳು ಬರೆದುಕೊಂಡಿದ್ದೇ ಪೌರಕಾರ್ಮಿಕರ ಜನ್ಮದಿನಾಂಕವಾಗಿತ್ತು. ವೈದ್ಯರಿಂದ ಸರ್ಟಿಫಿಕೆಟ್‌ ಪಡೆದು ವಯಸ್ಸನ್ನು ನಿಗದಿ ಮಾಡಬೇಕು. ಇತ್ತೀಚೆಗೆ 50 ವರ್ಷ ಕೂಡ ಆಗದವರನ್ನು 60 ವರ್ಷ ಆಗಿದೆ ಎಂದು ಕೆಲಸದಿಂದ ಮುಕ್ತಗೊಳಿಸಲಾಗಿದೆ. ಅವರಿಗೆ ನಿವೃತ್ತಿಯ ನಂತರ ಜೀವನ ನಡೆಸಲು ಪಿಂಚಣಿ ನೀಡಬೇಕು. ಅವರ ಮನೆಯ ಒಬ್ಬರು ಸದಸ್ಯರಿಗೆ ಕೆಲಸ ನೀಡಬೇಕು ಎಂದು ಒಟ್ಟು ಬೇಡಿಕೆಗಳ ಜತೆಗೆ ದಾವಣಗೆರೆಯಲ್ಲಿ ಹೆಚ್ಚುವರಿ ಬೇಡಿಕೆಗಳೊಂದಿಗೆ ಧರಣಿ ಮಾಡಲಾಗುತ್ತಿದೆ.

ಪಾಲಿಕೆ ಆವರಣದಲ್ಲಿ ಕುಳಿತಿದ್ದ ಪ್ರತಿಭಟಕಾರರು ಸೋಮವಾರ ಪೊರಕೆ ಹಿಡಿದು ಪಾಲಿಕೆಗೆ ಮುತ್ತಿಗೆ ಹಾಕಿ ಘೋಷಣೆ ಕೂಗಿ ಪ್ರತಿಭಟನೆಯನ್ನು ತೀವ್ರಗೊಳಿಸಿದರು.

ಪ್ರತಿಭಟನಕಾರರಿಗೆ ಬೆಂಬಲ ಸೂಚಿಸಿ ಕಾಂಗ್ರೆಸ್‌ ಪಕ್ಷದ ಎ.ನಾಗರಾಜ್‌, ಅಯೂಬ್ ಪೈಲ್ವಾನ್‌, ಕೆ.ಜಿ. ಶಿವಕುಮಾರ್‌, ದಿನೇಶ್‌ ಕೆ.ಶೆಟ್ಟಿ, ಅಬ್ದುಲ್‌ ಜಬ್ಬಾರ್‌. ಸೈಯದ್‌ ಚಾರ್ಲಿ ಸಹಿತ ಅನೇಕರು ಭಾಗವಹಿಸಿದ್ದರು.

ಸರ್ಕಾರ ಒಪ್ಪಿಗೆ: ನೇರನೇಮಕಾತಿ ‍ಪೌರಕಾರ್ಮಿಕರನ್ನು ಕಾಯಂಗೊಳಿಸಲು ತಾತ್ವಿಕ ಒಪ್ಪಿಗೆ ಇದೆ. ಅದಕ್ಕಾಗಿ ಸಮಿತಿ ರಚಿಸಲಾಗುವುದು. ಸಮಾನ ಕೆಲಸಕ್ಕೆ ಸಮಾನ ವೇತನದ ಬಗ್ಗೆಯೂ ಸರ್ಕಾರಕ್ಕೆ ವರದಿ ಸಲ್ಲಿಸಬೇಕು. ಈ ಎಲ್ಲದರ ಬಗ್ಗೆ ಇನ್ನು ಮೂರು ತಿಂಗಳ ಒಳಗೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗೃಹಕಚೇರಿಯಲ್ಲಿ ನಡೆಸಿದ ಸಭೆಯಲ್ಲಿ ತಿಳಿಸಿದ್ದಾರೆ. ಅದರ ಸುತ್ತೋಲೆ ಈಗ ಎಲ್ಲ ಜಿಲ್ಲೆ, ತಾಲ್ಲೂಕುಗಳಿಗೆ ತಲುಪಿದೆ ಎಂದು ಪ್ರತಿಭಟನೆಯ ನೇತೃತ್ವ ವಹಿಸಿರುವ ಎಲ್‌.ಎಚ್‌. ಸಾಗರ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ಕಾರ್ಮಿಕ ಮುಖಂಡರು ಎನ್.ನೀಲಗಿರಿಯಪ್ಪ, ಸಫಾಯಿ ಕರ್ಮಚಾರಿ ಪೌರಕಾರ್ಮಿಕರ ಸಂಘದ ಅಧ್ಯಕ್ಷ ಎಲ್.ಡಿ.ಬಸವರಾಜ್, ಪ್ರಧಾನ ಕಾರ್ಯದರ್ಶಿ ಪ್ರಸನ್ನಕುಮಾರ್, ಬಿ.ಲೋಹಿತ್, ಎಂ. ಉಮೇಶ್, ವಾಲ್‌ಮೆನ್ ಸಹಾಯಕರ ಸಂಘದ ಮುಖಂಡ ರಾಮಕೃಷ್ಣ, ಕಾಂತರಾಜ್, ನೇರ ಪಾವತಿ ಪೌರಕಾರ್ಮಿಕರ ಸಂಘದ ಮೂರ್ತಿ ಆರ್., ರವಿವರ್ಧನ, ಚಂದ್ರಪ್ಪ ಕೆ.ವಿ., ಅರವಿಂದ್, ಶಿವರಾಜ್ ಆದಾಪುರ, ಚೇತನ್, ಕಿರಣ್ ಕುಮಾರ್, ದುಗ್ಗೇಶ್, ಸಂತೋಷ್, ರಾಮಚಂದ್ರಪ್ಪ, ಮಹಾನಗರ ಪಾಲಿಕೆಯ ಕಾಯಂ ಪೌರ ಕಾರ್ಮಿಕರು, ನೇರ ಪಾವತಿ ಪೌರಕಾರ್ಮಿಕರು, ಘನತ್ಯಾಜ್ಯ ವಿಲೇವಾರಿ ವಾಹನ ಚಾಲಕರು, ನೀರು ಗಂಟಿ ಸಹಾಯಕರು, ಯುಜಿಡಿ ಸಹಾಯಕರು, ಗುತ್ತಿಗೆ ಪದ್ದತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಮಿಕರು ಭಾಗವಹಿಸಿದ್ದರು.

ವಾಣಿಜ್ಯ ಕಸಕ್ಕೆ ತೊಂದರೆಯಾಗಿಲ್ಲ: ಹೋಟೆಲ್‌, ಅಂಗಡಿ ಸಹಿತ ವಾಣಿಜ್ಯ ಮಳಿಗೆಗಳ ಕಸ ಸಂಗ್ರಹವನ್ನು ಹೊರಗುತ್ತಿಗೆಯಲ್ಲಿ ಸಂಗ್ರಹ ಮಾಡಲಾಗುತ್ತಿದೆ. ಅದಕ್ಕೆ ತೊಂದರೆಯಾಗಿಲ್ಲ. ಆದರೆ ಮನೆ ಮನೆ ಕಸ ವಿಲೇವಾರಿ, ನಗರಸ್ವಚ್ಛತೆಗೆ ಪ್ರತಿಭಟನೆಯಿಂದ ತೊಂದರೆಯಾಗಿದೆ. ಮಂಗಳವಾರದಿಂದ ಎಲ್ಲ ಸ್ವಚ್ಛಗೊಳ್ಳಲಿದೆ ಎಂದು ಮಹಾನಗರ ಪಾಲಿಕೆ ಆಯುಕ್ತ ವಿಶ್ವನಾಥ್‌ ಪಿ. ಮುದಜ್ಜಿ ಮಾಹಿತಿ ನೀಡಿದರು.

‘ಸರ್ಕಾರಕ್ಕೆ ಪೌರಕಾರ್ಮಿಕ ಬಗ್ಗೆ ಅನುಕಂಪವಿಲ್ಲ’
ಪೌರಕಾರ್ಮಿಕರು ನಾಲ್ಕುದಿನಗಳಿಂದ ಸತ್ಯಾಗ್ರಹ ಮಾಡುತ್ತಿದ್ದರೂ ಸರ್ಕಾರಕ್ಕೆ ಪೌರ ಕಾರ್ಮಿಕರ ಬಗ್ಗೆ ಅನುಕಂಪವಿಲ್ಲ. ಸಮಿತಿ ರಚಿಸಿ, ಚರ್ಚಿಸಿ ತಿರ್ಮಾನ ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಹೇಳುತ್ತಿರುವುದು ಸಮಯ ಮುಂದೂಡುವುದಕ್ಕಷ್ಟೇ ಪ್ರತಿಕ್ರಿಯಿಸಿದಂತಿದೆ ಎಂದು ಚಿದಾನಂದ ದಾವಣಗೆರೆ ಟೀಕಿಸಿದ್ದಾರೆ.

ಸಮಿತಿ ಈಗ ರಚನೆಯಾದರೂ ಅವರು ಅಧ್ಯಯನ ನಡೆಸಿ, ಚರ್ಚಿಸಿ ವರದಿ ಸಲ್ಲಿಸುವ ಹೊತ್ತಿಗೆ ಹಲವು ವರ್ಷಗಳು ಕಳೆದಿರುತ್ತದೆ. ಬಳಿಕ ಚರ್ಚಿಸಿ ಸರ್ಕಾರ ಕ್ರಮ ಕೈಗೊಳ್ಳುವ ಹೊತ್ತಿಗೆ ಈಗಿರುವ ಪೌರಕಾರ್ಮಿಕರಲ್ಲಿ ಹಲವರು ಜೀವಂತ ಇರುವುದೇ ಅನುಮಾನ ಎಂದು ತಿಳಿಸಿದ್ದಾರೆ.

ಹಾಗಾಗಿ ಸಮಿತಿ ರಚಿಸುವ ಬದಲು ತಕ್ಷಣ ಕ್ರಮ ಕೈಗೊಳ್ಳಬೇಕು. ಪೌರಕಾರ್ಮಿಕರು ಮತ್ತು ಅವಲಂಬಿತ ಕಾರ್ಮಿಕರನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಕಾಯಂ ನೌಕರರನ್ನಾಗಿ ಮಾಡಲು ಆದೇಶ ಹೊರಡಿಸಬೇಕು ಎಂದು ಒತ್ತಾಯಿಸಿದ್ದಾರೆ.

ಕೆಲಸ, ಪ್ರತಿಭಟನೆ ಮುಂದುವರಿಯಲಿದೆ: ಸಾಗರ್‌
‘ನಮ್ಮ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಸರ್ಕಾರ ತಿಳಿಸಿದೆ. ಆದರೆ ಅದಕ್ಕಾಗಿ ಸಮಿತಿ ಮಾಡುವುದಾಗಿಯೂ ಹೇಳಿದೆ. ನೇರವಾಗಿ ಕ್ರಮ ಕೈಗೊಳ್ಳುವ ಬದಲು ಸಮಿತಿ ಮಾಡಲು ಮುಂದಾಗಿರುವುದರಿಂದ ಪೂರ್ತಿ ನಂಬಲು ಆಗುವುದಿಲ್ಲ. ಆದರೂ ಕಸ ತೆಗೆಯದೇ ಮಾಡುತ್ತಿದ್ದ ಧರಣಿಯನ್ನು ವಾಪಸ್‌ ಪಡೆಯುತ್ತೇವೆ. ಮಧ್ಯಾಹ್ನದವರೆಗೆ ಕಸ ವಿಲೇವಾರಿ ಮಾಡಿ ಮಧ್ಯಾಹ್ನದ ಬಳಿಕ ಪ್ರತಿಭಟನೆ ನಡೆಸುವುದು ಮುಂದುವರಿಯಲಿದೆ’ ಎಂದು ಪೌರಕಾರ್ಮಿಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಎಲ್‌.ಎಚ್‌. ಸಾಗರ್‌ ತಿಳಿಸಿದ್ದಾರೆ.

‘ಕೊರೊನಾ ಕಾಲದಲ್ಲಿ ಎಲ್ಲರೂ ಮನೆಯೊಳಗೆ ಕುಳಿತಿದ್ದರೆ, ಪೌರಕಾರ್ಮಿಕರು ಬೀದಿಗಿಳಿದು ಕೆಲಸ ಮಾಡಿದ್ದರು. ಜೀವದ ಹಂಗು ತೊರೆದು ಕೆಲಸ ಮಾಡುವ ಪೌರಕಾರ್ಮಿಕರಿಗೆ ಎಲ್ಲ ಸೌಲಭ್ಯಗಳನ್ನು ನೀಡುವವರೆಗೆ ಹೋರಾಟ ಮುಂದುವರಿಯಲಿದೆ’ ಎಂದು ‘ಪ್ರಜಾವಾಣಿಗೆ ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT