ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಶದ ಎಲ್ಲರಿಗೂ ಉಚಿತ ಲಸಿಕೆ ಕಾಂಗ್ರೆಸ್ ಆಶಯ: ಡಿ.ಕೆ. ಶಿವಕುಮಾರ್

ಕೋವಿಡ್‌ ಲಸಿಕಾ ಅಭಿಯಾನಕ್ಕೆ ಚಾಲನೆ ನೀಡಿದ ಕೆಪಿಸಿಸಿ ಅಧ್ಯಕ್ಷ
Last Updated 5 ಜೂನ್ 2021, 6:02 IST
ಅಕ್ಷರ ಗಾತ್ರ

ದಾವಣಗೆರೆ: ಇಡೀ ದೇಶದ ಜನರಿಗೆ ಕೋವಿಡ್ ಲಸಿಕೆ ಉಚಿತವಾಗಿ ದೊರೆಯಬೇಕು ಎಂಬುದು ಕಾಂಗ್ರೆಸ್ ಪಕ್ಷದ ಚಿಂತನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

ಶಾಸಕ ಶಾಮನೂರು ಶಿವಶಂಕರಪ್ಪ ಹಾಗೂ ಮಾಜಿ ಸಚಿವ ಎಸ್.ಎಸ್‌. ಮಲ್ಲಿಕಾರ್ಜುನ ಅವರು ಆಯೋಜಿಸಿರುವ ಉಚಿತ ಲಸಿಕಾ ಅಭಿಯಾನಕ್ಕೆ ಇಲ್ಲಿನ ದುರ್ಗಾಂಬಿಕಾ ದೇವಾಲಯದ ಆವರಣದಲ್ಲಿ ಚಾಲನೆ ನೀಡಿ, ‘ಇಲ್ಲಿ ಎರಡನೇ ಡೋಸ್ ಲಸಿಕೆ ಭಾಗ್ಯ ಸಿಕ್ಕಿದ್ದು ನನ್ನ ಭಾಗ್ಯ. ಬರೀ ನಮಗೆ ಲಸಿಕೆ ಸಿಕ್ಕಿದರೆ ಸಾಲದು. ಇಡೀ ದೇಶದ ಬಡವರಿಗೆ ಉಚಿತ ಲಸಿಕೆ ನೀಡಬೇಕು ಎಂಬುದು ಕಾಂಗ್ರೆಸ್ ಪಕ್ಷದ ಸಂಕಲ್ಪ ಹಾಗೂ ಒತ್ತಾಯ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಹೇಳಿದ ಹಾಗೆ ದೀಪ ಹಚ್ಚಿದೆವು, ಚಪ್ಪಾಳೆ ತಟ್ಟಿದೆವು, ಗಂಟೆ ಬಾರಿಸಿದೆವು. 21 ದಿನಗಳಲ್ಲಿ ಲಸಿಕೆ ಹಾಕಿಸುತ್ತೇವೆ ಎಂದು ಹೇಳಿದರು. ಆದರೆ ಅದು ಆಗಲಿಲ್ಲ’ ಎಂದು ಟೀಕಿಸಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು 18ರಿಂದ 45 ವರ್ಷದೊಳಗಿನವರಿಗೆ ಲಸಿಕೆ ಕಾರ್ಯಕ್ರಮ ಉದ್ಘಾಟಿಸಿದರು. ಆಗ ನಾನು ಎನ್‌ಎಸ್‌ಯುಐ, ಯುವ ಕಾಂಗ್ರೆಸ್, ಮಹಿಳಾ ಘಟಕದವರಿಗೆ ಹೇಳಿ ಆನ್‌ಲೈನ್ ನೋಂದಣಿ ಮಾಡಿಸಿ, ಎಲ್ಲ ಜನರಿಗೂ ಲಸಿಕೆ ಹಾಕಿಸಿ ಎಂದು ಸೂಚನೆ ನೀಡಿದೆ. ನಮ್ಮ ಕಾರ್ಯಕರ್ತರು ಈ ಕೆಲಸ ಮಾಡಲು ಮುಂದಾದರು. ಆದರೆ ಸರ್ಕಾರದವರು ಆನ್‌ಲೈನ್ ನೋಂದಣಿಯನ್ನೇ ನಿಲ್ಲಿಸಿದ್ದಾರೆ’ ಎಂದು ಟೀಕಿಸಿದರು.

‘ಶಾಸಕರ ಅನುದಾನದಲ್ಲಿ ₹ 50 ಲಕ್ಷ ಖರ್ಚು ಮಾಡಬಹುದು ಎಂದು ಹೇಳಿದರು. ನಾವು ಒಟ್ಟು 95 ಜನ ಶಾಸಕರು ಇದ್ದು, ₹ 100 ಕೋಟಿ ಕೊಡುತ್ತೇವೆ ಎಂದು ಅನುಮತಿ ಕೇಳಿದೆವು. ಎಷ್ಟು ಕೇಳಿಕೊಂಡರೂ, ಭಿಕ್ಷೆ ಬೇಡಿದರೂ ಅವಕಾಶ ಕೊಡಲಿಲ್ಲ. ಶಿವಶಂಕರಪ್ಪ ಕುಟುಂಬ ತೆಗೆದುಕೊಂಡ ನಿರ್ಧಾರ, ಇಡೀ ರಾಷ್ಟ್ರಕ್ಕೆ ಒಂದು ಸಂದೇಶ. ಎಲ್ಲರಿಗೂ ಈ ದೊಡ್ಡ ಹೃದಯ ಶ್ರೀಮಂತಿಕೆ ಬರುವುದಿಲ್ಲ. ಜಾತಿ, ಧರ್ಮ, ಪಕ್ಷ ಇಲ್ಲದಂತೆ, ಜೀವ ಉಳಿಸುವುದು ಧರ್ಮ ಎಂದು ಹೇಳಿದ್ದಾರೆ. ಆ ಕೆಲಸವನ್ನು ಮಾಡುತ್ತಿದ್ದಾರೆ’ ಎಂದು ಹೇಳಿದರು.

‘ನಮ್ಮ ಪಕ್ಷದ ನಾಯಕರಲ್ಲಿ ವೈದ್ಯಕೀಯ ಕಾಲೇಜು ಹೊಂದಿರುವವರು ಜನಸೇವೆ ಮಾಡುವಂತೆ ಎಐಸಿಸಿ ವರಿಷ್ಠರಾದ ಸೋನಿಯಾ ಗಾಂಧಿ, ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ಮತ್ತು ಗುಲಾಂ ನಬಿ ಆಜಾದ್ ಅವರು ಸೂಚನೆ ನೀಡಿದ್ದರು. ಅದರಂತೆ ಧನ್ಯವಾದ ಹೇಳಲು ಬಂದಿದ್ದೇನೆ. ಇದು ಪಕ್ಷದ ಕೆಲಸವಲ್ಲ’ ಎಂದರು.

‘ಬಿಜೆಪಿಯವರಿಗೆ ನಿರ್ವಹಣೆ ಮಾಡಲು ಬರುವುದಿಲ್ಲ. ಲಸಿಕೆ ನಿರ್ವಹಣೆಯನ್ನು ಇಬ್ಬರಿಗೆ ಕೊಟ್ಟಿದ್ದರು. ನಾವು ಹೇಳಿದ ಮೇಲೆ 16 ಜನಕ್ಕೆ ಕೊಟ್ಟಿದ್ದಾರೆ. ಗ್ಲೋಬಲ್ ಟೆಂಡರ್ ಕರೆಯುವುದಾಗಿ ಹೇಳಿದರು. ಇದನ್ನು ಕರೆದು ಲಂಚ ಹೊಡೆಯುವುದು ಬೇಡ, ಬಿಜೆಪಿಯವರು ಅವರ ಜೇಬಿನಿಂದ ತಂದು ಮಾಡುತ್ತಿಲ್ಲ’ ಎಂದು ಟೀಕಿಸಿದರು.

ಕೆ‍ಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹಮದ್, ‘ಸರ್ಕಾರ ಮಾಡುವ ಕೆಲಸವನ್ನು ನಮ್ಮ ಪಕ್ಷದ ಮುಖಂಡರು ಮಾಡಿದ್ದಾರೆ. ಲಸಿಕೆ ನೀಡುವಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿಫಲವಾಗಿದ್ದು, ಈ ವಿಚಾರದಲ್ಲಿ ಸರ್ಕಾರದಲ್ಲಿ ಸಮನ್ವಯ ಇಲ್ಲದಾಗಿದೆ’ ಎಂದು ಹೇಳಿದರು.

ಶಾಸಕರಾದ ಎಸ್‌.ರಾಮಪ್ಪ, ಪಿ.ಟಿ.‍ ಪರಮೇಶ್ವರನಾಯ್ಕ, ಕೆ.ಸಿ. ಕೊಂಡಯ್ಯ, ಯು.ಬಿ. ವೆಂಕಟೇಶ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಸ್‌. ಮಂಜಪ್ಪ, ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಕೆಪಿಸಿಸಿ ವಕ್ತಾರ ಡಿ. ಬಸವರಾಜ್, ಪಾಲಿಕೆ ವಿರೋಧಪಕ್ಷದ ನಾಯಕ ಎ. ನಾಗರಾಜ್, ಕರ್ನಾಟಕ ಕಿಸಾನ್ ಕಾಂಗ್ರೆಸ್ ಅಧ್ಯಕ್ಷ ಸಚಿನ್ ಮೀಗಾ, ಜಿಲ್ಲಾ ಘಟಕದ ಅಧ್ಯಕ್ಷ ಶಿವಗಂಗಾ ಬಸವರಾಜ್
ಇದ್ದರು.

‘ನಮ್ಮ ಬ್ಯಾಂಕ್ ಅಕೌಂಟ್ ತೋರಿಸಬೇಕಿತ್ತಾ’?
‘ಕೊರೊನಾಗೆ ಲಸಿಕೆಗೆ ₹ 9 ಕೋಟಿ ಡಿಪಾಸಿಟ್ ಮಾಡಿ ಎಂದು ಹೇಳಿದ್ದರು. ಅವರಿಗೆ ನಮ್ಮ ಬ್ಯಾಂಕ್ ಅಕೌಂಟ್ ತೋರಿಸಬೇಕಿತ್ತಾ’ ಎಂದು ಶಾಸಕ ಶಾಮನೂರು ಶಿವಶಂಕರಪ್ಪ ಟೀಕಿಸಿದರು.

‘ನಗರದ ಜನರಿಗೆ ಬೇಕಾದ ಲಸಿಕೆ ತರಿಸಿ ಅರ್ಧ ಹಣ ಕೊಡುತ್ತೇನೆ ಎಂದು ಹೇಳಿದ್ದೆ. ಆದರೆ ಸಹಕರಿಸಲಿಲ್ಲ. ಸರ್ಕಾರದ ನೆರವಿಲ್ಲದೇ ನಮ್ಮ ಸ್ವಂತ ಖರ್ಚಿನಲ್ಲಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ. ₹ 50 ಸಾವಿರ ಆಕ್ಸಿಜನ್ ಕೊಡುತ್ತೇವೆ ಎಂದು ಫೋಟೊ ತೆಗೆಸಿ ಪ್ರಚಾರ ತಗೋತಾರೆ. ನಾವು ಮಾಡಿದ ರೀತಿ ಕೆಲಸ ಮಾಡಲಿ ನೋಡೋಣ’ ಎಂದು ಬಿಜೆಪಿಯವರಿಗೆ ಸವಾಲು ಹಾಕಿದರು.

‘ಮುಖಂಡರಾದ ಮಲ್ಲಿಕಾರ್ಜುನ ಖರ್ಗೆ ಅವರು ಪೂಣೆಯ ಕಂಪನಿಯ ಜೊತೆ ಮಾತನಾಡಿ ಲಸಿಕೆ ಕೊಡಿಸಿದ್ದಾರೆ. 50 ಸಾವಿರ ಡೋಸ್ ಲಸಿಕೆಗೆ ಹಣ ಕಳುಹಿಸಿದ್ದೇವೆ. ಮುಂದಿನ ದಿನಗಳಲ್ಲಿ ಬರಲಿದೆ’ ಎಂದರು.

‘5 ಕೇಂದ್ರಗಳಲ್ಲಿ ಲಸಿಕೆ’
‘ನಮ್ಮ ತಂದೆ ಶಾಮನೂರು ಶಿವಶಂಕರಪ್ಪ ದಕ್ಷಿಣ ಕ್ಷೇತ್ರಕ್ಕೆ ಕೊರೊನಾ ನಿರೋಧಕ ಲಸಿಕೆ ಹಾಕುವುದಾಗಿ ಹೇಳಿದ್ದರು. ಅದರಂತೆ ಅವರ ಮಾತನ್ನು ನೆರವೇರಿಸಲಾಗಿದೆ’ ಎಂದು ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಹೇಳಿದರು.

‘ಜಿಲ್ಲೆಯಲ್ಲಿ 18 ಲಕ್ಷ ಜನ ಇದ್ದು, 3 ಲಕ್ಷ ಜನರಿಗೆ ಮಾತ್ರ ಲಸಿಕೆ ಹಾಕಿದ್ದಾರೆ. ನಗರದಲ್ಲಿ 6 ಲಕ್ಷ ಜನಸಂಖ್ಯೆಗೆ 1ಲಕ್ಷ ಜನರಿಗೆ ಮಾತ್ರ ಲಸಿಕೆ ನೀಡಲಾಗಿದೆ. ಪ್ರತಿ ವಿಧಾನಸಭೆ ಕ್ಷೇತ್ರಕ್ಕೆ 2 ಲಕ್ಷ ಡೋಸ್ ಅಗತ್ಯವಿದೆ. ಸರ್ಕಾರದ ವಿಳಂಬ ನೀತಿಯಿಂದ ಬೇಸತ್ತು ಸ್ವಂತ ಖರ್ಚಿನಲ್ಲಿ ಲಸಿಕೆ ಕೊಡುವ ಚಿಂತನೆ ಬಂದಿದೆ’ ಎಂದರು.

‘ನಾಳೆಯಿಂದ 5 ವಿವಿಧ ಕಡೆಗಳಲ್ಲಿ ಲಸಿಕೆ ಕೇಂದ್ರ ಆರಂಭಿಸಿದ್ದು, ಇದು ರಾಜ್ಯದಲ್ಲೇ ಮಾದರಿ ಕಾರ್ಯಕ್ರಮವಾಗಿದೆ. ಕಾಂಗ್ರೆಸ್‌ನವರಿಗೆ ಅಲ್ಲದೇ ಎಲ್ಲ ಪಕ್ಷದವರಿಗೂ ಲಸಿಕೆ ಸಿಗುವಂತೆ ಮಾಡಲಿದ್ದು, ಪಕ್ಷ ಭೇದ ಮರೆತು ಎಲ್ಲರಿಗೂ ಲಸಿಕೆ ದೊರೆಯಲಿದೆ. ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT