ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಖಂಡನೆ

Last Updated 5 ಮಾರ್ಚ್ 2021, 3:24 IST
ಅಕ್ಷರ ಗಾತ್ರ

ದಾವಣಗೆರೆ: ಅಗತ್ಯ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಸೋಷಲಿಸ್ಟ್ ಯೂನಿಟಿ ಸೆಂಟರ್ ಆಫ್ ಇಂಡಿಯಾ (ಎಸ್‌ಯುಸಿಐ)ನಿಂದ ನಗರದಜಿಲ್ಲಾಧಿಕಾರಿ ಕಚೇರಿ ಎದುರು ಗುರುವಾರ ಪ್ರತಿಭಟನೆ ನಡೆಸಲಾಯಿತು.

ಕೊರೊನಾದಿಂದ ದುಡಿಯುವ ವರ್ಗ ಬದುಕಿನ ಆಸರೆ ಕಳೆದುಕೊಂಡಿದೆ. ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ಮಧ್ಯಮ ವರ್ಗದವರ ಬದುಕೂ ಕಷ್ಟವಾಗಿದೆ.ಇಂತಹ ಸಂಕಷ್ಟದಲ್ಲಿ ಜನರ ಆಸರೆಗೆ ಸರ್ಕಾರಗಳು ಬರಬೇಕಿತ್ತು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಲೆ ಏರಿಕೆ ಮಾಡಿ ಜನರನ್ನು ಸಂಕಷ್ಟಕ್ಕೆ ಸಿಲುಕಿಸಿವೆ ಎಂದು ಪ್ರತಿಭಟನಕಾರರು ದೂರಿದರು.

ಅಗತ್ಯ ವಸ್ತುಗಳ ಬೆಲೆ ದುಬಾರಿಯಾಗಿದೆ. ಪೆಟ್ರೋಲ್‌, ಡೀಸೆಲ್‌ ಬೆಲೆ ಗಗನಕ್ಕೆ ಏರಿದೆ. ತಿಂಗಳಿಗೆಕೊಡುತ್ತಿದ್ದ 7 ಕೆ.ಜಿ. ಅಕ್ಕಿಯನ್ನು ಕಡಿತಗೊಳಿಸಿ 5 ಕೆ.ಜಿ.ಗೆ ಇಳಿಸಲಾಗಿದೆ.ಅಡುಗೆ ಅನಿಲದ ಮೇಲಿನ ಸಹಾಯಧನ ಹಿಂತೆಗೆದುಕೊಳ್ಳಲಾಗಿದೆ. ಇದರಿಂದ ಜನಸಾಮಾನ್ಯರು ಬದುಕುವುದೇ ದುಸ್ತರವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

‌ಅಗತ್ಯ ವಸ್ತುಗಳ ಬೆಲೆ ಏರಿಕೆ ತಡೆಗಟ್ಟಬೇಕು.ಅಡುಗೆ ಅನಿಲ ಸಬ್ಸಿಡಿ ರದ್ದತಿ ವಾಪಸ್ ಪಡೆಯಬೇಕು. ಪೆಟ್ರೋಲ್, ಡೀಸೆಲ್‍ ತೆರಿಗೆ ಕೈಬಿಟ್ಟು ಜನಸಾಮಾನ್ಯರ ಕೈಗೆಟುಕುವಂತೆ ಬೆಲೆ ನಿಗದಿಪಡಿಸಬೇಕು. ಪಡಿತರ ವಿತರಣೆಯಲ್ಲಿ ದವಸ-ಧಾನ್ಯಗಳ ಪ್ರಮಾಣವನ್ನು ಕಡಿತ ಮಾಡಬಾರದು. ಅಂಗವಿಕಲರ, ವಿಧವೆಯರ ಮಾಸಿಕ ಪಿಂಚಣಿಯನ್ನು ಕೂಡಲೇ ಬಿಡುಗಡೆ ಮಾಡಬೇಕು. ಆಶಾ, ಅಂಗನವಾಡಿ, ಬಿಸಿಯೂಟ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು.ಕೃಷಿ ಕಾಯ್ದೆ, ವಿದ್ಯುತ್ ಕಾಯ್ದೆ,ಕಾರ್ಮಿಕ ಕಾಯ್ದೆಗಳನ್ನು ಕೂಡಲೇ ವಾಪಸ್‌ ಪಡೆಯಬೇಕು ಎಂದು ಆಗ್ರಹಿಸಿದರು.

ಬಳಿಕ ಜಿಲ್ಲಾಧಿಕಾರಿ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಕಮ್ಯುನಿಸ್ಟ್ ರಾಜ್ಯ ಸಮಿತಿ ಸದಸ್ಯರಾದ ಸುನೀತ್ ಕುಮಾರ್, ಬಿ.ಆರ್. ಅಪರ್ಣಾ, ಜಿಲ್ಲಾ ಕಾರ್ಯದರ್ಶಿ ಮಂಜುನಾಥ್ ಕೈದಾಳೆ, ಮುಖಂಡರಾದ ಮಂಜುನಾಥ್ ಕುಕ್ಕವಾಡ, ತಿಪ್ಪೇಸ್ವಾಮಿ ಅಣಬೇರು, ಮಧು ತೊಗಲೇರಿ, ಪರಶುರಾಮ್, ಶಿವಾಜಿರಾವ್, ಕಾವ್ಯ, ಪುಷ್ಪ, ಮಮತಾ, ಸತೀಶ್, ಅಭಿಷೇಕ್, ಬೀರಲಿಂಗಪ್ಪ ನೀರ್ಥಡಿ, ಲೋಕೇಶ್ ನೀರ್ಥಡಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT