ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೀತಿ ಸಂಹಿತೆ: ಸಭೆ, ಸಮಾರಂಭಕ್ಕೆ ಅನುಮತಿ ಕಡ್ಡಾಯ: ಚುನಾವಣಾಧಿಕಾರಿ

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ದುರ್ಗಾಶ್ರೀ
Last Updated 31 ಮಾರ್ಚ್ 2023, 7:00 IST
ಅಕ್ಷರ ಗಾತ್ರ

ದಾವಣಗೆರೆ: ವಿಧಾನಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಕಾರಣ ಸಭೆ, ಸಮಾರಂಭ, ಮೆರವಣಿಗೆ, ಜಾತ್ರೆ ನಡೆಸಲು ಸಂಬಂಧಿಸಿದ ಸ್ಥಳೀಯ ಸಂಸ್ಥೆಯಿಂದ ಅನುಮತಿ ಪಡೆಯುವುದು ಕಡ್ಡಾಯ ಎಂದು
ಉಪವಿಭಾಗಾಧಿಕಾರಿ ಹಾಗೂ ಮಾಯಕೊಂಡ ವಿಧಾನಸಭಾ ಕ್ಷೇತ್ರದ ಚುನಾವಣಾಧಿಕಾರಿ ದುರ್ಗಾಶ್ರೀ ಹೇಳಿದರು.

ಸುವಿಧಾ ತಂತ್ರಾಂಶದಲ್ಲಿ ಅರ್ಜಿ ಸಲ್ಲಿಸಿ ಯಾವುದೇ ಕಾರ್ಯಕ್ರಮ ನಡೆಸುವ ಮುನ್ನ ಅನುಮತಿ ಪಡೆಯಬೇಕು. ಮಾಯಕೊಂಡ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ನಿಗಾ ವಹಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕ್ಷೇತ್ರ ವ್ಯಾಪ್ತಿಯಲ್ಲಿ ಚುನಾವಣಾ ಪ್ರಚಾರಕ್ಕೆ ಸಂಬಂಧಿಸಿದ ಫ್ಲೆಕ್ಸ್‌, ಬ್ಯಾನರ್, ಪೋಸ್ಟರ್, ಬಂಟಿಂಗ್ಸ್‌ ಹಾಗೂ ಗೋಡೆ ಬರಹಗಳನ್ನು ತೆರವುಗೊಳಿಸಲಾಗಿದೆ. ಚುನಾಯಿತ ಪ್ರತಿನಿಧಿಗಳಿಗೆ, ಸ್ಥಳೀಯ ಸಂಸ್ಥೆಗಳಿಗೆ ನೀಡಿರುವ ಸರ್ಕಾರಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ನೀತಿಸಂಹಿತೆ ಉಲ್ಲಂಘನೆ ಪ್ರಕರಣಗಳ ಬಗ್ಗೆ ನಿಗಾವಹಿಸಲು ವಿಡಿಯೊ ಸರ್ವಲೆನ್ಸ್ ತಂಡ, ಫ್ಲೆಯಿಂಗ್ ಸ್ಕ್ವಾಡ್, ಲೆಕ್ಕ ಪರಿಶೋಧನಾ ತಂಡ ಸೇರಿದಂತೆ ಹಲವು ತಂಡಗಳನ್ನು ರಚಿಸಲಾಗಿದೆ ಎಂದು ತಿಳಿಸಿದರು.

ಅಕ್ರಮ ಚಟುವಟಿಕೆ ಕಂಡುಬಂದರೆ ಕ್ರಮ ಕೈಗೊಳ್ಳಲಾಗುವುದು. ಪ್ರಚೋದನಕಾರಿ ಭಾಷಣ, ಪ್ರಚಾರ ಸಭೆಗಳ ಖರ್ಚು ವೆಚ್ಚಗಳನ್ನು ಪಕ್ಷ ಅಥವಾ ಅಭ್ಯರ್ಥಿ ಖಾತೆಗೆ ಸೇರಿಸಲಾಗುವುದು. ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ತಾಲ್ಲೂಕು ಪಂಚಾಯಿತಿ ಇಒ ಎನ್‌.ಜೆ. ಆನಂದ್ ಎಂಸಿಸಿ ನೋಡಲ್‌ ಅಧಿಕಾರಿಯಾಗಿದ್ದಾರೆ ಎಂದು ಮಾಹಿತಿ ನೀಡಿದರು.

ಯಾವುದೇ ಅಭ್ಯರ್ಥಿ ವಿರುದ್ಧ ಪ್ರಕರಣ ದಾಖಲಾದರೆ ಸ್ಪರ್ಧಿಸಬಹುದು. ಆದರೆ ಶಿಕ್ಷೆಗೆ ಗುರಿಯಾಗಿದ್ದರೆ ಸ್ಪರ್ಧಿಸುವಂತಿಲ್ಲ ಎಂದು ಅವರು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಧಾರ್ಮಿಕ ಆಚರಣೆಗಳು, ಸಮಾರಂಭಗಳಲ್ಲಿ ಪಕ್ಷ ಅಥವಾ ಜನಪ್ರತಿನಿಧಿಗಳನ್ನು ಬೆಂಬಲಿಸುವಂತಹ ಯಾವುದೇ ರೀತಿಯ ಪ್ರಚಾರ ಮಾಡಲು ಅವಕಾಶ ಮಾಡಿಕೊಡುವುದಿಲ್ಲ ಎಂದು ಸಹಾಯಕ ಚುನಾವಣಾಧಿಕಾರಿ, ತಹಶೀಲ್ದಾರ್‌ ಎಂ.ಬಿ. ಅಶ್ವತ್ ಹೇಳಿದರು.

ದಾವಣಗೆರೆ ತಾಲ್ಲೂಕು ಪಂಚಾಯಿತಿ ಇಒ ಎನ್‌.ಜೆ. ಆನಂದ್ ಇದ್ದರು.

ಮಾಯಕೊಂಡ ಕ್ಷೇತ್ರ ಮೂರು ಕಡೆ ಚೆಕ್‌ಪೋಸ್ಟ್‌

ಮಾಯಕೊಂಡ ಪ್ರವೇಶಿಸುವ ಹೆಬ್ಬಾಳ ಟೋಲ್, ಎಚ್. ಬಸಾಪುರ ಮತ್ತು ಕಾರಿಗನೂರು ಕ್ರಾಸ್‍ಗಳಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ದಾಖಲೆಗಳಿಲ್ಲದೆ ಯಾವುದೇ ಬೆಲೆಬಾಳುವ ವಸ್ತು, ನಗದು, ಉಡುಗೊರೆ ನೀಡುವುದು ಕಂಡುಬಂದಲ್ಲಿ ಕೂಡಲೇ ಅವುಗಳನ್ನು ವಶಪಡಿಸಿಕೊಳ್ಳಲಾಗುವುದು. ಯಾವುದೇ ಅಕ್ರಮ, ಕಾನೂನು ಬಾಹಿರ ಚಟುವಟಿಕೆ ಕಂಡುಬಂದಲ್ಲಿ ಸಾರ್ವಜನಿಕರು ದೂರು ಸಲ್ಲಿಸಬಹುದು ಎಂದು ದುರ್ಗಾಶ್ರೀ ತಿಳಿಸಿದರು.

ವಾಹನಗಳ ಬಳಕೆ ಹಾಗೂ ವಾಹನಗಳಲ್ಲಿ ಬ್ಯಾನರ್‌ ಅಳವಡಿಸಿ ಪ್ರಚಾರ ನಡೆಸುವ ಸಂಬಂಧ ಅನುಮತಿ ಪಡೆಯಬೇಕು ಎಂದರು.

80 ವರ್ಷ ಮೇಲ್ಪಟ್ಟವರಿಗೆ ಮನೆಯಲ್ಲಿಯೇ ಮತದಾನಕ್ಕೆ ಅವಕಾಶ ಇದ್ದು, ಅಂಚೆ ಮತದಾನ ಮಾಡಬಹುದು. ಇದಕ್ಕೆ ಅರ್ಜಿ ಸಲ್ಲಿಸಿದವರು ಮತಗ‌ಟ್ಟೆಯಲ್ಲಿ ಮತದಾನ ಮಾಡಲು ಅವಕಾಶ ಇಲ್ಲ. ಮೇ 10ಕ್ಕೂ ಮೂರು ದಿನ ಮುಂಚೆ ಈ ಮತದಾನ ಪ್ರಕ್ರಿಯೆ ಮುಗಿಯುತ್ತದೆ ಎಂದು ವಿವರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT