ಮಠದಲ್ಲಿ ನಿರಂತರ ದಾಸೋಹಕ್ಕೆ ಚಿಂತನೆ: ವಚನಾನಂದ ಸ್ವಾಮೀಜಿ ಭರವಸೆ

ಮಂಗಳವಾರ, ಜೂನ್ 25, 2019
22 °C

ಮಠದಲ್ಲಿ ನಿರಂತರ ದಾಸೋಹಕ್ಕೆ ಚಿಂತನೆ: ವಚನಾನಂದ ಸ್ವಾಮೀಜಿ ಭರವಸೆ

Published:
Updated:
Prajavani

ದಾವಣಗೆರೆ: ರಾಜಕೀಯ, ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ತುಳಿತಕ್ಕೆ ಒಳಗಾದ ಸಮಾಜದ ಜನರ ಬೆಂಬಲಕ್ಕೆ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠ ಇದ್ದು, ಸಮಾಜದವರು ಖಿನ್ನತೆಗೆ ಒಳಗಾಗಬೇಕಿಲ್ಲ ಎಂದು ಹರಿಹರದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ ಭರವಸೆ ನೀಡಿದರು.

ವೀರಶೈವ ಲಿಂಗಾಯತ ಪಂಚಮಸಾಲಿ ಸಮಾಜ, ಹರ ಸೇವಾ ಸಂಸ್ಥೆ ವತಿಯಿಂದ ಸಮಾಜದವರಿಗೆ ಸೋಮವಾರ ಆಯೋಜಿಸಿದ್ದ 16ನೇ ಸಾಮೂಹಿಕ ವಿವಾಹ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಎಲ್ಲಾ ಸಮಾಜಗಳೂ ಮೀಸಲಾತಿ ಪಡೆದುಕೊಂಡವು. ನಮ್ಮ ಸಮಾಜಕ್ಕೆ ಮೀಸಲಾತಿ ಸಿಕ್ಕಿಲ್ಲ. ಕೇಂದ್ರ ಸರ್ಕಾರ ಆರ್ಥಿಕವಾಗಿ ಹಿಂದುಳಿದ ಪಂಚಮಸಾಲಿ ಸಮಾಜದವರಿಗೆ ಶಿಕ್ಷಣದಲ್ಲಿ ಶೇ 10ರಷ್ಟು ಮೀಸಲಾತಿ ನೀಡಿದೆ. ಉದ್ಯೋಗದಲ್ಲೂ ಮೀಸಲಾತಿ ನೀಡಿರುವುದು ಸಂತೋಷದ ಸಂಗತಿ ಎಂದರು.

‘ಪಂಚಮಸಾಲಿ ಸಮಾಜ ಕಟ್ಟುವಲ್ಲಿ ಹನುಮನಾಳ್‌ ಗುರು ಶ್ರಮಿಸಿದ್ದಾರೆ. ಹಾಗಾಗಿ ಈ ಸಂಸ್ಥೆ 25 ವರ್ಷ ಪೂರೈಸಿದೆ. ಹನುಮಾನಾಳ ಗುರುಗಳ ಮಾರ್ಗದರ್ಶನದಲ್ಲಿ ಸಮಾಜದ ಮುಖಂಡರು ಸಮಾಜ ಕಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. 10 ವರ್ಷಗಳಲ್ಲಿ ಜಗತ್ತು ಪಂಚಮಸಾಲಿ ಪೀಠವನ್ನು ನೋಡುತ್ತಿದೆ. ವಿದೇಶಿಯರು ಇಲ್ಲಿ ಬಂದು ಇಷ್ಟಲಿಂಗ ಪೂಜೆ ಮಾಡುತ್ತಿದ್ದಾರೆ. ಸ್ವಚ್ಛ ಮಾಡುತ್ತಿದ್ದಾರೆ. ಯೋಗ, ಪ್ರಾಣಾಯಾಮ, ಧ್ಯಾನ ಮಾಡುತ್ತಿದ್ದಾರೆ’ ಮುಂದಿನ ದಿನಗಳಲ್ಲಿ ಕನ್ನಡ ನಾಡಿನ ಕೇಂದ್ರ ಹರಿಹರ ಆಗಬೇಕು’ ಎಂದು ಹೇಳಿದರು.

‘ನಮ್ಮ ನಾಡಿನಲ್ಲಿ ಬರ ಇದೆ. ಮುಂಗಾರು ಮಳೆ ಬಿದ್ದಿಲ್ಲ. ಧರ್ಮಸ್ಥಳದಲ್ಲಿ ನೀರಿನ ಕೊರತೆಯಿಂದಾಗಿ ಪ್ರವಾಸ ಮುಂದೂಡಿ ಎಂದು ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಪತ್ರ ಬರೆದಿದ್ದು, ಹಾಗಾಗಿ ನೀರಿನ ಬಗ್ಗೆ ಯೋಚನೆ ಮಾಡಬೇಕಿದೆ. ಕಾಲದಿಂದ ಕಾಲಕ್ಕೆ ವ್ಯವಸ್ಥೆಗೆ ಅನುಗುಣವಾಗಿ ಬದುಕುವ ಪರಿಸ್ಥಿತಿ ನಿರ್ಮಾಣ ಮಾಡಬೇಕಿದೆ’ ಎಂದರು.

‘ಸಿದ್ದಗಂಗಾ ಮಠ ತ್ರಿವಿಧ ದಾಸೋಹದ ಪೀಠ. ಆದರೆ ಹರಿಹರ ಪೀಠವು ಪಂಚದಾಸೋಹ ನಡೆಯುತ್ತಿದೆ. ಈ ಹಿಂದೆ ಅಕ್ಷರ, ಅನ್ನ, ಆಶ್ರಯ ನೀಡುವ ಕೆಲಸವಾಗುತ್ತಿದ್ದು, ನಾವು ಬಂದ ಮೇಲೆ ಆರೋಗ್ಯ, ಅಧಾತ್ಮ ದಾಸೋಹ ನಡೆಯುತ್ತಿದೆ. ಪಂಚಚಾರವನ್ನು ಅಳವಡಿಸಿಕೊಂಡವರೆ ಪಂಚಮಸಾಲಿಗಳು. ಮುಂದಿನ ದಿನಗಳಲ್ಲಿ ಸಮಾಜದಿಂದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆಯೋಜಿಸಲಿದೆ’ ಎಂದು ಹೇಳಿದರು.

‘ಪೀಠ ಬೆಳೆಯುತ್ತಿದೆ. ಮಠಕ್ಕೆ ಬರಬೇಕಾದರೆ ಹಾರ ತುರಾಯಿ ತರಬೇಡಿ, ಸಮಾಜ ಉಳಿಯಬೇಕು ತನು, ಮನ, ಧನವನ್ನು ತನ್ನಿ. ಎಂದರೆ ದವಸ ಧಾನ್ಯ, ಅಕ್ಕಿ, ಉಪ್ಪು ಬೆಲ್ಲವನ್ನು ತನ್ನಿ. ಇದು ಮತ್ತೊಬ್ಬರಿಗೆ ನೆರವಾಗುತ್ತದೆ. ಮುಂದಿನ ವರ್ಷದಿಂದ ಹರಿಹರ ಪೀಠದಲ್ಲಿ ಸಾಮೂಹಿಕ ವಿವಾಹ ನಡೆಯಲಿದೆ. ಅಲ್ಲದೇ ಧರ್ಮಸ್ಥಳ ಮಾದರಿಯಲ್ಲಿ ಮಠದಲ್ಲಿ ನಿರಂತರ ದಾಸೋಹ ನಡೆಯಲಿದೆ’ ಎಂದರು.

ಪೀಠದ ಹಗರಿಬೊಮ್ಮನಹಳ್ಳಿ ಶಾಖಾ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ‘ ‘ಸಂಪತ್ತು ಇರುವುದು ದಾನ ಮಾಡಲು, ಅಧಿಕಾರ ಇರುವುದು ಸೇವೆ ಮಾಡಲು ಎಂಬುದನ್ನು ತಿಳಿದು ಜನರ ಸೇವೆ ಮಾಡಲು ಮುಂದಾಗಬೇಕು. ಒಂದು ಮಹಾನ್ ಕಾರ್ಯ ಆಗಬೇಕಾದರೆ ಮಹಾನ್‌ ತ್ಯಾಗ ಆಗಬೇಕು ಅರಿಯಬೇಕು. ಸಮಾಜದ ಜನರು ಚಟವಂತರಾಗಬೇಡಿ, ಚಟವನ್ನು ಹತ್ತಿಕ್ಕಿ ಗುಣವಂತರಾಗಿ’ ಎಂದು ಸಲಹೆ ನೀಡಿದರು.

ಕರ್ನಾಟಕ ರಾಜ್ಯ ವೀರಶೈವ ಲಿಂಗಾಯತ ಪಂಚಮಸಾಲಿ ಸಂಘದ ಮಾಜಿ ಅಧ್ಯಕ್ಷ ಬಾವಿ ಬೆಟ್ಟಪ್ಪ ‘ಸಾಮೂಹಿಕ ವಿವಾಹದಲ್ಲಿ ಮದುವೆಯಾದ ದಂಪತಿ ಸಮಾಜದ ಸಂಘಟನೆಗೆ ತೊಡಗಿಸಿಕೊಳ್ಳದಿರುವುದು ಬೇಸರದ ಸಂಗತಿ. ಮುಂದಿನ ದಿನಗಳಲ್ಲಿ ಸಮಾಜದ ಸಂಘಟನೆಗೆ ಕೈಜೋಡಿಸಿ’ ಎಂದು ಮನವಿ ಮಾಡಿದರು.

ಸಂಘದ ರಾಜ್ಯ ಖಜಾಂಚಿ ಮಲ್ಲಣ್ಣ ಮೊಮ್ಮಸಾಗರ, ಹರ ಸೇವಾ ಸಂಘದ ಅಧ್ಯಕ್ಷ ಬಿ.ಸಿ. ಉಮಾಪತಿ, ಹದಡಿ ನಾಗರಾಜ್, ಮಂಜುನಾಥ್‌ ಪುರವಂತರ್ ಇದ್ದರು.

ಪಿಎಚ್‌.ಡಿ ಪದವಿ ಪಡೆದ ಡಾ.ವಿಕಾಸ್‌, ಡಾ. ಗಿರೀಶ್ ಅವರನ್ನು ಸನ್ಮಾನಿಸಲಾಯಿತು. ಕೆ.ಎಂ. ಮಲ್ಲಿಕಾರ್ಜುನಪ್ಪ, ಎ.ಎಂ. ಕೊಟ್ರೇಶ್ವರ, ಕಂಚಿಕೆರೆ ಕರಿಬಸಪ್ಪ, ಕೆ.ಎಸ್‌. ವಿಶ್ವನಾಥ್‌, ವಸಂತ ಶಾಂತರಾಜ್‌ ಹಾಗೂ ಮಂಜುಳ ಪಾಟೀಲ್ ಅವರಿಗೆ ಕ್ರಿಯಾಶೀಲ ಚತುರ–ಚತುರೆ ಪ್ರಶಸ್ತಿ ನೀಡಲಾಯಿತು.

ಅಂಕಿ ಅಂಶ

28 ಜೋಡಿಗಳಿಗೆ ಸಾಮೂಹಿಕ ವಿವಾಹ

1036 ಪೀಠದಿಂದ ಈವರೆಗೆ ನಡೆದ ವಿವಾಹಗಳ ಸಂಖ್ಯೆ

 

 

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !