ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಾಯಿಯ ಆರೋಗ್ಯ ಕುಟುಂಬದ ಸೌಭಾಗ್ಯ

Last Updated 18 ಮೇ 2018, 19:30 IST
ಅಕ್ಷರ ಗಾತ್ರ

ಅಂದು ಬೆಳಿಗ್ಗೆಯಿಂದಲೇ ಮೇಲುಸಿರು ಬರುತ್ತಿದ್ದರೂ ನನ್ನ ಗೆಳತಿಯ ತಾಯಿ ಅದೇ ಊರಿನಲ್ಲಿದ್ದ ತನ್ನ ಮಗಳಿಗೆ ಕರೆ ಮಾಡಿ ತಿಳಿಸಲು ಹಿಂಜರಿದಿದ್ದರು; ಮಗಳು ಕೂಡ ವೈದ್ಯೆಯೇ. ‘ಮೊದಲೇ ಬಿಡುವಿಲ್ಲದ ದಿನಚರಿ ಮಗಳದ್ದು; ತಾನ್ಯಾಕೆ ಕರೆ ಮಾಡಿ ಆಕೆಗೆ ತೊಂದರೆ ಕೊಡುವುದು? ಸಂಜೆ ಹೇಗೂ ಮನೆಗೆ ಬರುತ್ತಾಳಲ್ಲ ಆಗ ಹೇಳಿದರೆ ಸರಿ’ ಎಂದು ಸಂಜೆಯವರೆಗೂ ಆ ಅಹಿತಕರ ಅನುಭವವನ್ನು ಕಷ್ಟಪಟ್ಟು ಸಹಿಸಿಕೊಂಡಿದ್ದರು.

ಸಂಜೆ ಮನೆಗೆ ಬಂದ ಗೆಳತಿ, ವಿಷಯ ತಿಳಿದು ಗಾಬರಿಯಿಂದ ತನ್ನ ಅಮ್ಮನನ್ನು ಆಸ್ಪತ್ರೆಗೆ ಕರೆದೊಯ್ದಾಗ ಅಲ್ಲಿ ವೈದ್ಯರು ನಡೆಸಿದ ತಪಾಸಣೆಗಳಿಂದ ತಿಳಿದು ಬಂದದ್ದು, ಆಕೆಗೆ ಲಘು ಹೃದಯಾಘಾತದ ಲಕ್ಷಣಗಳಿದ್ದವು ಎಂದು. ಅದೃಷ್ಟವಶಾತ್ ಯಾವುದೇ ತೊಂದರೆಯಾಗಿರಲಿಲ್ಲ.

ನಿಜ, ತಾಯಂದಿರು ಕುಟುಂಬದ ಎಲ್ಲ ಸದಸ್ಯರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರಲ್ಲಿ ಪರಿಪೂರ್ಣರು! ತನ್ನ ಗಂಡ, ಮಕ್ಕಳು, ಅತ್ತೆ-ಮಾವ, ಅಪ್ಪ–ಅಮ್ಮ – ಹೀಗೆ ಎಲ್ಲರ ಆರೋಗ್ಯದ ಬಗ್ಗೆಯೂ ಗಮನ ವಹಿಸುತ್ತಾರೆ. ಆದರೆ, ತನ್ನದೇ ಆರೋಗ್ಯದ ವಿಚಾರ ಬಂದಾಗ ಅದೇಕೋ ತುಸು ನಿರ್ಲಕ್ಷ್ಯ ತೋರುತ್ತಾರೆ!

ಒಂದು ಸ್ವಸ್ಥ ಕುಟುಂಬ ಹಾಗೂ ಸ್ವಸ್ಥ ಸಮಾಜದ ನಿರ್ಮಾಣದಲ್ಲಿ ಆರೋಗ್ಯವಂತ ತಾಯಿಯ ಪಾತ್ರ ಬಹಳ ಮಹತ್ವದ್ದು. ತಾಯಿಯ ಆರೋಗ್ಯದ ಕಾಳಜಿ ಆಕೆಯ ತಾಯ್ತನದ ಆರಂಭದಲ್ಲೇ ಶುರುವಾಗಬೇಕು. ಅಂದು ಶುರುವಾಗುವ ಆ ಕಾಳಜಿ ಆಕೆಯ ಜೀವನದ ವಿವಿಧ ಮುಖ್ಯ ಹಂತಗಳಲ್ಲಿಯೂ ಮುಂದುವರೆಯಬೇಕು. ಈ ನಿಟ್ಟಿನಲ್ಲಿ ಕುಟುಂಬದ ಎಲ್ಲ ಸದಸ್ಯರ ಬೆಂಬಲ, ಜೊತೆಗೆ ಸ್ವತಃ ತಾಯಿಯ, ಕುಟುಂಬವೈದ್ಯರ ಹಾಗೂ ಸರ್ಕಾರದ ಸವಲತ್ತುಗಳ ಬೆಂಬಲವೂ ಅಗತ್ಯವೇ.

ಗರ್ಭಧಾರಣೆಯ ಮುನ್ನ ಆರೋಗ್ಯ ಕಾಳಜಿ

ಇಂದಿನ ದಿನಗಳಲ್ಲಿ ಹೆಣ್ಣುಮಕ್ಕಳಿಗೆ ಗರ್ಭಧಾರಣೆಗೆ ಮುನ್ನವೇ ವೈದ್ಯರೊಂದಿಗೆ ಸಮಾಲೋಚನೆ ಅತ್ಯಗತ್ಯ. ಗರ್ಭಪೂರ್ವ ಸಮಾಲೋಚನೆ ಪಾಶ್ಚಾತ್ಯ ದೇಶಗಳಲ್ಲಿ ಈಗಾಗಲೇ ರೂಢಿಯಲ್ಲಿದೆಯಾದರೂ ನಮ್ಮ ದೇಶದಲ್ಲಿ ಇದರ ಮಹತ್ವದ ಅರಿವು ಇನ್ನೂ ಮೂಡಬೇಕಾಗಿದೆ.

‘ಪ್ರಶಸ್ತ ಆರೋಗ್ಯಸ್ಥಿತಿಯಲ್ಲಿ ಆಕೆ ಗರ್ಭಿಣಿಯಾಗಬೇಕು ಮತ್ತು ಆಕೆಯ ಗರ್ಭಾವಸ್ಥೆಯ ಅವಧಿ, ಪ್ರಸವ ಹಾಗೂ ಹುಟ್ಟುವ ಮಗು ಸುರಕ್ಷಿತವಾಗಿರಬೇಕು’ ಎನ್ನುವುದು ಈ ಸಮಾಲೋಚನೆಯ ಮುಖ್ಯ ಉದ್ದೇಶ. ಈ ಅವಧಿಯಲ್ಲಿ ಆಕೆ ವೈದ್ಯರನ್ನು ಭೇಟಿ ಮಾಡಿದಾಗ ಗಮನಿಸಬೇಕಾದ ಅಂಶಗಳಾವುವು?

* ಗರ್ಭಧಾರಣೆಯ ಮೂರು ತಿಂಗಳ ಮೊದಲಿನಿಂದಲೇ ಫೋಲಿಕ್ ಆ್ಯಸಿಡ್ ಮಾತ್ರೆಗಳ ಸೇವನೆಯ ಆರಂಭ. ಕಾರಣ, ಆಹಾರದಲ್ಲಿ ಫೋಲಿಕ್ ಆ್ಯಸಿಡ್ ಎಂಬ ಅಂಶದ ಕೊರತೆಯಿಂದ ಹುಟ್ಟುವ ಮಗುವಿನಲ್ಲಿ ಮೆದುಳು ಹಾಗೂ ಬೆನ್ನುಹುರಿಯ ನೂನ್ಯತೆ ಉಂಟಾಗಬಹುದು.

* ಗರ್ಭಿಣಿಯರಲ್ಲಿನ ರುಬೆಲ್ಲಾ ಎಂಬ ವೈರಾಣುವಿನ ಕಾಯಿಲೆಯು ಹುಟ್ಟುವ ಮಗುವಿನಲ್ಲಿ ಜನ್ಮಜಾತ ಸಮಸ್ಯೆಗಳಿಗೆ ಕಾರಣವಾಗಬಹದು. ಇದನ್ನು ತಡೆಯಲು ಎಮ್.ಎಮ್.ಆರ್. ಎಂಬ ಲಸಿಕೆಯನ್ನು ಗರ್ಭಧರಿಸುವ ಮೂರು ತಿಂಗಳ ಮೊದಲು ಕೊಡಲಾಗುತ್ತದೆ.

* ಆಕೆಯಲ್ಲಿರಬಹುದಾದ ಅಪಾಯಕರ ಅಂಶಗಳನ್ನು ಗುರುತಿಸುವುದು. ಆಕೆಯನ್ನು ಮಧುಮೇಹ, ಅಧಿಕ ರಕ್ತದೊತ್ತಡ, ಹೃದಯದ ಸಮಸ್ಯೆ, ಥೈರಾಯ್ಡ್ ಸಮಸ್ಯೆ - ಮೊದಲಾದುವುಗಳಿಗಾಗಿ ತಪಾಸಣೆ ಮಾಡಿ, ಸಮಸ್ಯೆ ಇದ್ದಲ್ಲಿ ಅಗತ್ಯ ಚಿಕಿತ್ಸೆ ಮಾಡುವುದು.

* ಆಕೆಗೆ ಅಥವಾ ಆಕೆಯ ಕುಟುಂಬದ ಇತರ ಸದಸ್ಯರಲ್ಲಿ ಇರಬಹುದಾದ ಜನ್ಮಜಾತ ಆರೋಗ್ಯಸಮಸ್ಯೆಗಳನ್ನು ಗುರುತಿಸಿ ಆ ದಿಕ್ಕಿನಲ್ಲಿ ತಪಾಸಣೆಗಳನ್ನು ಮಾಡುವುದು.

* ಆಕೆಗೆ ಗರ್ಭಾವಸ್ಥೆಯ ಬಗ್ಗೆಯಿರುವ ಭಯ/ಆತಂಕವನ್ನು ಹೋಗಲಾಡಿಸಿ, ಆ ಬಗ್ಗೆ ಸಮರ್ಪಕವಾದ ಮಾಹಿತಿಯನ್ನು ಕೊಡುವುದು.
ಆಕೆ ಈ ಮೊದಲು ಯಾವುದಾದರೂ ಆರೋಗ್ಯಸಮಸ್ಯೆಗೆ ಔಷಧಗಳನ್ನು ಸೇವಿಸುತ್ತಿದ್ದರೆ, ಅವು ಹುಟ್ಟುವ ಶಿಶುವಿಗೆ ಹಾನಿಕಾರಿಕವಲ್ಲ ಎಂಬುದನ್ನು ಖಾತ್ರಿ ಪಡಿಸಿಕೊಳ್ಳುವುದು. ಒಂದು ವೇಳೆ ಹಾನಿಕಾರಿಕ ಎಂದೆನಿಸಿದರೆ ಆ ಔಷಧಗಳನ್ನು ನಿಲ್ಲಿಸಿ ಅದಕ್ಕೆ ಬದಲಾಗಿ ಸುರಕ್ಷಿತ ಔಷಧಗಳನ್ನು ಕೊಡುವುದು.

ಆದರೆ ದುರದೃಷ್ಟವಶಾತ್ ನಮ್ಮ ದೇಶದಲ್ಲಿ ಹೆಣ್ಣುಮಕ್ಕಳು ಗರ್ಭಧರಿಸಿದ ಒಂದೋ ಎರಡೋ ತಿಂಗಳ ನಂತರವೇ ಸ್ತ್ರೀರೋಗತಜ್ಞರನ್ನು ಭೇಟಿ ಮಾಡುವುದರಿಂದ ಈ ಮೇಲಿನ ಅಂಶಗಳ ಬಗ್ಗೆ ಗಮನ ವಹಿಸಲು ತುಸು ಕಷ್ಟವೆನಿಸುತ್ತದೆ.

ಪ್ರಸವದ ಬಳಿಕ

ಸುಸಜ್ಜಿತವಾದ ಆಸ್ಪತ್ರೆಯಲ್ಲಿ ಪ್ರಸವಕ್ಕೆ ವ್ಯವಸ್ಥೆ ಮಾಡುವುದು ಆಕೆಯ ಕುಟುಂಬದವರ ಮುಖ್ಯ ಜವಾಬ್ದಾರಿ. ಇದು ಆಕೆಯ ಆತಂಕ ಹಾಗೂ ಮಾನಸಿಕ ತುಮುಲವನ್ನು ಕಡಿಮೆ ಮಾಡಲು ಸಹಕರಿಸುತ್ತದೆ.

ಗರ್ಭಾಶಯ ಹಾಗೂ ಮತ್ತಿತರ ಸಂಬಂಧಿಸಿದ ಅಂಗಾಂಗಳು ಮೊದಲಿನ ಸ್ಥಿತಿ ತಲುಪಲು ಸುಮಾರು ಆರು ವಾರಗಳು ಬೇಕಾಗುತ್ತವೆ.

ಈ ಸಮಯದಲ್ಲಿ ಗಮನದಲ್ಲಿಡಬೇಕಾದ ಅಂಶಗಳೆಂದರೆ:

* ವಿಶ್ರಾಂತಿ, ಕ್ಯಾಲ್ಸಿಯಂ ಹೇರಳವಾಗಿರುವ ಆಹಾರದ ಸೇವನೆ.

* ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಮಾತ್ರೆಗಳನ್ನು ಮುಂದುವರೆಸುವುದು.

* ಕೆಲವು ಸರಳ ವ್ಯಾಯಾಮಗಳು - ನಡಿಗೆ, ಕಿಗಲ್ಸ್ ವ್ಯಾಯಾಮ, ಹೊಟ್ಟೆಯ ಸ್ನಾಯುಗಳಿಗೆ ವ್ಯಾಯಾಮ ಅವಶ್ಯ.

ಮಗುವಿನ ಆರೈಕೆ, ಲಾಲನೆ ಪಾಲನೆಗೆ ಹಾಗೂ ಸ್ತನ್ಯಪಾನಕ್ಕೆ ಮನೆಯಲ್ಲಿ ಪೂರಕ ವಾತಾವರಣವೂ ಅಗತ್ಯ. ಏಕೆಂದರೆ ಮಗುವಿಗೆ ಎದೆ ಹಾಲುಣಿಸುವಿಕೆ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕಾಪಾಡುವಲ್ಲಿ ಮುಖ್ಯ ಪಾತ್ರವನ್ನು ವಹಿಸುತ್ತದೆ.

ಹೀಗೆ ಜೀವನದ ಬಹುಮುಖ್ಯ ಹಂತಗಳಲ್ಲಿ ತಾಯಿಯು ತನ್ನ ಆರೋಗ್ಯವನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವುದು ಮುಂದಿನ ದಿನಗಳಲ್ಲಿಯೂ ಸಹಕಾರಿಯಾಗುತ್ತದೆ. ಇನ್ನು ನಂತರದ ದಿನಗಳಲ್ಲಿ ಆಕೆ ಮಕ್ಕಳ ಪಾಲನೆ ಪೋಷಣೆಯಲ್ಲಿ ಬಿಡುವಿಲ್ಲದಂತಾಗುತ್ತಾಳೆ. ಮಕ್ಕಳಿಗೆ ಕಾಲಕ್ಕೆ ಕಾಲಕ್ಕೆ ಸರಿಯಾಗಿ ಲಸಿಕೆಗಳನ್ನು ಹಾಕಿಸುವುದು, ಮಕ್ಕಳ ಆರೋಗ್ಯಸ್ಥಿತಿಯಲ್ಲಿ ಸ್ವಲ್ಪವೇ ಸಮಸ್ಯೆ ಎನಿಸಿದರೂ ವೈದ್ಯರ ಬಳಿ ದೌಡಾಯಿಸುವುದು, ಮಕ್ಕಳ ಊಟ–ಆಟ ಮುಂತಾದುವುಗಳೊಂದಿಗೆ ಜೀವನ ಸಾಗುತ್ತದೆ.

ಇನ್ನು ಮಕ್ಕಳನ್ನು ಶಾಲೆಗೆ ಸೇರಿಸಿದ ಮೇಲೆ ಅವರನ್ನು ದಿನನಿತ್ಯವೂ ಶಾಲೆಗೆ ಅಣಿ ಮಾಡುವುದು, ಹೋಂವರ್ಕ್ ಮಾಡಿಸುವುದು, ಮನೆಯ ಕೆಲಸ, ಕಚೇರಿಯ ಕೆಲಸಗಳಲ್ಲಿ ಆಕೆ ತನ್ನ ಆರೋಗ್ಯದ ಕಾಳಜಿಯನ್ನು ಮರೆತೇ ಬಿಡುತ್ತಾಳೆ. ಇಂತಹ ಸಂದರ್ಭದಲ್ಲಿ ಆಕೆಯ ಮನೆಯ ಸದಸ್ಯರು ಆಕೆಯನ್ನು ಸೂಕ್ಷ್ಮವಾಗಿ ಗಮನಿಸುತ್ತಿರಬೇಕು. ಆಕೆಯ ಆರೋಗ್ಯದಲ್ಲಿ ಕೊಂಚ ವ್ಯತ್ಯಾಸವೆನಿಸಿದರೂ ಕೂಡಲೇ ವೈದ್ಯರ ಸಲಹೆಯನ್ನು ಪಡೆಯಲು ಸಹಕರಿಸಬೇಕು. ತಾಯಿಯಾದವಳೂ ಸಹ ಕುಟುಂಬದ ಇತರ ಸದಸ್ಯರ ಆರೋಗ್ಯದ ಕಾಳಜಿಯ ಜೊತೆ ಜೊತೆಯಲ್ಲಿಯೇ ತನ್ನ ಆರೋಗ್ಯದ ಬಗ್ಗೆಯೂ ಗಮನ ಹರಿಸಬೇಕು.

ಋತುಬಂಧದ ಆಸುಪಾಸಿನಲ್ಲಿ

ಮೂವತ್ತೈದರ ಆಸುಪಾಸಿನಲ್ಲಿ ಎಲ್ಲ ತಾಯಂದಿರೂ ಒಮ್ಮೆ ಸಂಪೂರ್ಣ ಆರೋಗ್ಯ ತಪಾಸಣೆಗೆ ಒಳಗಾಗುವುದು ಸೂಕ್ತ. ಮುಖ್ಯವಾಗಿ ಆ ವಯಸ್ಸಿನಲ್ಲಿ ಜೊತೆಯಾಗಬಹುದಾದ ಅಧಿಕ ರಕ್ತದೊತ್ತಡ, ಮಧುಮೇಹ, ಥೈರಾಯ್ಡ್ ಸಮಸ್ಯೆಗಳಿಗಾಗಿ ವರ್ಷಕ್ಕೊಮ್ಮೆಯಾದರೂ ತಪಾಸಣೆ ಮಾಡಿಕೊಳ್ಳಬೇಕು. ಅಂತೆಯೇ ದೇಹದ ತೂಕ ಹೆಚ್ಚಾಗಿದ್ದಲ್ಲಿ ವ್ಯಾಯಾಮ, ನಡಿಗೆ ಅಥವಾ ಯೋಗಾಭ್ಯಾಸದ ಸಹಾಯದಿಂದ ಸರಿ ತೂಕವನ್ನು ಕಾಯ್ದಿರಿಸಿಕೊಳ್ಳಬೇಕು.

ಈ ಅವಧಿಯಲ್ಲಿ ಮುಖ್ಯ ತಪಾಸಣೆಗಳಾವುವೆಂದರೆ:

* ಪ್ಯಾಪ್ ಸ್ಮಿಯರ್ ಪರೀಕ್ಷೆ – ಮೂವತ್ತರ ನಂತರ ಪ್ರತಿ ಮೂರು ವರ್ಷಗಳಿಗೊಮ್ಮೆ ಈ ತಪಾಸಣೆ ಸೂಕ್ತ. ಗರ್ಭಕೋಶದ ಕೊರಳಿನ ಕ್ಯಾನ್ಸರ್ ಅನ್ನು ಆರಂಭಿಕ ಹಂತಗಳಲ್ಲಿಯೇ ಪತ್ತೆ ಹಚ್ಚಲು ಈ ಪರೀಕ್ಷೆ ಸಹಕಾರಿ.

* ತಿಂಗಳಿಗೊಮ್ಮೆ ಸ್ವತಃ ಸ್ತನಗಳನ್ನು ಪರೀಕ್ಷಿಸಿಕೊಳ್ಳುವುದು.

* ವರ್ಷಕ್ಕೊಮ್ಮೆ ಮ್ಯಾಮ್ಮೋಗ್ರ್ಯಾಫಿ ಪರೀಕ್ಷೆ - ಸ್ತನಕ್ಯಾನ್ಸರ್ ಅನ್ನು ಆರಂಭಿಕ ಹಂತಗಳಲ್ಲಿ ಪತ್ತೆ ಹಚ್ಚಲು.

* ಡೆಕ್ಸಾ ಸ್ಕ್ಯಾನಿಂಗ್ ಪರೀಕ್ಷೆ – ಮೂಳೆಗಳ ಸಾಂಧ್ರತೆಯನ್ನು ಅಳೆಯುವ ಪರೀಕ್ಷೆ.

ಈ ಹಂತದಲ್ಲಿಯೂ ಕ್ಯಾಲ್ಸಿಯಂಯುಕ್ತ ಆಹಾರ, ಕ್ಯಾಲ್ಸಿಯಂ ಪೂರಕಗಳು, ವಿಟಮಿನ್ ಡಿ.ಯ ಬಳಕೆ ಅತ್ಯಗತ್ಯ. ಅಂತೆಯೇ ಕಾಫಿ/ಚಹಾವನ್ನು ಮಿತಿಯಾಗಿ ಬಳಸಿದರೆ ಉತ್ತಮ.

ತಾಯಿಯ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಮನೆಯ ಎಲ್ಲ ಸದಸ್ಯರ ಜವಾಬ್ದಾರಿ ಹಾಗೂ ಕರ್ತವ್ಯ ಕೂಡ! ನೀವು ವರ್ಷಕ್ಕೊಮ್ಮೆ ನಿಮ್ಮ ತಾಯಿಗೆ ನಿಮ್ಮ ಕುಟುಂಬ ವೈದ್ಯರ ಬಳಿ ಕರೆದೊಯ್ದು ಅವರ ಸಲಹೆಯ ಮೇರೆಗೆ ಸೂಕ್ತ ತಪಾಸಣೆಗಳನ್ನು ಮಾಡಿಸಿ. ತಿಂಗಳಿಗೊಮ್ಮೆ ಆಕೆಗೆ ಅಗತ್ಯವಿರುವ ಔಷಧಗಳನ್ನು ಮರೆಯದೇ ತಂದು ಕೊಡಿ.

ನೀವು ಬೇರೆ ಊರಿನಲ್ಲಿದ್ದರೆ ಕನಿಷ್ಠ ವಾರಕ್ಕೊಮ್ಮೆಯಾದರೂ ಆಕೆಗೆ ಕರೆ ಮಾಡಿ ಆಕೆಯ ಆರೋಗ್ಯದ ಬಗ್ಗೆ ವಿಚಾರಿಸಿರಿ. ಇದಕ್ಕಿಂತ ನೀವು ನಿಮ್ಮ ತಾಯಿಗೆ ಕೊಡಬಹುದಾದ ಹೆಚ್ಚಿನ ಉಡುಗೊರೆ ಬೇರೊಂದಿಲ್ಲ ಎಂಬುದು ವೈದ್ಯಳಾಗಿ ನನ್ನ ಅನಿಸಿಕೆ.

**

ಗರ್ಭಾವಸ್ಥೆ ಅವಧಿಯಲ್ಲಿ ಆರೋಗ್ಯ ಕಾಳಜಿ ಹೇಗೆ?

ಗರ್ಭಿಣಿಯರು ಏಳು ತಿಂಗಳು ತುಂಬುವವರೆಗೆ ಪ್ರತಿ ತಿಂಗಳಿಗೊಮ್ಮೆ, ಒಂಬತ್ತು ತಿಂಗಳು ತುಂಬುವವರೆಗೆ ಪ್ರತಿ ಹದಿನೈದು ದಿನಗಳಿಗೊಮ್ಮೆ ಹಾಗೂ ನಂತರದ ದಿನಗಳಲ್ಲಿ ಪ್ರತಿ ವಾರಕ್ಕೊಮ್ಮೆ ಸ್ತ್ರೀರೋಗತಜ್ಞರನ್ನು ಕಡ್ಡಾಯವಾಗಿ ಭೇಟಿ ಮಾಡಬೇಕು. ವೈದ್ಯರು ತಾಯಿಯ ಹಾಗೂ ಮಗುವಿನ ಆರೋಗ್ಯ ತಪಾಸಣೆ ಮಾಡುವರು. ಅಲ್ಲದೆ, ಆಕೆಗೆ ಗರ್ಭಾವಸ್ಥೆಯಲ್ಲಿ ವೈಯಕ್ತಿಕ ಆರೈಕೆ, ನವಜಾತ ಶಿಶುವಿನ ಆರೈಕೆ, ಪ್ರಸವ, ಸ್ತನ್ಯಪಾನ ಹಾಗೂ ಮುಂದೆ ಅನುಸರಿಸಬಹುದಾದ ಕುಟುಂಬ ಯೋಜನಾ ಪದ್ಧತಿಗಳ ಬಗ್ಗೆ ಸಮಗ್ರ ಮಾಹಿತಿಯನ್ನು ಕೊಡಲಾಗುತ್ತದೆ. ಈ ಅವಧಿಯಲ್ಲಿ ಗಮನ ವಹಿಸಬಹುದಾದ ಮುಖ್ಯ ಅಂಶಗಳೆಂದರೆ:

* ರಕ್ತದ ತಪಾಸಣೆ – ಹಿಮೊಗ್ಲೊಬಿನ್, ರಕ್ತದ ಗುಂಪು, ಸಕ್ಕರೆ ಅಂಶ, ಹಾಗೂ ಕೆಲವು ವೈರಾಣುಗಳ ಸೋಂಕಿಗಾಗಿ ಪರೀಕ್ಷೆ.

* ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ ಪರೀಕ್ಷೆ – ಮಗುವಿನ ಬೆಳವಣಿಗೆ, ಗರ್ಭಾಶಯದಲ್ಲಿನ ಮಾಸ ಚೀಲದ ಸ್ಥಾನ ಮತ್ತಿತರ ಅಂಶಗಳ ಬಗ್ಗೆ ತಿಳಿಯಲು ಕನಿಷ್ಠ ಮೂರು ಬಾರಿಯಾದರೂ ಈ ಸ್ಕ್ಯಾನಿಂಗ್ ಪರೀಕ್ಷೆ ಮಾಡಲಾಗುತ್ತದೆ.

* ಧನುರ್ವಾಯು ಹಾಗೂ ಗಂಟಲು ಮಾರಿಯ ವಿರುದ್ಧ ಲಭ್ಯವಿರುವ ಟಿ.ಡಿ. ಲಸಿಕೆಯನ್ನು ಎರಡು ಬಾರಿ (ಸಾಮಾನ್ಯವಾಗಿ 4 ಮತ್ತು 5ನೇ ತಿಂಗಳಲ್ಲಿ) ಹಾಕಲಾಗುತ್ತದೆ.

* ಫೋಲಿಕ್ ಆ್ಯಸಿಡ್, ಕಬ್ಬಿಣಾಂಶ ಹಾಗೂ ಕ್ಯಾಲ್ಸಿಯಂ ಮಾತ್ರೆಗಳ ನಿಯಮಿತವಾದ ಸೇವನೆ ಮುಖ್ಯ.

* ಪೌಷ್ಟಿಕ ಆಹಾರದ ಸೇವನೆ - ಸುಲಭವಾಗಿ ಜೀರ್ಣವಾಗುವ ಹಸಿರು ತರಕಾರಿ, ಹಣ್ಣು, ಹಾಲು ಮೊದಲಾದ ಪೌಷ್ಟಿಕ ಆಹಾರದ ಸೇವನೆ, ಹೆಚ್ಚು ನೀರಿನ ಸೇವನೆ ಅತ್ಯಗತ್ಯ.

* ವಿಶ್ರಾಂತಿಯೂ ಅಗತ್ಯ. ದಿನಕ್ಕೆ 8ರಿಂದ 10 ತಾಸುಗಳ ನಿದ್ದೆ ಅಗತ್ಯ. ಮಧ್ಯಾಹ್ನ ಊಟವಾದ ಬಳಿಕವೂ ಒಂದು ತಾಸಿನ ವಿಶ್ರಾಂತಿ ಒಳ್ಳೆಯದು.

* ಸಂಜೆ ವಾಯುವಿಹಾರ, ಸರಳ ವ್ಯಾಯಾಮಗಳ ಅಭ್ಯಾಸವೂ ಇರಲಿ.

* ವೈಯಕ್ತಿಕ ಸ್ವಚ್ಛತೆಯ ಬಗ್ಗೆ ಕಾಳಜಿ, ಹಗುರವಾದ ಹಾಗೂ ಸಡಿಲವಾದ ಉಡುಪುಗಳ ಬಳಕೆ ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT