ವಾಯುಮಾಲಿನ್ಯ ಮಾಹಿತಿ ಕ್ಷಣ ಕ್ಷಣಕ್ಕೂ ಲಭ್ಯ

7
ದಾವಣಗೆರೆಯಲ್ಲಿ ನಿರಂತರ ವಾಯು ಗುಣಮಟ್ಟ ಮಾಪನ ಕೇಂದ್ರ ಆರಂಭ

ವಾಯುಮಾಲಿನ್ಯ ಮಾಹಿತಿ ಕ್ಷಣ ಕ್ಷಣಕ್ಕೂ ಲಭ್ಯ

Published:
Updated:
Deccan Herald

ದಾವಣಗೆರೆ: ನಗರದಲ್ಲಿ ಇನ್ನು ಮುಂದೆ ವಾಯು ಮಾಲಿನ್ಯ ಪ್ರಮಾಣ ತಿಳಿಯುವುದು ಸುಲಭ. ವಾತಾವರಣದಲ್ಲಿ ದೂಳಿನ ಕಣ, ಸಲ್ಫರ್‌ ಡಯಾಕ್ಸೈಡ್‌, ನೈಟ್ರೊಜನ್ ಆಕ್ಸೈಡ್‌, ಅಮೋನಿಯಂ, ಕಾರ್ಬನ್‌ ಡಯಾಕ್ಸೈಡ್‌ ಪ್ರಮಾಣ ಎಷ್ಟಿದೆ ಎಂಬ ಮಾಹಿತಿ ಕ್ಷಣ ಕ್ಷಣಕ್ಕೂ ನಾಗರಿಕರ ಬೆರಳ ತುದಿಯಲ್ಲಿ ಲಭ್ಯವಾಗಲಿದೆ.

ನಗರದ ದೇವರಾಜ ಅರಸು ಬಡಾವಣೆಯಲ್ಲಿರುವ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪ್ರಾದೇಶಿಕ ಕಚೇರಿ ಆವರಣದಲ್ಲಿ ತೆರೆದಿರುವ ‘ನಿರಂತರ ವಾಯು ಗುಣಮಟ್ಟ ಮಾಪನ ಕೇಂದ್ರ’ದ (Continuous Ambient Air Quality Monitoring Station – CAAQMS) ಅತ್ಯಾಧುನಿಕ ಯಂತ್ರವು ವಾಯು ಗುಣಮಟ್ಟವನ್ನು ಕ್ಷಣ ಕ್ಷಣಕ್ಕೂ ವಿಶ್ಲೇಷಿಸುತ್ತದೆ. ಮಂಡಳಿ ಕಚೇರಿಯ ಆವರಣದಲ್ಲಿ ಅಳವಡಿಸಿರುವ ಎಲ್‌ಇಡಿ ಸ್ಕ್ರೀನ್‌ನಲ್ಲಿ ಮಾಹಿತಿಯನ್ನು ತೋರಿಸುತ್ತದೆ. ಜೊತೆಗೆ ವೆಬ್‌ಸೈಟ್‌ನಲ್ಲೂ ಅದು ಅಪ್‌ಡೇಟ್‌ ಆಗುತ್ತಿರುತ್ತದೆ.

‘₹ 1.50 ಕೋಟಿ ವೆಚ್ಚದಲ್ಲಿ ಅಮೆರಿಕ ಮೂಲದ ‘ಕೆಮಟ್ರೊಲ್ಸ್‌’ ಕಂಪನಿಯ ಸಹಯೋಗದಲ್ಲಿ ವಾಯು ಗುಣಮಟ್ಟ ಮಾಪನ ಅತ್ಯಾಧುನಿಕ ಕೇಂದ್ರವನ್ನು ಆರಂಭಿಸಲಾಗಿದೆ. ಈ ಹಿಂದೆ ಮಂಡಳಿಯ ಸಿಬ್ಬಂದಿ ಯಂತ್ರವನ್ನು ತೆಗೆದುಕೊಂಡು ಹೋಗಿ ಮಾದರಿ ಸಂಗ್ರಹಿಸಿ ತಂದು ವಿಶ್ಲೇಷಣೆ ಮಾಡಬೇಕಾಗುತ್ತಿತ್ತು. ಈಗ ಈ ಯಂತ್ರವೇ ಪ್ರತಿ 15 ನಿಮಿಷಗಳಿಗೆ ಒಮ್ಮೆ ನಿಖರವಾದ ಮಾಹಿತಿ ನೀಡುತ್ತಿದೆ’ ಎಂದು ಪ್ರಾದೇಶಿಕ ಪರಿಸರ ಅಧಿಕಾರಿ ಕೆ.ಬಿ. ಕೊಟ್ರೇಶ್‌ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಈ ಯಂತ್ರವು ಸುತ್ತಲಿನ 10 ಮೀಟರ್‌ ಸುತ್ತಳತೆ ವ್ಯಾಪ್ತಿಯಲ್ಲಿ ಗಾಳಿಯಲ್ಲಿರುವ ಅನಿಲ ಹಾಗೂ ದೂಳಿನ ಕಣಗಳ ಪ್ರಮಾಣವನ್ನು ಅಳೆಯುತ್ತದೆ. ಎಷ್ಟು ಪ್ರಮಾಣದಲ್ಲಿ ಇರಬೇಕು ಹಾಗೂ ಸದ್ಯ ಎಷ್ಟು ಪ್ರಮಾಣದಲ್ಲಿದೆ ಎಂಬ ಮಾಹಿತಿಯನ್ನು ಕೊಡುತ್ತದೆ. ದಿನದ 24 ಗಂಟೆಯೂ ಇದು ಕಾರ್ಯನಿರ್ವಹಿಸುತ್ತದೆ. ಇದು ಸಂಗ್ರಹಿಸಿದ ಮಾಹಿತಿ ಮಂಡಳಿಯ ವೆಬ್‌ಸೈಟ್‌ ಲಿಂಕ್‌: kspcb.chemtrolsನಲ್ಲಿ ಪ್ರತಿ 15 ನಿಮಿಷಗಳಿಗೆ ಒಮ್ಮೆ ಅಪ್‌ಡೇಟ್‌ ಆಗುತ್ತಿದೆ. ಈ ಲಿಂಕ್‌ ಮೂಲಕ ಮೊಬೈಲ್‌ನಲ್ಲೇ ಮಾಹಿತಿ ಪಡೆದುಕೊಳ್ಳಬಹುದಾಗಿದೆ’ ಎಂದು ವಿವರ ನೀಡಿದರು.

‘ಸ್ಕ್ರೀನ್‌ನಲ್ಲಿ ವಾಯು ಗುಣಮಟ್ಟದ ಜೊತೆಗೆ ಗಾಳಿಯ ವೇಗ– ದಿಕ್ಕು, ತಾಪಮಾನ, ತೇವಾಂಶ ಕುರಿತ ಮಾಹಿತಿಗಳೂ ಕಾಣಿಸಿಕೊಳ್ಳುತ್ತವೆ. ‘ಸೈಕಲ್‌ ಸವಾರಿ ವಾಯು ಮಾಲಿನ್ಯ ಪರಾರಿ’ಯಂತಹ ಪರಿಸರ ಸಂರಕ್ಷಣೆ ಕುರಿತ ಸಂದೇಶವೂ ನಡುವೆ ಬಂದು ಹೋಗುವಂತೆ ಮಾಡಲಾಗಿದೆ’ ಎಂದರು.

‘ವಾಯು ಗುಣಮಟ್ಟವನ್ನು ಅಳೆಯುವಾಗ ಮುಖ್ಯವಾಗಿ PM 2.5, PM 10 (ವಾತಾವರಣದಲ್ಲಿನ ದೂಳಿನ ಕಣದ ಪ್ರಮಾಣ) ಹಾಗೂ ಅನಿಲಗಳಾದ ನೈಟ್ರೋಜನ್ ಆಕ್ಸೈಡ್‌ (NO2), ಅಮೋನಿಯಾ (NH3), ಸಲ್ಫರ್‌ ಡಯಾಕ್ಸೈಡ್‌ (SO2), ಕಾರ್ಬನ್‌ ಮಾನಾಕ್ಸೈಡ್‌ (CO) ವಾತಾವರಣದಲ್ಲಿ ಎಷ್ಟು ಪ್ರಮಾಣದಲ್ಲಿದೆ ಎಂಬುದನ್ನು ಪರೀಕ್ಷಿಸಲಾಗುತ್ತದೆ. ಸದ್ಯ ದಾವಣಗೆರೆಯಲ್ಲಿ ಇವು ನಿಗದಿತ ಮಾನದಂಡದ ಪ್ರಮಾಣದ ಒಳಗೆ ಇವೆ’ ಎಂದರು.

‘ನಗರದಲ್ಲಿ ಹಲವು ಕಡೆ ಸಿಮೆಂಟ್‌ ರಸ್ತೆ ಆಗಿರುವುದರಿಂದ ಈಗ ಗಾಳಿಯಲ್ಲಿ ದೂಳಿನ ಪ್ರಮಾಣ ಮೊದಲಿಗಿಂತಲೂ ಬಹಳ ಇಳಿಮುಖವಾಗಿದೆ. ಹೀಗಾಗಿ ಈಗ ನಿಗದಿತ ಮಾನದಂಡಕ್ಕಿಂತ PM 2.5 ಹಾಗೂ PM 10 ಕಡಿಮೆ ಪ್ರಮಾಣದಲ್ಲಿದೆ’ ಎಂದು ತಿಳಿಸಿದರು.

‘ಸ್ಮಾರ್ಟ್‌ ಸಿಟಿ ಯೋಜನೆಯಡಿ ಬಸ್‌ನಿಲ್ದಾಣ, ಮಂಡಕ್ಕಿ ಭಟ್ಟಿ, ಶಾಮನೂರು ರಸ್ತೆ ಸೇರಿ ಐದು ಕಡೆ ಇದೇ ರೀತಿ ವಾಯು ಗುಣಮಟ್ಟ ಮಾಹಿತಿ ನೀಡುವ ಯಂತ್ರ ಅಳವಡಿಸಲು ಉದ್ದೇಶಿಸಲಾಗಿದೆ’ ಎಂದೂ ಅವರು ಮಾಹಿತಿ
ನೀಡಿದರು.

**

ವಿಶ್ಲೇಷಣೆ ಸುಲಭ

‘ವಾತಾವರಣದಲ್ಲಿ ಯಾವ ಬಗೆಯ ಮಾಲಿನ್ಯ ಹೆಚ್ಚಾಗುತ್ತಿದೆ ಎಂಬ ಮಾಹಿತಿ ಪ್ರತಿ ದಿನವೂ ಲಭಿಸುತ್ತಿದೆ. ಈ ಮಾಹಿತಿ ಆಧಾರದಲ್ಲಿ ಮಾಲಿನ್ಯವು ಕಾರ್ಖಾನೆಗಳಿಂದಲೋ ಅಥವಾ ವಾಹನಗಳಿಂದಾಗಿ ಆಗುತ್ತಿದೆಯೇ ಎಂಬುದನ್ನು ವಿಶ್ಲೇಷಿಸಲು ಸುಲಭವಾಗಲಿದೆ. ವಾಹನಗಳಿಂದ ವಾಯುಮಾಲಿನ್ಯ ಪ್ರಮಾಣ ಹೆಚ್ಚಾಗುತ್ತಿದ್ದರೆ ಆರ್‌.ಟಿ.ಒ.ಗೆ ವರದಿ ನೀಡಿ, ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು. ಕಾರ್ಖಾನೆಗಳಿಂದ ಮಾಲಿನ್ಯವಾಗುತ್ತಿದ್ದರೆ ಅವುಗಳ ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು’ ಎಂದು ಕೆ.ಬಿ. ಕೊಟ್ರೇಶ್‌ ತಿಳಿಸಿದರು.

**

ಅಂಕಿ– ಅಂಶಗಳು

₹ 1.50 ಕೋಟಿ ವೆಚ್ಚದಲ್ಲಿ ಮಾಪನ ಕೇಂದ್ರ ನಿರ್ಮಾಣ

10 ಮೀಟರ್‌ ಸುತ್ತಲಿನ ವಾಯು ಗುಣಮಟ್ಟ ವಿಶ್ಲೇಷಣೆ

15 ನಿಮಿಷಗಳಿಗೆ ಒಮ್ಮೆ ವಾಯು ಗುಣಮಟ್ಟದ ಮಾಹಿತಿ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !