ಭಾನುವಾರ, ಜನವರಿ 19, 2020
26 °C
ಕಾಮಗಾರಿ ಅಪೂರ್ಣ: ₹ 27,825 ಪಾವತಿಗೆ ಗ್ರಾಹಕರ ವೇದಿಕೆ ಸೂಚನೆ

ಕಟ್ಟಡ ಮಾಲೀಕನಿಗೆ ₹10 ಸಾವಿರ ಪರಿಹಾರ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ದಾವಣಗೆರೆ: ಕಾಮಗಾರಿ ಪೂರ್ಣಗೊಳಿಸದೆ ಸೇವಾ ಲೋಪವೆಸಗಿದ ಗುತ್ತಿಗೆ ಕೆಲಸಗಾರನು ಕಟ್ಟಡದ ಮಾಲೀಕರಿಗೆ ₹27,825 ಹಾಗೂ ಇದಕ್ಕೆ ಶೇ 6 ಬಡ್ಡಿಯನ್ನೂ ಪಾವತಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಆದೇಶಿಸಿದೆ.

ದೂರುದಾರರಾದ ಹರಪನಹಳ್ಳಿಯ ಡಿ. ವೆಂಕನಗೌಡ ಅವರಿಗೆ ಮಾನಸಿಕ ಹಿಂಸೆ ನೀಡಿರುವುದಕ್ಕೆ ₹ 5,000 ಹಾಗೂ ದಾವೆಗಾಗಿ ಮಾಡಿದ ವೆಚ್ಚ ಭರಿಸಲು ₹ 5,000 ಪರಿಹಾರವನ್ನು 60 ದಿನಗಳ ಒಳಗೆ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ ಹಾಗೂ ಸದಸ್ಯೆ ಜ್ಯೋತಿ ರಾಧೇಶ್‌ ಜಂಬಗಿ ಒಳಗೊಂಡ ಪೀಠವು ಈಚೆಗೆ ನಿರ್ದೇಶನ ನೀಡಿದೆ.

ಪ್ರಕರಣದ ವಿವರ 

ವೆಂಕನಗೌಡ ಅವರು ಅಪೂರ್ಣಗೊಂಡ ಆರ್‌ಸಿಸಿ ಕಟ್ಟಡದ ನಾಲ್ಕು ಮಳಿಗೆಗಳಲ್ಲಿ ಇನ್ನಷ್ಟು ಕಾಮಗಾರಿ ಕೈಗೊಳ್ಳಲು ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲ್ಲೂಕಿನ ಕೊಟ್ಟೂರು ಪಟ್ಟಣದ ಬಿ. ವೆಂಕಟೇಶ್‌ ಅವರಿಗೆ 2014ರಲ್ಲಿ ಗುತ್ತಿಗೆ ನೀಡಿದ್ದರು. ಪ್ರತಿ ಚದರ ಅಡಿಗೆ ₹ 9,500 ದರ ನಿಗದಿಗೊಳಿಸಿ ಬೆಳಿಗ್ಗೆ ಉಪಾಹಾರ ಹಾಗೂ ದಿನಕ್ಕೆ ಎರಡು ಊಟವನ್ನೂ ನೀಡಬೇಕು ಎಂದು ಮೌಖಿಕ ಒಪ್ಪಂದವಾಗಿತ್ತು.

ಕೆಲಸ ಆರಂಭಿಸಿದ ವೆಂಕಟೇಶ್‌ ಅವರು ಮಾಲೀಕರಿಂದ ₹ 48,800 ಹಣವನ್ನೂ ಪಡೆದುಕೊಂಡಿದ್ದರು. ಆದರೆ, ತನಗೆ ನೀಡಿದ ಹಣ ಕಡಿಮೆಯಾಗಿದೆ ಎಂದು ಗಲಾಟೆ ಮಾಡಿ ಮಧ್ಯದಲ್ಲೇ ಕೆಲಸವನ್ನು ಬಿಟ್ಟು ಹೋಗಿದ್ದರು. ತಾವು ಮಾಡಿದ ಕೆಲಸಕ್ಕೆ ಬಾಕಿ ಹಣ ಕೊಡಿಸಬೇಕು ಎಂದು ಅವರು ಕಾರ್ಮಿಕರ ಸಂಘಕ್ಕೆ ದೂರನ್ನು ನೀಡಿದ್ದರು. ಈ ಬಗ್ಗೆ ಪರಿಶೀಲನೆ ನಡೆಸಲು ಬಂದ ಪಂಚರು, ‘₹45,975 ಮೌಲ್ಯದ ಕೆಲಸ ಮಾತ್ರ ಕೈಗೊಳ್ಳಲಾಗಿದೆ. ಇನ್ನೂ ಎಂಟು ಕೆಲಸಗಳು ಬಾಕಿ ಇವೆ’ ಎಂದು ವರದಿ ನೀಡಿದರು. ಆದರೆ, ವೆಂಕಟೇಶ್‌ ಅವರು ಈ ವರದಿಗೆ ಸಹಿ ಹಾಕಲು ಒಪ್ಪಿರಲಿಲ್ಲ. ಹೆಚ್ಚುವರಿ ಪಡೆದಿದ್ದ ₹2,825 ಹಣವನ್ನೂ ಮರಳಿಸಲು ನಿರಾಕರಿಸಿದ್ದರು.

ಹೀಗಾಗಿ ವೆಂಕನಗೌಡ ಅವರು ತಮಗೆ ಆಗಿರುವ ಅನ್ಯಾಯಕ್ಕೆ ಪರಿಹಾರ ಕಲ್ಪಿಸಿಕೊಡುವಂತೆ 2015ರ ಜನವರಿ 30ರಂದು ಗ್ರಾಹಕರ ವೇದಿಕೆಯ ಮೆಟ್ಟಿಲನ್ನೇರಿದರು. ತಮಗಾದ ಅನ್ಯಾಯದ ಬಗ್ಗೆ ಪೂರಕ ದಾಖಲೆಗಳನ್ನು ನೀಡಿದ್ದ 73 ವರ್ಷದ ವೆಂಕನಗೌಡರು ಸ್ವತಃ ತಾವೇ ಗ್ರಾಹಕರ ವೇದಿಕೆಯಲ್ಲಿ ವಾದ ಮಂಡಿಸಿದರು.

‘ಒಂದೂವರೆ ತಿಂಗಳಲ್ಲಿ ಕೆಲಸ ಪೂರ್ಣಗೊಳಿಸಬೇಕಾಗಿತ್ತು. ಆದರೆ, ಮೂರು ತಿಂಗಳ ಕಾಲ ಉಪಾಹಾರ ಹಾಗೂ ಊಟ ನೀಡಿದರೂ ಕೆಲಸ ಪೂರ್ಣಗೊಳಿಸಿರಲಿಲ್ಲ. ಕೊನೆಗೆ ಬಾಕಿ ಉಳಿದಿದ್ದ ಕೆಲಸಗಳನ್ನು ₹ 25,000 ಕೊಟ್ಟು ಬೇರೊಬ್ಬರಿಂದ ಮಾಡಿಸಬೇಕಾಯಿತು’ ಎಂದು ವೆಂಕನಗೌಡ ಅವರು ನ್ಯಾಯಾಧೀಶರ ಗಮನಕ್ಕೆ ತಂದಿದ್ದರು.

ದಾಖಲೆಗಳನ್ನು ಪರಿಶೀಲಿಸಿದ ಗ್ರಾಹಕರ ವೇದಿಕೆಯು, ಗುತ್ತಿಗೆ ಕೆಲಸ ಪಡೆದಿದ್ದ ವೆಂಕಟೇಶ್‌ ಅವರಿಂದ ಸೇವಾ ಲೋಪವಾಗಿದೆ ಎಂದು ತೀರ್ಮಾನಿಸಿ, ಕಟ್ಟಡದ ಮಾಲೀಕರಿಗೆ ಪರಿಹಾರ ನೀಡುವಂತೆ ಆದೇಶಿಸಿದೆ.

ನಿವೇಶನದ ಮುಂಗಡ ಹಣ ಮರುಪಾವತಿಗೆ ಸೂಚನೆ

ಬೆಂಗಳೂರಿನಲ್ಲಿ ನೀವೇಶನ ಖರೀದಿಸಲು ಪಾವತಿಸಿದ್ದ ₹ 50 ಸಾವಿರ ಮುಂಗಡ ಹಣವನ್ನು ಶೇ 9 ಬಡ್ಡಿ ಸೇರಿಸಿ ಬೆಂಗಳೂರಿನ ‘ಗೋದ್ರೇಜ್‌ ಪ್ರಾಪರ್ಟೀಸ್‌’ ಕಂಪನಿಯು ದೂರುದಾರರಾದ ದಾವಣಗೆರೆಯ ಸಿ.ಸಿ. ಇಂದೂಧರ ಅವರಿಗೆ ಮರಳಿಸಬೇಕು ಎಂದು ಗ್ರಾಹಕರ ವೇದಿಕೆಯು ಬುಧವಾರ ಆದೇಶಿಸಿದೆ.

ದೂರುದಾರರಿಗೆ ಮಾನಸಿಕ ಹಿಂಸೆ ನೀಡಿರುವುದಕ್ಕೆ ₹ 5,000 ಹಾಗೂ ದಾವೆಗೆ ಮಾಡಿದ ವೆಚ್ಚ ಭರಿಸಲು ₹ 5,000 ಪರಿಹಾರವನ್ನು 45 ದಿನಗಳ ಒಳಗೆ ಪಾವತಿಸಬೇಕು ಎಂದು ವೇದಿಕೆಯ ಅಧ್ಯಕ್ಷ ಟಿ.ಎನ್‌. ಶ್ರೀನಿವಾಸಯ್ಯ ಹಾಗೂ ಸದಸ್ಯೆ ಜ್ಯೋತಿ ರಾದೇಶ್‌ ಜಂಬಗಿ ಒಳಗೊಂಡ ಪೀಠವು ನಿರ್ದೇಶನ ನೀಡಿದೆ.

ಇಂದೂಧರ ಅವರು ಬೆಂಗಳೂರಿನಲ್ಲಿ ವಸತಿ ನಿವೇಶನ ಖರೀದಿಸಲು 2018ರ ನವೆಂಬರ್‌ 28ರಂದು ‘ಗೋದ್ರೇಜ್‌ ಪ್ರಾಪರ್ಟೀಸ್‌’ ಕಂಪನಿಗೆ ಮುಂಗಡ ಹಣವಾಗಿ ₹ 50 ಸಾವಿರ ಪಾವತಿಸಿದ್ದರು. ಆದರೆ, ಯಾವುದೇ ಕಾರಣವನ್ನು ನೀಡದೇ ಮಂಜೂರಾಗಿದ್ದ ನಿವೇಶನವನ್ನು ರದ್ದುಗೊಳಿಸಲಾಗಿದೆ ಎಂದು ಕಂಪನಿಯು 2019ರ ಜನವರಿ 24ರಂದು ಇಮೇಲ್‌ ಕಳುಹಿಸಿತ್ತು. ಮುಂಗಡವಾಗಿ ಪಾವತಿಸಿದ್ದ ಹಣ ಮರಳಿಸುವಂತೆ ಕಂಪನಿಯವರನ್ನು ಕೋರಿದ್ದರೂ ಸ್ಪಂದಿಸದೇ ಇದ್ದಾಗ ಇಂದೂಧರ ಅವರು 2019ರ ನವೆಂಬರ್‌ 25ರಂದು ಗ್ರಾಹಕರ ವೇದಿಕೆಯ ಮೆಟ್ಟಿಲು ಏರಿದ್ದರು.

‘ಕಂಪನಿಯು ನಿವೇಶನ ಮಂಜೂರು ಮಾಡಬೇಕಿತ್ತು ಇಲ್ಲವೇ ಪಡೆದ ಹಣವನ್ನು ಗ್ರಾಹಕನಿಗೆ ಮರಳಿಸಬೇಕಾಗಿತ್ತು. ನಿವೇಶನ ಕೊಡದೆ ಮುಂಗಡ ಹಣವನ್ನೂ ಜಪ್ತಿ ಮಾಡಿಕೊಂಡಿರುವುದು ಸೇವಾ ಲೋಪವಾಗಿದ್ದು, ದೂರುದಾರರಿಗೆ ಪರಿಹಾರ ನೀಡಬೇಕು’ ಎಂದು ಗ್ರಾಹಕರ ವೇದಿಕೆಯು ಆದೇಶಿಸಿದೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು