ಮೋದಿ ಭಾವಚಿತ್ರಕ್ಕೆ ಎಳ್ಳುನೀರು

7
ಪೆಟ್ರೋಲ್‌, ಡೀಸೆಲ್‌ ಬೆಲೆ ಏರಿಕೆಗೆ ಕಾಂಗ್ರೆಸ್‌ ಕಾರ್ಯಕರ್ತರ ಆಕ್ರೋಶ

ಮೋದಿ ಭಾವಚಿತ್ರಕ್ಕೆ ಎಳ್ಳುನೀರು

Published:
Updated:
Deccan Herald

ದಾವಣಗೆರೆ: ಪೆಟ್ರೋಲ್, ಡೀಸೆಲ್‌, ಅಡುಗೆ ಅನಿಲ ಸಿಲಿಂಡರ್‌, ವಿಮಾ ಕಂತಿನ ದರ ಏರಿಕೆ ಹಾಗೂ ಯುವಕರಿಗೆ ಉದ್ಯೋಗ ಕಲ್ಪಿಸುವಲ್ಲಿ ಕೇಂದ್ರ ಸರ್ಕಾರ ವಿಫಲಗೊಂಡಿದೆ ಎಂದು ಆರೋಪಿಸಿ ಪ್ರಧಾನಿ ನರೇಂದ್ರ ಮೋದಿ ಭಾವಚಿತ್ರಕ್ಕೆ ಎಳ್ಳು-ನೀರು ಬಿಡುವ ಮೂಲಕ ನಗರದಲ್ಲಿ ಜಿಲ್ಲಾ ಕಾಂಗ್ರೆಸ್‍ ಮಂಗಳವಾರ ವಿನೂತನವಾಗಿ ಪ್ರತಿಭಟಿಸಿತು.

ಮಹಾನಗರ ಪಾಲಿಕೆಯ ಮಹಾತ್ಮ ಗಾಂಧಿ ಪ್ರತಿಮೆ ಬಳಿ ಕಾಂಗ್ರೆಸ್‌ ಕಾರ್ಯಕರ್ತರು, ಕೇಂದ್ರ ಸರ್ಕಾರ ಜನವಿರೋಧಿ ನೀತಿ ಅನುಸರಿಸುತ್ತಿದ್ದು, ಪ್ರಧಾನಿ ಶ್ರೀಮಂತ ಉದ್ಯಮಿಗಳ ಪರವಾಗಿ ಯೋಜನೆಗಳನ್ನು ಜಾರಿಗೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದಿನೇಶ್ ಕೆ.ಶೆಟ್ಟಿ, ಮೇಯರ್‌ ಶೋಭಾ ಪಲ್ಲಾಗಟ್ಟೆ ಮತ್ತು ಉಪ ಮೇಯರ್‌ ಕೆ. ಚಮನ್ ಸಾಬ್ ಮಾತನಾಡಿ, ‘ಕಳೆದ ಲೋಕಸಭಾ ಚುನಾವಣೆ ವೇಳೆ ಬಿಜೆಪಿ ವರ್ಷಕ್ಕೆ ಎರಡು ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿತ್ತು. ವಿದೇಶದಿಂದ ಕಪ್ಪು ಹಣ ತಂದು ಪ್ರತಿ ಭಾರತೀಯನ ಬ್ಯಾಂಕಿನ ಖಾತೆಗೆ ₹ 15 ಲಕ್ಷ ಹಾಕುವುದಾಗಿ ಭರವಸೆ ನೀಡಿತ್ತು. ಆದರೆ, ಈ ಭರವಸೆಗಳು ಈಡೇರಿಸದೇ ಮೋದಿ ಸರ್ಕಾರ ಜನರಿಗೆ ಎಳ್ಳು ನೀರು ಬಿಟ್ಟಿದೆ. ಹೀಗಾಗಿ ಕಾಂಗ್ರೆಸ್‍ನಿಂದ ಪಿತೃಪಕ್ಷದ ದಿನದಂದು ಪ್ರಧಾನಿ ನರೇಂದ್ರ ಮೋದಿ  ಅವರ ಭಾವಚಿತ್ರಕ್ಕೆ ಎಳ್ಳು ನೀರು ಬಿಡುವ ಮೂಲಕ ಪ್ರತಿಭಟಿಸಲಾಗುತ್ತಿದೆ’ ಎಂದು ಹೇಳಿದರು.

ಬಿಜೆಪಿಗೆ ಜನಪರವಾದ ಸಿದ್ಧಾಂತಗಳಿಲ್ಲ. ಧರ್ಮ-ಜಾತಿಗಳ ಮಧ್ಯೆ ದ್ವೇಷ ಬಿತ್ತಿ ದೇಶದಲ್ಲಿ ಅಧಿಕಾರಕ್ಕೆ ಬಂದಿದೆ. ಮೋದಿ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬರುವ ಮುನ್ನ ನಾಲ್ಕು ಆರೋಗ್ಯ ಯೋಜನೆಗಳಿದ್ದವು. ಆದರೆ, ಈ ಸರ್ಕಾರ ಅಧಿಕಾರಕ್ಕೆ ಬಂದಾದ ಮೇಲೆ ಎಲ್ಲಾ ಆರೋಗ್ಯ ಯೋಜನೆಗಳನ್ನು ರದ್ದು ಮಾಡಿದೆ ಎಂದು ಆರೋಪಿಸಿದರು.

ರಫೇಲ್‌ ಹಗರಣದ ಮೂಲಕ ಬಿಜೆಪಿಯು ಕೋಟ್ಯಂತರ ರೂಪಾಯಿ ಹಣ ಪಡೆದುಕೊಂಡಿದೆ. ದೇಶದ ಯಾವುದೇ ಭಾಗದಲ್ಲಿ ಚುನಾವಣೆ ನಡೆದರೂ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಬಿಜೆಪಿ ಅಭ್ಯರ್ಥಿಗಳನ್ನು ಗೆಲ್ಲಿಸಲಾಗುತ್ತಿದೆ ಎಂದು ಆರೋಪಿಸಿದರು.

ತಕ್ಷಣವೇ ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿಸುವ ಮೂಲಕ ದುಡಿಯುವ ಕೈಗಳಿಗೆ ಉದ್ಯೋಗ ನೀಡಬೇಕು. ಪೆಟ್ರೋಲ್‌, ಡೀಸೆಲ್‌, ಅಡುಗೆ ಅನಿಲ ಸಿಲಿಂಡರ್‌ ಬೆಲೆ ಕಡಿಮೆ ಮಾಡಬೇಕು ಎಂದು ಆಗ್ರಹಿಸಿದರು.

ಮುಖಂಡ ಸೈಯದ್ ಸೈಫುಲ್ಲಾ, ಪ್ರಧಾನ ಕಾರ್ಯದರ್ಶಿಗಳಾದ ಎಂ.ಹಾಲೇಶ್, ಕೆ.ಜಿ. ಶಿವಕುಮಾರ್, ಎ. ನಾಗರಾಜ್, ದಕ್ಷಿಣ ವಲಯ ಬ್ಲಾಕ್ ಕಾಂಗೆಸ್ ಅಧ್ಯಕ್ಷ ಅಯೂಬ್ ಪೈಲ್ವಾನ್, ಪಾಲಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಎಚ್. ತಿಪ್ಪಣ್ಣ, ಎಚ್. ಜಯಣ್ಣ, ಭಾಸ್ಕರ್ ಬನಿಯನ್, ಮಹಿಳಾ ಘಟಕದ ವಿಜಯ ಅಕ್ಕಿ, ದಾಕ್ಷಾಯಣಮ್ಮ, ಸುನೀತಾ ಭೀಮಣ್ಣ, ಶುಭಮಂಗಳ, ಇಮ್ತಿಯಾಜ್, ಅಲಿ ರಹಮತ್, ಮೈನುದ್ದೀನ್, ಸದ್ದಾಂ, ಯುವರಾಜ್, ಮುಜಾಹಿದ್, ಬಸವರಾಜ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !