ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೋಷಪೂರಿತ ಬೀಜ: ₹ 7.2 ಲಕ್ಷ ನಷ್ಟ ಭರಿಸಲು ಸೂಚನೆ

ರೈತರಿಗೆ ಪರಿಹಾರ ಕೊಡಿಸಿದ ದಾವಣಗೆರೆ ಜಿಲ್ಲಾ ಗ್ರಾಹಕರ ವೇದಿಕೆ
Last Updated 18 ಫೆಬ್ರುವರಿ 2020, 10:34 IST
ಅಕ್ಷರ ಗಾತ್ರ

ದಾವಣಗೆರೆ: ದೋಷಪೂರಿತ ಭತ್ತದ ಬಿತ್ತನೆ ಬೀಜದಿಂದ ಆರ್ಥಿಕ ನಷ್ಟ ಅನುಭವಿಸಿದ ಹರಿಹರ ತಾಲ್ಲೂಕಿನ ಭಾನುವಳ್ಳಿ ಗ್ರಾಮದ ಐವರು ರೈತರಿಗೆ ಕರ್ನಾಟಕ ರಾಜ್ಯ ಬೀಜ ನಿಗಮವು ₹ 7.20 ಲಕ್ಷ ಹಾಗೂ ಈ ಮೊತ್ತಕ್ಕೆ ಬೀಜ ಖರೀದಿಸಿದ ದಿನದಿಂದ ವಾರ್ಷಿಕ ಶೇ 9 ಬಡ್ಡಿ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ ನೇತೃತ್ವದ ಪೀಠವು, ‘ಮಾನಸಿಕ ಹಿಂಸೆ ಕೊಟ್ಟಿರುವುದಕ್ಕೆ ₹ 20 ಸಾವಿರ ಹಾಗೂ ದಾವೆಗೆ ಮಾಡಿರುವ ವೆಚ್ಚ ಭರಿಸಲು ₹ 10 ಸಾವಿರ ಅನ್ನು ಪ್ರತಿವಾದಿಗಳಾದ ರಾಜ್ಯ ಬೀಜ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ನಿಗಮದ ದಾವಣಗೆರೆ ಶಾಖೆಯ ವ್ಯವಸ್ಥಾಪಕರು 30 ದಿನಗಳ ಒಳಗೆ ರೈತರಿಗೆ ಪಾವತಿಸಬೇಕು’ ಎಂದು ಶನಿವಾರ ನಿರ್ದೇಶನ ನೀಡಿದೆ.

ಪ್ರಕರಣದ ವಿವರ: ಭಾನುವಳ್ಳಿಯ ಸಣ್ಣ ಕೆಂಚಪ್ಪ ಅವರ ಪುತ್ರರಾದ ಎಚ್‌. ನಾರಾಯಣಪ್ಪ, ಎಚ್‌. ವೀರಪ್ಪ, ರೇವಣಪ್ಪ, ಎಚ್‌. ಲಕ್ಷ್ಮಪ್ಪ ಹಾಗೂ ಎಚ್‌. ಕಣ್ಣಪ್ಪ ಅವರು 2018ರ ಡಿಸೆಂಬರ್‌ನಲ್ಲಿ ಹರಿಹರದಲ್ಲಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ ‘ಬಿ.ಪಿ.ಟಿ 5204 ಸೋನಾ’ ತಳಿಯ ಭತ್ತದ ಬೀಜ ಖರೀದಿಸಿ 40 ಎಕರೆಯಲ್ಲಿ ಬಿತ್ತನೆ ಮಾಡಿದ್ದರು. 2019ರ ಏಪ್ರಿಲ್‌ನಲ್ಲಿ ಅವಧಿಗೆ ಮೊದಲೇ ಕಾಳುಕಟ್ಟಿ ಭತ್ತದ ತೆನೆ ಉದುರುತ್ತಿರುವ ಬಗ್ಗೆ ಕೃಷಿ ಇಲಾಖೆಯ ಗಮನಕ್ಕೆ ತಂದರು. ಬಳಿಕ ಕತ್ತಲಗೆರೆಯಲ್ಲಿನ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯದ ವಿಸ್ತರಣಾ ಕೇಂದ್ರದ ವಿಜ್ಞಾನಿಗಳ ತಂಡ ಬಂದು ಬೆಳೆ ಪರಿಶೀಲಿಸಿತು. ‘ಮಿಶ್ರಿತ ಹಾಗೂ ದೋಷಪೂರಿತ ಬೀಜಗಳಿಂದಾಗಿ ಶೇ 20ರಷ್ಟು ಬೆಳೆಹಾನಿಯಾಗಿದೆ’ ಎಂದು ವರದಿ ನೀಡಿತು. ಹೀಗಾಗಿ ತಮಗಾದ ನಷ್ಟವನ್ನು ಭರಿಸಿಕೊಡುವಂತೆ ಕೋರಿದರೂ ಬೀಜ ನಿಗಮ ಸ್ಪಂದಿಸದಿದ್ದರಿಂದ ರೈತರು ಗ್ರಾಹಕರ ವೇದಿಕೆಯ ಮೆಟ್ಟಿಲನ್ನೇರಿದ್ದರು.

ದಾಖಲೆಗಳನ್ನು ಪರಿಶೀಲಿಸಿದ ಗ್ರಾಹಕರ ವೇದಿಕೆಯು, ‘ವಿಜ್ಞಾನಿಗಳ ವರದಿ ಪ್ರಕಾರ 80 ಕೆ.ಜಿ. ತೂಗುವ 455 ಚೀಲ ಭತ್ತದ ಇಳುವರಿ ಕಡಿಮೆ ಬಂದಿದೆ. ಕ್ವಿಂಟಲ್‌ಗೆ ₹ 2000ರಂತೆ ಲೆಕ್ಕ ಹಾಕಿದರೆ ₹ 7.20 ಲಕ್ಷ ನಷ್ಟವಾಗಿದೆ. ಬೀಜ ಪೂರೈಸಿದ ನಿಗಮವು ನಷ್ಟವನ್ನು ಭರಿಸದೇ ಸೇವಾಲೋಪವೆಸಗಿದೆ. ಹೀಗಾಗಿ ನಿಗಮವು ರೈತರಿಗೆ ಪರಿಹಾರ ನೀಡಬೇಕು’ ಎಂದು ಆದೇಶದಲ್ಲಿ ಸೂಚಿಸಿದೆ.

₹ 30 ಸಾವಿರ ಪಾವತಿಗೆ ಆದೇಶ

ಕಳಪೆ ಗುಣಮಟ್ಟದ ಭತ್ತದ ಬಿತ್ತನೆ ಬೀಜದಿಂದ ಆರ್ಥಿಕ ನಷ್ಟ ಅನುಭವಿಸಿದ ಹರಿಹರ ತಾಲ್ಲೂಕಿನ ಸಾಲಕಟ್ಟೆಯ ರೈತ ಸಿದ್ದಪ್ಪ ಬಿ.ಎನ್‌. ಅವರಿಗೆ ರಾಜ್ಯ ಬೀಜ ನಿಗಮವು ₹ 30 ಸಾವಿರಕ್ಕೆ ವಾರ್ಷಿಕ ಶೇ 9 ಬಡ್ಡಿ ಸೇರಿ ಪಾವತಿಸಬೇಕು ಎಂದೂ ಗ್ರಾಹಕರ ವೇದಿಕೆ ಆದೇಶಿಸಿದೆ.

ಮಾನಸಿಕ ಹಿಂಸೆ ಕೊಟ್ಟಿರುವುದಕ್ಕೆ ₹ 10 ಸಾವಿರ ಹಾಗೂ ದಾವೆಗೆ ಮಾಡಿದ ವೆಚ್ಚ ಭರಿಸಲು ₹ 5 ಸಾವಿರ ಪರಿಹಾರವನ್ನು 30 ದಿನಗಳ ಒಳಗೆ ನೀಡಬೇಕು ಎಂದು ನಿರ್ದೇಶನ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT