ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಿತ್ತಳೆ ಜಡೆಯ ರಾಣಿಯ ಒನಪು-ಒಯ್ಯಾರ

Last Updated 17 ಅಕ್ಟೋಬರ್ 2020, 5:23 IST
ಅಕ್ಷರ ಗಾತ್ರ

ದಾವಣಗೆರೆಯ ಕುಂದುವಾಡ ಕೆರೆ ಏರಿಯ ಮೇಲೆ ಸುಮಾರು ಮಧ್ಯಮ ಗಾತ್ರದ ಮರಗಳು ತಮ್ಮ ಹೂ ಗೊಂಚಲಿನಿಂದ ಜನರನ್ನು ಆಕರ್ಷಿಸುತ್ತಿವೆ.

ಇದರಲ್ಲೇನು ವಿಶೇಷವೆಂದಿರಾ? ಈಗತಾನೇ ಮದುಮತಿಯಾದ ಹೆಣ್ಣು ಮುಡಿದ ಮೊಗ್ಗಿನ ಜಡೆಯಂತಿದೆ ಇದರ ಹೂ ಗೊಂಚಲುಗಳು. ಆದರೆ ಬಣ್ಣ ಮಾತ್ರ ಹೊಳಪಿನ ಕಿತ್ತಳೆ. ಹಾಗಾಗಿ ಇವಳನ್ನು ’ಕಿತ್ತಳೆ ಜಡೆ ರಾಣಿ’ ಎಂದು ಕರೆಯಬಹುದೇನೋ!

ಮಡಗಾಸ್ಕರ್ ದೇಶದ ಈ ಸಸ್ಯವನ್ನು ಅಲ್ಲಿನ ಮಾಜಿ ರಾಜ್ಯಪಾಲರಾದ ಕೊಲ್‌ವಿಲ್ಲೆಯವರ ಗೌರವ ಸೂಚಕವಾಗಿ ‘ಕೊಲ್‌ವಿಲೈ ಗ್ಲೋರಿ’ ಎಂದು ಕರೆಯಲಾಗಿದೆ. ಸಸ್ಯಶಾಸ್ತ್ರೀಯವಾಗಿಯೂ ಇದರ ಹೆಸರು ಕೊಲ್‌ವೆಲ್ಲಿಯಾ ರೆಸಿಮೋಸ. ಇದಕ್ಕೆ ಇನ್ನೂ ಕನ್ನಡದ ಹೆಸರು ಲಭ್ಯವಿಲ್ಲ. ಬಹು ಆಕರ್ಷಕ ಕಿತ್ತಳೆ ಬಣ್ಣದ ಹೂ ಗೊಂಚಲು ಬಿಡುವುದರಿಂದ ‘ಕಿತ್ತಳೆ ಜಡೆ ರಾಣಿ’ ಎನ್ನಬಹುದು. ಇದು ಫಾಬೇಸಿ ಕುಟುಂಬಕ್ಕೆ ಸೇರಿದೆ. ನಾವು ಬೆಳೆಸುವ ಹುರುಳಿಕಾಯಿ, ಶೇಂಗಾ ಮುಂತಾದ ಸಣ್ಣ ಸಸ್ಯಗಳು ಮತ್ತು ಗುಲ್‌ಮೊಹರ್, ಮಳೆಮರಗಳು ಸಹ ಇದೇ ಕುಟುಂಬದ ಸದಸ್ಯರು.

ಈ ಮರವು ಎಲೆ ಉದುರುವ ಕಾಡುಗಳಲ್ಲಿ ಬೆಳೆಯುತ್ತದೆ. ಎತ್ತರ 30ರಿಂದ 50 ಅಡಿಗಳು. ಕಂದು ಬಣ್ಣದ, ನಯವಾದ ತೊಗಟೆ ಹೊಂದಿರುವ ಕಾಂಡವಿದೆ. ಬೆಳವಣಿಗೆ ವರ್ಷಕ್ಕೆ 24 ಇಂಚು. ಬೇರೆ ಮರಗಳಿಗೆ ಹೋಲಿಸಿದರೆ ಸ್ವಲ್ಪ ವೇಗವಾಗಿ ಬೆಳೆಯುತ್ತದೆ. ಮೊದಲಿಗೆ ಲಂಬವಾಗಿ ಬೆಳೆಯುವ ಕಾಂಡವು ನಂತರ ಬಾಗಿದ ಎಲೆಗಳ ಗೊಂಚಲನ್ನು ಬಿಡುತ್ತದೆ. ಗಿಡಗಳ ಎಲೆಗಳು ಗುಲ್‌ಮೊಹರ್ ಎಲೆಗಳಂತೆಯೇ ಕಾಣುತ್ತವೆ. ಸೆಪ್ಟಂಬರ್ ತಿಂಗಳಿನಲ್ಲಿ ಹೂ ಬಿಡಲು ಆರಂಭಿಸುತ್ತವೆ. ಮರದ ತುದಿಯಿಂದ ಕೆಳಗೆ ಬಾಗಿ ಜೋತು ಬಿದ್ದಿರುವ ಹೂ ಗೊಂಚಲಿನಲ್ಲಿ ಹೊಳೆಯುವ ಕಿತ್ತಳೆ ಬಣ್ಣದ ಹೂಗಳಿರುತ್ತವೆ. ಪ್ರತಿಗೊಂಚಲಿನ ತುದಿಯಲ್ಲಿ ಹಸಿರು-ಮಿಶ್ರಿತ ಹಳದಿ ಮೊಗ್ಗುಗಳಿರುತ್ತವೆ. ಹೂಗಳು ಅರಳಿದಂತೆ ಗಾಢ ಕಿತ್ತಳೆ ಬಣ್ಣಕ್ಕೆ ತಿರುಗಿ ಕಣ್ಮನ ತಣಿಸುತ್ತವೆ. ಹಲವಾರು ಮೊಗ್ಗಿನ ಜಡೆಗಳು ಜೋತು ಬಿದ್ದಂತೆ ಕಾಣುತ್ತದೆ. ಹೂವಿನಿಂದ ಹೊರ ಸೂಸುವ ಮಕರಂದಕ್ಕಾಗಿ ಸಾವಿರಾರು ಜೇನು ಹುಳಗಳು, ದುಂಬಿ ಮತ್ತು ಇತರೆ ಕೀಟಗಳು ದಾಂಗುಡಿಯಿಡುತ್ತವೆ. ಆಗಾಗ್ಗೆ ಸೂರಕ್ಕಿಗಳು ಬಂದು ಹೂವಿನ ಬುಡದಲ್ಲಿರುವ ಮಕರಂದವನ್ನು ನೆಕ್ಕಿ ಪುರ್ರನೆ ಹಾರಿ ಹೋಗುತ್ತಿದ್ದುದ್ದನ್ನು ಗಮನಿಸಲಾಗಿದೆ. ಕ್ರಮೇಣ ಇಂತಹ ಹೂ ಗೊಂಚಲಿನಲ್ಲಿ ಉದ್ದ, ಚಪ್ಪಟೆಯಾದ, ಗಟ್ಟಿಯಾಗಿರುವ ಬೀಜಗಳನ್ನೊಳಗೊಂಡ ಕಾಯಿಗಳು ರೂಪುಗೊಳ್ಳುತ್ತವೆ. ಸ್ವಲ್ಪ ಕಂದು-ಮಿಶ್ರಿತ ಕಪ್ಪಗಿರುವ ಹಣ್ಣಿಗಳಿಂದ ಬೀಜಗಳನ್ನು ಪಡೆಯಬಹುದು. ಬೀಜಗಳಿಂದ ಮತ್ತು ಮರದ ಬಲಿತಿರುವ ತುದಿಗಳಿಂದ ಸಸಿಗಳನ್ನು ತಯಾರಿಸಬಹುದು. ಬೀಜಗಳು ಗಟ್ಟಿಯಾದ ಕವಚ ಹೊಂದಿರುವುದರಿಂದ ಸ್ವಲ್ಪ ಬಿಸಿನೀರಿನಲ್ಲಿ ಮುಳುಗಿಸಿ ಅಥವಾ ಉಪ್ಪಿನ ಕಾಗದದಿಂದ ಹೊರಭಾಗವನ್ನು ಉಜ್ಜಿ ನಂತರ ನೀರಿನಲ್ಲಿ 24 ಗಂಟೆಗಳವರೆಗೆ ನೆನಸಿಟ್ಟು ಬಳಸಿದರೆ ಹೆಚ್ಚಿನ ಪ್ರಮಾಣದ ಮೊಳಕೆ ಬರುತ್ತದೆ. ಬೀಜಗಳನ್ನು ಸುಮಾರು ನಾಲ್ಕು ವರ್ಷಗಳವರೆಗೆ ಶೇಖರಿಸಿಡಬಹುದು. ಮೊಳಕೆಯೊಡೆಯುವ ಪ್ರಮಾಣ ಶೇ 50ರಿಂದ 70ರಷ್ಟಿರುತ್ತದೆ.

ವಯಸ್ಕ ಮರಗಳು ಬರಗಾಲದಲ್ಲಿಯೂ ಬದುಕಬಲ್ಲವು. ಮೊದಲಿಗೆ ಚೆನ್ನಾಗಿ ಮತ್ತು ವೇಗವಾಗಿ ಬೆಳೆಯುವುದರಿಂದ ದಾವಣಗೆರೆಯಂತಹ ಒಣ ಪ್ರದೇಶದಲ್ಲಿ ಕಾಡು ಬೆಳೆಸಲು ಸೂಕ್ತ. ಮೆದು ತಿರುಳಿರುವ ಮರದ ಕಾಂಡವನ್ನು ಹಗುರವಾದ ಪಿಠೋಪಕರಣಗಳ ತಯಾರಿಯಲ್ಲಿ ಬಳಸುತ್ತಾರೆ. ಕಪಾಟು ತಯಾರು ಮಾಡುವ ವಿನೀರ್ ಶೀಟ್ ಮಾಡಲು ಸಹ ವ್ಯಾಪಕವಾಗಿ ಬಳಕೆಯಲ್ಲಿದೆ. ತನ್ನ ಕುಟುಂಬದ ಇತರೆ ಸದಸ್ಯರಂತೆ ಗಾಳಿಯಲ್ಲಿನ ಸಾರಜನಕವನ್ನು ಬೇರುಗಳಲ್ಲಿರುವ ಬ್ಯಾಕ್ಟೀರಿಯಾಗಳ ಸಹಯೋಗದೊಂದಿಗೆ ಮಣ್ಣಿಗೆ ಸೇರಿಸಿ ಮಣ್ಣಿನ ಫಲವತ್ತತೆಯನ್ನು ಹೆಚ್ಚಿಸುತ್ತವೆ.

ಅರಣ್ಯ ಇಲಾಖೆಯವರು ಈ ಸಸಿಗಳನ್ನು ನೆಟ್ಟಿದ್ದಾರೆ. ಕುಂದವಾಡ ಕೆರೆಏರಿಯಲ್ಲಿರುವ ಏಳು ಗಿಡಗಳಲ್ಲಿ ನಾಲ್ಕು ಗಿಡಗಳು ಪ್ರಥಮ ಬಾರಿಗೆ ಹೂ ಅರಳಿಸಿವೆ. ಬೆಂಗಳೂರು ಮತ್ತು ಮೈಸೂರು ನಗರಗಳಲ್ಲಿ ಮಾತ್ರ ಕಾಣುತ್ತಿದ್ದ ಇಂತಹ ಅಮೋಘ ಅಂದ-ಚೆಂದದ ಗಿಡಗಳನ್ನು ದಾವಣಗೆರೆಯಲ್ಲಿ ಬೆಳೆಸಿದ ಅರಣ್ಯ ಇಲಾಖೆಯ ಕೆಲಸ ನಿಜಕ್ಕೂ ಶ್ಲಾಘನೀಯ. ಯಾವುದೇ ನಿರ್ವಹಣಾ ವೆಚ್ಚವಿಲ್ಲದೇ ಹೆಚ್ಚಿನ ಅರೈಕೆ ಬೇಡದ ಈ ಮರಗಳನ್ನು ನಗರದ ರಸ್ತೆ ಬದಿಯಲ್ಲಿಯೂ ಬೆಳಸಬಹುದು.

(ಲೇಖಕರು ದಾವಣಗೆರೆ ವಿಶ್ವವಿದ್ಯಾಲಯದ ಸೂಕ್ಷ್ಮಜೀವಿಶಾಸ್ತ್ರ ವಿಭಾಗದ ಪ್ರಾಧ್ಯಾಪಕರು. ಚಿತ್ರ: ಲೇಖಕರವು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT