ಭಾನುವಾರ, 24 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಡಿಸೆಂಬರ್ ವೇಳೆಗೆ ಸಿಆರ್‌ಸಿ ಪೂರ್ಣಗೊಳಿಸಿ

ಬುದ್ಧಿಮಾಂದ್ಯರ ಸಂಯುಕ್ತ ಪ್ರಾದೇಶಿಕ ಕೇಂದ್ರ ಪರಿಶೀಲಿಸಿದ ಸಂಸದ ಜಿ.ಎಂ. ಸಿದ್ದೇಶ್ವರ ಸೂಚನೆ
Published 5 ಸೆಪ್ಟೆಂಬರ್ 2023, 5:50 IST
Last Updated 5 ಸೆಪ್ಟೆಂಬರ್ 2023, 5:50 IST
ಅಕ್ಷರ ಗಾತ್ರ

ದಾವಣಗೆರೆ: ‘ತಾಲ್ಲೂಕಿನ ವಡ್ಡಿನಹಳ್ಳಿ ಬಳಿ ನಿರ್ಮಾಣವಾಗುತ್ತಿರುವ ಬುದ್ಧಿಮಾಂದ್ಯರ ಸಂಯುಕ್ತ ಪ್ರಾದೇಶಿಕ ಕೇಂದ್ರ (ಸಿ.ಆರ್.ಸಿ) ಹಾಗೂ ನಿಟ್ಟುವಳ್ಳಿಯಲ್ಲಿ ₹15 ಕೋಟಿಗಳ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಇ.ಎಸ್.ಐ. ಆಸ್ಪತ್ರೆ ಕಾಮಗಾರಿಗಳನ್ನು ಡಿಸೆಂಬರ್ ವೇಳೆಗೆ ಪೂರ್ಣಗೊಳಿಸಬೇಕು’ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಸೂಚಿಸಿದರು.

ಸೋಮವಾರ ಈ ಎರಡು ಕೇಂದ್ರಗಳಿಗೆ ಭೇಟಿ ನೀಡಿದ ಬಳಿಕ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ‘ಕರ್ನಾಟಕ ಹಾಗೂ ಗೋವಾ ರಾಜ್ಯಗಳಿಗೆ ಇದೊಂದೇ ಕೇಂದ್ರವಿದ್ದು, ಎರಡೂ ರಾಜ್ಯಗಳಿಗೆ ಕಲಶದಂತಿದೆ. ಕೇಂದ್ರದ ಕಟ್ಟಡವನ್ನು ಯಾವುದೇ ಲೋಪವಿಲ್ಲದಂತೆ ನಿರ್ಮಾಣ ಮಾಡಬೇಕು. ಡಿಸೆಂಬರ್ ವೇಳೆಗೆ ಪ್ರಧಾನ ಕಟ್ಟಡವನ್ನು ಪೂರ್ಣಗೊಳಿಸಿದರೆ ಕೇಂದ್ರದ ಸಚಿವರನ್ನು ಕರೆಸಿ, ಉದ್ಘಾಟಿಸಲಾಗುವುದು’ ಎಂದು ಹೇಳಿದರು.

‘ಸಿಆರ್‌ಸಿ ಕಲಬುರಗಿ ಜಿಲ್ಲೆಗೆ ಹೋಗಬೇಕಿತ್ತು. ರಾಜ್ಯಪಾಲ ಥಾವರ್‌ಚಂದ್ ಗೆಹಲೋತ್ ಅವರು ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವರಾಗಿದ್ದ ಸಂದರ್ಭದಲ್ಲಿ ಮನವಿ ಸಲ್ಲಿಸಿ ದಾವಣಗೆರೆ ಜಿಲ್ಲೆಗೆ ತಂದಿದ್ದು, ₹25 ಕೋಟಿ ಬಿಡುಗಡೆಯಾಗಿದೆ. ದಿವ್ಯಾಂಗ ಮಕ್ಕಳ ಸೇವೆ ದೇವರ ಸೇವೆಗೆ ಸಮನಾದುದು. ವಡ್ಡಿನಹಳ್ಳಿಯಲ್ಲಿ ಈಗಾಗಲೇ 4 ಎಕರೆ ಜಮೀನು ಇದ್ದು, ಇನ್ನೂ 5 ಎಕರೆ ಮಂಜೂರಾಗಿದೆ. ಅಲ್ಲದೇ ಕೊಗ್ಗನೂರು ಬಳಿಯೂ 7.23 ಎಕರೆ ಜಮೀನು ಮಂಜೂರಾಗಿದೆ’ ಎಂದು ಹೇಳಿದರು.

‘ಕೇಂದ್ರದಲ್ಲಿ ದಿವ್ಯಾಂಗ ಮಕ್ಕಳಿಗೆ ಚಿಕಿತ್ಸೆ, ತರಬೇತಿ ಮತ್ತು ಪುನರ್ವಸತಿಯನ್ನು ಕಲ್ಪಿಸಿದ್ದು, 38,557 ಜನರಿಗೆ ಅಲ್ಪಾವಧಿ ತರಬೇತಿ ನೀಡಿದ್ದು, ಈವರೆಗೆ 5 ಸಾವಿರಕ್ಕೂ ಹೆಚ್ಚು ದಿವ್ಯಾಂಗರು ವಿಶೇಷ ತರಬೇತಿಗೆ ನೋಂದಾಯಿಸಿಕೊಂಡಿದ್ದಾರೆ. ಆರ್ಥಿಕವಾಗಿ ಹಿಂದುಳಿದ 3212 ಜನರಿಗೆ ವ್ಹೀಲ್ ಚೇರ್ ಹಾಗೂ ಶ್ರವಣ ಯಂತ್ರಗಳನ್ನು ಹಸ್ತಾಂತರಿಸಲಾಗಿದೆ. 2019ರಿಂದ ದಾವಣಗೆರೆ ಸಿಆರ್‌ಸಿ ಕೇಂದ್ರವೂ 2 ಡಿಪ್ಲೊಮಾ ಕೋರ್ಸ್‌ಗಳನ್ನು ನಡೆಸುತ್ತಿದೆ. ‘ದಿವ್ಯಾಂಗರಿಗೆ ಅನುಕೂಲವಾಗುವಂತೆ ಪವರ್‌ಗ್ರಿಡ್ ಕಾರ್ಪೊರೇಷನ್ ವತಿಯಿಂದ ಸಿಎಸ್‌ಆರ್ ಅನುದಾನದಲ್ಲಿ ಓಂಕಾರಪ್ಪ ಅವರು ಒಂದು ಮಿನಿ ಬಸ್ ನೀಡಲಾಗಿದೆ’ ಎಂದು ಮಾಹಿತಿ ನೀಡಿದರು.

‘2022ರ ಏಪ್ರಿಲ್ 22ರಂದು ಸಚಿವ ವೀರೇಂದ್ರ ಕುಮಾರ್ ಅವರಿಗೆ ಮತ್ತೊಂದು ಪ್ರಸ್ತಾವ ಕಳುಹಿಸಿದ್ದು, ಅಕ್ಟೋಬರ್ 6ರಂದು ಉತ್ತರ ನೀಡಿದ್ದಾರೆ. ಎಂಎಟಿಬಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್, ಬಹು ಚಿಕಿತ್ಸಕ ಈಜುಕೊಳ, ದಿವ್ಯಾಂಗರು ಬಳಸುವ ಸಹಾಯಕ ಸಾಧನಗಳ ಉತ್ಪಾದನಾ ಘಟಕ ನಿರ್ಮಾಣಕ್ಕೆ ₹ 30 ಕೋಟಿ ಮಂಜೂರು ಮಾಡಿದ್ದಾರೆ. ದಿವ್ಯಾಂಗರಿಗೆ ಲ್ಯಾಪ್‌ಟಾಪ್, ಹೊಲಿಗೆ ಯಂತ್ರ ಸೇರಿದಂತೆ ವಿವಿಧ ಸಲಕರಣೆಗೆ ವ್ಯವಸ್ಥೆಗೆ ₹ 55 ಕೋಟಿ ನೀಡುವ ಭರವಸೆ ನೀಡಿದ್ದು, ಈಗಾಗಲೇ 22 ಕೋಟಿ ಬಿಡುಗಡೆಯಾಗಿದೆ. ಒಂದುವರೆ ವರ್ಷದಲ್ಲಿ ಪೂರ್ಣಗೊಳಿಸುವ ವಿಶ್ವಾಸವಿದೆ’ ಎಂದರು.

ಮುಖ್ಯ ಎಂಜಿನಿಯರ್ ಕೆ.ಕೆ. ಅಗರ್‌ವಾಲ್, ಸಿಆರ್‌ಸಿ ನಿರ್ದೇಶಕ ಮಾರುತಿ ಕೃಷ್ಣ, ಇಇ ಶ್ರೀನಿವಾಸುಲು, ಪಾಲಿಕೆ ಸದಸ್ಯರಾದ ಬಿ.ಜಿ. ಅಜಯ್‌ಕುಮಾರ್‌, ಲೋಕಿಕೆರೆ ನಾಗರಾಜ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಮುರುಗೇಶ್ ಆರಾಧ್ಯ, ಉಪಮೇಯರ್ ಯಶೋಧ ಯಗ್ಗಪ್ಪ, ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ನಾಗರಾಜ್ ಇದ್ದರು. ಐಗೂರು, ಹೊನ್ನೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯರಿಂದ ಕಾರ್ಮಿಕರಿಗೆ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿತ್ತು. 

ಇಎಸ್‌ಐ ಆಸ್ಪತ್ರೆಗೆ ಭೇಟಿ:

‘ಇಎಸ್ಐ ಆಸ್ಪತ್ರೆಯನ್ನು ₹ 14 ಕೋಟಿ 100 ಹಾಸಿಗೆಗೆ ಮೇಲ್ದರ್ಜೆಗೆ ಏರಿಸುವ ಸಂಬಂಧ ಭೇಟಿ ನೀಡಿ ಪರಿಶೀಲಿಸಿದರು. ಇರುವ ಕಟ್ಟಡವನ್ನೇ ಬಲವರ್ಧನೆ ಮಾಡಲು ಐಎಸ್ಐನವರು ಸಲಹೆ ನೀಡಿದ್ದು, ಹಳೆಯ ಕಟ್ಟಡವನ್ನೇ ಬಲವರ್ಧನೆಗೊಳಿಸಲಾಗುವುದು’ ಎಂದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ವೀರೇಶ್ ಹನಗವಾಡಿ, ಉಪಾಧ್ಯಕ್ಷ ಶ್ರೀನಿವಾಸ್ ದಾಸಕರಿಯಪ್ಪ, ಮಂಜಾನಾಯ್ಕ, ಪ್ರಧಾನ ಕಾರ್ಯದರ್ಶಿ ಬಿ.ಎಸ್. ಜಗದೀಶ್, ಪಾಲಿಕೆ ಸದಸ್ಯ ಪ್ರಸನ್ನಕುಮಾರ್ ಇತರರು ಇದ್ದರು.

‘ಪಕ್ಷದ ತೀರ್ಮಾನವೇ ಅಂತಿಮ’ ಭಾರತದಂತಹ ಪ್ರಜಾಪ್ರಭುತ್ವ ದೇಶದಲ್ಲಿ ಯಾರು ಏನು ಬೇಕಾದರೂ ಹೇಳಬಹುದು. ಪಕ್ಷದ ತೀರ್ಮಾನವೇ ಅಂತಿಮ ಎಂದು ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು. ದಾವಣಗೆರೆ ಲೋಕಸಭಾ ಕ್ಷೇತ್ರದಿಂದ ಎಂ.ಪಿ.ರೇಣುಕಾಚಾರ್ಯ ಕಣಕ್ಕಿಳಿಯುವುದಾಗಿ ಹೇಳಿದ್ದಾರೆ ಎಂಬ ಸುದ್ದಿಗಾರರ ಪ್ರಶ್ನೆಗೆ ಮೇಲಿನಂತೆ ಉತ್ತರಿಸಿದರು. ‘ಒಂದು ರಾಷ್ಟ್ರ ಒಂದು ಚುನಾವಣೆಯ ಬಗ್ಗೆ ಅಷ್ಟಾಗಿ ಮಾಹಿತಿ ಇಲ್ಲ. ಸಂಸತ್ತು ಕಲಾಪದಲ್ಲಿ ಭಾಗವಹಿಸಿದ ನಂತರ ಮಾತನಾಡುತ್ತೇನೆ’ ಎಂದು ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT