ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ನದಿ ಪಾತ್ರದ ಜಾಗ ಒತ್ತುವರಿ ತೆರವು ಮಾಡಿ

ಪ್ರಗತಿ ಪರಿಶೀಲನೆ ನಡೆಸಿದ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್.ಉಮಾಶಂಕರ್
Last Updated 6 ಸೆಪ್ಟೆಂಬರ್ 2022, 5:41 IST
ಅಕ್ಷರ ಗಾತ್ರ

ದಾವಣಗೆರೆ: ಮಳೆಗಾಲದಲ್ಲಿ ತುಂಗಭದ್ರಾ ನದಿ ತುಂಬಿ ಹರಿದು ನಿರಾಶ್ರಿತರಾಗುವ ನದಿ ಪಾತ್ರದ ನಿವಾಸಿಗಳಿಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ನದಿ ಪಾತ್ರದ ಜಾಗ ಒತ್ತುವರಿಯಾಗದಂತೆ ಕ್ರಮ ಕೈಗೊಳ್ಳಬೇಕು ಎಂದುಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎಸ್.ಆರ್. ಉಮಾಶಂಕರ್ ಅಧಿಕಾರಿಗಳಿಗೆ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಜಿಲ್ಲಾ ಮಟ್ಟದ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಮಳೆಗಾಲದಲ್ಲಿ ತುಂಗಭದ್ರಾ ನದಿ ಪಾತ್ರದ ನಿವಾಸಿಗಳು ತೊಂದರೆ ಅನುಭವಿಸುವಂತಾಗಿದೆ. ನದಿ ಪಾತ್ರದ ಖರಾಬು ಜಾಗ ಒತ್ತುವರಿ ಮಾಡಿ ಮನೆಗಳನ್ನು ನಿರ್ಮಾಣ ಮಾಡುವ ಕಾರಣ ಇಂತಹ ಸಮಸ್ಯೆಯಾಗುತ್ತಿದೆ.ಜಾಗ ಒತ್ತುವರಿ ಮಾಡದಂತೆ ಕ್ರಮ ಕೈಗೊಳ್ಳಬೇಕು ಎಂದು ತಾಕೀತು ಮಾಡಿದರು.

ಈ ವರ್ಷ ವಾಡಿಕೆಗಿಂತ ಎರಡು ಪಟ್ಟು ಮಳೆ ಹೆಚ್ಚಾಗಿದೆ. ಮಳೆಯಿಂದ ನೀರು ನುಗ್ಗಿ ಮನೆಹಾನಿಗೊಳಗಾದ 904 ಫಲಾನುಭವಿಗಳಿಗೆ ತಲಾ ₹ 10,000ದಂತೆ ಪರಿಹಾರ ನೀಡಲಾಗಿದೆ. ಜಿಲ್ಲೆಯಲ್ಲಿ ಹಾನಿಯಾದ 2,032 ಮನೆಗಳನ್ನು ಗುರುತಿಸಿದ್ದು, ಸಂಪೂರ್ಣ ಹಾನಿಯಾದ 481 ಮನೆಗಳಿಗೆ ₹ 5 ಲಕ್ಷ, ಶೇ 75ಕ್ಕಿಂತಲೂ ಹೆಚ್ಚು ಹಾನಿಯಾದ 891 ಮನೆಗಳಿಗೆ ₹ 3 ಲಕ್ಷ, ಕಡಿಮೆ ಹಾನಿಯಾದ 660 ಮನೆಗಳಿಗೆ ₹ 50,000 ಪರಿಹಾರವನ್ನು ನೀಡಲಾಗುತ್ತಿದೆ. ಇಲ್ಲಿಯವರೆಗೆ 1,218 ಮನೆಗಳಿಗೆ ಪರಿಹಾರ ನೀಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು. ಉಳಿದ ಮನೆಗಳಿಗೂ ಶೀಘ್ರ ಪರಿಹಾರ ನೀಡುವಂತೆ ಅವರು ತಿಳಿಸಿದರು.

ಮಳೆಯಿಂದ ಗ್ರಾಮೀಣ ಹಾಗೂ ನಗರ ಪ್ರದೇಶದ ರಸ್ತೆಗಳು, ಕೆರೆ, ಕಟ್ಟೆಗಳಿಗೆ ಹಾನಿಯಾಗಿವೆ. ಗ್ರಾಮಾಂತರ ಪ್ರದೇಶದ ರಸ್ತೆಗಳು ಹೆಚ್ಚು ಹಾನಿಯಾಗಿವೆ. ಮುಂದಿನ ದಿನಗಳಲ್ಲಿ ರಸ್ತೆ ನಿರ್ಮಾಣ ಮಾಡುವಾಗ ಹೆಚ್ಚು ಕಾಂಕ್ರೀಟ್‌ ರಸ್ತೆಗಳನ್ನು ನಿರ್ಮಾಣ ಮಾಡಲು ಕ್ರಿಯಾಯೋಜನೆ ತಯಾರಿಸಿ ಸಲ್ಲಿಸುವಂತೆ ಪಂಚಾಯತ್ ರಾಜ್ ಎಂಜಿನಿಯರಿಂಗ್ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ ಸೂಚಿಸಿದರು.

ಬೆಳೆ ಹಾನಿ ಬಾಕಿ ಪ್ರಕರಣ ಇತ್ಯರ್ಥಪಡಿಸಿ: ಮಳೆಯಿಂದಾದ 20,201 ಬೆಳೆಹಾನಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, 11,856 ಪ್ರಕರಣಗಳು ಗ್ರಾಮ ಲೆಕ್ಕಾಧಿಕಾರಿ ಹಂತದಲ್ಲಿ ಅನುಮೋದನೆಯಾಗಿದೆ. 950 ಪ್ರಕರಣಗಳು ತಹಶೀಲ್ದಾರ್‌ ಹಂತದಲ್ಲಿ ಬಾಕಿ ಇವೆ. ಎಲ್ಲವನ್ನೂ ಶೀಘ್ರ ಪರಿಶೀಲಿಸುವಂತೆ ತಿಳಿಸಿದರು.

ತಾಲ್ಲೂಕು ಕಚೇರಿಯಲ್ಲಿ ರೈತರಿಗೆ ನೀಡುವ ಸೌಲಭ್ಯಗಳನ್ನು ವಿಳಂಬವಿಲ್ಲದೆ ಆದ್ಯತೆ ಮೇಲೆ ಪರಿಗಣಿಸಬೇಕು ಎಂದು ಕಂದಾಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕು ಕಚೇರಿಯಲ್ಲಿ ಪಹಣಿ ತಿದ್ದುಪಡಿ, ಪೋಡಿ, ಹದ್ದುಬಸ್ತು ಪ್ರಕರಣ ಹಾಗೂ ಅರೆ ನ್ಯಾಯಿಕ ಪ್ರಕರಣಗಳ ಶೀಘ್ರ ವಿಲೇವಾರಿ ಮಾಡುವಂತೆ ಮುಖ್ಯಮಂತ್ರಿ ಸೂಚಿಸಿದ್ದು, ಇವುಗಳನ್ನು ಆದ್ಯತೆ ಮೇಲೆ ಪರಿಗಣಿಸಬೇಕು ಎಂದು ತಾಕೀತು ಮಾಡಿದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್, ಎಡಿಸಿ ಎನ್‌. ಲೋಕೇಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳುಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT