ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಾಸಗಿ ಆಸ್ಪತ್ರೆಗಳ ಸಹಕಾರ ಅಗತ್ಯ

ಟೆಲಿಮೆಡಿಸಿನ್, ಮೊಬೈಲ್ ಫೋನ್ ಮೂಲಕ ಸೇವೆ: ಜಿಲ್ಲಾಧಿಕಾರಿ
Last Updated 27 ಮಾರ್ಚ್ 2020, 16:39 IST
ಅಕ್ಷರ ಗಾತ್ರ

ದಾವಣಗೆರೆ:ಎಲ್ಲ ಖಾಸಗಿ ಆಸ್ಪತ್ರೆಗಳು ವೈದ್ಯಕೀಯ ಸೇವೆ ನೀಡಲಿವೆ. ಟೆಲಿಮೆಡಿಸಿನ್, ಸಣ್ಣ ಪುಟ್ಟ ತೊಂದರೆಗಳಿಗೆ ಮೊಬೈಲ್ ಫೋನ್ ಮೂಲಕ ವೈದ್ಯರು ಸಮಸ್ಯೆ ಆಲಿಸಿ ವಾಟ್ಸ್‌ಆ್ಯಪ್‌ ಮೂಲಕ ಪಿಸ್ಕ್ರಿಷ್ಷನ್‌ ನೀಡಲಿದ್ದಾರೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ತಿಳಿಸಿದರು.

ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಶುಕ್ರವಾರ ಐಎಂಎ ಪದಾಧಿಕಾರಿಗಳೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಖಾಸಗಿ ಆಸ್ಪತ್ರೆಗಳಿಗೆ ಅಗತ್ಯವಿರುವ ಮಾಸ್ಕ್, ಪಿಪಿಇ, ಸಾರಿಗೆ ಸೇರಿ ಅಗತ್ಯವಾದ ಎಲ್ಲ ಸೌಲಭ್ಯಗಳನ್ನು ಜಿಲ್ಲಾಡಳಿತ ನೀಡಲಿದ್ದು, ಖಾಸಗಿ ಆಸ್ಪತ್ರೆಯವರೂ ಕೋವಿಡ್–19 ವಿರುದ್ಧ ಸಮರ ಸಾರಲು ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಚಿಗಟೇರಿ ಆಸ್ಪತ್ರೆಯಲ್ಲಿ ಫ್ಲೂ ಮತ್ತು ಫಿವರ್ ಸೆಂಟರ್

ಚಿಗಟೇರಿ ಆಸ್ಪತ್ರೆಯ ಮುಂಭಾಗದಲ್ಲಿ ಫ್ಲೂ ಸೆಂಟರ್‌ ಮತ್ತು ಒಳ ಆವರಣದಲ್ಲಿ ಫಿವರ್ ಸೆಂಟರ್ ತೆರೆಯಲಾಗಿದ್ದು, ಶೀತ, ಕೆಮ್ಮು, ಗಂಟಲು ನೋವು, ತಲೆನೋವು, ಜ್ವರ ಲಕ್ಷಣ ಇರುವವರು ಇಲ್ಲಿ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ನಗರದಲ್ಲಿ ಚಿಗಟೇರಿ ಸೇರಿ ಒಟ್ಟು 4 ಕಡೆ ಮತ್ತು ಜಿಲ್ಲೆಯಾದ್ಯಂತ ಒಟ್ಟು 12 ಕಡೆ ಫ್ಲೂ ಸೆಂಟರ್ ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದರು.

ಸ್ವಂತ ವಾಹನ ಇಲ್ಲದ ಸಿಬ್ಬಂದಿ, ಪಿಪಿಇ ಇಲ್ಲ ಹಾಗೂ ಕೆಲವು ಸಿಬ್ಬಂದಿ ಹೆದರಿಕೆಯಿಂದ ಖಾಸಗಿ ಆಸ್ಪತ್ರೆಗಳು ಮತ್ತು ಕ್ಲಿನಿಕ್‍ಗಳಲ್ಲಿ ಕರ್ತವ್ಯ ನಿರ್ವಹಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ವೈದ್ಯರೊಬ್ಬರು ಹೇಳಿದರು.

ಇಎನ್‍ಟಿ ತಜ್ಞ ಡಾ. ಶಿವಕುಮಾರ್, ‘ಟೆಲಿಮೆಡಿಸಿನ್ ಮೂಲಕ ಇತರೆ ತಾಲ್ಲೂಕುಗಳು ಮತ್ತು ಸಾರಿಗೆ ವ್ಯವಸ್ಥೆ ಇಲ್ಲದ ಕಡೆಗಳಿಗೆ ವೈದ್ಯಕೀಯ ಸೇವೆ ನೀಡಬಹುದು. ಈಗಾಗಲೇ ನಾನು ಟೆಲಿಮೆಡಿಸಿನ್ ಮೂಲಕ ಚಿಕಿತ್ಸೆ ಆರಂಭಿಸಿದ್ದೇನೆ. ವೈದ್ಯರಿಗೆ ಪಿಪಿಇ (ಪರ್ಸನಲ್ ಪ್ರೊಟೆಕ್ಷನ್ ಇಕ್ವಿಪ್‍ಮೆಂಟ್) ಅವಶ್ಯಕತೆ ಇದೆ. ಇಎನ್‍ಟಿ ತಜ್ಞರು ಕೊರೊನಾ ಸೋಂಕಿನ ಹಿನ್ನೆಲೆ ಗಂಟಲು ಮತ್ತು ಮೂಗು ಪರೀಕ್ಷಿಸುವುದು ಸೂಕ್ತವಲ್ಲ. ಸೋಂಕು ತಗಲುವ ಹೆಚ್ಚಿನ ಸಾಧ್ಯತೆ ಇರುತ್ತದೆ. ಆದ್ದರಿಂದ ಕಿವಿ ಮಾತ್ರ ಪರೀಕ್ಷೆ ಮಾಡಲು ಸಾಧ್ಯವಾಗುತ್ತದೆ’ ಎಂದರು.

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ, ಮೂಗು ಮತ್ತು ಜ್ವರಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಚಿಗಟೇರಿ ಆಸ್ಪತ್ರೆಗೆ ಕಳುಹಿಸುವಂತೆ ಸೂಚಿಸಿದರು.

ಖಾಸಗಿ ಕ್ಲಿನಿಕ್‍ಗಳಲ್ಲಿ ಓಪಿಡಿ ಮಾಡಿದರೆ ಪೂರ್ತಿ ಕ್ಲಿನಿಕ್ ಅಪಾಯದಲ್ಲಿ ಸಿಲುಕುವ ಸಂಭವ ಇರುತ್ತದೆ ಎಂದು ವೈದ್ಯರೊಬ್ಬರು ಹೇಳಿದಾಗ, ‘ವೈದ್ಯರು ಅಗತ್ಯವಾದ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ರೋಗಿಯನ್ನು ಪರೀಕ್ಷಿಸಬಹುದು. ಖಾಸಗಿ ವೈದ್ಯರಿಗೆ ಪಿಪಿಇ ಒದಗಿಸಲು ಎಲ್ಲ ಪ್ರಯತ್ನ ಮಾಡುತ್ತೇವೆ’ ಎಂದು ಡಿಸಿ ತಿಳಿಸಿದರು.

ಸಿಟಿ ಸೆಂಟ್ರಲ್ ಆಸ್ಪತ್ರೆಯ ಡಾ.ಸುಬ್ರಾವ್, ‘ನಮ್ಮ ಆಸ್ಪತ್ರೆಯಲ್ಲಿ 100 ಹಾಸಿಗೆ ಇದ್ದು, ಆಸ್ಪತ್ರೆ ಹೊರ ಭಾಗದಲ್ಲಿ ಫಿವರ್ ಕ್ಲಿನಿಕ್ ತೆರೆಯಲಾಗಿದೆ. 14 ಐಸಿಯು ಬೆಡ್‍ಗಳೊಂದಿಗೆ 9 ವೆಂಟಿಲೇಟರ್ ಇದ್ದು, ಅವಶ್ಯಕತೆ ಬಿದ್ದಲ್ಲಿ ಎಲ್ಲ ರೀತಿಯ ಸಹಕಾರವನ್ನು ಜಿಲ್ಲಾಡಳಿತಕ್ಕೆ ನೀಡುತ್ತೇವೆ’ ಎಂದರು. ಅಲ್ಲದೇ ಇಎನ್‍ಟಿ ತಜ್ಞರಿಗೆ ಸುಲಭವಾಗಿ ಮತ್ತು ಕಡಿಮೆ ದರದಲ್ಲಿ ತಯಾರಾಗುತ್ತಿರುವ ಪ್ರೊಟೆಕ್ಟಿವ್ ಕವರ್ ಮಾಡಿರುವುದನ್ನು ತೋರಿಸಿದರು.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಮಹಾಂತೇಶ ಬೀಳಗಿ, ಇಂತಹ 1ಸಾವಿರ ಕವರ್‌ ತಯಾರಿಸಿ ನೀಡುವಂತೆ ತಿಳಿಸಿದರು.

ಯಾರೇ ಶೀತ, ಕೆಮ್ಮು, ತಲೆನೋವು, ಜ್ವರಕ್ಕೆ ಸ್ವಂತ ಔಷಧಿ ತೆಗೆದುಕೊಳ್ಳುವಂತಿಲ್ಲ. ತಲೆನೋವು ಎಂದು ಮೆಡಿಕಲ್ ಶಾಪ್‍ಗೆ ತೆರಳಿ ಪ್ಯಾರಾಸಿಟಮೊಲ್ ಮಾತ್ರೆ ತೆಗೆದುಕೊಂಡು ಸೇವಿಸುವಂತಿಲ್ಲ. ಹೀಗೆ ಮಾಡುವುದರಿಂದ ಕೊರೊನಾ ಪತ್ತೆ ಹಚ್ಚುವುದು ನಿಧಾನವಾಗಿ ಅಪಾಯ ಎದುರಾಗುವ ಸಾಧ್ಯತೆ ಇರುತ್ತದೆ. ಯಾವುದೇ ಮೆಡಿಕಲ್ ಶಾಪ್‍ನವರು ವೈದ್ಯರ ಚೀಟಿ ಇಲ್ಲದೆ ಮಾತ್ರೆ, ಔಷಧ ನೀಡಬಾರದು ಎಂದು ಸೂಚಿಸಿದರು.

ಸ್ವಂತ ವಾಹನ ಇಲ್ಲದ ಅನೇಕ ವೈದ್ಯರು ಕರ್ತವ್ಯಕ್ಕೆ ಹಾಜರಾಗುತ್ತಿಲ್ಲ ಎಂದಾಗ, ‘ಪಟ್ಟಿ ನೀಡಿದರೆಸಾರಿಗೆ ವ್ಯವಸ್ಥೆ ಮಾಡಲಾಗುವುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದರು.

60 ವರ್ಷ ಮೇಲ್ಪಟ್ಟ ವೈದ್ಯರಿಗೆ ವಿನಾಯಿತಿ

60 ವರ್ಷ ಮೇಲ್ಪಟ್ಟು ಸೇವೆ ಸಲ್ಲಿಸುತ್ತಿರುವ ಖಾಸಗಿ ಮತ್ತು ಸಾರ್ವಜನಿಕ ವಲಯದ ವೈದ್ಯರಿಗೆ ಸೇವೆಯಿಂದ ವಿನಾಯಿತಿ ನೀಡಲಾಗುವುದು ಎಂದು ಡಿಸಿ ತಿಳಿಸಿದರು.

ಮೇಯರ್‌ ಬಿ.ಜಿ. ಅಜಯ್‍ಕುಮಾರ್, ಜಿಲ್ಲಾ ಪಂಚಾಯಿತಿ ಸಿಇಒ ಪದ್ಮ ಬಸವಂತಪ್ಪ, ಹೆಚ್ಚುವರಿ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ಡಿಎಚ್‍ಒ ಡಾ. ರಾಘವೇಂದ್ರಸ್ವಾಮಿ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ರಾಘವನ್, ಡಿಎಸ್ ಡಾ.ನಾಗರಾಜ್‌ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT