ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಾವಣಗೆರೆ: ಸೋಂಕಿತನ ಮನೆಯ ಸುತ್ತ ಕಟ್ಟೆಚ್ಚರ

ಫ್ರಾನ್ಸ್‌ನಿಂದ ಬಂದಿದ್ದ ನಗರದ ವೈದ್ಯನಿಗೆ ಕೊರೊನಾ ಸೋಂಕು ದೃಢ
Last Updated 27 ಮಾರ್ಚ್ 2020, 16:22 IST
ಅಕ್ಷರ ಗಾತ್ರ

ದಾವಣಗೆರೆ: ಫ್ರಾನ್ಸ್‌ನಿಂದ ಬಂದಿದ್ದ ನಿಜಲಿಂಗಪ್ಪ ಬಡಾವಣೆಯ 24 ವರ್ಷದ ವೈದ್ಯರೊಬ್ಬರಿಗೆ ಕೊರೊನಾ ಸೋಂಕು ಇರುವುದು ಶುಕ್ರವಾರ ದೃಢಪಟ್ಟಿದ್ದು, ರೋಗಾಣು ಹರಡುವುದನ್ನು ತಡೆಯಲು ಸೋಂಕಿತನ ಮನೆಯ ಸುತ್ತಲಿನ ಪ್ರದೇಶದಲ್ಲಿ ಜಿಲ್ಲಾಡಳಿತ ಕಟ್ಟೆಚ್ಚರ ವಹಿಸುತ್ತಿದೆ.

ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ‘ನಗರದ ವ್ಯಕ್ತಿಯಲ್ಲಿ ಕೊರೊನಾ ಸೋಂಕು ಇರುವುದು ದೃಢಪಟ್ಟಿರುವ ಹಿನ್ನೆಲೆಯಲ್ಲಿ ಸಮರೋಪಾದಿಯಲ್ಲಿ ಕಾರ್ಯನಿರ್ವಹಿಸಲು ಸಮಗ್ರ ಕಾರ್ಯಯೋಜನೆ ಸಿದ್ಧಪಡಿಸಿದ್ದೇವೆ. ಸೋಂಕಿತ ವ್ಯಕ್ತಿಯ ಮನೆಯ ಸುತ್ತಲಿನ 3 ಕಿ.ಮೀ ಪ್ರದೇಶವನ್ನು ‘ರೆಡ್‌ ಜೋನ್‌’ ಹಾಗೂ ಮುಂದಿನ ಐದು ಕಿ.ಮೀ ಸುತ್ತಲಿನ ಪ್ರದೇಶವನ್ನು ‘ಬಫರ್‌ ಜೋನ್‌’ ಎಂದು ಗುರುತಿಸಲಾಗಿದ್ದು, ಇಲ್ಲಿ ವಿಶೇಷ ನಿಗಾ ವಹಿಸಲಾಗುವುದು’ ಎಂದರು.

‘ನಿಜಲಿಂಗಪ್ಪ ಬಡಾವಣೆಯಲ್ಲಿದ್ದ ಸೋಂಕಿತ ವ್ಯಕ್ತಿಯ ಮನೆಯ ಅಕ್ಕಪಕ್ಕದ 50 ಮನೆಗಳ ಮೇಲೂ ನಿಗಾ ವಹಿಸಲಾಗುತ್ತದೆ. 14 ದಿನಗಳ ಕಾಲ ಈ ಎಲ್ಲಾ ಮನೆಗಳಿಗೂ ವೈದ್ಯರು ತೆರಳಿ, ಅಲ್ಲಿನ ಜನರಲ್ಲಿ ಜ್ವರ ಕಾಣಿಸಿಕೊಂಡಿದೆಯೇ ಎಂಬ ಬಗ್ಗೆ ತಪಾಸಣೆ ಮಾಡಲಿದ್ದಾರೆ’ ಎಂದು ತಿಳಿಸಿದರು.

‘ಸೋಂಕಿತ ವ್ಯಕ್ತಿ ಮಾರ್ಚ್‌ 17ರಂದು ಪ್ಯಾರಿಸ್‌ನಿಂದ ಹೊರಟು ಅಬುದಾಬಿ ಮೂಲಕ 18ರಂದು ಬೆಳಿಗ್ಗೆ 6ಕ್ಕೆ ಎಥಿಹಾರ್ಡ್‌ ಏರ್‌ಲೈನ್ಸ್‌ ವಿಮಾನದಲ್ಲಿ ಬೆಂಗಳೂರು ವಿಮಾನನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಂದ ವೋಲ್ವೊ ಬಸ್‌ನಲ್ಲಿ ಮೆಜೆಸ್ಟಿಕ್‌ ಕೆ.ಎಸ್‌.ಆರ್‌.ಟಿ.ಸಿ. ಬಸ್‌ನಿಲ್ದಾಣಕ್ಕೆ ಬಂದಿಳಿದಿದ್ದರು. ಬೆಳಿಗ್ಗೆ 10ಕ್ಕೆ ರಾಜಹಂಸ ಬಸ್‌ನಲ್ಲಿ ಹೊರಟು ಮಧ್ಯಾಹ್ನ 4ಕ್ಕೆ ದಾವಣಗೆರೆಗೆ ಬಂದಿದ್ದರು. ತಂದೆಯ ಕಾರಿನಲ್ಲಿ ನೇರವಾಗಿ ಮನೆಗೆ ತೆರಳಿದ್ದರು. ಇವರು ಯಾವ ಬಸ್‌ನಲ್ಲಿ ಪ್ರಯಾಣ ಮಾಡಿದ್ದರು ಹಾಗೂ ಇವರ ಅಕ್ಕ–ಪಕ್ಕ ಯಾರೆಲ್ಲ ಕುಳಿತಿದ್ದರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

‘ವಿಮಾನನಿಲ್ದಾಣದಿಂದ ಜಿಲ್ಲಾ ಸರ್ವೇಕ್ಷಣಾ ಘಟಕಕ್ಕೆ ಬಂದ ಮಾಹಿತಿ ಆಧರಿಸಿ ಮಾರ್ಚ್‌ 22ರಂದು ಈ ವ್ಯಕ್ತಿಯನ್ನು ಸಂಪರ್ಕಿಸಿ ಹೋಂ ಕ್ವಾರಂಟೈನ್‌ನಲ್ಲಿರುವಂತೆ ತಾಕೀತು ಮಾಡಲಾಗಿತ್ತು. ಅವರಿಗೆ ಮಾರ್ಚ್ 25ರಂದು ಕೆಮ್ಮು, ಜ್ವರ, ಗಂಟಲು ನೋವು ಕಾಣಿಸಿಕೊಂಡಿದ್ದರಿಂದ ಚಿಗಟೇರಿ ಜಿಲ್ಲಾ ಆಸ್ಪತ್ರೆಗೆ ಬಂದು ದಾಖಲಾಗಿದ್ದರು. ಅವರ ಗಂಟಲಿನ ದ್ರಾವಣದ ಮಾದರಿಯನ್ನು ಅಂದೇ ಶಿವಮೊಗ್ಗದ ವಿ.ಆರ್‌.ಡಿ.ಎಲ್‌ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು‌. ಗುರುವಾರ ಸಂಜೆ 7ಕ್ಕೆ ಬಂದ ವರದಿಯಲ್ಲಿ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿತ್ತು. ಪುಣೆಯ ಪ್ರಯೋಗಾಲಯದಿಂದ ಶುಕ್ರವಾರ ಮಧ್ಯಾಹ್ನ ಬಂದ ಅಂತಿಮ ವರದಿಯೂ ಪಾಸಿಟಿವ್‌ ಬಂದಿದೆ’ ಎಂದರು.

‘ಸೋಂಕಿತ ವ್ಯಕ್ತಿಗೆ ಚಿಕಿತ್ಸೆ ನೀಡಲಾಗುತ್ತಿದ್ದು, ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಇವರೊಂದಿಗೆ ನೇರ ಸಂಪರ್ಕದಲ್ಲಿದ್ದ ತಂದೆ, ತಾಯಿ, ತಂಗಿ, ತಮ್ಮ ಹಾಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ 13 ಸಿಬ್ಬಂದಿ ಸೇರಿ ಒಟ್ಟು 18 ಮಂದಿಯನ್ನು ಗುರುತಿಸಲಾಗಿದ್ದು, ಅವರ ರೋಗ ಲಕ್ಷಣಗಳನ್ನು ತಪಾಸಣೆ ನಡೆಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.

ಸೋಂಕಿತ ವ್ಯಕ್ತಿ ನಗರದಲ್ಲಿ ಸುತ್ತಾಡುತ್ತಿದ್ದ ಎಂಬ ವದಂತಿ ಬಗ್ಗೆ ಕೇಳಿದ ಪ್ರಶ್ನೆ, ‘ಸ್ವತಃ ವೈದ್ಯರಾಗಿರುವುದರಿಂದ ಅವರಿಗೆ ರೋಗದ ಬಗ್ಗೆ ಅರಿವು ಇದೆ. ಅವರು ಮನೆಯಲ್ಲೂ ಸಾಮಾಜಿಕ ಅಂತರ ಕಾಯ್ದುಕೊಂಡಿದ್ದಾರೆ. ಹೋಂ ಕ್ವಾರಂಟೈನ್‌ನಲ್ಲೇ ಇದ್ದರು. ಹೊರಗಡೆ ಎಲ್ಲೂ ಹೋಗಿಲ್ಲ. ಅವರು ಜಾಗೃತ ನಾಗರಿಕರಾಗಿದ್ದರಿಂದ ಅನಾರೋಗ್ಯ ಕಾಣಿಸಿಕೊಂಡ ತಕ್ಷಣವೇ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಬಂದಿದ್ದಾರೆ’ ಎಂದು ಜಿಲ್ಲಾಧಿಕಾರಿ ಉತ್ತರಿಸಿದರು.

ಚಿಕಿತ್ಸೆಗೆ ಮಹಿಳೆ ಸ್ಪಂದನೆ: ‘ದಾವಣಗೆರೆಯ ಖಾಸಗಿ ಆಸ್ಪತ್ರೆಯಲ್ಲಿರುವ ಚಿತ್ರದುರ್ಗದ ಕೊರೊನಾ ಸೋಂಕಿತ ಮಹಿಳೆ ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದಾರೆ. ಯಾವುದೇ ರೀತಿಯ ಅಹಿತಕರ ಲಕ್ಷಣ ಕಂಡುಬಂದಿಲ್ಲ. ಅವರು ಆತ್ಮವಿಶ್ವಾಸದಿಂದ ಇದ್ದಾರೆ. ರೋಗನಿರೋಧಕ ಶಕ್ತಿಯೂ ಬಹಳಷ್ಟು ಇದೆ. ಅವರ ಇಬ್ಬರು ಮಕ್ಕಳಿಗೂ ನಿಗೆಟಿವ್‌ ಬಂದಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

400 ಬೆಡ್‌ ವ್ಯವಸ್ಥೆ: ‘ಜಿಲ್ಲಾ ಆಸ್ಪತ್ರೆಯಲ್ಲಿ 400 ಬೆಡ್‌ಗಳ ವ್ಯವಸ್ಥೆಯಿದ್ದು, ಅಗತ್ಯ ಬಿದ್ದರೆ ಕೋವಿಡ್‌ ಆಸ್ಪತ್ರೆಯನ್ನಾಗಿ ಮಾರ್ಪಡಿಸಲಾಗುವುದು. ಇಲ್ಲಿ 100 ಬೆಡ್‌ಗಳಿಗೆ ಸೆಂಟ್ರಲೈಜ್‌ ಆಕ್ಸಿಜನ್‌ ಪೂರೈಕೆ ವ್ಯವಸ್ಥೆ ಹಾಗೂ 7 ವೆಂಟಿಲೇಟರ್‌ ಸೌಲಭ್ಯಗಳಿವೆ. ಸದ್ಯ ಹೊರಗಡೆ ಫಿವರ್‌ ಕ್ಲಿನಿಕ್‌ ತೆರೆಯಲಾಗಿದ್ದು, ತಪಾಸಣೆ ಮಾಡಲಾಗುತ್ತಿದೆ’ ಎಂದು ಮಹಾಂತೇಶ ಬೀಳಗಿ ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪದ್ಮ ಬಸವಂತಪ್ಪ, ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಘವೇಂದ್ರ ಸ್ವಾಮಿ, ಪಾಲಿಕೆ ಆಯುಕ್ತ ವಿಶ್ವನಾಥ ಮುದ್ದಜ್ಜಿ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್‌ ಅವರೂ ಇದ್ದರು.

ವಾರದ ಬಳಿಕ ಕಾಣಿಸಿಕೊಂಡ ರೋಗಲಕ್ಷಣ

ವಿದೇಶದಿಂದ ಮಾರ್ಚ್‌ 18ರಂದು ನಗರಕ್ಕೆ ಬಂದಿದ್ದ ವೈದ್ಯರಲ್ಲಿ ವಾರದ ಬಳಿಕ ಕೊರೊನಾ ಸೋಂಕಿನ ಲಕ್ಷಣ ಕಾಣಿಸಿಕೊಂಡಿದೆ.

‘ವಿದೇಶದಿಂದ ಬಂದಿರುವ ವ್ಯಕ್ತಿಯ ಬಗ್ಗೆ ಮಾರ್ಚ್‌ 21ರಂದು ರಾತ್ರಿ ಬಂದ ಮಾಹಿತಿ ಆಧರಿಸಿ ಮರುದಿನವೇ ಅವರ ಮನೆಗೆ ತೆರಳಿ ತಪಾಸಣೆ ಮಾಡಲಾಗಿತ್ತು. ಹೋಂ ಕ್ವಾರಂಟೈನ್‌ನಲ್ಲಿ ಇರುವಂತೆ ತಿಳಿಸಲಾಗಿತ್ತು. ನಾವು ನಿಗಾ ವಹಿಸುತ್ತಿದ್ದ ಮೂರು ದಿನಗಳ ಕಾಲವೂ ರೋಗ ಲಕ್ಷಣ ಕಾಣಿಸಿಕೊಂಡಿರಲಿಲ್ಲ. 25ರಂದು ರೋಗ ಲಕ್ಷಣ ಕಂಡು ಬಂದಿದ್ದರಿಂದ ಮಾದರಿ ಸಂಗ್ರಹಿಸಿ ಪರೀಕ್ಷೆ ಕಳುಹಿಸಲಾಗಿತ್ತು’ ಎಂದು ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ. ಜಿ.ಡಿ. ರಾಘವನ್‌ ತಿಳಿಸಿದರು.

‘ಕೊರೊನಾ ಸೋಂಕಿತರಲ್ಲಿ ಶೇ 80ರಷ್ಟು ಜನ ಚಿಕಿತ್ಸೆಯಿಂದ ಗುಣಮುಖರಾಗುತ್ತಿದ್ದಾರೆ. ಬೆಂಗಳೂರಿನಲ್ಲೂ ನಾಲ್ವರು ರೋಗಿಗಗಳು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಅಸ್ತಮಾ, ಮೂತ್ರಪಿಂಡ, ಮಧುಮೇಹ, ಅಧಿಕ ರಕ್ತದೊತ್ತಡದಂತಹ ಕಾಯಿಲೆಗಳಿರುವ 65 ವರ್ಷ ಮೇಲಿನ ವ್ಯಕ್ತಿಗಳಿಗೆ ಈ ರೋಗ ಬಂದಾಗ ಸಾಯುವ ಪ್ರಮಾಣ ಹೆಚ್ಚಿರುತ್ತದೆ. ದಾವಣಗೆರೆಯಲ್ಲಿ ಸೋಂಕಿತ ವ್ಯಕ್ತಿ ಯುವಕನಾಗಿರುವುದರಿಂದ ಗುಣಮುಖರಾಗುವ ಪ್ರಮಾಣ ಶೇ 95ರಷ್ಟಿದೆ. ಈ ಪ್ರಕರಣದಿಂದ ಯಾರೂ ಭಯ ಪಡಬೇಕಾಗಿಲ್ಲ’ ಎಂದು ಸ್ಪಷ್ಟಪಡಿಸಿದರು.

32 ಮಾದರಿಯಲ್ಲಿ 27 ನೆಗೆಟಿವ್‌

‘ಜಿಲ್ಲೆಯಿಂದ ಇದುವರೆಗೆ ಒಟ್ಟು 37 ಜನರ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ಅವುಗಳ ಪೈಕಿ ಒಟ್ಟು 27 ‘ಕೊರೊನಾ’ ನೆಗೆಟಿವ್‌ ಎಂದು ವರದಿ ಬಂದಿದೆ’ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಶುಕ್ರವಾರ ಒಂದು ಮಾದರಿ ಕೊರೊನಾ ಪಾಸಿಟಿವ್‌ ಹಾಗೂ ಎರಡು ಮಾದರಿ ನೆಗೆಟಿವ್‌ ಎಂದು ಬಂದಿದೆ. ಹೊಸದಾಗಿ ಒಂದು ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿದೆ ಎಂದರು.

ಇದುವರೆಗೆ ಒಟ್ಟು 333 ಜನರನ್ನು ಅವಲೋಕನೆಗೆ ಪಟ್ಟಿ ಮಾಡಲಾಗಿದೆ. ಒಟ್ಟು 179 ಜನ 14 ದಿನಗಳ ಅವಲೋಕನ ಪೂರ್ಣಗೊಳಿಸಿದ್ದಾರೆ. 154 ಜನ ಮನೆಯಲ್ಲೇ ಪ್ರತ್ಯೇಕವಾಗಿ ಉಳಿದಿದ್ದಾರೆ. 25 ಜನರಲ್ಲಿ ಆಸ್ಪತ್ರೆಯಲ್ಲಿ ಇಟ್ಟುಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ಸೋಂಕಿತರ ವಿವರ ಬಹಿರಂಗಪಡಿಸಿದರೆ ಕ್ರಮ: ಎಸ್ಪಿ

‘ಕೊರೊನಾ ಸೋಂಕಿತರ ಫೋಟೊ, ವ್ಯಯಕ್ತಿಕ ವಿವರಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಾಕಿ ಬಹಿರಂಗಪಡಿಸಿದರೆ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್‌ 79ರ ಪ್ರಕಾರ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಹನುಮಂತರಾಯ ಎಚ್ಚರಿಕೆ ನೀಡಿದರು.

‘ಶುಕ್ರವಾರ ದೃಢಪಟ್ಟ ಸೋಂಕಿತ ವ್ಯಕ್ತಿಯ ಫೋಟೊವನ್ನು ವಾಟ್ಸ್‌ಆ್ಯಪ್‌ನಲ್ಲಿ ಹಾಕಲಾಗಿದೆ. ಇದನ್ನು ಯಾರು ಕಳುಹಿಸಿದ್ದಾರೆ ಎಂಬ ಬಗ್ಗೆ ಸೈಬರ್‌ ಪೊಲೀಸರಿಂದ ತನಿಖೆ ನಡೆಸಲಾಗುವುದು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT