ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ‘ನಿರಂತರ ಪೂರೈಕೆಯಾದರಷ್ಟೇ ಲಸಿಕೆ ಗೊಂದಲಕ್ಕೆ ತೆರೆ‘

Last Updated 14 ಜೂನ್ 2021, 14:18 IST
ಅಕ್ಷರ ಗಾತ್ರ

ದಾವಣಗೆರೆ: ಕೋವಿಡ್‌ ಲಸಿಕೆ ಹಾಕಿಸಿಕೊಳ್ಳಲು ಈಗ ಎಲ್ಲರಲ್ಲೂ ಉತ್ಸಾಹವಿದೆ. ಆದರೆ, ಲಸಿಕೆ ಸಿಗುವುದೇ ಕಷ್ಟವಾಗಿದೆ. ಆರೋಗ್ಯ ಕೇಂದ್ರಗಳಿಗೆ ಹೋದರೆ ಲಸಿಕೆ ಸಿಗುತ್ತದೆಯೋ ಇಲ್ಲವೋ ಎಂಬ ಖಾತ್ರಿ ಇಲ್ಲ. ನಸುಕಿನ 5-6 ಗಂಟೆಗೇ ಹೋಗಿ ಲಸಿಕಾ ಕೇಂದ್ರಗಳ ಎದುರು ಕ್ಯೂ ಹಚ್ಚುವುದು ಅನಿವಾರ್ಯ ಎಂಬಂತಾಗಿದೆ. ವಾರ್ಡ್‌ವಾರು ಲಸಿಕೆ ವಿತರಣೆ ಆರಂಭಿಸಿರುವುದು ಸ್ವಲ್ಪ ಸಮಾಧಾನ ತಂದಿದೆಯಾದರೂ ಅಲ್ಲಿಯೂ ಬಂದವರೆಲ್ಲರಿಗೂ ಸಿಗುತ್ತದೆ ಎಂಬ ಗ್ಯಾರಂಟಿ ಇಲ್ಲ.

ಜಿಲ್ಲೆಯಲ್ಲಿ ಈಗ 45 ವರ್ಷ ಮೇಲಿನ ಎಲ್ಲರಿಗೂ ಹಾಗೂ 18ರಿಂದ 44 ವರ್ಷದವರೆಗಿನ ಫ್ರಂಟ್‌ಲೈನ್‌ ವಾರಿಯರ್‌ಗಳಿಗೆ, ಅಂಗವಿಕಲರಿಗೆ ಲಸಿಕೆ ಹಾಕಲಾಗುತ್ತಿದೆ. ಇಲ್ಲಿಯವರೆಗೆ (ಜೂನ್‌ 12ರವರೆಗೆ) ಒಟ್ಟು 3,78,421 ಡೋಸ್‌ ಲಸಿಕೆ ಹಾಕಲಾಗಿದೆ. ಇದರಲ್ಲಿ 3,07,724 ಮೊದಲ ಡೋಸ್‌, 70,697 ಮಂದಿಗೆ 2ನೇ ಡೋಸ್‌ ಲಸಿಕೆ ಆಗಿದೆ. ಜೂನ್‌ 9ರವರೆಗಿನ ವಿವರಗಳ ಪ್ರಕಾರ 45 ವರ್ಷ ಮೇಲಿನ ಶೇ 68ರಷ್ಟು ಜನರಿಗೆ ಲಸಿಕೆ ಹಾಕಲಾಗಿದೆ. ಚನ್ನಗಿರಿಯಲ್ಲಿ ಶೇ 92, ಹೊನ್ನಾಳಿ ಶೇ 79, ಹರಿಹರ ಶೇ 63, ದಾವಣಗೆರೆ ಶೇ 61, ಜಗಳೂರು ಶೇ 49 ಸಾಧನೆ ಆಗಿದೆ. 18 ವರ್ಷ ಮೇಲಿನವರಲ್ಲಿ ಕೇವಲ ಶೇ 2.78 ಜನರಿಗೆ ವ್ಯಾಕ್ಸಿನೇಷನ್‌ ಆಗಿದೆ. ಅದರಲ್ಲಿ ಹೊನ್ನಾಳಿ ಶೇ 4.02, ಚನ್ನಗಿರಿ ಶೇ 3.13, ದಾವಣಗೆರೆ ಶೇ 2.94, ಹರಿಹರ ಶೇ 2.55, ಜಗಳೂರು ಶೇ 0.14ರಷ್ಟು ಜನರಿಗೆ ಲಸಿಕೆ ಹಾಕಲಾಗಿದೆ. 13,447 ಅಂಗವಿಕಲರಿಗೆ ಲಸಿಕೆ ಹಾಕಲಾಗಿದೆ. ಇನ್ನೂ 2,113 ಮಂದಿಗೆ ಬಾಕಿ ಇದೆ. ಲಸಿಕೆ ಅಭಿಯಾನದಲ್ಲಿ ಜಗಳೂರಿಗೆ ಹಿನ್ನಡೆಯಾಗಿದೆ.

‘ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ಬಂದಿರುವುದನ್ನು ಜನರಿಗೆ ತಿಳಿಸಲು ಅಷ್ಟಾಗಿ ಸಮಸ್ಯೆ ಆಗುತ್ತಿಲ್ಲ. ಅಲ್ಲಿ ಆಶಾ ಕಾರ್ಯಕರ್ತೆಯರು ಮನೆಮನೆಗೆ ಹೋಗಿ ತಿಳಿಸಲು ಸಾಧ್ಯವಾಗುತ್ತಿದೆ. ನಗರ ಪ್ರದೇಶದಲ್ಲಿ ಜನಸಂಖ್ಯೆ ಹೆಚ್ಚು ಹಾಗೂ ಆಶಾ ಕಾರ್ಯಕರ್ತೆಯರ ಕೊರತೆ ಇದೆ. ಹೀಗಾಗಿ ಇಲ್ಲಿ ಜನರು ಆರೋಗ್ಯ ಕೇಂದ್ರಗಳಿಗೆ ಬಂದು ಕಾಯುವ ಪರಿಸ್ಥಿತಿ ಇದೆ. ಲಸಿಕೆ ಲಭ್ಯತೆ ಹೆಚ್ಚಾದಲ್ಲಿ ಈ ಸಮಸ್ಯೆ ನಿವಾರಣೆ ಆಗುತ್ತದೆ. ವಾರ್ಡ್‌ವಾರು ಲಸಿಕೆ ಹಾಕಲು ಆರಂಭಿಸಿ 10–12 ದಿನಗಳು ಕಳೆದಿವೆ. ಯಾವ ವಾರ್ಡ್‌ಗಳಲ್ಲಿ ಹಾಕಬೇಕು ಎಂಬುದನ್ನು ಮೇಯರ್‌ ಹಾಗೂ ಪಾಲಿಕೆ ಆಯುಕ್ತರು ನಿರ್ಧರಿಸುತ್ತಾರೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ವೆಂಕಟೇಶ್‌ ಎಲ್‌.ಡಿ. ತಿಳಿಸಿದರು.

‘ಲಸಿಕೆ ಕೇಂದ್ರದ ಮುಂದೆ 3–4 ತಾಸು ಕಾಯ್ದು ನಿಂತರೂ ಇಂದು ಲಸಿಕೆ ಲಭ್ಯವಿದೆಯೇ ಇಲ್ಲವೇ ಎಂದು ಮೊದಲೇ ಗೊತ್ತಾಗುವುದಿಲ್ಲ. ಜನರಿಗೆ ಮಾಹಿತಿ ನೀಡಲು ಒಂದು ಲಸಿಕಾ ಮಾಹಿತಿ ಕೇಂದ್ರವನ್ನೂ ಜಿಲ್ಲಾಡಳಿತ ತೆರೆದಿಲ್ಲ. 45 ವರ್ಷ ಮೇಲಿನವರಲ್ಲಿ ಎಷ್ಟೋ ಜನ ಅಶಕ್ತರು, ಒಂಟಿಯಾಗಿರುವವರು, ಯಾರ ಸಹಾಯವೂ ಸಿಗದವರೂ ಇರುತ್ತಾರೆ. ಅಂಥವರಿಗೆ ಲಸಿಕಾ ಕೇಂದ್ರಕ್ಕೆ ನಸುಕಿನಲ್ಲಿ ಹೋಗಿ ಕಾದು ನಿಲ್ಲಲು ಸಾಧ್ಯವಿರುವುದಿಲ್ಲ. ಅವರಿಗೆ ಸುಲಭವಾಗಿ ಲಸಿಕೆ ಒದಗಿಸಲು ಕ್ರಮ ಕೈಗೊಳ್ಳಬೇಕಿತ್ತು. ಲಸಿಕೆ ವಿತರಣೆ ಶುರುವಾದಾಗ ಜಿಲ್ಲೆಯ ರೋಟರಿ, ರೆಡ್‌ಕ್ರಾಸ್ ಹಾಗೂ ಇತರ ಸಾಮಾಜಿಕ ಸಂಘ–ಸಂಸ್ಥೆಗಳ ಸಲಹೆ–ಸಹಾಯ ಪಡೆಯಬಹುದಿತ್ತು. ಇದರಿಂದ ಲಸಿಕೆ ವಿತರಣೆಯಲ್ಲಿ ಗೊಂದಲ ತಪ್ಪಿಸಬಹುದಿತ್ತು. ಈಗಲೂ ಚಿಗಟೇರಿ ಆಸ್ಪತ್ರೆಯ ಲಸಿಕಾ ಕೇಂದ್ರದಲ್ಲಿ ಶಾಮಿಯಾನ ಇರುವುದು ಬಿಟ್ಟರೆ, ಉಳಿದ ಕೇಂದ್ರಗಳಲ್ಲಿ ಲಸಿಕೆ ಪಡೆಯಲು ಬಂದವರಿಗೆ ಕುಳಿತುಕೊಳ್ಳಲು ಅಥವಾ ನೆರಳಿನ ವ್ಯವಸ್ಥೆ ಇಲ್ಲ’ ಎಂದು ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಎಂ.ಜಿ. ಬೇಸರ ವ್ಯಕ್ತಪಡಿಸಿದರು.

‘ಕಳೆದ ವಾರ ವಿದೇಶಕ್ಕೆ ಹೋಗಬೇಕಿದ್ದ ಕೆಲವರು ಲಸಿಕೆ ಹಾಕಿಸಿಕೊಳ್ಳಬೇಕಾದ ತುರ್ತು ಇದ್ದ ಕಾರಣ ಸಮೀಪದ ಚಿತ್ರದುರ್ಗ ಜಿಲ್ಲೆಯ ಭರಮಸಾಗರಕ್ಕೆ ಹೋಗಿ ಹಾಕಿಸಿಕೊಂಡು ಬಂದರು. ವಿದೇಶಗಳಿಗೆ ಹೋಗುವವರಿಗೆ ಲಸಿಕೆಗೆ ಆದ್ಯತೆ ನೀಡಬೇಕೆಂದು ಸರ್ಕಾರ ಆದೇಶಿಸಿದ್ದರೂ ಜಿಲ್ಲೆಯಲ್ಲಿ ಅದು ತಕ್ಷಣಕ್ಕೆ ಅನುಷ್ಠಾನಕ್ಕೆ ಬರಲಿಲ್ಲ’ ಎಂದು ಅವರು ವಿವರಿಸಿದರು.

ವೈದ್ಯರು, ಆಸ್ಪತ್ರೆ ಸಿಬ್ಬಂದಿಯ ಸಂಬಂಧಿಗಳಿಗೆ ಸುಲಭವಾಗಿ ಲಸಿಕೆ ಸಿಗುತ್ತಿದೆ ಎಂಬ ಆರೋಪವೂ ಕೇಳಿಬರುತ್ತಿದೆ. ಗೊತ್ತಿರುವ ಕೆಲವರಿಗಷ್ಟೇ ಮಾಹಿತಿ ವಿನಿಮಯವಾಗುತ್ತಿರುವುದರಿಂದ ಸಾಮಾನ್ಯ ಜನರು ಇನ್ನೇನು ಮಾಡಬೇಕು ಎಂದು ತಿಳಿಯದೇ ಅವರಿವರಲ್ಲಿ ಕೇಳುವುದು ಮುಂದುವರಿದಿದೆ.

ಶಾಸಕ ಶಾಮನೂರು ಶಿವಶಂಕರಪ್ಪ ಅವರು ಆರಂಭಿಸಿರುವ ಲಸಿಕೆ ವಿತರಣೆ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಕಾರ್ಯಕರ್ತರು ಮನೆಮನೆಗೆ ತೆರಳಿ 45 ವರ್ಷ ಮೇಲಿನವರ ಪಟ್ಟಿ ಮಾಡಿ ಲಸಿಕೆ ಎಷ್ಟು ಲಭ್ಯವಿದೆಯೋ ಅಷ್ಟು ಜನರಿಗೆ ಹಿಂದಿನ ದಿನ ಟೋಕನ್‌ ನೀಡಿ ಬರುತ್ತಾರೆ. ಮರುದಿನ ಅವರು ಲಸಿಕೆ ಹಾಕಿಸಿಕೊಳ್ಳುವ ವ್ಯವಸ್ಥೆ ಮಾಡಲಾಗಿದೆ. 7 ದಿನಗಳಿಂದ ನಡೆಯುತ್ತಿರುವ ಈ ಅಭಿಯಾನದಲ್ಲಿ ಶುಕ್ರವಾರದವರೆಗೆ 2,000 ಡೋಸ್‌ ಲಸಿಕೆ ನೀಡಲಾಗಿದೆ. 5–6 ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಲಾಗುತ್ತಿದೆ.

2ನೇ ಡೋಸ್‌ ಗೊಂದಲ

ಹರಪನಹಳ್ಳಿ: ತಾಲ್ಲೂಕಿನಲ್ಲಿ ಇಲ್ಲಿಯವರೆಗೂ 45,500 ಜನರಿಗೆ ಮೊದಲ ಡೋಸ್‌ ಲಸಿಕೆ ಹಾಕಲಾಗಿದೆ. ಎರಡನೇ ಡೋಸ್‌ ಲಸಿಕೆ 10,900 ಜನರಿಗೆ ಮಾತ್ರ ಆಗಿದೆ. ಸರ್ಕಾರ ಮೊದಲ ಮತ್ತು ದ್ವಿತೀಯ ಲಸಿಕೆ ಅಂತರವನ್ನು 28 ದಿನಗಳಿಂದ 3 ತಿಂಗಳಿಗೆ ವಿಸ್ತರಿಸಿದ ಪರಿಣಾಮವಾಗಿ ಗೊಂದಲ ಉಂಟಾಗಿದೆ.

ಅರಸೀಕೆರೆ, ಮತ್ತಿಹಳ್ಳಿ, ಚಿಗಟೇರಿ, ಉಚ್ಚಂಗಿದುರ್ಗ, ತೆಲಿಗಿ, ಹಲುವಾಗಲು, ಹಾರಕನಾಳು, ನಂದಿಬೇವೂರು, ಗುಂಡಗತ್ತಿ, ಬೆಣ್ಣಿಹಳ್ಳಿ ಸೇರಿ ವಿವಿಧ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಕೆಲವರು ಮಾತ್ರ ಸ್ವಯಂ ಪ್ರೇರಿತರಾಗಿ ಲಸಿಕೆ ಪಡೆದಿದ್ದಾರೆ. ಸಿಬ್ಬಂದಿಯೇ ಮನೆ ಮನೆಗೆ ಹೋಗಿ ಜನರನ್ನು ಕರೆತಂದು ಲಸಿಕೆ ಹಾಕಿಸುತ್ತಿದ್ದಾರೆ. ಶೇ 20 ಜನರು ಲಸಿಕೆ ಬಗ್ಗೆ ನಿರ್ಲಕ್ಷ್ಯ ಭಾವ ಹೊಂದಿದ್ದಾರೆ ಎಂದು ಲಸಿಕಾ ಕೇಂದ್ರದ ಸಿಬ್ಬಂದಿ ತಿಳಿಸಿದರು.

‘ಕಳೆದ ವಾರ ಕೇವಲ 500 ಡೋಸ್ ಬಂದಿತ್ತು. ಪ್ರತಿ ವಾರ ಬೇಡಿಕೆಯಷ್ಟು ಲಸಿಕೆ ಲಭ್ಯವಾಗುತ್ತಿಲ್ಲ. 2ನೇ ಡೋಸ್‌ನ ಅವಧಿ ವಿಸ್ತರಿಸಿರುವುದರಿಂದ ಜನರಲ್ಲಿ ಗೊಂದಲ ಉಂಟಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪಿ.ಕೆ. ವೆಂಕಟೇಶ್ ತಿಳಿಸಿದರು.

ತಪ್ಪು ಗ್ರಹಿಕೆ: ಲಸಿಕೆಯಿಂದ ದೂರ ಸರಿದ ಗ್ರಾಮಸ್ಥರು

ಜಗಳೂರು: ಕೋವಿಡ್ ಲಸಿಕೆಯ ಸೀಮಿತ ಪೂರೈಕೆಯಿಂದಾಗಿ ತಾಲ್ಲೂಕಿನಲ್ಲಿ ಇದುವರೆಗೆ ಹೆಚ್ಚಿನ ಪ್ರಮಾಣದಲ್ಲಿ ಲಸಿಕೆ ಕಾರ್ಯ ತೀವ್ರಗತಿ ಪಡೆದುಕೊಂಡಿಲ್ಲ. ಹಳ್ಳಿಗಾಡಿನ ಜನ, ಮಧ್ಯಮವರ್ಗ ಹಾಗೂ ವಿದ್ಯಾವಂತರು ಎನಿಸಿಕೊಂಡವರು ಇನ್ನೂ ಮುಕ್ತ ಮನಸ್ಸಿನಿಂದ ಲಸಿಕೆ ಕೇಂದ್ರಗಳಿಗೆ ಧಾವಿಸುತ್ತಿಲ್ಲ.

ವಾರದಲ್ಲಿ ಕೆಲವು ದಿನ ಮಾತ್ರ ಸಾರ್ವಜನಿಕ ಆಸ್ಪತ್ರೆಯಲ್ಲಿ ಲಸಿಕೆಯನ್ನು ನೀಡಲಾಗುತ್ತಿದ್ದು, ಯಾವ ದಿನ ಲಸಿಕೆ ಕೊಡಲಾಗುತ್ತದೆ ಎಂಬ ಬಗ್ಗೆ ಜನರಿಗೆ ಮಾಹಿತಿ ನೀಡುವ ವ್ಯವಸ್ಥೆಯೇ ಇಲ್ಲವಾಗಿದೆ. ಹೀಗಾಗಿ ಬಹಳ ಜನರು ನಿತ್ಯವೂ ಆಸ್ಪತ್ರೆಗೆ ಹಾಗೂ ಆರೋಗ್ಯ ಕೇಂದ್ರಗಳಿಗೆ ಎಡತಾಕುತ್ತಿದ್ದಾರೆ.

ಇದುವರೆಗೆ 45 ವರ್ಷ ಮೇಲಿನ 9,916 ಜನರಿಗೆ ಮೊದಲ ಡೋಸ್ ಹಾಗೂ 3,389 ಜನರಿಗೆ ಎರಡನೇ ಡೋಸ್ ಲಸಿಕೆ ನೀಡಲಾಗಿದೆ. 18 ವರ್ಷ ಮೇಲಿನ 24,648 ಮೊದಲ ಹಾಗೂ 9,525 ಎರಡನೇ ಡೋಸ್ ನೀಡಲಾಗಿದೆ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ನಾಗರಾಜ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

18 ವರ್ಷ ಮೇಲಿನವರಲ್ಲಿ ಆದ್ಯತೆಯ ಮೇರೆಗೆ ಲಸಿಕೆ ಕೊಡಲಾಗುತ್ತಿದೆ. ಆದರೆ, ಆದ್ಯತೆ ಯಾರಿಗೆ ಎನ್ನುವುದರ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಉಂಟಾಗಿದೆ. ಚುನಾವಣಾ ಕರ್ತವ್ಯ ನಿರ್ವಹಿಸುವ ಶಿಕ್ಷಕರಿಗೂ ಲಸಿಕೆ ಹಾಕದೇ ಹಿಂದಕ್ಕೆ ಕಳುಹಿಸಲಾಗುತ್ತಿದೆ. ಈ ಬಗ್ಗೆ ತಹಶೀಲ್ದಾರ್ ಅವರಿಗೆ ಕೆಲವು ಶಿಕ್ಷಕರು ದೂರು ನೀಡಿದ್ದಾರೆ. ‘ಚುನಾವಣಾ ಕಾರ್ಯಗಳಿಗೆ ನಿಯೋಜನೆಗೊಂಡ ಶಿಕ್ಷಕರಿಗೆ ಮೊದಲ ಆದ್ಯತೆಯಾಗಿ ಲಸಿಕೆ ನೀಡುವ ಬಗ್ಗೆ ಶಿಕ್ಷಕರ ಪಟ್ಟಿಯನ್ನು ತಾಲ್ಲೂಕು ಆರೋಗ್ಯಾಧಿಕಾರಿಗೆ ಕಳುಹಿಸಿಕೊಡಲಾಗಿದೆ’ ಎಂದು ತಹಶೀಲ್ದಾರ್ ಗಿರೀಶ್ ತಿಳಿಸಿದ್ದಾರೆ.

ಲಸಿಕೆಗೆ ಧಾವಂತ

ಚನ್ನಗಿರಿ: ‘ಒಂದು ತಿಂಗಳಿಂದ ನಿರಂತರವಾಗಿ ಆರೋಗ್ಯ ಕೆಂದ್ರಕ್ಕೆ ಹೋದರೂ ಇನ್ನೂ ಲಸಿಕೆ ಹಾಕಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ’ ಎನ್ನುತ್ತಾರೆ ತಾಲ್ಲೂಕಿನ ಸಂತೇಬೆನ್ನೂರು ಗ್ರಾಮದ ಸತೀಶ್.

ಗ್ರಾಮೀಣ ಪ್ರದೇಶದಲ್ಲಿ ಲಸಿಕೆ ನೀಡುವ ವ್ಯವಸ್ಥೆ ಹೇಗಿದೆ ಎನ್ನುವುದಕ್ಕೆ ಇದೊಂದು ಉದಾಹರಣೆ.

‘ಮೊದಲು ಲಸಿಕೆ ಹಾಕಿಸಿಕೊಳ್ಳಲು ಜನರು ಹಿಂದೇಟು ಹಾಕುತ್ತಿದ್ದರು. ಮನೆ–ಮನೆಗಳಿಗೆ ತೆರಳಿ ಲಸಿಕೆ ಹಾಕಿಸಿಕೊಳ್ಳಿ ಎಂದು
ಅಂಗಲಾಚಿದರೂ ಜನರು ಬರುತ್ತಿರಲಿಲ್ಲ. ಯಾವಾಗ ಸೋಂಕು ಹೆಚ್ಚಳವಾಯಿತೋ ಆಗ ಆರೋಗ್ಯ ಕೇಂದ್ರಗಳಿಗೆ ಧಾವಿಸಿ ಬರುವಂತಾಗಿದೆ. ಆದರೆ, ಅದಕ್ಕೆ ತಕ್ಕಂತೆ ಲಸಿಕೆ ಲಭ್ಯತೆ ಇಲ್ಲ. ಎರಡು ದಿನಗಳಿಗೊಮ್ಮೆ ತಾಲ್ಲೂಕಿಗೆ 2 ಸಾವಿರ ಲಸಿಕೆಗಳು ಜಿಲ್ಲಾ ಕೇಂದ್ರದಿಂದ ಪೂರೈಕೆಯಾಗುತ್ತಿವೆ. ಇವುಗಳನ್ನು 23 ಆರೋಗ್ಯ ಕೇಂದ್ರಗಳಿಗೆ ಸಮವಾಗಿ ಹಂಚಲಾಗುತ್ತಿದೆ. ಜನರು ಲಸಿಕೆ ಹಾಕಿಸಿಕೊಳ್ಳಲು ಆರೋಗ್ಯ ಕೇಂದ್ರಗಳಿಗೆ ಪ್ರತಿದಿನ ಬಂದು ಹೋಗುವಂತಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ.ಪ್ರಭು ತಿಳಿಸಿದರು.

ಲಸಿಕೆ ನಿರಂತರವಾಗಿ ಬರುತ್ತಿಲ್ಲ

ಜಿಲ್ಲೆಗೆ ಪ್ರತಿದಿನ ಕನಿಷ್ಠ 15,000 ಡೋಸ್‌ಗಳಷ್ಟು ಲಸಿಕೆ ಅಗತ್ಯವಿದೆ. ಆದರೆ ಅಷ್ಟು ಬರುತ್ತಿಲ್ಲ. ವಾರದ ಲಸಿಕೆ ಬ್ಯಾಲೆನ್ಸ್‌, ಹಾಕಿರುವ ಪ್ರಮಾಣ ನೋಡಿಕೊಂಡು ರಾಜ್ಯ ಸರ್ಕಾರ ಲಸಿಕೆ ವಿತರಣೆ ಮಾಡುತ್ತದೆ. ಒಮ್ಮೆ ಲಸಿಕೆ ಬಂದರೆ ನಂತರ 2–3 ದಿನಗಳ ಕಾಲ ಮತ್ತೆ ಬರುವುದಿಲ್ಲ. 10,000 ಡೋಸ್‌ ಬೆಳಿಗ್ಗೆ ಬಂದರೆ ಹೆಚ್ಚು–ಕಮ್ಮಿ ಅಂದೇ ಪೂರ್ಣ ಖಾಲಿ ಆಗುತ್ತದೆ. ಮರುದಿನ ಉಳಿದಿರುವ ಅಲ್ಪಸ್ವಲ್ಪ ಲಸಿಕೆ ಹಾಕಲಾಗುತ್ತದೆ. ಆದರೆ, ಅದೂ ವಾರದ ಪರ್ಫಾರ್ಮನ್ಸ್‌ ಎಂದು ಪರಿಗಣಿತವಾಗುತ್ತದೆ. ಲಸಿಕೆಯೇ ಇಲ್ಲದಿದ್ದರೆ ಪರ್ಫಾರ್ಮನ್ಸ್‌ ಎಲ್ಲಿರುತ್ತದೆ? ಈ ಸಮಸ್ಯೆಯನ್ನು ಸರ್ಕಾರದ ಗಮನಕ್ಕೆ ತಂದಿದ್ದೇವೆ. ಪರಿಹಾರವಾಗಿಲ್ಲ. ಮುಂದಿನ ವಾರ ಹೆಚ್ಚಿನ ಪ್ರಮಾಣದ ಲಸಿಕೆ ಲಭ್ಯವಾಗುವ ಸಾಧ್ಯತೆಯಿದೆ. ಒಂದು ವಾರದ ಮುಂಚೆ ಲಸಿಕೆ ಲಭ್ಯವಾದಲ್ಲಿ ಜನರಿಗೆ ಮೊದಲೇ ಮಾಹಿತಿ ನೀಡಿ ಸಮರ್ಪಕವಾಗಿ ಹಂಚಿಕೆ ಮಾಡಬಹುದು.

– ಡಾ. ಮೀನಾಕ್ಷಿ, ಆರ್‌ಸಿಎಚ್‌ಒ

(ವರದಿ: ವಿಶ್ವನಾಥ ಡಿ., ಡಿ. ಶ್ರೀನಿವಾಸ್, ಎಚ್.ವಿ. ನಟರಾಜ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT