ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ: ಬಿಜೆಪಿ ಸಂಭ್ರಮಾಚರಣೆ

7

ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ: ಬಿಜೆಪಿ ಸಂಭ್ರಮಾಚರಣೆ

Published:
Updated:
Deccan Herald

ದಾವಣಗೆರೆ: ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡಲು ಎರಡೂ ಸದನಗಳಲ್ಲಿ ಅನುಮೋದನೆ ಸಿಕ್ಕಿರುವ ಹಿನ್ನೆಲೆಯಲ್ಲಿ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸಂಭ್ರಮಾಚರಣೆ ಮಾಡುವ ಮೂಲಕ ಪ್ರಧಾನಿಗೆ ಅಭಿನಂದನೆ ಸಲ್ಲಿಸಲಾಯಿತು.

ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಯಶವಂತರಾಚ್‌ ಜಾಧವ್‌ ಮಾತನಾಡಿ, ‘ಆಯೋಗ ಹಿಂದೆಯೇ ಇತ್ತಾದರೂ ಅದಕ್ಕೆ ಸರ್ಕಾರವೇ ಯಜಮಾನನಾಗಿತ್ತು. ರಾಜ್ಯದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಮೂಲಕ ಜಾತಿ ಗಣತಿ ಮಾಡಲಾಗಿತ್ತು. ಅದಕ್ಕೆ ₹ 300 ಕೋಟಿ ವೆಚ್ಚ ಮಾಡ‌ಲಾಗಿತ್ತು. ಆದರೆ ಅದರ ವರದಿಯನ್ನು ಸರ್ಕಾರ ಮೂಲೆ ಗುಂಪು ಮಾಡಿದ್ದನ್ನು ನೋಡಿದ್ದೇವೆ’ ಎಂದು ಆರೋಪಿಸಿದರು.

ಹಿಂದುಳಿದ ವರ್ಗ, ಪರಿಶಿಷ್ಟ ಜಾತಿ, ಪಂಗಡದವರು ತಮ್ಮ ಆಸ್ತಿ ಎಂಬಂತೆ ನಡೆಸಿಕೊಂಡು ಬಂದ ಕಾಂಗ್ರೆಸ್‌ ಪಕ್ಷವು ಅವರ ಮೂಗಿಗೆ ತುಪ್ಪ ಸವರಿದ್ದು ಬಿಟ್ಟರೆ ಮತ್ತೇನೂ ಮಾಡಿಲ್ಲ. ಈಗ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ದಿಟ್ಟ ಕ್ರಮ ಕೈಗೊಂಡ ನರೇಂದ್ರ ಮೋದಿ ಅವರಿಗೆ ಎಲ್ಲರೂ ಋಣಿಯಾಗಿರಬೇಕಿದೆ ಎಂದು ಹೇಳಿದರು.

ಬಿಜೆಪಿ ನಾಯಕ ಬಿ.ಎಂ. ಸತೀಶ್‌ ಮಾತನಾಡಿ, ‘ತಾನು ಹಿಂದುಳಿದ ವರ್ಗಗಳ ಪರ ಎಂದು ಹೇಳಿಕೊಂಡೇ ಬಂದಿದ್ದ ಸಿದ್ದರಾಮಯ್ಯ ಅವರು ಜಾತಿಗಣತಿ ನಡೆಸಿದರೂ ಅದರ ವರದಿಯನ್ನು ಬಿಡುಗಡೆ ಮಾಡಲಿಲ್ಲ. ಈಗ ಹಿಂದುಳಿದ ವರ್ಗಗಳ ಆಯೋಗಕ್ಕೆ 123 ತಿದ್ದುಪಡಿಗಳೊಂದಿಗೆ ಸಾಂವಿಧಾನಿಕ ಸ್ವಾನಮಾನ ನೀಡಲು ಎರಡೂ ಸದನಗಳಲ್ಲಿ ಅನುಮೋದನೆ ಸಿಕ್ಕಿರುವುದರಿಂದ ಇನ್ನು ಮುಂದೆ ಸರ್ಕಾರದ ಆದೇಶಕ್ಕೆ ಕಾಯಬೇಕಿಲ್ಲ. ಆಯೋಗವೇ ನೇರವಾಗಿ ವರದಿ ಬಿಡುಗಡೆ ಮಾಡಬಹುದು’ ಎಂದರು.

ಜಾತಿ ಮೀಸಲಾತಿ ಬಂದಿರುವುದು ಮಂಡಲ್‌ ವರದಿ ಜಾರಿಯಾದ ಬಳಿಕ. ಮಂಡಲ್‌ ವರದಿಯನ್ನು ಮೊರಾರ್ಜಿ ದೇಸಾಯಿ ಪ್ರಧಾನಿಯಾಗಿದ್ದಾಗ ಪ್ರಸ್ತಾಪಿಸಿದ್ದರು. ಆ ಸರ್ಕಾರದಲ್ಲಿ ವಾಜಪೇಯಿ, ಆಡ್ವಾಣಿ ಸಚಿವರಾಗಿದ್ದರು. ಮಂಡಲ್‌ ವರದಿ ಜಾರಿ ಮಾಡಿದ್ದು ವಿ.ಪಿ. ಸಿಂಗ್‌ ಸರ್ಕಾರ. ಬಿಜೆಪಿ ಬೆಂಬಲ ನೀಡಿದ್ದ ಸರ್ಕಾರ ಅದಾಗಿತ್ತು. ಈ ನಡುವೆ ಇಂದಿರಾಗಾಂಧಿ ಮತ್ತು ರಾಜೀವ್‌ ಗಾಂಧಿ ತಲಾ 5 ವರ್ಷ ಪ‍್ರಧಾನಮಂತ್ರಿಗಳಾಗಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದರು.

ಬಿಜೆಪಿ ಕಚೇರಿ ಎದುರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಲಾಯಿತು. ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾದ ಜಿಲ್ಲಾ ಘಟಕದ ಅಧ್ಯಕ್ಷ ಸೊಕ್ಕೆ ನಾಗರಾಜ್‌, ಬಿಜೆಪಿ ನಾಯಕರಾದ ವೈ. ಮಲ್ಲೇಶ್‌, ಶಿವಕುಮಾರ್‌, ಪ್ರಭು ಕಲ್ಬುರ್ಗಿ, ಮುಕುಂದ್‌, ರಾಜನಳ್ಳಿ ಶಿವಕುಮಾರ್‌, ರಮೇಶ್‌ ನಾಯ್ಕ, ಕೆ.ಓಂಕಾರಪ್ಪ, ಜಯಣ್ಣ, ಲಿಂಗರಾಜ್‌, ಪ್ರಕಾಶ್‌ ಅವರೂ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !