ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈದ್ಯಕೀಯ ವೆಚ್ಚ ₹ 5 ಲಕ್ಷ ಭರಿಸಲು ಆದೇಶ

₹ 15 ಸಾವಿರ ಪರಿಹಾರ ಮಹಿಳೆಗೆ ನೀಡಲು ಸ್ಟಾರ್‌ ಹೆಲ್ತ್‌ ಕಂಪನಿಗೆ ಸೂಚನೆ
Last Updated 21 ಜನವರಿ 2020, 11:32 IST
ಅಕ್ಷರ ಗಾತ್ರ

ದಾವಣಗೆರೆ: ಆರೋಗ್ಯ ವಿಮಾ ಪಾಲಿಸಿ ಜಾರಿಯಲ್ಲಿದ್ದರೂ ವೈದ್ಯಕೀಯ ವೆಚ್ಚ ಮರುಪಾವತಿಸದೇ ಸೇವಾ ಲೋಪವೆಸಗಿದ ಸ್ಟಾರ್‌ ಹೆಲ್ತ್‌ ಆ್ಯಂಡ್‌ ಅಲೈಡ್‌ ಇನ್ಶೂರನ್ಸ್‌ ಕಂಪನಿಯು ಮಹಿಳೆಗೆ ₹ 5,09,574 ಅನ್ನು ಬಡ್ಡಿ ಸಮೇತ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಆದೇಶಿಸಿದೆ.

ದೂರುದಾರರಾದ ನಗರದ ಆಂಜನೇಯ ಬಡಾವಣೆಯ ಶ್ರೀದೇವಿ ಸಿ. ಅವರಿಗೆ ಮಾನಸಿಕ ಹಿಂಸೆ ನೀಡಿರುವುದಕ್ಕೆ ಕಂಪನಿಯು ₹ 10 ಸಾವಿರ ಹಾಗೂ ದಾವೆಗೆ ಮಾಡಿದ ವೆಚ್ಚವನ್ನು ಭರಿಸಲು ₹ 5,000 ಅನ್ನು ಪರಿಹಾರವಾಗಿ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ ಹಾಗೂ ಸದಸ್ಯೆ ಜ್ಯೋತಿ ರಾಧೇಶ್‌ ಜಂಬಗಿ ಅವರನ್ನು ಒಳಗೊಂಡ ಪೀಠವು ನಿರ್ದೇಶನ ನೀಡಿದೆ.

ಪ್ರಕರಣದ ವಿವರ: ಶ್ರೀದೇವಿ ಅವರು ತಾವು ಹಾಗೂ ಪುತ್ರ ಪುನೀತ್‌ ಸಿ.ಜಿ. ಒಳಪಡುವಂತೆ ಸ್ಟಾರ್‌ ಹೆಲ್ತ್‌ ಆ್ಯಂಡ್‌ ಅಲೈಡ್‌ ಇನ್ಶೂರನ್ಸ್‌ ಕಂಪನಿಯಲ್ಲಿ ಆರೋಗ್ಯ ವಿಮೆ ಪಾಲಿಸಿ ಪಡೆದಿದ್ದರು. 2017ರ ಡಿಸೆಂಬರ್‌ 26ರಿಂದ 2018ರ ಡಿಸೆಂಬರ್‌ 25ರ ಕಾಲಾವಧಿಗೆ ಪಾಲಿಸಿಯ ಕಂತಿನ ಹಣ ₹ 20,443 ಅನ್ನೂ ಭರಿಸಿದ್ದರು. ಇದು ₹ 10 ಲಕ್ಷ ವಿಮಾ ಸೌಲಭ್ಯವನ್ನು ಒಳಗೊಂಡಿತ್ತು.

2018ರ ನವೆಂಬರ್‌ 29ರಂದು ಸುಸ್ತು ಕಾಣಿಸಿಕೊಂಡಿದ್ದರಿಂದ ಶ್ರೀದೇವಿ ಅವರು ದಾವಣಗೆರೆಯಲ್ಲಿ ವೈದ್ಯರಿಗೆ ತೋರಿಸಿದರು. ಹೃದಯದ ಎಡಹೃತ್ಕುಕ್ಷಿ ಅಗಲಗೊಂಡಿದೆ (ಲೆಫ್ಟ್‌ ವೆಂಟ್ರಿಕ್ಯುಲರ್‌ ಹೈಪರ್‌ಟ್ರೊಫಿ – ಎಲ್‌.ವಿ.ಎ.ಎಚ್‌) ಎಂದು ವೈದ್ಯರು ತಿಳಿಸಿದರು. ಆರೋಗ್ಯ ಸುಧಾರಿಸದೇ ಇರುವುದರಿಂದ ಬೆಂಗಳೂರಿನ ಫೋರ್ಟಿಸ್‌ ಆಸ್ಪತ್ರೆಗೆ ಡಿಸೆಂಬರ್ 5ರಂದು ದಾಖಲಾದರು. ಎರಡು ದಿನಗಳ ಕಾಲ ವಿವಿಧ ಪರೀಕ್ಷೆ ಮಾಡಿದ ವೈದ್ಯರು, ಕೊರೊನರಿ ಆರ್ಟರಿ ಬೈಪಾಸ್‌ ಗ್ರಾಫ್ಟಿಂಗ್‌ (ಸಿಎಬಿಜಿ) ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂದು ಸಲಹೆ ನೀಡಿದರು. ಎರಡು ದಿನಗಳ ವೈದ್ಯಕೀಯ ಪರೀಕ್ಷೆಗೆ ಶ್ರೀದೇವಿ ₹ 33,285 ಪಾವತಿಸಿದ್ದರು. ಬಳಿಕ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಅವರು, ಡಿಸೆಂಬರ್‌ 10ರಿಂದ 18ರ ವರೆಗೆ ಆಸ್ಪತ್ರೆಯ ಒಳರೋಗಿಯಾಗಿ ಚಿಕಿತ್ಸೆ ಪಡೆದುಕೊಂಡಿದ್ದರು. ಇದಕ್ಕಾಗಿ ಅವರು ಆಸ್ಪತ್ರೆಗೆ ₹ 4,71,262 ಪಾವತಿಸಿದ್ದರು.

ಆರೋಗ್ಯ ವಿಮೆ ಮಾಡಿಸಿದ್ದರಿಂದ ವೈದ್ಯಕೀಯ ವೆಚ್ಚವನ್ನು ಮರುಪಾವತಿಸುವಂತೆ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ, ವಿಮಾ ಕಂಪನಿಯು ‘ನಿಮಗೆ ಬಂದಿದ್ದು ದೀರ್ಘಾವಧಿ ಕಾಯಿಲೆ. ಹೀಗಾಗಿ ವೈದ್ಯಕೀಯ ವೆಚ್ಚವನ್ನು ಮರುಪಾವತಿಸಲು ಸಾಧ್ಯವಿಲ್ಲ’ ಎಂದು ಅರ್ಜಿಯನ್ನು ತಿರಸ್ಕರಿಸಿತ್ತು. ಹೀಗಾಗಿ ನ್ಯಾಯ ಕೊಡಿಸುವಂತೆ ಶ್ರೀದೇವಿ ಅವರು 2019ರ ಜುಲೈ 25ರಂದು ಗ್ರಾಹಕರ ವೇದಿಕೆಯ ಮೆಟ್ಟಿಲು ಏರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯು, ‘ವಿಮಾ ಪಾಲಿಸಿ ತೆಗೆದುಕೊಳ್ಳುವ ಸಂದರ್ಭದಲ್ಲಿ ಅರ್ಜಿದಾರರಿಗೆ ದೀರ್ಘಾವಧಿ ಕಾಯಿಲೆ ಇತ್ತು ಎಂಬ ಬಗ್ಗೆ ಅಗತ್ಯ ದಾಖಲೆಗಳನ್ನು ಒದಗಿಸುವಲ್ಲಿ ಕಂಪನಿ ವಿಫಲವಾಗಿದೆ. ವೈದ್ಯಕೀಯ ವೆಚ್ಚವನ್ನು ಮರುಪಾವತಿಸದೇ ಕಂಪನಿಯು ಸೇವಾ ಲೋಪವೆಸಗಿದೆ. ಹೀಗಾಗಿ ಅರ್ಜಿದಾರರಿಗೆ ₹ 5,09,574 ಹಾಗೂ ಅದಕ್ಕೆ ದೂರು ಸಲ್ಲಿಸಿದ ದಿನದಿಂದ ಶೇ 9 ಬಡ್ಡಿ ಸೇರಿಸಿ ಪಾವತಿಸಬೇಕು’ ಎಂದು ಆದೇಶ ಮಾಡುವ ಮೂಲಕ ಗ್ರಾಹಕರ ಹಿತ ಕಾಪಾಡಿದೆ.

ಶ್ರೀದೇವಿ ಪರ ವಕೀಲ ಎಸ್‌.ಎಸ್‌. ಸಾಲಿಮಠ ವಾದ ಮಂಡಿಸಿದ್ದರು.

ದುರಸ್ತಿ ವೆಚ್ಚ ₹ 35,635 ಪಾವತಿಗೆ ಆದೇಶ

ದಾವಣಗೆರೆ: ನಗರದ ವೆಂಕಭೋವಿ ಕಾಲೊನಿಯ ಜೆ. ಪ್ರವೀಣ್‌ ಅವರ ಟೊಯೊಟಾ ಇಟಿಯೋಸ್‌ ಕಾರಿನ ದುರಸ್ತಿ ವೆಚ್ಚ ₹ 35,635 ಹಾಗೂ ಈ ಮೊತ್ತಕ್ಕೆ ಶೇ 6 ಬಡ್ಡಿಯನ್ನೂ ಸೇರಿಸಿ ಪ್ರತಿವಾದಿಗಳು ಪಾವತಿಸಬೇಕು ಎಂದು ಗ್ರಾಹಕರ ವೇದಿಕೆ ಆದೇಶಿಸಿದೆ.

ಪ್ರವೀಣ್‌ ಅವರು ತಮ್ಮ ಕಾರಿಗೆ ಒಂದು ವರ್ಷದ ಅವಧಿಗೆ 2017ರ ಮಾರ್ಚ್‌ 31ರಿಂದ ಅನ್ವಯವಾಗುವಂತೆ ವಾಹನ ವಿಮೆಯ ಕಂತಿನ ಹಣ ₹ 40,985 ಪಾವತಿಸಿದ್ದರು. ಆರ್‌ಟಿಒದಿಂದ ಅಗತ್ಯ ಪರವಾನಗಿಯನ್ನೂ ಪಡೆದಿದ್ದರು.
2017ರ ಆಗಸ್ಟ್‌ 30ರಂದು ನಗರದಲ್ಲಿ ವಾಹನ ಅಪಘಾತವಾಗಿತ್ತು. ಇದರ ದುರಸ್ತಿಗಾಗಿ ಪ್ರವೀಣ್‌ ₹ 47,500 ವೆಚ್ಚ ಮಾಡಿದ್ದರು. ದುರಸ್ತಿ ಹಣವನ್ನು ಪಾವತಿಸಲು ವಿಮಾ ಕಂಪನಿ ನಿರಾಕರಿಸಿದ್ದರಿಂದ 2019ರ ಜುಲೈ 5ರಂದು ಗ್ರಾಹಕರ ವೇದಿಕೆಯ ಮೆಟ್ಟಿಲನ್ನೇರಿದ್ದರು.

ಯುನೈಟೆಡ್‌ ಇಂಡಿಯಾ ಇನ್ಶೂರನ್ಸ್‌ ಕಂಪನಿಯ ಬೆಂಗಳೂರಿನಲ್ಲಿರುವ ಮೋಟರ್‌ ಡೀಲರ್‌ ವಿಭಾಗ, ದಾವಣಗೆರೆ ಕಚೇರಿಯ ವ್ಯವಸ್ಥಾಪಕ ಹಾಗೂ ಟೊಯಾಟೊ ಇಸುಶೊ ಇನ್ಶೂರನ್ಸ್‌ ಬ್ರೋಕರ್‌ ಇಂಡಿಯಾ ಕಂಪನಿಯನ್ನು ಪ್ರತಿವಾದಿಯನ್ನಾಗಿ ಮಾಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ ಹಾಗೂ ಸದಸ್ಯೆ ಜ್ಯೋತಿ ರಾದೇಶ್‌ ಜಂಬಗಿ ಅವರು, ‘ಅರ್ಜಿದಾರರಿಗೆ ಮಾನಸಿಕ ಹಿಂಸೆ ನೀಡಿರುವುದಕ್ಕೆ ₹ 5,000 ಹಾಗೂ ದಾವೆಗೆ ಮಾಡಿದ ವೆಚ್ಚ ಭರಿಸಲು ₹ 5,000 ಪಾವತಿಸಬೇಕು’ ಎಂದು ಆದೇಶಿಸಿದ್ದಾರೆ.

ಪ್ರವೀಣ್‌ ಪರ ವಕೀಲ ಆರ್‌. ಬಸವರಾಜ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT