ಶನಿವಾರ, ಜುಲೈ 2, 2022
25 °C
₹ 1,255 ಕೋಟಿ ವೆಚ್ಚದ ಭದ್ರಾ ಮೇಲ್ದಂಡೆ ಕಾಮಗಾರಿಗೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಚಾಲನೆ

ಬಯಲುಸೀಮೆಯ ನೀರಾವರಿ ಕನಸು ನನಸಾಗುವುದೇ?

ಡಿ. ಶ್ರೀನಿವಾಸ್ Updated:

ಅಕ್ಷರ ಗಾತ್ರ : | |

Prajavani

ಜಗಳೂರು: ದಶಕಗಳಿಂದ ಬರಗಾಲಕ್ಕೆ ಸಿಲುಕಿರುವ ಜಗಳೂರು ತಾಲ್ಲೂಕಿಗೆ ‘ಬರಪೀಡಿತ ಪ್ರದೇಶ’ವೆಂಬ ಹಣೆಪಟ್ಟಿ ಕಳಚುವ ಕಾಲ ಸನ್ನಿಹಿತವಾಗಿದೆ.

ತಾಲ್ಲೂಕಿನ ರೈತರು, ಮಹಿಳೆಯರು, ವಿವಿಧ ಸಂಘಸಂಸ್ಥೆಗಳು ಹಾಗೂ ರಾಜಕೀಯ ಪಕ್ಷಗಳ ವಿರೋಚಿತ ಹೋರಾಟದ ಫಲವಾಗಿ ಕನಸಿನ ಭದ್ರಾ ಮೇಲ್ದಂಡೆ ಯೋಜನೆಗೆ ಏ. 29ರಂದು ಚಾಲನೆ ಸಿಗುತ್ತಿದ್ದು, ತಾಲ್ಲೂಕಿನ ಪಾಲಿಗೆ ಮಹತ್ವದ ಕ್ಷಣ ಇದಾಗಿದೆ.

ರಾಷ್ಟ್ರೀಯ ಮಾನ್ಯತೆ ಪಡೆದಿರುವ ರಾಜ್ಯದ ಮೊದಲ ನೀರಾವರಿ ಯೋಜನೆಯಾಗಿರುವ ಭದ್ರಾ ಮೇಲ್ದಂಡೆ ಯೋಜನೆಯಡಿ ತಾಲ್ಲೂಕಿನ 45 ಸಾವಿರ ಎಕೆರೆಗೆ ₹ 1,255 ಕೋಟಿ ವೆಚ್ಚದಲ್ಲಿ ಹನಿ ನೀರಾವರಿ ಸೌಲಭ್ಯ ಕಲ್ಪಿಸುವ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಶುಕ್ರವಾರ ಚಾಲನೆ ನೀಡುವರು.

ಏನಿದು ಯೋಜನೆ?: ಮಧ್ಯ ಕರ್ನಾಟಕದ ಜಗಳೂರು ತಾಲ್ಲೂಕು, ಚಿತ್ರದುರ್ಗ, ಚಿಕ್ಕಮಗಳೂರು ಹಾಗೂ ತುಮಕೂರು ಜಿಲ್ಲೆಗಳಿಗೆ ನೀರಾವರಿ ಕಲ್ಪಿಸುವ ಯೋಜನೆ ಇದಾಗಿದೆ. ತಾಲ್ಲೂಕಿನ 45 ಸಾವಿರ ಎಕರೆ ಸೇರಿ ನಾಲ್ಕು ಜಿಲ್ಲೆಗಳ 5.57 ಲಕ್ಷ ಎಕರೆಗೆ ಹನಿ ನೀರಾವರಿ ಕಲ್ಪಿಸಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಭದ್ರಾ ಜಲಾಶಯದಿಂದ 12.5 ಟಿಎಂಸಿ ಅಡಿ ಹಾಗೂ ಶಿವಮೊಗ್ಗ ಜಿಲ್ಲೆಯ ಗಾಜನೂರು ಸಮೀಪದ ತುಂಗಾ ಜಲಾಶಯದಿಂದ 17.4 ಟಿಎಂಸಿ ಅಡಿ ಸೇರಿ ಒಟ್ಟು 29.9 ಟಿಎಂಸಿ ಅಡಿ ನೀರನ್ನು ಭದ್ರಾ ಮೇಲ್ದಂಡೆ ಯೋಜನೆಗೆ ಮೀಸಲಿಡಲಾಗಿದೆ. ಪ್ರತಿ ಜೂನ್ ತಿಂಗಳಿಂದ ಅಕ್ಟೋಬರ್‌ವರೆಗೆ ತುಂಗಾ ಜಲಾಶಯದಿಂದ 17.4 ಟಿಎಂಸಿ ಅಡಿ ನೀರನ್ನು ಮೇಲೆತ್ತಿ ಭದ್ರಾ ಜಲಾಶಯಕ್ಕೆ ಹರಿಸಲಾಗುತ್ತದೆ. ಅಲ್ಲಿಂದ ಮೇಲ್ದಂಡೆ ಯೋಜನೆಗೆ ನೀರು ಹರಿಸಲಾಗುತ್ತದೆ. ಜಗಳೂರಿನ 9 ಕೆರೆ ಸೇರಿ ಒಟ್ಟು 367 ಕೆರೆಗಳಿಗೆ ಶೇ 50ರಷ್ಟು ನೀರು ತುಂಬಿಸಲಾಗುತ್ತದೆ.

ಯೋಜನೆ ರೂಪುಗೊಂಡಿದ್ದು ಹೀಗೆ: 1969ರಲ್ಲಿ ನಿಜಲಿಂಗಪ್ಪ ಅವರ ಸರ್ಕಾರದ ಅವಧಿಯಲ್ಲಿ ಭದ್ರಾ ಮೇಲ್ದಂಡೆ ಯೋಜನೆ ರೂಪುಗೊಂಡಿತ್ತು. ಕಾರಣಾಂತರಗಳಿಂದ 5 ದಶಕಗಳಿಂದ ಯೋಜನೆ ಸ್ಥಗಿತವಾಗಿತ್ತು. 2004ರಲ್ಲಿ ನಿರಾವರಿ ತಜ್ಞ ಕೆ.ಸಿ. ರೆಡ್ಡಿ ವರದಿಯನ್ವಯ ಪರಿಷ್ಕ್ರತ ಯೋಜನೆಗೆ ಸರ್ಕಾರ ಅಂಗೀಕಾರ ನೀಡಿ 2008ರಲ್ಲಿ ₹ 12,340 ಕೋಟಿ ವೆಚ್ಚದ ಕ್ರಿಯಾಯೋಜನೆ ರೂಪಿಸಿತು. ಇದೀಗ ₹ 21 ಸಾವಿರ ಕೋಟಿಗೆ ಹೆಚ್ಚಿಸಲಾಗಿದೆ.

ತರೀಕೆರೆ ತಾಲ್ಲೂಕಿನ ಶಾಂತಿಪುರ ಹಾಗೂ ಬೆಟ್ಟದ ತಾವರೆಕೆರೆ ಗ್ರಾಮಗಳ ಬಳಿ ಪಂಪ್‌ಹೌಸ್‌ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದೆ. ಎರಡೂ ಕಡೆ ನಾಲ್ಕು ಮೋಟರ್‌ಗಳ ಸಹಾಯದಿಂದ 750 ಕ್ಯುಸೆಕ್ಸ್ ನೀರನ್ನು 45 ಮೀಟರ್‌ ಮೇಲೆತ್ತಿ ನಾಲೆಗೆ ಹರಿಸಲಾಗುತ್ತದೆ. ಉಳಿದಂತೆ ಗುರುತ್ವಾಕರ್ಷಣ ಶಕ್ತಿಯ ಬಲದಿಂದ ನೀರು ಹರಿದು ಹೋಗುವಂತೆ ಯೋಜನೆ ಸಿದ್ಧಪಡಿಸಲಾಗಿದೆ.

ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಸಮೀಪ ತುಮಕೂರು ಹಾಗೂ ಚಿತ್ರದುರ್ಗ ಶಾಖಾ ಕಾಲುವೆಗಳು ಕವಲೊಡೆಯುತ್ತವೆ. ಜಗಳೂರಿಗೆ ಹರಿದು ಬರುವ ಚಿತ್ರದುರ್ಗ ಶಾಖಾ ಕಾಲುವೆಗೆ 11.96 ಟಿಎಂಸಿ ಅಡಿ ನೀರು ಹಂಚಿಕೆಯಾಗಿದೆ. ಅಜ್ಜಂಪುರದ ಬಳಿ ಏಳು ಕಿ.ಮೀ. ಉದ್ದದ ಸುರಂಗ ಮಾರ್ಗ ನಿರ್ಮಿಸಲಾಗಿದೆ. ಇದು ರಾಜ್ಯದ ಎರಡನೇ ಅತಿ ದೊಡ್ಡ ನೀರಾವರಿ ಸುರಂಗ ಮಾರ್ಗವಾಗಿದೆ.

134 ಕಿ.ಮೀ. ಉದ್ದದ ಚಿತ್ರದುರ್ಗ ಶಾಖಾ ಕಾಲುವೆ ಕಾಮಗಾರಿ ನಡೆಯುತ್ತಿದೆ. ಜಗಳೂರು, ಚಳ್ಳಕೆರೆ, ಪಾವಗಡ, ಶಿರಾ, ಮೊಳಕಾಲ್ಮುರು ತಾಲ್ಲೂಕು ವ್ಯಾಪ್ತಿಯಲ್ಲಿ ಭೂಸ್ವಾಧೀನ ಪ್ರಕ್ರಿಯೆ ನಡೆಯಬೇಕಿದೆ. ಈ ಯೋಜನೆಗೆ ಒಟ್ಟು 7,012 ಎಕರೆ ಭೂಸ್ವಾಧೀನ ಮಾಡಿಕೊಳ್ಳಬೇಕಿದೆ. ಇದರಲ್ಲಿ 3,500 ಎಕರೆ ಭೂಸ್ವಾಧೀನವಾಗಿದ್ದು,
ಇನ್ನೂ 3,512 ಎಕರೆ ಭೂಸ್ವಾಧೀನ ಬಾಕಿ ಇದೆ.

‘ದಶಕದ ಹಿಂದೆ ನೀರಾವರಿ ಸಚಿವರಾಗಿದ್ದ ಬಸವರಾಜ ಬೊಮ್ಮಾಯಿ, ಸಂಸದ ಜಿ.ಎಂ. ಸಿದ್ದೇಶ್ವರ ಹಾಗೂ ಶಾಸಕ ಎಸ್.ವಿ. ರಾಮಚಂದ್ರ ಅವರ ಸಹಕಾರದಿಂದ ಯೋಜನೆ ಸಾಕಾರಗೊಂಡಿದೆ’ ಎಂದು ನೀರಾವರಿ ಹೋರಾಟ ಸಮಿತಿ ಅಧ್ಯಕ್ಷ ತಿಪ್ಪೇಸ್ವಾಮಿ ತೋರಣಗಟ್ಟೆ ತಿಳಿಸಿದರು.

ಇಂದು ಜಿಲ್ಲೆಗೆ ಮುಖ್ಯಮಂತ್ರಿ

ದಾವಣಗೆರೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಏ.29ರಂದು ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದಾರೆ.

ಶುಕ್ರವಾರ ಬೆಂಗಳೂರು ಎಚ್ಎಎಲ್ ವಿಮಾನ ನಿಲ್ದಾಣದಿಂದ ಹೊರಟು, ಬೆ.11.25ಕ್ಕೆ ಜಗಳೂರು ತಾಲ್ಲೂಕು ಕ್ರೀಡಾಂಗಣಕ್ಕೆ ಬರುವರು. ಜಗಳೂರಿನ ಬಯಲು ರಂಗಮಂದಿರದಲ್ಲಿ ವಿಧಾನಸಭಾ ಕ್ಷೇತ್ರದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ, ಉದ್ಘಾಟನೆ ಹಾಗೂ ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಮಧ್ಯಾಹ್ನ 2.15ಕ್ಕೆ ಜಗಳೂರು ಕ್ರೀಡಾಂಗಣದಿಂದ ಚಿತ್ರದುರ್ಗಕ್ಕೆ ಪ್ರಯಾಣ ಬೆಳೆಸುವರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು