ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಮು ಸಾಮರಸ್ಯ ಮೆರೆದ ಶಿಳ್ಳೇಕ್ಯಾತ ಸಮುದಾಯ

ಮೊಹರಂ ಮಂದಿರ ನಿರ್ಮಾಣ; ಪ್ರತಿವರ್ಷ ಹತ್ತುದಿನ ವಿಜೃಂಭಣೆಯ ಮೊಹರಂ ಆಚರಣೆ
Last Updated 8 ಆಗಸ್ಟ್ 2021, 4:20 IST
ಅಕ್ಷರ ಗಾತ್ರ

ಬಸವಾಪಟ್ಟಣ: ಸಮೀಪದ ಹೊಸಳ್ಳಿಯಲ್ಲಿ ನೆಲೆಸಿರುವ ಶಿಳ್ಳೇಕ್ಯಾತ ಸಮುದಾಯದ ನೂರಾರು ಕುಟುಂಬಗಳು ಮೊಹರಂ ಉತ್ಸವವನ್ನು ಪ್ರತಿ ವರ್ಷ ಹತ್ತು ದಿನಗಳ ಕಾಲ ವಿಜೃಂಭಣೆಯಿಂದ ಆಚರಿಸುತ್ತಾರೆ.

ಶತಮಾನದ ಹಿಂದೆಯೇ ಮಹಾರಾಷ್ಟ್ರದಿಂದ ಹೊಸಳ್ಳಿಗೆ ವಲಸೆ ಬಂದಿದ್ದು, 300 ಕುಟುಂಬಗಳ 1,200 ಜನಸಂಖ್ಯೆ ಇದೆ. ಇಲ್ಲಿನ ಸೂಳೆಕೆರೆಯಲ್ಲಿ ಮೀನುಗಾರಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದಾರೆ. ಮೊಹರಂ ಆಚರಣೆಯನ್ನು ತಮ್ಮ ಧಾರ್ಮಿಕ ಆಚರಣೆಯ ಅವಿಭಾಜ್ಯ ಅಂಗವನ್ನಾಗಿ ಮಾಡಿಕೊಂಡಿದ್ದಾರೆ. ಈ ಆಚರಣೆಯನ್ನು ಜೀವಂತವಾಗಿಡಲು ಹೊಸಳ್ಳಿಯ ಪಶ್ಚಿಮ ಭಾಗದ ಸುಂದರ ಬೆಟ್ಟ ಪ್ರದೇಶದಲ್ಲಿ ಮೊಹರಂ ದೇಗುಲವನ್ನು ₹ 25 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ್ದಾರೆ.

‘ನಮ್ಮ ಗ್ರಾಮದಲ್ಲಿ ಚೌಡೇಶ್ವರಿ, ಮಂಜುನಾಥಸ್ವಾಮಿ, ಬಸವೇಶ್ವರ ದೇವಾಲಯಗಳಿವೆ. ಇವುಗಳೊಂದಿಗೆ ಈ ಮೊಹರಂ ದೇಗುಲದಲ್ಲಿರುವ ದೇವರನ್ನೂ ಅಷ್ಟೇ ಭಕ್ತಿಯಿಂದ ಆರಾಧಿಸುತ್ತೇವೆ. ಮುಸ್ಲಿಂ ಮೌಲ್ವಿಯನ್ನು ನೇಮಿಸಿ, ಅವರಿಂದ ಇಸ್ಲಾಂ ಧರ್ಮ ಪದ್ಧತಿಯಂತೆ ಧಾರ್ಮಿಕ ವಿಧಿ ವಿಧಾನಗಳನ್ನೂ ನಡೆಸುತ್ತಿದ್ದೇವೆ’ ಎನ್ನುತ್ತಾರೆ ಸಮುದಾಯದ ಮುಖಂಡ ಹಾಗೂ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಬಿ. ಫಕೀರಪ್ಪ.

‘ಪ್ರತಿ ಗುರುವಾರ ಈ ದೈವದ ವಿಶೇಷ ದಿನ. ಅಂದು ನಮ್ಮ ಜತೆಗೆ ಸುತ್ತಲಿನ ಗ್ರಾಮದವರು ಬಂದು ಪೂಜೆ ಸಲ್ಲಿಸುತ್ತಾರೆ. ಹಿಂದೆ ಹಿರಿಯರು ಇಲ್ಲಿ ಒಂದು ಚಿಕ್ಕ ದೇಗುಲ ನಿರ್ಮಿಸಿದ್ದರು. ಅದು ದುರ್ಬಲವಾಗಿದ್ದರಿಂದ ನೂತನ ದೇವಾಲಯ ನಿರ್ಮಿಸಿದ್ದೇವೆ. ಇಸ್ಲಾಂ ಪಂಚಾಂಗದ ಪ್ರಕಾರ ಪ್ರತಿ ವರ್ಷ ಹತ್ತು ದಿನಗಳ ಕಾಲ ಮೊಹರಂ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಸುತ್ತಲಿನ ಗ್ರಾಮಸ್ಥರಲ್ಲದೇ ಶಿವಮೊಗ್ಗ ಜಿಲ್ಲೆಯ ವಿವಿಧ ಗ್ರಾಮಗಳ ಭಕ್ತರೂ ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. ಮೂರು ದಿನ ಇಡೀ ಗ್ರಾಮದಲ್ಲಿ ಹಬ್ಬದ ವಾತಾವರಣವಿರುತ್ತದೆ. ವಿಶೇಷ ಅಡುಗೆ ಮಾಡಿ ದೇವರಿಗೆ ಎಡೆ ನೀಡಲಾಗುತ್ತದೆ. ಈ ವರ್ಷ ಆಗಸ್ಟ್‌ 11ರಿಂದ 20ರ ವರೆಗೆ ಮೊಹರಂ ಉತ್ಸವ ನಡೆಯಲಿದ್ದು, 19ರಂದು ತಾಬೂತಿನ ಮೆರವಣಿಗೆ ನಡೆಯಲಿದೆ’ ಎಂದು ವಿವರಿಸುತ್ತಾರೆ ಅವರು.

‘ಮೊಹರಂ ಆಚರಣೆ ಜಾತ್ಯತೀತ ಭಾವನೆಯ ಪ್ರತೀಕವಾಗಿದೆ. ಇಲ್ಲಿಗೆ ಆಗಮಿಸುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ಭಕ್ತರ ಬೇಡಿಕೆಗಳನ್ನು ಈಡೇರಿಸುವ ದೈವ ಎಂದು ಭಕ್ತರು ಬಲವಾಗಿ ನಂಬಿದ್ದಾರೆ’ ಎನ್ನುತ್ತಾರೆ ಗ್ರಾಮಸ್ಥರಾದ ಭೈರಪ್ಪ, ಸಿ.ಚಂದ್ರಪ್ಪ ದಶರಥಪ್ಪ ಮತ್ತು ತಿಪ್ಪಣ್ಣ.

‘ಇಂದಿನ ಯುವಕರಲ್ಲಿ ದೇವರ ಮೇಲೆ ಭಕ್ತಿ ಕಡಿಮೆಯಾಗುತ್ತಿದೆ ಎಂಬ ಭಾವನೆ ಇಲ್ಲಿ ಹುಸಿಯಾಗಿದದೆ. ಮೊಹರಂ ಆಚರಣೆಯಲ್ಲಿ ಯುವಕರ ಪಾತ್ರ ಹೆಚ್ಚಾಗಿರುವುದನ್ನು ನಮ್ಮ ಗ್ರಾಮದಲ್ಲಿ ಕಾಣಬಹುದು’ ಎನ್ನುತ್ತಾರೆ ಪುಟ್ಟಪ್ಪ ಮತ್ತು ಎಸ್‌ ಚಂದ್ರಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT