ದಾವಣಗೆರೆ: ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಹುಣಸಘಟ್ಟ ಗ್ರಾಮದಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಮಹಿಳೆಯೊಬ್ಬರು ಶನಿವಾರ ಮೃತಪಟ್ಟಿದ್ದಾರೆ.
ಗ್ರಾಮದ ಚಂದ್ರಮ್ಮ ಹುರಳಹಳ್ಳಿ (60) ಮೃತರು. ಆ.21ರಂದು ಕಲುಷಿತ ನೀರು ಸೇವಿಸಿದ್ದರಿಂದ ಗ್ರಾಮದ ಏಳು ಜನರು ಅಸ್ವಸ್ಥರಾಗಿದ್ದರು. ವಾಂತಿ–ಭೇದಿಯಿಂದ ತೀವ್ರವಾಗಿ ಬಳಲಿದ್ದ ಚಂದ್ರಮ್ಮ ಅವರನ್ನು ಶಿವಮೊಗ್ಗದ ಮೆಗ್ಗಾನ್ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು.
‘ಕಲುಷಿತ ನೀರು ಸೇವಿಸಿದ ಬಳಿಕ ಚಂದ್ರಮ್ಮ ಅಸ್ವಸ್ಥಗೊಂಡಿದ್ದರು. ಆರೋಗ್ಯದ ಸಮಸ್ಯೆ ಉಲ್ಬಣಗೊಂಡಿತು. ಸಾವಿಗೆ ಕಲುಷಿತ ನೀರೇ ಕಾರಣ’ ಎಂದು ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.
‘ವಾಂತಿ–ಭೇದಿ ಹಾಗೂ ಜ್ವರದಿಂದ ಬಳಲುತ್ತಿದ್ದ ಚಂದ್ರಮ್ಮ ಅಂಗಾಂಗ ವೈಫಲ್ಯದಿಂದ ಮೃತಪಟ್ಟಿದ್ದಾರೆ. ಇದಕ್ಕೆ ಕಲುಷಿತ ನೀರು ಕಾರಣವೇ ಎಂಬುದು ಇನ್ನೂ ದೃಢಪಟ್ಟಿಲ್ಲ. ಉಳಿದ ಆರು ಜನರ ಆರೋಗ್ಯದಲ್ಲಿ ಚೇತರಿಕೆ ಕಾಣಿಸಿಕೊಂಡಿದ್ದು ಮನೆಗೆ ಮರಳಿದ್ದಾರೆ’ ಎಂದು ಹೊನ್ನಾಳಿ ತಾಲ್ಲೂಕು ಪ್ರಭಾರ ಆರೋಗ್ಯಾಧಿಕಾರಿ ಡಾ.ಎನ್.ಎಚ್. ಗಿರೀಶ್ ತಿಳಿಸಿದ್ದಾರೆ.
‘ಗ್ರಾಮಕ್ಕೆ ಪೂರೈಕೆ ಮಾಡಿದ ನೀರಿನ ಮಾದರಿಗಳನ್ನು ಸಂಗ್ರಹಿಸಿ ಚನ್ನಗಿರಿ ಹಾಗೂ ಶಿವಮೊಗ್ಗ ಪ್ರಯೋಗಾಲಯಗಳಿಗೆ ಕಳುಹಿಸ ಲಾಗಿತ್ತು. ಚನ್ನಗಿರಿ ಪ್ರಯೋಗಾಲಯದ ವರದಿ ಕೈಸೇರಿದ್ದು, ನೀರು ಕಲುಷಿತ ಗೊಂಡಿರುವುದು ದೃಢಪಟ್ಟಿಲ್ಲ. ಶಿವಮೊಗ್ಗ ಪ್ರಯೋಗಾಲಯದ ವರದಿಗೆ ಕಾಯುತ್ತಿದ್ದೇವೆ’ ಎಂದು ಹೊನ್ನಾಳಿ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಎಂ.ಆರ್.ಪ್ರಕಾಶ್ ತಿಳಿಸಿದ್ದಾರೆ.
ಗ್ರಾಮದಲ್ಲಿ ನೀರು ಪೂರೈಸಲು ಅಳವಡಿಸಿರುವ ಪೈಪ್‌ಗಳು ಚರಂಡಿ ಗಳಲ್ಲಿ ಇವೆ. ಪೈಪ್‌ಗಳಲ್ಲಿ ದೋಷ ಇದ್ದುದರಿಂದ ಚರಂಡಿಯ ನೀರೂ ಪೂರೈಕೆಯಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.