ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

₹ 1.50 ಲಕ್ಷ ವೈದ್ಯಕೀಯ ವೆಚ್ಚ ಭರಿಸಲು ವಿಮಾ ಕಂಪನಿಗೆ ಆದೇಶ

₹ 15 ಸಾವಿರ ಪರಿಹಾರ ನೀಡಲು ವಿಮಾ ಕಂಪನಿಗೆ ಗ್ರಾಹಕರ ವೇದಿಕೆ ಸೂಚನೆ
Last Updated 30 ಜನವರಿ 2020, 10:08 IST
ಅಕ್ಷರ ಗಾತ್ರ

ದಾವಣಗೆರೆ: ಆರೋಗ್ಯ ವಿಮಾ ಪಾಲಿಸಿ ಜಾರಿಯಲ್ಲಿದ್ದರೂ ಭಾಗಶಃ ವೈದ್ಯಕೀಯ ವೆಚ್ಚವನ್ನಷ್ಟೇ ಭರಿಸುವ ಮೂಲಕ ಸೇವಾ ಲೋಪವೆಸಗಿದ ‘ಸ್ಟಾರ್‌ ಹೆಲ್ತ್‌ ಆ್ಯಂಡ್‌ ಅಲೈಡ್‌ ಇನ್ಶೂರನ್ಸ್‌’ ಕಂಪನಿಯನ್ನು ತರಾಟೆಗೆ ತೆಗೆದುಕೊಂಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು, ಪಾಲಿಸಿದಾರರಿಗೆ ₹ 1.50 ಲಕ್ಷ ಹಾಗೂ ಈ ಮೊತ್ತಕ್ಕೆ ಶೇ 9 ಬಡ್ಡಿಯನ್ನು ಪಾವತಿಸಬೇಕು ಎಂದು ಆದೇಶಿಸಿದೆ.

ಹರಿಹರದ ದೂರುದಾರರಾದ ಪುಂಡಲೀಕ ರಾವ್‌ ಬೊಂಗಲೆ ಅವರಿಗೆ ಮಾನಸಿಕ ಹಿಂಸೆ ಕೊಟ್ಟಿರುವುದಕ್ಕೆ ₹ 10 ಸಾವಿರ ಹಾಗೂ ದಾವೆಗೆ ಮಾಡಿದ ವೆಚ್ಚ ಭರಿಸಲು ₹ 5,000 ಪರಿಹಾರ ವಿಮಾ ಕಂಪನಿಯು 45 ದಿನಗಳ ಒಳಗೆ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ ಹಾಗೂ ಸದಸ್ಯೆ ಜ್ಯೋತಿ ರಾದೇಶ ಜಂಬಗಿ ಒಳಗೊಂಡ ಪೀಠವು ನಿರ್ದೇಶನ ನೀಡಿದೆ.

ಪುಂಡಲೀಕ ರಾವ್‌ ಬೊಂಗಲೆ ಅವರು 2017ರ ಮಾರ್ಚ್‌ 30ರಂದು ‘ಸ್ಟಾರ್‌ ಹೆಲ್ತ್‌ ಆ್ಯಂಡ್‌ ಅಲೈಡ್‌ ಇನ್ಶೂರನ್ಸ್‌’ ಕಂಪನಿಯ ‘ಸೀನಿಯರ್‌ ಸಿಟಿಜನ್‌ ರೆಡ್‌ ಕಾರ್ಪೆಟ್‌ ಹೆಲ್ತ್‌ ಇನ್ಶೂರೆನ್ಸ್‌’ ಪಾಲಿಸಿ ಮಾಡಿಸಿದ್ದರು. ₹ 10 ಲಕ್ಷ ವಿಮಾ ಸೌಲಭ್ಯ ಹೊಂದಿರುವ ಈ ಪಾಲಿಸಿಗೆ ವಾರ್ಷಿಕ ₹ 25,875 ಕಂತನ್ನೂ ಪಾವತಿಸಿದ್ದರು.

ಅಧಿಕ ರಕ್ತದೊತ್ತಡ ಹಾಗೂ ಮಧುಮೇಹದಿಂದ ಬಳಲುತ್ತಿದ್ದ ಪುಂಡಲೀಕ ಅವರಿಗೆ 2018ರ ಜನವರಿ ಮೊದಲ ವಾರ ಸುಸ್ತು ಕಾಣಿಸಿಕೊಂಡಿತು. ಹರಿಹರದ ವೈದ್ಯರ ಸಲಹೆಯಂತೆ ದಾವಣಗೆರೆಯ ಎಸ್‌ಎಸ್‌ಐಎಂಸಿ ಆ್ಯಂಡ್‌ ಆರ್‌.ಸಿ ಮತ್ತು ನಾರಾಯಣ ಹೃದಯಾಲಯದ ಆಸ್ಪತ್ರೆಗೆ ಜನವರಿ 17ರಂದು ದಾಖಲಾಗಿದ್ದರು. ವೈದ್ಯಕೀಯ ಪರೀಕ್ಷೆ ನಡೆಸಿದ ವೈದ್ಯರು, ಕೊರೊನರಿ ಆರ್ಟರಿ ಬೈಪಾಸ್‌ ಗ್ರಾಫ್ಟ್‌ (ಸಿ.ಎ.ಬಿ.ಜಿ) ತೆರೆದ ಹೃದಯ ಶಸ್ತ್ರಚಿಕಿತ್ಸೆ ಮಾಡಿಸಬೇಕು ಎಂಬ ಸಲಹೆ ನೀಡಿದರು. ಎರಡು ದಿನಗಳ ಬಳಿಕ ಅವರು ₹ 22,677 ಪಾವತಿಸಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದರು.

ಬಳಿಕ ಬೆಂಗಳೂರಿನ ಅಪೋಲೊ ಆಸ್ಪತ್ರೆಗೆ 2018ರ ಜನವರಿ 28ರಂದು ದಾಖಲಾಗಿದ್ದರು. 30ರಂದು ತೆರೆದ ಹೃದಯ ಶಸ್ತ್ರಚಿಕಿತ್ಸೆಯನ್ನೂ (ಸಿ.ಎ.ಬಿ.ಜಿ.) ಮಾಡಿಸಿಕೊಂಡಿದ್ದರು. ಕ್ಯಾಶ್‌ ಲೆಸ್‌ ಸೌಲಭ್ಯ ಪಡೆಯಲು ವಿಮಾ ಕಂಪನಿಯು ತಕ್ಷಣಕ್ಕೆ ಸ್ಪಂದಿಸದೇ ಇರುವುದರಿಂದ ಪುಂಡಲೀಕ ಅವರು ₹ 3,32,948 ವೈದ್ಯಕೀಯ ವೆಚ್ಚವನ್ನು ಭರಿಸಿದ್ದರು. ಹೀಗಾಗಿ ವೈದ್ಯಕೀಯ ವೆಚ್ಚವನ್ನು ಮರುಪಾವತಿಸುವಂತೆ ಅವರು ವಿಮಾ ಕಂಪನಿಗೆ ಅರ್ಜಿ ಸಲ್ಲಿಸಿದ್ದರು. ಈ ನಡುವೆ ವಿಮಾ ಕಂಪನಿಯ ಏಜೆಂಟರು 2018ರ ಮಾರ್ಚ್‌ 30ರಿಂದ ಒಂದು ವರ್ಷದ ಅವಧಿಗೆ ₹ 26,550 ಕಂತು ಪಡೆದು ಪಾಲಿಸಿಯನ್ನು ನವೀಕರಣವನ್ನೂ ಮಾಡಿಸಿಕೊಂಡಿದ್ದರು. ಹೀಗಿದ್ದರೂ ವಿಮಾ ಕಂಪನಿಯು ಮೆಡಿ ಕ್ಲೇಮ್‌ ಅನ್ನು ಭಾಗಶಃ ಮಾತ್ರ ಪರಿಗಣಿಸಿತ್ತು. 2018ರ ಡಿಸೆಂಬರ್‌ 12ರಂದು ₹ 1,56,056 ಅನ್ನು ಮಾತ್ರ ಪಾಲಿಸಿದಾರರಿಗೆ ಪಾವತಿಸಿತ್ತು. ಇದನ್ನು ಪ್ರಶ್ನಿಸಿ ಪುಂಡಲೀಕ ಅವರು 2019ರ ಫೆಬ್ರುವರಿ 14ರಂದು ಗ್ರಾಹಕರ ವೇದಿಕೆಯ ಮೆಟ್ಟಿಲನ್ನೇರಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ಗ್ರಾಹಕರ ವೇದಿಕೆಯು, ‘ಪಾಲಿಸಿ ಮಾಡಿಸಿಕೊಂಡಿರುವುದರಿಂದ ಭಾಗಶಃ ವೆಚ್ಚ ಭರಿಸುವ ಮೂಲಕ ವಿಮಾ ಕಂಪನಿಯು ತನ್ನ ಜವಾಬ್ದಾರಿಯಿಂದ ನುಣುಚಿಕೊಳ್ಳುವಂತಿಲ್ಲ. ಭಾಗಶಃ ಹಣವನ್ನು ಮಾತ್ರ ನೀಡಿರುವುದರಿಂದ ಪಾಲಿಸಿದಾರರು ಆರ್ಥಿಕ ನಷ್ಟದ ಜೊತೆಗೆ ಮಾನಸಿಕವಾಗಿಯೂ ಹಿಂಸೆಗೆ ಒಳಗಾಗಿದ್ದಾರೆ. ವಿಮೆ ಮಾಡಿಸುವುದರ ಉದ್ದೇಶವನ್ನೇ ಈಡೇರಿಸದಿದ್ದರೆ ಜನರು ವಿಮಾ ಕಂಪನಿಗಳ ಮೇಲೆ ವಿಶ್ವಾಸವನ್ನೇ ಕಳೆದುಕೊಳ್ಳುತ್ತಾರೆ. ಹೀಗಾಗಿ ಪಾಲಿಸಿದಾರರಿಗೆ ಬಾಕಿ ವೈದ್ಯಕೀಯ ವೆಚ್ಚವನ್ನು ಪಾವತಿಸಬೇಕು’ ಎಂದು ಆದೇಶದಲ್ಲಿ ಸೂಚಿಸಿದೆ.

ಪುಂಡಲೀಕ ಅವರ ಪರವಾಗಿ ವಕೀಲ ವಿಜಯೇಂದ್ರ ಎಂ.ಎನ್‌. ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT