ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆರೋಗ್ಯ ಇಲಾಖೆ, ಪೊಲೀಸ್‌ ಇಲಾಖೆಯ ನಿರ್ಲಕ್ಷ್ಯಕ್ಕೆ ಖಂಡನೆ

ಪ್ರತಿಭಟನೆ ನಡೆಸಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಜಿಲ್ಲಾ ವರದಿಗಾರರ ಕೂಟ
Last Updated 21 ನವೆಂಬರ್ 2019, 16:02 IST
ಅಕ್ಷರ ಗಾತ್ರ

ದಾವಣಗೆರೆ: ‘ಪ್ರಜಾವಾಣಿ’ಯ ಹಾವೇರಿ ಜಿಲ್ಲಾ ವರದಿಗಾರ ಎಂ.ಸಿ. ಮಂಜುನಾಥ್‌ ಅಪಘಾತವಾಗಿ ರಸ್ತೆಯಲ್ಲಿ ಬಿದ್ದಿದ್ದ ಸಂದರ್ಭ ಅಲ್ಲಿಗೆ ಬಂದಿದ್ದ 108 ತುರ್ತುವಾಹನ ವಾಪಸ್ಸಾಗಿರುವುದು, ಪೊಲೀಸರು ಮೃತದೇಹವನ್ನು ಆಪೆ ವಾಹನದಲ್ಲಿ ಕಳುಹಿಸಿರುವುದನ್ನು ಖಂಡಿಸಿ ಜಿಲ್ಲಾ ವರದಿಗಾರರ ಕೂಟ ಉಪ ವಿಭಾಗಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಿತು.

ಅಪಘಾತವಾದಾಗ ಗಾಯಾಳು ಮೃತಪಟ್ಟಿದ್ದಾರೆ ಎಂದು ಘೋಷಿಸುವ ಅಧಿಕಾರ 108 ವಾಹನದ ಸಿಬ್ಬಂದಿಗೆ ಯಾರು ನೀಡಿದ್ದಾರೆ. ವೈದ್ಯರು ಪರೀಕ್ಷಿಸಿದ ಬಳಿಕವಷ್ಟೇ ಖಚಿತಗೊಳ್ಳುವುದರಿಂದ 108 ವಾಹನದಲ್ಲಿ ಕರೆದುಕೊಂಡು ಬರಬೇಕಿತ್ತು. ಮಾನವೀಯತೆ ಮರೆತು ಬಿಟ್ಟು ಬಂದಿದ್ದಾರೆ. ಅದಾದ ಬಳಿಕ ಪೊಲೀಸರು ವಾಹನದ ವ್ಯವಸ್ಥೆ ಮಾಡಬೇಕಿತ್ತು. ಆದರೆ ಯಾವುದೋ ಆಪೆ ಆಟೊದಲ್ಲಿ ತೆಗೆದುಕೊಂಡು ಹೋಗಿದ್ದು ನಾಚಿಗೇಡಿನ ಸಂಗತಿ ಎಂದು ಪ್ರತಿಭಟನಕಾರರು ಆಕ್ರೋಶ ವ್ಯಕ್ತಪಡಿಸಿದರು.

ಕೂಟದ ಅಧ್ಯಕ್ಷ ಬಿ.ಎನ್‌. ಮಲ್ಲೇಶ್‌, ಖಜಾಂಚಿ ತಾರಾನಾಥ್‌ ಎ.ಎಲ್‌, ಜಿ.ಎಂ.ಆರ್‌. ಆರಾಧ್ಯ ಮಾತನಾಡಿದರು. ಪ್ರಧಾನ ಕಾರ್ಯದರ್ಶಿ ನಾಗರಾಜ ಬಡದಾಳ್‌ ಮನವಿ ಪತ್ರ ವಾಚಿಸಿದರು. 108 ತುರ್ತುವಾಹನದ ಜಿಲ್ಲಾ ವ್ಯವಸ್ಥಾಪಕ ಬೂದನಗೌಡ ಪ್ರತಿಭಟನೆಯ ಸ್ಥಳಕ್ಕೆ ಭೇಟಿ ನೀಡಿದರು. ಉಪ ವಿಭಾಗಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು. ವರದಿಗಾರರ ಕೂಟದ ಸದಸ್ಯರು ಉಪಸ್ಥಿತರಿದ್ದರು.

ನಿಯಮಾವಳಿ ತಿದ್ದುಪಡಿಗೆ ಯತ್ನ: ಎಸ್‌ಪಿ

‘ಸ್ಥಳಕ್ಕೆ ತೆರಳಿದ್ದ ಆಂಬುಲೆನ್ಸ್‌ ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಯ ಶವವನ್ನೂ ತಕ್ಷಣವೇ ಆಸ್ಪತ್ರೆಗೆ ಸಾಗಿಸಲು ಅವಕಾಶ ಕಲ್ಪಿಸುವಂತೆ ನಿಯಮಾವಳಿಯನ್ನು ಬದಲಾಯಿಸುವಂತೆ ಸರ್ಕಾರಕ್ಕೆ ಪತ್ರ ಬರೆಯಲಾಗುವುದು. ಈ ಬಗ್ಗೆ ಜಿಲ್ಲಾಧಿಕಾರಿ ಜೊತೆಗೆ ಈಗಾಗಲೇ ಚರ್ಚಿಸಿದ್ದೇನೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

‘ಅಪಘಾತ ನಡೆದ ಸ್ಥಳಕ್ಕೆ ತೆರಳಿದ್ದ 108 ಆಂಬುಲೆನ್ಸ್‌ ವಾಹನವು ತಕ್ಷಣವೇ ದೇಹವನ್ನು ಆಸ್ಪತ್ರೆಗೆ ತೆಗೆದುಕೊಂಡು ಬರುವ ಮೂಲಕ ಮಾನವೀಯತೆ ಮೆರೆಯಬೇಕಾಗಿತ್ತು. ಆದರೆ, ಆರೋಗ್ಯ ಇಲಾಖೆಯ ನಿಯಮಾವಳಿಯ ಕಾರಣಕ್ಕೆ ದೇಹವನ್ನು ರಸ್ತೆಯಲ್ಲೇ ಬಿಟ್ಟು ಬರಲಾಗಿದೆ. ಯಾರು ವಾಹನದಲ್ಲಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದೇವೆ’ ಎಂದು ಗುರುವಾರ ಮರಣೋತ್ತರ ಪರೀಕ್ಷೆಯ ಬಳಿಕ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.

‘ಅಪಘಾತ ನಡೆದ ಸ್ಥಳ ಊರಿನಿಂದ ದೂರದಲ್ಲಿದ್ದು, ನಿರ್ಜನ ಪ್ರದೇಶವಾಗಿತ್ತು. ರಾತ್ರಿ ಯಾವುದೇ ವಾಹನದವರು ದೇಹವನ್ನು ಆಸ್ಪತ್ರೆಯ ಶವಾಗಾರಕ್ಕೆ ಸಾಗಿಸಲು ಮುಂದೆ ಬರುತ್ತಿರಲಿಲ್ಲ. ಇನ್ನೂ ವಿಳಂಬ ಮಾಡುವುದು ಬೇಡ ಎಂಬ ಕಾರಣಕ್ಕೆ ಪೊಲೀಸರು ಆಪೆ ವಾಹನದಲ್ಲಿ ತೆಗೆದುಕೊಂಡು ಬಂದಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸುವ ಮೊದಲು ಸಾಗಾಟದ ಸಂದರ್ಭದಲ್ಲಿ ದೇಹದ ಮೇಲೆ ಹೊಸದಾಗಿ ಗಾಯ ಆಗಬಾರದು ಎಂಬ ಕಾರಣಕ್ಕೆ ವಾಹನದ ಮೇಲೆ ಹುಲ್ಲು ಹಾಕಿಕೊಂಡು ಬರಲಾಗಿದೆ’ ಎಂದು ಸ್ಪಷ್ಟನೆ ನೀಡಿದರು.

ಆರೋಪಿ ಪೊಲೀಸ್‌ ವಶಕ್ಕೆ

ಪತ್ರಕರ್ತ ಎಂ.ಸಿ. ಮಂಜುನಾಥ ಅವರ ಬೈಕ್‌ ಅಪಘಾತಕ್ಕೆ ಕಾರಣವಾದ ಟ್ರ್ಯಾಕ್ಟರ್‌ ಮತ್ತು ಅದರ ಚಾಲಕನನ್ನು ವಶಕ್ಕೆ ಪಡೆಯಲಾಗಿದೆ ಎಂದು ಗ್ರಾಮಾಂತರ ವೃತ್ತ ನಿರೀಕ್ಷಕ ಗುರುಬಸವರಾಜ್‌ ತಿಳಿಸಿದ್ದಾರೆ.

ಅಪಘಾತ ನಡೆದ ಸ್ಥಳಕ್ಕೆ ಎಸ್‌‍ಪಿ ಹನುಮಂತರಾಯ, ಡಿವೈಎಸ್‌ಪಿ ಮಂಜುನಾಥ ಗಂಗಲ್‌ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸಿಪಿಐ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. ಈ ತಂಡ ಆರೋಪಿಯನ್ನು ವಶಕ್ಕೆ ಪಡೆದಿದೆ. ತನಿಖೆ ನಡೆಯುತ್ತಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT