ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರಿಗೆ ಹಣ ಪಾವತಿಸಿದವರ ಆಸ್ತಿ ಜಫ್ತಿ

ಕೃಷಿ ಉತ್ಪನ್ನಗಳ ಧಾರಣೆ ಸ್ಥಿರತೆ ಕುರಿತ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
Last Updated 27 ಡಿಸೆಂಬರ್ 2019, 19:45 IST
ಅಕ್ಷರ ಗಾತ್ರ

ದಾವಣಗೆರೆ: ಕೆಲವು ರೈಸ್‌ಮಿಲ್ ಮಾಲೀಕರು ರೈತರಿಂದ ಭತ್ತ ಖರೀದಿಸಿ ಹಣ ಪಾವತಿಸಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದ್ದು, ಒಂದು ವೇಳೆ ಇಂತಹ ಪ್ರಕರಣಗಳು ಕಂಡುಬಂದರೆ ಅವರ ಆಸ್ತಿ ಜಫ್ತಿ ಮಾಡಿ ರೈತರಿಗೆ ಹಣ ಕೊಡಿಸಲು ಹಿಂದು ಮುಂದು ನೋಡುವುದಿಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಎಚ್ಚರಿಸಿದರು.

ಜಿಲ್ಲಾಡಳಿತ ಭವನದಲ್ಲಿ ಶುಕ್ರವಾರ ನಡೆದ ಕೃಷಿ ಉತ್ಪನ್ನಗಳ ಧಾರಣೆ ಸ್ಥಿರತೆ ಕುರಿತ ಸಭೆಯಲ್ಲಿ ರೈತರು, ವರ್ತಕರು ಹಾಗೂ ಕೃಷಿ ಮಾರುಕಟ್ಟೆ ಅಧಿಕಾರಿಗಳನ್ನುದ್ದೇಶಿಸಿ ಅವರು ಮಾತನಾಡಿದರು.

ಈ ಹಿಂದಿನ ವರ್ಷಗಳಲ್ಲಿ ಹಲವಾರು ರೈಸ್‌ಮಿಲ್ ಮಾಲೀಕರು ಭತ್ತ ಖರೀದಿಸಿ ರೈತರಿಗೆ ಸುಮಾರು ₹ 4-5 ಕೋಟಿಗಳಷ್ಟು ಮೋಸ ಮಾಡಿದ್ದಾರೆ ಎಂದು ತಿಳಿದು ಬಂದಿದ್ದು, ಯಾವುದೇ ಕಾರಣಕ್ಕೂ ರೈತರಿಗೆ ಅನ್ಯಾಯವಾಗಬಾರದು. ಅಂತಹ ಪ್ರಕರಣಗಳು ಕಂಡುಬಂದರೆ ಕಠಿಣ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.

ಕೃಷಿ ಉತ್ಪನ್ನಗಳ ಧಾರಣೆಗಳು ಯಾವಾಗಲು ಸ್ಥಿರವಾಗಿರಲಿ. ಇದರಿಂದ ಬೆಳೆ ಬೆಳೆದ ರೈತರು ಹಾಗೂ ವರ್ತಕರಿಗೂ ಅನುಕೂಲವಾಗಲಿದೆ. ಯಾವುದೇ ಕಾರಣಕ್ಕೂ ಬೆಂಬಲ ಬೆಲೆಗಿಂತ ಕಡಿಮೆ ಬೆಲೆಗೆ ವರ್ತಕರು ಧಾನ್ಯಗಳನ್ನು ಕೊಳ್ಳಬಾರದು ಎಂದು ಜಿಲ್ಲಾಧಿಕಾರಿ ಹೇಳಿದರು.

‘ಯಾವುದೇ ಕೃಷಿ ಉತ್ಪನ್ನ ಕೊಳ್ಳಲು ರೈತರಿಗೆ ನೀಡಿರುವ ‘ಫ್ರೂಟ್ಸ್’ ತಂತ್ರಾಂಶದಲ್ಲಿ ನೀಡುವ ದಾಖಲಾತಿ ಇದ್ದರೆ ಸಾಕು. ಅದನ್ನು ಕೃಷಿ ಇಲಾಖೆ ಆ ಹಂಗಾಮಿಗೆ ದೃಢೀಕರಣ ನೀಡಿರುತ್ತದೆ. ಮತ್ತೆ ಬೇರೆ ದಾಖಲೆಗಳ ಅಗತ್ಯವಿರುವುದಿಲ್ಲ. ರೈತರೂ ಯೋಗ್ಯ ಉತ್ಪನ್ನಗಳನ್ನು ವರ್ತಕರಿಗೆ ನೀಡಬೇಕು’ ಎಂದು ಹೇಳಿದರು.

ವರ್ತಕರ ಸಂಘದ ಪ್ರತಿನಿಧಿ ಮಾತನಾಡಿ ‘ಸುಗ್ಗಿ ಕಾಲದಲ್ಲಿ ಧಾನ್ಯಗಳಲ್ಲಿ ಶೇ 25ರಿಂದ 26ರಷ್ಟು ತೇವಾಂಶವಿರುತ್ತದೆ. ಹಾಗಾಗಿ ಅಂತಹ ದಿನಗಳಲ್ಲಿ ಮಾರುಕಟ್ಟೆ ಬೆಲೆಗೆ ಕೊಂಡರೆ ಅದು ಒಣಗುವಷ್ಟರಲ್ಲಿ ಮಾಲೀಕರಿಗೆ ಹಾನಿಯಾಗುತ್ತದೆ. ಹಾಗಾಗಿ ಕಡೆಯ ಪಕ್ಷ ಶೇ 15 ರಿಂದ 16ರಷ್ಟು ತೇವಾಂಶ ಇದ್ದರೆ ಪರವಾಗಿಲ್ಲ ಎಂದರು. ಅದಕ್ಕೆ ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ ‘ರೈತರು ಕೂಡ ತಮ್ಮ ಉತ್ಪನನಗಳನ್ನು ಚೆನ್ನಾಗಿ ಒಣಗಿಸಿ ನೀಡಬೇಕು. ರಾಗಿ ಕನಿಷ್ಠ 12ರಷ್ಟು ತೇವಾಂಶಕ್ಕಿಂತ ಹೆಚ್ಚಿರಬಾರದು’ ಎಂದರು.

ರೈತ ಮುಖಂಡ ಬಲ್ಲೂರು ರವಿಕುಮಾರ್ ಮಾತನಾಡಿ, ‘ಈಗಾಗಲೇ ಎಲ್ಲರೂ ಕೃಷಿ ಉತ್ಪನ್ನಗಳನ್ನು ಒಣಗಿಸಲು ಡ್ರೈಯರ್‍ಗಳನ್ನು ಅಳವಡಿಸಿಕೊಂಡಿದ್ದಾರೆ. ಅವುಗಳ ಮೂಲಕ ಧಾನ್ಯಗಳನ್ನು ಒಣಗಿಸುತ್ತಾರೆ. ಹಾಗಾಗಿ ಅಷ್ಟೊಂದು ತೇವಾಂಶವಿರುವುದಿಲ್ಲ. ಕೃಷಿ ಬೆಲೆ ಆಯೋಗವು ಭತ್ತ ಬೆಳೆದ ರೈತರಿಗೆ ಕ್ವಿಂಟಲ್‌ ₹2,250 ಖರ್ಚು ಬರಲಿದೆ ಎಂದು ತಿಳಿಸಿದೆ. ಆದರೆ ಮಾರುಕಟ್ಟೆಯಲ್ಲಿ ಆ ಸಮಯದಲ್ಲಿ ₹1800 ರಿಂದ ₹1900 ಬೆಲೆ ಇರುತ್ತದೆ. ಹಾಗಿದ್ದಾಗ ಈ ಬೆಲೆಗಿಂತ ಕಡಿಮೆ ಬೆಲೆಗೆ ಮಾರಿದರೆ ರೈತರಿಗೆ ನಷ್ಟವಾಗುತ್ತದೆ’ ಎಂದರು.

ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ನಿರ್ದೇಶಕ ಶರಣಪ್ಪ ಮುದುಗಲ್, ಎಪಿಎಂಸಿ ಸಹಾಯಕ ನಿರ್ದೇಶಕ ಸೋಮಶೇಖರ್, ಕಾರ್ಯದರ್ಶಿ ಪ್ರಭು, ಅಕ್ಕಿ ಗಿರಣಿ ಮಾಲೀಕರ ಸಂಘದ ಕಾರ್ಯದರ್ಶಿ ಕೋಗುಂಡೆ ಬಕ್ಕೇಶ್‌, ಅಕ್ಕಿ ಗಿರಣಿ ಮಾಲೀಕ ಎ.ಚಂದ್ರಪ್ಪ, ಅನಿಲ್‌ಕುಮಾರ್‌, ರೈತ ಮುಖಂಡರಾದ ಕೆಂಗೋ ಹನುಮಂತಪ್ಪ, ಬಸವರಾಜಪ್ಪ, ಪಾಮೇನಹಳ್ಳಿ ಲಿಂಗರಾಜು, ಮುದಹದಡಿ ದಿಳ್ಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT