‘ವಿದ್ಯಾರ್ಥಿಗಳ ಬೆಳವಣಿಗೆಗೆ ವಿಶ್ವವಿದ್ಯಾಲಯ ಶುದ್ಧೀಕರಿಸಲಿ’

7

‘ವಿದ್ಯಾರ್ಥಿಗಳ ಬೆಳವಣಿಗೆಗೆ ವಿಶ್ವವಿದ್ಯಾಲಯ ಶುದ್ಧೀಕರಿಸಲಿ’

Published:
Updated:
Deccan Herald

ದಾವಣಗೆರೆ: ‘ವಿಶ್ವವಿದ್ಯಾಲಯಗಳ ಕುಲಪತಿಗಳ ನೇಮಕ ಅರ್ಹತೆ ಬದಲು ಬೇರೆ ವಿಷಯ ಆಧರಿಸಿ ನಡೆಯುತ್ತಿರುವುದು ಬೇಸರದ ಸಂಗತಿ. ವಿಶ್ವವಿದ್ಯಾಲಯವನ್ನು ಶುದ್ಧೀಕರಿಸಿದರೆ ಬೋಧಕರು ಹಾಗೂ ವಿದ್ಯಾರ್ಥಿಗಳ ಬೆಳವಣಿಗೆ ಸಾಧ್ಯ’ ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ವಿಶ್ರಾಂತ ಕುಲಪತಿ ಡಾ. ಎಸ್‌. ರಾಜಶೇಖರಯ್ಯ ಅಭಿಪ್ರಾಯಪಟ್ಟರು.

ಕರ್ನಾಟಕ ಸ್ಟೇಟ್‌ ಕೌನ್ಸಿಲ್‌ ಫಾರ್‌ ಸೈನ್ಸ್ ಆ್ಯಂಡ್‌ ಟೆಕ್ನಾಲಜಿ ಆಶ್ರಯದಲ್ಲಿ ಬಿಐಇಟಿಯಲ್ಲಿ ಶುಕ್ರವಾರ ಆರಂಭಗೊಂಡ 41ನೇ ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಪ್ರಾಜೆಕ್ಟ್‌ ಪ್ರದರ್ಶನ ಮತ್ತು ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯಾರ್ಥಿಗಳ ವಿಚಾರಗಳು ಪ್ರಯೋಗಾಲಯದಲ್ಲೇ ಉಳಿದರೆ ಅದು ಯಾರ ಗಮನಕ್ಕೂ ಬರುವುದಿಲ್ಲ. ಅದು ವಾಣಿಜ್ಯ ಉತ್ಪನ್ನಗಳಾಗಿ ಮಾರುಕಟ್ಟೆಗೆ ಬಂದರೆ ಪುಟ್ಟ ಮಗುವೂ ಮೆಚ್ಚಿಕೊಳ್ಳುತ್ತದೆ. ಈ ನಿಟ್ಟಿನಲ್ಲಿ ಉಪನ್ಯಾಸಕರು ವಿದ್ಯಾರ್ಥಿಗಳಿಗೆ ಉತ್ತಮ ಮಾರ್ಗದರ್ಶನ ನೀಡಬೇಕು’ ಎಂದರು.

‘ದೇಶದ ವಿಶ್ವವಿದ್ಯಾಲಯಗಳು ಪೇಟೆಂಟ್‌ ಪಡೆಯುವುದು ತೀರಾ ವಿರಳ. ಭಾರತದಲ್ಲಿ 130 ಕೋಟಿ ಜನಸಂಖ್ಯೆ ಇದ್ದರೂ ಪೇಟೆಂಟ್ ವಿಚಾರದಲ್ಲಿ ನಾವು 12ನೇ ಸ್ಥಾನದಲ್ಲಿದ್ದೇವೆ. 2017ರಲ್ಲಿ ಭಾರತ ಕೇವಲ 1,529 ಪೇಟೆಂಟ್ ಪಡೆದಿದೆ. 32 ಕೋಟಿ ಜನಸಂಖ್ಯೆ ಇರುವ ಅಮೆರಿಕ 56,594 ಪೇಟೆಂಟ್ ಪಡೆದಿದೆ’ ಎಂದು ಹೇಳಿದರು.

ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ವ್ಯವಸ್ಥಾಪಕ ನಿರ್ದೇಶಕಿ ಕೆ.ಎಂ. ಜಾನಕಿ, ‘ಈಗ ಜ್ಞಾನ ಕೆಲವರಿಗಷ್ಟೇ ಸೀಮಿತವಾಗಿಲ್ಲ. ಆದರೆ, ಭಾರತದಲ್ಲಿ ಮುನ್ನುಗ್ಗುವ ಎದೆಗಾರಿಕೆ ಕಡಿಮೆ ಇದೆ. ವೈಫಲ್ಯದ ಹೆದರಿಕೆಯಿಂದ ಹೊರಬರಬೇಕು’ ಎಂದು ಕಿವಿಮಾತು ಹೇಳಿದರು.

ಬಿಐಇಟಿ ನಿರ್ದೇಶಕ ವೃಷಭೇಂದ್ರಪ್ಪ, ‘ಹೂವುಗಳ ತ್ಯಾಜ್ಯದಿಂದ ಶೇ 18ರಷ್ಟು ಎಥೆನಾಲ್ ಪಡೆಯಬಹುದು ಎಂಬುದನ್ನು ನಮ್ಮ ಕಾಲೇಜಿನ ಪ್ರಯೋಗಾಲಯದಿಂದ ಸಾಬೀತು ಪಡಿಸಿದ್ದೇವೆ. ರೇಷ್ಮೆ ಹುಳುವಿನ ತ್ಯಾಜ್ಯದಿಂದ ಜೈವಿಕ ಇಂಧನ ಪಡೆಯುವ ಸಾಧ್ಯತೆಯನ್ನು ಪ್ರಯೋಗಿಕವಾಗಿ ತೋರಿಸಿದ್ದೇವೆ. ಕೆ.ಎಸ್.ಸಿ.ಎಸ್.ಟಿ.ಯ 10 ಸಾವಿರಕ್ಕೂ ಹೆಚ್ಚು ಯೋಜನೆಗಳಲ್ಲಿ ಕಾಲೇಜಿನ ಪಾಲು 800ಕ್ಕೂ ಹೆಚ್ಚಿದೆ’ ಎಂದು ತಿಳಿಸಿದರು.

ಹಿಮಾಚಲ ಪ್ರದೇಶದ ವಿಜ್ಞಾನ, ತಂತ್ರಜ್ಞಾನ ಹಾಗೂ ಪರಿಸರ ಮಂಡಳಿಯ ಸದಸ್ಯ ಕಾರ್ಯದರ್ಶಿ ಕುನಾಲ್ ಸತ್ಯಾರ್ಥಿ ಹಾಜರಿದ್ದರು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !