ಗುರುವಾರ , ನವೆಂಬರ್ 26, 2020
20 °C
7 ಸಾವಿರ ಬಚ್ಚಲು ಗುಂಡಿ (ಸೋಕ್‌ಪಿಟ್) ನಿರ್ಮಾಣ ಮಾಡಲು ಜಿಲ್ಲಾ ಪಂಚಾಯಿತಿ ಸಜ್ಜು

ದಾವಣಗೆರೆ: ಗ್ರಾಮ ನೈರ್ಮಲ್ಯಕ್ಕೆ ಬಚ್ಚಲು ಗುಂಡಿ ನಿರ್ಮಾಣ

ಡಿ.ಕೆ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ದಾವಣಗೆರೆ: ಗ್ರಾಮೀಣ ಪ್ರದೇಶದಲ್ಲಿ ಸ್ವಚ್ಛತೆಯ ವಾತಾವರಣ ನಿರ್ಮಿಸುವ ಉದ್ದೇಶದಿಂದ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ 7 ಸಾವಿರ ಬಚ್ಚಲು ಗುಂಡಿ (ಸೋಕ್‌ಪಿಟ್) ನಿರ್ಮಾಣ ಮಾಡಲು ಜಿಲ್ಲಾ ಪಂಚಾಯಿತಿ ಮುಂದಾಗಿದೆ.

‘ಬಚ್ಚಲಿನ ನೀರು ಅನೈರ್ಮಲ್ಯಕ್ಕೆ ಕಾರಣವಾಗಬಾರದು. ಅದು ಭೂಮಿಯಲ್ಲಿ ಇಂಗಬೇಕು ಹಾಗೂ ಸಾಂಕ್ರಾಮಿಕ ರೋಗಗಳನ್ನು ತಡೆಯುವ ಉದ್ದೇಶದಿಂದ ಬಚ್ಚಲು ಗುಂಡಿ ಆರಂಭಿಸಲಾಗಿದೆ. ಹೆಚ್ಚಿನ ಹಳ್ಳಿಗಳಲ್ಲಿ ಚರಂಡಿ ಹಾಗೂ ಒಳಚರಂಡಿ ವ್ಯವಸ್ಥೆ ಇಲ್ಲ. ಇದರಿಂದಾಗಿ ಹೀಗಾಗಿ ಸ್ನಾನ ಮಾಡಿದ ಪಾತ್ರೆಗಳು ಹಾಗೂ ಬಟ್ಟೆಗಳನ್ನು ತೊಳೆದ ನೀರು ಮನೆ ಎದುರಿನ ರಸ್ತೆಯಲ್ಲಿ, ಹಿತ್ತಲಿನಲ್ಲಿ ಅಥವಾ ತಗ್ಗು ಪ್ರದೇಶಗಳಲ್ಲಿ ಹರಿಯುವುದು ಸಾಮಾನ್ಯ. ಇದರಿಂದಾಗಿ ಸೊಳ್ಳೆಗಳು ಉತ್ಪತ್ತಿಯಾಗಿ ಸಾಂಕ್ರಾಮಿಕ ರೋಗ ಹರಡಲು ಕಾರಣವಾಗಬಹುದು. ಈ ಸಮಸ್ಯೆಗಳಿಂದ ಜನರಿಗೆ ಮುಕ್ತಿಕೊಡಲು ಈ ಯೋಜನೆ ರೂಪಿಸಲಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

‘ಲಾಕ್‌ಡೌನ್ ವೇಳೆ ಜಮೀನಿನಲ್ಲಿ ಬದು ನಿರ್ಮಾಣ, ಕೃಷಿಹೊಂಡಗಳನ್ನು ನಿರ್ಮಿಸಿದ್ದ ಜಿಲ್ಲಾ ಪಂಚಾಯಿತಿ ಗ್ರಾಮ ಪಂಚಾಯಿತಿ ನೈರ್ಮಲ್ಯಕ್ಕೆ ಒತ್ತು ನೀಡುವ ನಿಟ್ಟಿನಲ್ಲಿ ಬಚ್ಚಲು ಗುಂಡಿಗಳನ್ನು ನಿರ್ಮಾಣಕ್ಕೆ ಮುಂದಾಗಿದೆ. ಜಿಲ್ಲೆಯಲ್ಲಿ 7,301 ಬಚ್ಚಲು ಗುಡಿ ನಿರ್ಮಿಸುವ ಗುರಿ ಹೊಂದಿದ್ದು, 2,587 ಪ್ರಗತಿಯಲ್ಲಿವೆ.  ಡಿಸೆಂಬರ್ ವೇಳೆ ಗುರಿಯನ್ನು ಮುಟ್ಟುತ್ತೇವೆ’ ಎಂದು ಸಹಾಯಕ ಜಿಲ್ಲಾ ಕಾರ್ಯಕ್ರಮ ಸಂಯೋಜಕ (ಎಡಿಪಿಸಿ) ಸಿದ್ದರಾಮಸ್ವಾಮಿ ತಿಳಿಸಿದರು.

‘ಜಿಲ್ಲೆಯ 196 ಗ್ರಾಮ ಪಂಚಾಯಿತಿಗಳಲ್ಲಿ ಈ ಅಭಿಯಾನ ಆರಂಭಿಸಿದ್ದು, ಚನ್ನಗಿರಿ ತಾಲ್ಲೂಕಿನ 60 ಪಂಚಾಯಿತಿಗಳಲ್ಲಿ 3,451 ಕಾಮಗಾರಿಯನ್ನು ಕೈಗೆತ್ತಿಕೊಳ್ಳುವ ಮೂಲಕ ಜಿಲ್ಲೆಯಲ್ಲಿ ಮೊದಲ ಸ್ಥಾನದಲ್ಲಿ ಇದ್ದರೆ ಹರಿಹರ ತಾಲ್ಲೂಕಿನಲ್ಲಿ 541 ಕಾಮಗಾರಿ ಕೈಗೆತ್ತಿಕೊಂಡಿದ್ದು, ಕೊನೆಯ ಸ್ಥಾನದಲ್ಲಿದೆ’ ಎನ್ನುತ್ತಾರೆ  ಜಿಲ್ಲಾ ಐಇಸಿ ಸಂಯೋಜಕ ಚಂದನ್.

ಎಷ್ಟು ಹಣ ಬರುತ್ತದೆ

ಒಂದು ಗುಂಡಿ ₹14 ಸಾವಿರ ಅಂದಾಜು ವೆಚ್ಚ ಇರಲಿದ್ದು, ಗ್ರಾಮ ಪಂಚಾಯಿತಿ ಪಿಡಿಒಗಳು ಫಲಾನುಭವಿಗಳ ಖಾತೆಗೆ ಹಣ ಜಮಾ ಮಾಡುತ್ತಾರೆ.  ಆರಂಭದಲ್ಲಿ ಸಾಮಗ್ರಿಗಳನ್ನು ಫಲಾನುಭವಿಗಳು ತಂದು ಕೆಲಸ ಆರಂಭಿಸಿದರೆ ವಾರದೊಳಗೆ ₹5 ಸಾವಿರ ಕೊಡಲಾಗುತ್ತದೆ. ಕೆಲಸ ಪೂರ್ಣಗೊಂಡ ಬಳಿಕ 15 ದಿನದೊಳಗೆ ಫಲಾನುಭವಿಗಳ ಖಾತೆಗೆ ಹಣ ಬರುತ್ತದೆ. 

ಎಲ್ಲೆಲ್ಲಿ ಎಷ್ಟು ಬಚ್ಚಲುಗುಂಡಿ

ತಾಲ್ಲೂಕು-ಗುರಿ-ಪ್ರಗತಿಯ‌ಲ್ಲಿ ಇರುವವು

ಚನ್ನಗಿರಿ-2050-1261

ದಾವಣಗೆರೆ-1754-330

ಹರಿಹರ-565-62

ಹೊನ್ನಾಳಿ-1040-389

ಜಗಳೂರು-1037-204

ನ್ಯಾಮತಿ-855-341

ಒಟ್ಟು-7301-2587

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು