ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅನುಮಾನ ಮೂಡಿಸಿದ ಗೌಪ್ಯ ಸಭೆ

ಗೈರು ಹಾಜರಾದ ಪಿಡಿಒಗಳಿಗೆ ಜಿಲ್ಲಾ ಪಂಚಾಯಿತಿ ಸಿಇಒ ನೋಟಿಸ್
Last Updated 13 ಮೇ 2022, 2:50 IST
ಅಕ್ಷರ ಗಾತ್ರ

ಜಗಳೂರು: ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ನೇತೃತ್ವದಲ್ಲಿ ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ಮಾಧ್ಯಮದವರನ್ನು ಹೊರಗಿಟ್ಟು ತಾಲ್ಲೂಕು ಮಟ್ಟದ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದು, ಹಲವು ಸಂಶಯಗಳಿಗೆ ಕಾರಣವಾಗಿದೆ.

ಜಿಲ್ಲಾ ಪಂಚಾಯಿತಿ ಸಿಇಒ ಚನ್ನಪ್ಪ, ಉಪ ಕಾರ್ಯದರ್ಶಿ ಆನಂದ್, ಇಒ ಲಕ್ಷ್ಮೀಪತಿ ಹಾಗೂ ಎಲ್ಲಾ ಇಲಾಖೆ ಅಧಿಖಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗಖಾತ್ರಿ ಯೋಜನೆ, 15ನೇ ಹಣಕಾಸು ಯೋಜನೆ, ಕುಡಿಯುವ ನೀರು, ವಸತಿ ಯೋಜನೆ, ಜಲಜೀವನ್ ಮಿಷನ್ ಸೇರಿ ವಿವಿಧ ಇಲಾಖೆಗಳ ಪ್ರಗತಿಪರಿಶೀಲನೆಯನ್ನು ಸಭೆಯಲ್ಲಿ ನಡೆಸಲಾಗಿದೆ.

ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಉದ್ಯೋಗಖಾತ್ರಿ ಯೋಜನೆ ಹಾಗೂ 14ಮತ್ತು 15ನೇ ಹಣಕಾಸು ಯೋಜನೆಯಡಿ ಭಾರಿ ಅವ್ಯವಹಾರ ನಡೆದಿದ್ದು, ಕೋಟಿಗಟ್ಟಲೆ ಹಣ ದುರ್ಬಳಕೆ ಆರೋಪ ಸಾಬೀತಾದ ಕಾರಣ ಹಿರಮೇಮಲ್ಲನಹೊಳೆ ಹಾಗು ಕಲ್ಲೇದೇವಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳನ್ನು ಈಗಾಗಲೇ ಸೇವೆಯಿಂದ ವಜಾ ಮಾಡಲಾಗಿದೆ.

ಬಸವನಕೋಟೆ ಪಂಚಾಯಿತಿ ಸೇರಿ ಆರೇಳು ಪಂಚಾಯಿತಿಗಳ ಅಧ್ಯಕ್ಷರು ಮತ್ತು ಪಿಡಿಒ ಅವರ ವಿರುದ್ಧ ಭ್ರಷ್ಟಾಚಾರದ ಆರೋಪದಡಿ ಕ್ರಿಮಿನಲ್ ಮೊಕದ್ದಮೆ ದಾಖಲಾಗಿದ್ದು, ಇಂದಿನ ಸಿಇಒ ಅವರ ನೇತೃತ್ವದ ಸಭೆ ಮಹತ್ವ ಪಡೆದುಕೊಂಡಿತ್ತು.

ಸಾರ್ವಜನಿಕರಿಗೆ ಸಂಬಂಧಿಸಿದ ವಿಷಯಗಳ ಬಗ್ಗೆ ಸಭೆ ಆಯೋಜಿಸಿರುವ ಅಧಿಕಾರಿಗಳು ಮಾಧ್ಯಮದವರನ್ನು ಹೊರಗಿಟ್ಟು, ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಬಾಗಿಲು ಮುಚ್ಚಿಕೊಂಡು ಪ್ರಗತಿ ಪರಿಶೀಲನಾ ಸಭೆ ನಡೆಸಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

ತಾಲ್ಲೂಕಿನ 22 ಗ್ರಾಮ ಪಂಚಾಯಿತಿಗಳ ಪೈಕಿ ಕೇವಲ ಐದು ಪಂಚಾಯಿತಿಗಳ ಪಿಡಿಒಗಳು ಮಾತ್ರ ಭಾಗವಹಿಸಿದ್ದು, ಉಳಿದ ಬಹುತೇಕ ಪಿಡಿಒಗಳು ಸಭೆಗೆ ಗೈರು ಹಾಜರಾಗಿದ್ದರು ಎನ್ನಲಾಗಿದೆ. ವಿವಿಧ ಯೋಜನೆಗಳಲ್ಲಿ ಅವ್ಯವಹಾರ ಎಸಗಿರುವ ಪಿಡಿಒ ಹಾಗು ಕಾರ್ಯದರ್ಶಿಗಳ ವಿರುದ್ಧ ದುರ್ಬಳಕೆಯಾದ ಹಣದ ಮೊತ್ತವನ್ನು ಸಂಬಂಧಪಟ್ಟ ಅಧಿಕಾರಿಗಳಿಂದ ಮರು ವಸೂಲಿ ಮಾಡುವಂತೆ ಜಿಲ್ಲಾ ಪಂಚಾಯಿತಿಯ ಸಾಮಾಜಿಕ ಲೆಕ್ಕ ತಪಾಸಣಾ ವರದಿಯ ಶಿಫಾರಸನ್ನು ಇದುವರೆಗೂ ಜಾರಿಗೊಳಿಸದಿರುವ ಬಗ್ಗೆ ಸಿಇಒ ಅವರು ಪ್ರಸ್ತಾಪಿಸಿದ್ದಾರೆ. ಪಿಡಿಒಗಳ ಗೈರು ಹಾಜರಿಯಿಂದ ಗರಂ ಆದ ಚನ್ನಪ್ಪ ಗೈರಾದ ಎಲ್ಲಾ ಅಧಿಕಾರಿಗಳಿಗೆ ನೋಟಿಸ್ ಜಾರಿ ಮಾಡಲು ಸೂಚನೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಗತಿ ಪರಿಶೀಲನಾ ಸಭೆಯನ್ನು ಗೌಪ್ಯವಾಗಿ ನಡೆಸಿರುವ ಔಚಿತ್ಯದ ಬಗ್ಗೆ ಸಿಇಒ ಚನ್ನಪ್ಪ ಅವರನ್ನು “ಪ್ರಜಾವಾಣಿ” ಪ್ರಶ್ನಿಸಿದಾಗ, ‘ಸಭೆಗೆ ಮಾಧ್ಯಮ ದವರನ್ನು ಕರೆಯಬೇಡಿ ಎಂದು ನಾನು ಹೇಳಿಲ್ಲ. ಈ ಹಿಂದಿನ ಸಭೆಗಳಿಗೆ ಮಾಧ್ಯಮದವರನ್ನು ಕರೆಯುವ ಸಂಪ್ರದಾಯ ಇಲ್ಲಿ ಇದ್ದಲ್ಲಿ ಸಭೆಗೂ ಕರೆಯಬೇಕಿತ್ತು. ನಾನು ಈ ಹಿಂದೆ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ ಸ್ಥಳಗಳಲ್ಲಿ ಪ್ರಗತಿಪರಿಶೀಲನಾ ಸಭೆಗಳಿಗೆ ಪತ್ರಕರ್ತರನ್ನು ಕರೆಯುತ್ತಿರಲಿಲ್ಲ. ಇಲ್ಲಿ ಹೇಗಿದೆಯೋ ನನಗೆ ಗೊತ್ತಿಲ್ಲ’ ಎಂದು ಸ್ಪಷ್ಟಪಡಿಸಿದರು.

‘ಸಭೆಯಲ್ಲಿ ಕಳೆದ ವರ್ಷದ ಪ್ರಗತಿ ಪರಿಶೀಲನೆ ಮತ್ತು ಮುಂದಿನ ವರ್ಷದ ಉದ್ದೇಶಿತ ಯೋಜನೆಗಳ ಬಗ್ಗೆ ಚರ್ಚಿಸಲಾಯಿತು. ಸಭೆಗೆ ಗೈರು ಹಾಜರಾಗಿದ್ದ 3 ಪಿಡಿಒಗಳಿಗೆ ನೋಟಿಸ್ ನೀಡಲಾಗಿದೆ ಎಂದರು.

ತಾಲ್ಲೂಕಿನಲ್ಲಿ ಕಡಿಮೆ ಪಿಡಿಒಗಳು ಇದ್ದಾರೆ. ಆ ಪೈಕಿ ಐದು ಮಂದಿ ಪಿಡಿಒಗಳು ತಿಂಗಳುಗಟ್ಟಲೆ ರಜೆ ಮೇಲೆ ತೆರಳಿದ್ದಾರೆ. ಇದರಿಂದ ಗ್ರಾಮೀಣ ಭಾಗದಲ್ಲಿ ಆಡಳಿತ ನಿರ್ವಹಣೆಗೆ ಸಮಸ್ಯೆಯಾಗುತ್ತಿದೆ ಎಂಬ ಸಾರ್ವಜನಿಕರ ದೂರಿನ ಬಗ್ಗೆ ಪ್ರಶ್ನಿಸಿದಾಗ, ಪ್ರತಿಕ್ರಿಯಿಸಿದ, ‘ಸಿಇಒ ದೀರ್ಘ ಕಾಲದವರೆಗೆ ರಜೆ ಹಾಕಿರುವ ಪಿಡಿಒಗಳನ್ನು ನಾಳೆ ನನ್ನ ಕಚೇರಿಗೆ ಕರೆಸಿ ಚರ್ಚಿಸುತ್ತಿದ್ದೇನೆ. ಸುಧೀರ್ಘ ರಜೆ ಹಾಕಲು ಏನು ಕಾರಣ? ಅವರಿಗೆ ಬೆದರಿಕೆಗಳೇನಾದರೂ ಇದೆಯೋ ಎಂಬ ಬಗ್ಗೆ ಪರಿಶೀಲಿಸಲಾಗುವುದು ಎಂದು ನಾಳೆಯೇ ಅವರನ್ನೆಲ್ಲಾ ಕರೆಸಿ ವಿಚಾರಣೆ ಮಾಡುತ್ತೇನೆ. ಒಂದು ವೇಳೆ ಅವರಿಗೆ ಬೆದರಿಕೆ ಇದ್ದಲ್ಲಿ ಅವರ ಪರವಾಗಿ ನಿಲ್ಲಬೇಕಿದೆ’ ಎಂದು ಸಿಇಒ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT