ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಭ್ಯರ್ಥಿಗಳ ‘ಭವಿಷ್ಯ’ ಮತಯಂತ್ರಗಳಲ್ಲಿ ಭದ್ರ

‘ಪ್ರಜಾ ಮತ’ ಜಾತ್ರೆಯಲ್ಲಿ ಶಾಂತಿಯುತವಾಗಿ ನಡೆದ ಮತದಾನ
Last Updated 24 ಏಪ್ರಿಲ್ 2019, 11:34 IST
ಅಕ್ಷರ ಗಾತ್ರ

ದಾವಣಗೆರೆ: ಹಲವು ಕಡೆ ಮತಯಂತ್ರಗಳಲ್ಲಿ ದೋಷ, ಬಹಿಷ್ಕಾರದ ಬೆದರಿಕೆ, ಕಾರ್ಯಕರ್ತರ ನಡುವೆ ಸಣ್ಣ–ಪುಟ್ಟ ಗಲಾಟೆ ಬಿಟ್ಟರೆ ದಾವಣಗೆರೆ ಲೋಕಸಭಾ ಕ್ಷೇತ್ರದ 1,949 ಮತಗಟ್ಟೆಗಳಲ್ಲಿ ಮಂಗಳವಾರ ಶಾಂತಿಯುತವಾಗಿ ಮತದಾನ ನಡೆಯಿತು.

‘ಮತದಾರ ಪ್ರಭು’ಗಳು ಬರೆದ 25 ಅಭ್ಯರ್ಥಿಗಳ ಭವಿಷ್ಯವು ಮತಯಂತ್ರಗಳಲ್ಲಿ ಭದ್ರವಾಗಿದ್ದು, ಮತ ಎಣಿಕೆ ದಿನವಾದ ಮೇ 23ಕ್ಕೆ ಬಹಿರಂಗಗೊಳ್ಳಲಿದೆ. ಲೋಕಸಭಾ ಕ್ಷೇತ್ರದಲ್ಲಿ ಒಟ್ಟು ಶೇ 66.70ರಷ್ಟು ಮತದಾನವಾಗಿದೆ. ಕಳೆದ ಬಾರಿ ಶೇ 73.23ರಷ್ಟು ಮತದಾನವಾಗಿತ್ತು.

ಎಂಟು ವಿಧಾನಸಭಾ ಕ್ಷೇತ್ರಗಳ ಬಹುತೇಕ ಮತಗಟ್ಟೆಗಳಲ್ಲಿ ಬೆಳಿಗ್ಗೆ 7ರಿಂದಲೇ ಮತದಾನ ಪ್ರಕ್ರಿಯೆ ಆರಂಭಗೊಂಡವು. ಆದರೆ, ಕೆಲವೆಡೆ ಚುನಾವಣಾ ಸಿಬ್ಬಂದಿ ಅಣಕು ಮತದಾನ ಮಾಡಿ ಪರಿಶೀಲಿಸುವ ವೇಳೆ ಇವಿಎಂ ಸರಿಯಾಗಿ ಕಾರ್ಯನಿರ್ವಹಿಸಲಿಲ್ಲ. ಬಳಿಕ ಬೇರೆ ಇವಿಎಂ ತರಿಸಿ ಜೋಡಿಸಿ ಮತದಾನಕ್ಕೆ ಅನುವು ಮಾಡಿಕೊಡಲಾಯಿತು. 10ರಿಂದ 20 ನಿಮಿಷ ವಿಳಂಬವಾಗಿ ಮತದಾನ ಆರಂಭಗೊಂಡಿತು.

ಬೆಳಿಗ್ಗೆ ಚುರುಕು: ಮಧ್ಯಾಹ್ನ ಬಿಸಿಲಿನ ಝಳ ಹೆಚ್ಚಿರುತ್ತದೆ ಎಂಬ ಕಾರಣಕ್ಕೆ ಹಲವೆಡೆ ಜನ ಬೆಳಿಗ್ಗೆಯೇ ಮತಗಟ್ಟೆಗಳತ್ತ ಹೆಜ್ಜೆ ಹಾಕಿದ್ದರು. ಮತದಾನದ ಹಕ್ಕನ್ನು ಚಲಾಯಿಸಿದ ಬಳಿಕ ತಮ್ಮ ದಿನನಿತ್ಯದ ಕೆಲಸಗಳಿಗೆ ತೆರಳುತ್ತಿರುವುದು ಕ್ಷೇತ್ರದ ಹಲವು ಮತಗಟ್ಟೆಗಳಿಗೆ ಭೇಟಿ ನೀಡಿದಾಗ ಕಂಡು ಬಂತು.

ನಗರದ ನಿಟುವಳ್ಳಿ ರಸ್ತೆಯ ಲೆನಿನ್‌ ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ–137ರಲ್ಲಿ ಬೆಳಿಗ್ಗೆ 7.30ರ ವೇಳೆಗೆ 42 ಜನ ಹಾಗೂ ಪಕ್ಕದ ಮತಗಟ್ಟೆ ಸಂಖ್ಯೆ–136ರಲ್ಲಿ 52 ಜನ ಹಕ್ಕು ಚಲಾಯಿಸಿದ್ದರು. ಮಹಿಳೆಯರೂ ಸೇರಿ 50ಕ್ಕೂ ಹೆಚ್ಚು ಜನ ಸರತಿ ಸಾಲಿನಲ್ಲಿ ನಿಂತುಕೊಂಡಿದ್ದರು. ಈ ಭಾಗದಲ್ಲಿ ಕೂಲಿಕಾರ್ಮಿಕರೇ ಹೆಚ್ಚಿರುವುದರಿಂದ ಕೆಲಸಕ್ಕೆ ಹೋಗಲು ಬೆಳಿಗ್ಗೆಯೇ ಬಂದು ಮತದಾನ ಮಾಡಿದ್ದರು.

ಜಿಲ್ಲೆಯಲ್ಲಿ ಬೆಳಿಗ್ಗೆ 9 ಗಂಟೆಗೆ ಸರಾಸರಿ ಶೇ 6.88ರಷ್ಟು ಹಾಗೂ 11 ಗಂಟೆಗೆ ಶೇ 20.33ರಷ್ಟು ಮತ ಚಲಾವಣೆಗೊಂಡಿದ್ದವು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ಆಲೂರಹಟ್ಟಿ ಶ್ರೀರಾಮನಗರದ ಮತಗಟ್ಟೆ ಸಂಖ್ಯೆ–6ರಲ್ಲಿ ಬೆಳಿಗ್ಗೆ 10.50ಕ್ಕೆ 184 ಜನ ಮತ ಹಾಕಿದ್ದರು. ಪಕ್ಕದ ಮತಗಟ್ಟೆಯಲ್ಲಿ 134 ಜನ ಹಕ್ಕು ಚಲಾಯಿಸಿದ್ದರು. ಮತಗಟ್ಟೆಯತ್ತ ಹಲವರು ಹೆಜ್ಜೆ ಹಾಕುತ್ತಿದ್ದರು. ನವ ಮತದಾರರು ಮೊದಲ ಬಾರಿಗೆ ಹಕ್ಕು ಚಲಾಯಿಸಿ ಸಂಭ್ರಮಿಸುತ್ತಿದ್ದರು. ಆನಗೋಡು ಗ್ರಾಮದ ಮತಗಟ್ಟೆ ಸಂಖ್ಯೆ–61ರಲ್ಲಿ ಒಟ್ಟು 1,189 ಮತದಾರರಿದ್ದು, ಬೆಳಿಗ್ಗೆ 11.45ಕ್ಕೆ 450 ಜನ ಮತ ಹಾಕಿದ್ದರು.

ನೇರ್ಲಗಿ ಗ್ರಾಮದ ಮತಗಟ್ಟೆ ಸಂಖ್ಯೆ–73ರಲ್ಲಿ ಮಧ್ಯಾಹ್ನ 12.30ರ ವೇಳೆ 1,007 ಮತದಾರರ ಪೈಕಿ, 415 ಜನ ಮತ ಚಲಾಯಿಸಿದ್ದರು.

ಮಧ್ಯಾಹ್ನ 1ರ ಹೊತ್ತಿಗೆ ಸುಡುವ ಬಿಸಿಲಿನ ತಾಪ ಹೆಚ್ಚುತ್ತಿದ್ದಂತೆ ಮತದಾನ ಪ್ರಮಾಣವೂ ಇಳಿಮುಖವಾಯಿತು. ಮಧ್ಯಾಹ್ನ ಮೂರು ಗಂಟೆಯಿಂದ ಮೋಡ ಕವಿದ ವಾತಾವರಣ ಕಂಡುಬಂತು. ಶಿರಮಗೊಂಡನಹಳ್ಳಿಯ ‘ಸಖಿ’ ಮತಗಟ್ಟೆಯಲ್ಲಿರುವ ಒಟ್ಟು 1,087 ಮತದಾರರ ಪೈಕಿ 625 ಜನ ಈ ವೇಳೆ ಹಕ್ಕು ಚಲಾಯಿಸಿದ್ದರು. ಇಲ್ಲಿನ ಚುನಾವಣಾ ಮಹಿಳಾ ಸಿಬ್ಬಂದಿ ನೇರಳೆ ಬಣ್ಣದ ಸೀರೆ ಉಟ್ಟು ಗಮನ ಸೆಳೆದಿದ್ದರು.

ಸಂಜೆ 4ರ ಬಳಿಕ ಮತದಾರರು ಮತ್ತೆ ಮತಗಟ್ಟೆಯತ್ತ ಹೆಚ್ಚಿನ ಸಂಖ್ಯೆಯಲ್ಲಿ ಹೆಜ್ಜೆ ಹಾಕತೊಡಗಿದರು. ಸಂಜೆ 6ಕ್ಕೆ ಮತದಾನ ಅವಧಿ ಕೊನೆಗೊಂಡಿದ್ದು, ಅಷ್ಟರೊಳಗೆ ಮತಗಟ್ಟೆ ಆವರಣ ಪ್ರವೇಶಿಸಿದವರಿಗೆ ಮತದಾನ ಹಕ್ಕು ಚಲಾಯಿಸಲು ಅನುವು ಮಾಡಿಕೊಡಲಾಯಿತು.

ಮತದಾರನ ಮೊಬೈಲ್‌ ಜಪ್ತಿ:ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಿರಮಗೊಂಡನಹಳ್ಳಿಯ ‘ಸಖಿ’ ಮತಗಟ್ಟೆ ಸಂಖ್ಯೆ–179ರಲ್ಲಿ ಮತದಾನ ಮಾಡುವ ಗೌಪ್ಯ ಸ್ಥಳಕ್ಕೆ ಮತದಾರ ತೆಗೆದುಕೊಂಡು ಹೋಗಿದ್ದ ಮೊಬೈಲ್‌ ಅನ್ನು ಚುನಾವಣಾಧಿಕಾರಿ ಜಪ್ತಿ ಮಾಡಿದರು.

ಮಧ್ಯಾಹ್ನ 3 ಗಂಟೆ ಸುಮಾರಿಗೆ ಮತಗಟ್ಟೆಗೆ ಬಂದ ಲಿಂಗರಾಜ್‌ ಎಂಬುವವರು ಚುನಾವಣಾ ಸಿಬ್ಬಂದಿ ಜೊತೆ ಜಗಳ ಆರಂಭಿಸಿದರು. ಮತದಾನಕ್ಕೆ ಬಂದ ತಮ್ಮ ಕುಟುಂಬದ ಸದಸ್ಯರೊಬ್ಬರಿಗೆ ತೊಂದರೆ ಕೊಟ್ಟಿದ್ದೀರಿ ಎಂದು ಆಕ್ಷೇಪ ತೆಗೆದು ಗಲಾಟೆ ಆರಂಭಿಸಿದರು. ಮತದಾನ ಬಹಿಷ್ಕರಿಸುವುದಾಗಿ ಬೆದರಿಕೆ ಹಾಕಿದರು.

ಚುನಾವಣಾ ಸಿಬ್ಬಂದಿ ಮನವೊಲಿಸಿದ ಬಳಿಕ ಅವರು ಅಂಗಿಯ ಜೇಬಿನಲ್ಲಿ ಮೊಬೈಲ್‌ ಇಟ್ಟುಕೊಂಡು ಮತದಾನ ಮಾಡುವ ಸ್ಥಳಕ್ಕೆ ಹೋದರು. ಅಭ್ಯರ್ಥಿಗಳ ಹೆಸರುಗಳನ್ನು ದೊಡ್ಡದಾಗಿ ಓದುತ್ತ ಉಳಿದವರಿಗೆ ಕಿರಿಕಿರಿ ಮಾಡುತ್ತಿದ್ದರು. ಇದೇ ವೇಳೆ ಮೊಬೈಲ್‌ಗೆ ಬಂದ ಕರೆಯನ್ನು ಸ್ವೀಕರಿಸಿ ಅವರು ಮಾತನಾಡತೊಡಗಿದರು. ಆಗ ಮತಗಟ್ಟೆ ಅಧಿಕಾರಿಯ ಸೂಚನೆ ಮೇರೆಗೆ ಪೊಲೀಸರು ಮೊಬೈಲ್‌ ಜಪ್ತಿ ಮಾಡಿಕೊಂಡರು.

ಅಂಗವಿಕಲರಿಗೆ ನೆರವು
ಅಂಗವಿಕಲರು, ವೃದ್ಧರನ್ನು ಕರೆದುಕೊಂಡು ಬರಲು ಬಹುತೇಕ ಮತಗಟ್ಟೆಗಳಲ್ಲಿ ಗಾಲಿ ಕುರ್ಚಿ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಮತಗಟ್ಟೆ ಸಹಾಯಕರು ಅಂಗವಿಕಲ, ವೃದ್ಧ ಮತದಾರರನ್ನು ಕರೆತರಲು ನೆರವಾದರು.

ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಬಿಸಿಲಿನ ಝಳ ಹೆಚ್ಚಿರುವುದರಿಂದ ಹಲವು ಮತಗಟ್ಟೆಗಳಲ್ಲಿ ಮತದಾನ ಕೊಠಡಿಯ ಎದುರು ಶಾಮಿಯಾನ ಹಾಕಿ ನೆರಳಿನ ವ್ಯವಸ್ಥೆ ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT