ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಿಜಿ ಕೋರ್ಸ್‌ ಆರಂಭಿಸಲು ಸಹಕಾರ

ಮಹಿಳಾ ಪ್ರಥಮ ದರ್ಜೆ ಕಾಲೇಜು ಕಟ್ಟಡ ಉದ್ಘಾಟಿಸಿದ ಸಂಸದ ಸಿದ್ದೇಶ್ವರ
Last Updated 24 ಡಿಸೆಂಬರ್ 2018, 16:04 IST
ಅಕ್ಷರ ಗಾತ್ರ

ದಾವಣಗೆರೆ: ಮಹಿಳಾ ಪ್ರಥಮ ದರ್ಜೆ ಕಾಲೇಜಿನ ವಿದ್ಯಾರ್ಥಿನಿಯರಿಗೆ ಸ್ನಾತಕೋತ್ತರ ಅಧ್ಯಯನ ಕೈಗೊಳ್ಳಲು ಪಿ.ಜಿ. ಕೋರ್ಸ್‌ ಆರಂಭಿಸುವುದಾದರೆ ಅಗತ್ಯ ನೆರವು ನೀಡುವುದಾಗಿ ಸಂಸದ ಜಿ.ಎಂ. ಸಿದ್ದೇಶ್ವರ ಭರವಸೆ ನೀಡಿದರು.

ಮಹಿಳಾ ಸೇವಾ ಸಮಾಜದ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಕಟ್ಟಡವನ್ನು ಸೋಮವಾರ ಉದ್ಘಾಟಿಸಿದ ಅವರು, ‘ಮಹಿಳಾ ಪ್ರಥಮ ದರ್ಜೆ ಕಾಲೇಜು ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದೊಂದಿಗೆ ಸಂಯೋಜನೆಗೊಂಡಿದೆ. ಇಲ್ಲಿನ ವಿದ್ಯಾರ್ಥಿನಿಯರು ಸ್ನಾತಕೋತ್ತರ ಪದವಿ ಮಾಡಲು ವಿಜಯಪುರಕ್ಕೆ ತೆರಳಬೇಕಾಗುತ್ತಿದೆ. ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಒಂದೆರಡು ಸೀಟುಗಳು ಮಾತ್ರ ಇವರಿಗೆ ಲಭಿಸುತ್ತದೆ. ಮನೆ ಬಿಟ್ಟು ವಿಜಯಪುರಕ್ಕೆ ಹೋಗಿ ಸ್ನಾತಕೋತ್ತರ ಪದವಿ ಪಡೆಯಲು ವಿದ್ಯಾರ್ಥಿನಿಯರು ಹಿಂದೇಟು ಹಾಕುತ್ತಿದ್ದಾರೆ’ ಎಂದು ಹೇಳಿದರು.

‘ಮಹಿಳಾ ಕಾಲೇಜಿನಲ್ಲಿ ವಿದ್ಯಾರ್ಥಿನಿಯರ ಜೊತೆಗೆ ವಿದ್ಯಾರ್ಥಿಗಳಿಗೂ ಪ್ರವೇಶ ಕಲ್ಪಿಸಿದರೆ ದಾವಣಗೆರೆ ವಿಶ್ವವಿದ್ಯಾಲಯದ ಸಂಯೋಜನೆಗೆ ಒಳಪಡಬಹುದಾಗಿದೆ. ಕಾಲೇಜಿನಲ್ಲಿ ಪಿ.ಜಿ ಕೋರ್ಸ್‌ ಆರಂಭಿಸಲು ಪ್ರಸ್ತಾವವನ್ನು ಸಿದ್ಧಪಡಿಸಿ ನೀಡಿದರೆ ನಾನು ಹಾಗೂ ಶಾಸಕ ಎಸ್‌.ಎ. ರವೀಂದ್ರನಾಥ ಅವರು ಉನ್ನತ ಶಿಕ್ಷಣ ಸಚಿವರೊಂದಿಗೆ ಮಾತುಕತೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತೇವೆ’ ಎಂದು ಭರವಸೆ ನೀಡಿದರು.

ದಾವಣಗೆರೆ ಶೈಕ್ಷಣಿಕ ಕೇಂದ್ರವಾಗಿ ಬೆಳೆಯುತ್ತಿದೆ. ಪಿ.ಜಿ. ಕೋರ್ಸ್‌ ಆರಂಭಿಸಿದರೆ ಇನ್ನಷ್ಟು ಮಹಿಳಾ ಕಾಲೇಜುಗಳನ್ನು ತೆರೆಯಲು ಅನುಕೂಲವಾಗಲಿದೆ ಎಂದು ಅವರು ಅಭಿಪ್ರಾಯಪಟ್ಟರು.

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಎಸ್‌.ವಿ. ಹಲಸೆ, ‘ಮಹಿಳಾ ವಿಶ್ವವಿದ್ಯಾಲಯಕ್ಕೆ ಸಂಯೋಜನೆಗೊಂಡಿರುವುದರಿಂದ ಈ ಕಾಲೇಜಿನಲ್ಲಿ ಓದಿದ ವಿದ್ಯಾರ್ಥಿನಿಯರಿಗೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಪಿ.ಜಿ. ಕೋರ್ಸ್‌ ಮಾಡಲು ಹೊರ ವಿಶ್ವವಿದ್ಯಾಲಯಗಳ ಕೋಟಾದಡಿ ಹೆಚ್ಚೆಂದರೆ ಎರಡು ಸೀಟು ಲಭಿಸಬಹುದು. ಹೀಗಾಗಿ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಓದಿದವರಂತೆ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯರಿಗೂ ಅರ್ಹತೆ ಆಧಾರದಲ್ಲಿ ಸ್ಥಾನ ಕಲ್ಪಿಸಲು ಸರ್ಕಾರದ ಮೇಲೆ ಒತ್ತಡ ತರಬೇಕು’ ಎಂದು ಸಲಹೆ ನೀಡಿದರು.

ಕುಲಸಚಿವ ಪ್ರೊ. ಪಿ. ಕಣ್ಣನ್‌, ‘ಭಾರತ ಮೂತಲಃ ಮಾತೃಪ್ರಧಾನ ರಾಷ್ಟ್ರವಾಗಿತ್ತು. ಕ್ರಮೇಣ ಪುರುಷರು ಮುಂಚೂಣಿಗೆ ಬಂದು ಮಹಿಳೆಯರನ್ನು ಮೂಲೆಗುಂಪು ಮಾಡಿ ಅವರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡಿದರು. ಸಾವಿರಾರು ವರ್ಷಗಳ ಕಾಲ ಲಿಂಗ ತಾರತಮ್ಯ ನಡೆಯಿತು. ಶಿಕ್ಷಣ, ಉದ್ಯೋಗದಂತಹ ಮೂಲಭೂತ ಹಕ್ಕುಗಳನ್ನು ನಿರಾಕರಿಸಲಾಗಿತ್ತು. ಬುದ್ಧ, ಬಸವಣ್ಣ ಅವರಂತಹ ದಾರ್ಶನಿಕರು ಅಸಮಾನತೆ ಹೋಗಲಾಡಿಸಲು ಯತ್ನಿಸಿದರು. ಇದೀಗ ಮಹಿಳೆಯರು ಶಿಕ್ಷಣದ ಜೊತೆಗೆ ಉದ್ಯೋಗವನ್ನೂ ಪಡೆದುಕೊಳ್ಳುತ್ತಿದ್ದಾರೆ. ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದಾರೆ’ ಎಂದು ಹೇಳಿದರು.

ಶಾಸಕ ಎಸ್‌.ಎ. ರವೀಂದ್ರನಾಥ, ‘ಮಹಿಳಾ ಕಾಲೇಜಿನಲ್ಲಿ ಗಂಡುಮಕ್ಕಳಿಗೂ ಪ್ರವೇಶ ನೀಡಿದರೆ ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಅಧ್ಯಯನ ಮಾಡಲು ಹೆಚ್ಚಿನ ಸ್ಥಾನಗಳು ಸಿಗುತ್ತವೆ. ಹೀಗಾಗಿ ಕೊ–ಎಜುಕೇಶನ್‌ ನೀಡುವ ಬಗ್ಗೆ ಚಿಂತನೆ ಮಾಡಬೇಕು’ ಎಂದರು.

‘ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಸಾಕಷ್ಟು ಸೌಲಭ್ಯಗಳಿದ್ದರೂ ವರ್ಷದಿಂದ ವರ್ಷಕ್ಕೆ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗುತ್ತಿದೆ. ಪಕ್ಕದ ಸೀತಮ್ಮ ಬಾಲಕಿಯರ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿನಿಯರಿಗೆ ಕುಳಿತುಕೊಳ್ಳಲು ಜಾಗ ಇಲ್ಲದಂತಾಗಿದೆ. ಹೀಗಾಗಿ ಸರ್ಕಾರಿ ಬಾಲಕರ ಪ್ರೌಢಶಾಲೆಯಲ್ಲಿ ಕೊ–ಎಜುಕೇಶನ್‌ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಲು ಚಿಂತನೆ ನಡೆಸಿದ್ದೇವೆ’ ಎಂದು ಹೇಳಿದರು.

ಮಹಿಳಾ ಸೇವಾ ಸಮಾಜದ ಅಧ್ಯಕ್ಷೆ ಕೆ.ಕೆ. ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ನಿರ್ದೇಶಕಿ ಜಯಮ್ಮ ನೀಲಗುಂದ ಸ್ವಾಗತಿಸಿದರು. ಮಲ್ಲಿಕಾ ಸಂಗಡಿಗರು ಪ್ರಾರ್ಥಿಸಿದರು.

ಉಪಾಧ್ಯಕ್ಷೆ ಎನ್‌. ಶಾರದಮ್ಮ, ಕಾರ್ಯದರ್ಶಿ ಐ. ಜಯಶೀಲಮ್ಮ, ಐ. ವಸಂತಕುಮಾರಿ, ಆಡಳಿತಾಧಿಕಾರಿ ವಾಮದೇವಪ್ಪ, ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯೆ ಡಾ. ಭಾರತಿ ಅಳವಂಡಿಮಠ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT