ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ವಾರಿಯರ್‌ಗಳ ಸೇವೆ ಅವಿಸ್ಮರಣೀಯ: ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ

ನ್ಯಾಮತಿ-– ಹೊನ್ನಾಳಿ ತಾಲ್ಲೂಕಿನ 5,250 ಕೊರೊನಾ ವಾರಿಯರ್ಸ್‌ಗೆ ಸನ್ಮಾನ
Last Updated 20 ಅಕ್ಟೋಬರ್ 2021, 4:05 IST
ಅಕ್ಷರ ಗಾತ್ರ

ನ್ಯಾಮತಿ: ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಕೊರೊನಾ ಸೋಂಕಿತರು ಗುಣಮುಖರಾಗಲು ಶ್ರಮಿಸಿದ ಕೊರೊನಾ ವಾರಿಯರ್‌ಗಳ ಸೇವೆಯನ್ನು ಶಬ್ದಗಳಿಂದ ಕಟ್ಟಲು ಸಾಧ್ಯವಿಲ್ಲ. ಅವರ ಸೇವೆ ಅವಿಸ್ಮರಣೀಯ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮೆಚ್ಚುಗೆ ವ್ಯಕ್ತಪಡಿಸಿದರು.

ಪಟ್ಟಣದ ಬಾಲಕಿಯರ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ನ್ಯಾಮತಿ-ಹೊನ್ನಾಳಿ ತಾಲ್ಲೂಕಿನ ವಿವಿಧ ಇಲಾಖೆಗಳ ಸುಮಾರು 5,250 ಸಿಬ್ಬಂದಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

‘ಗಂಡ, ಹೆಂಡತಿ, ಮಕ್ಕಳು, ತಾಯಿ, ತಂದೆಯನ್ನೂ ಮಾತನಾಡಿಸಲಾರದಂತಹ ಸನ್ನಿವೇಶ. ಎಷ್ಟೋ ಜನರ ಸಾವುಗಳನ್ನು ನಾವೂ ಕಂಡಿದ್ದೇವೆ. ಪ್ರಸ್ತುತ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಹಾಗೆಂದು ಮೈಮರೆಯಬಾರದು. ಪ್ರಧಾನಿ ನರೇಂದ್ರ ಮೋದಿ ಸೂಚಿಸಿರುವಂತೆ ಎಲ್ಲರೂ ನಿಯಮಗಳನ್ನು ಪಾಲಿಸಬೇಕು’ ಎಂದು ತಿಳಿಸಿದರು.

‘ಕೊರೊನಾ ಸಮಯದಲ್ಲಿ ಅವಳಿ ತಾಲ್ಲೂಕಿನ ಶಾಸಕರಾಗಿ ಎಂ.ಪಿ. ರೇಣುಕಾಚಾರ್ಯ ಉತ್ತಮ ಕೆಲಸ ಮಾಡಿದ್ದಾರೆ. ಎರಡೂ ತಾಲ್ಲೂಕುಗಳನ್ನು ಮಾದರಿಯಾಗಿಸಲು ಶ್ರಮಿಸುತ್ತಿದ್ದು, ಅವರ ಪ್ರಯತ್ನವನ್ನು ಮೆಚ್ಚಿ ಕೇಳಿದಷ್ಟು ಅನುದಾನವನ್ನು ನೀಡಿದ್ದೇನೆ. ರೇಣುಕಾಚಾರ್ಯ ಅವರು ತಮಗಾಗಿ ಏನೂ ಕೇಳದೆ ಜನರ ಅಭಿವೃದ್ಧಿಯ ತುಡಿತ ಹೊಂದಿರುವುದರಿಂದ ಅವರ ಕ್ಷೇತ್ರ ನನ್ನ ಕ್ಷೇತ್ರ ಶಿಕಾರಿಪುರವನ್ನೂ ಮೀರಿಸಿ ಅಭಿವೃದ್ಧಿ ಹೊಂದುತ್ತಿದೆ. ಮುಂದಿನ ದಿನಗಳಲ್ಲಿಯೂ ರೇಣುಕಾಚಾರ್ಯ ಅವರನ್ನು ಬೆಂಬಲಿಸಬೇಕು’ ಎಂದರು.

ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಮಾತನಾಡಿ, ‘ಲಸಿಕೆ ಕಾರ್ಯಕ್ರಮದಲ್ಲಿ ನಮ್ಮ ದೇಶ ವಿಶ್ವದಲ್ಲಿಯೇ ಮೊದಲ ಸ್ಥಾನದಲ್ಲಿದೆ. ಮೊದಲ ಡೋಸ್ ಪಡೆದವರು ಕಡ್ಡಾಯವಾಗಿ 2ನೇ ಡೋಸ್ ಹಾಕಿಸಿಕೊಳ್ಳಬೇಕು. ಪ್ರತಿಯೊಬ್ಬರೂ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೋವಿಡ್‌ ಅನ್ನು ಶಾಶ್ವತವಾಗಿ ನಿರ್ನಾಮ ಮಾಡಲು ಸಹಕರಿಸಬೇಕು’ ಎಂದು ಮನವಿ ಮಾಡಿದರು.

ಶಾಸಕ ಎಂ.ಪಿ. ರೇಣುಕಾಚಾರ್ಯ ಮಾತನಾಡಿ, ‘ಯಾರ ಟೀಕೆಗೂ, ಬೆದರಿಕೆಗೂ ನಾನು ಜಗ್ಗುವುದಿಲ್ಲ. ಕೊರೊನಾ ಸಮಯದಲ್ಲಿ ನನ್ನ ಕೆಲಸದ ಬಗ್ಗೆ ಟೀಕೆ ಮಾಡಿದವರಿಗೆ ಜನರೇ ಉತ್ತರ ಕೊಡುತ್ತಾರೆ’ ಎಂದರು.

ಸಂಸದ ಜಿ.ಎಂ. ಸಿದ್ದೇಶ್ವರ, ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ ಮಾತನಾಡಿದರು.

ಅವಳಿ ತಾಲ್ಲೂಕಿನ ಜನರ ಪರವಾಗಿ ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ‘ಸೂಪರ್ ಕೊರೊನಾ ವಾರಿಯರ್‌’ ಪ್ರಶಸ್ತಿ ಪ್ರದಾನ ಮಾಡಿದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್‌, ಜಿಲ್ಲಾ ಪಂಚಾಯಿತಿ ಸಿಇಒ ವಿಜಯ ಮಹಾಂತೇಶ ದಾನಮ್ಮನವರ್‌, ವಿವಿಧ ಇಲಾಖೆಗಳ ಅಧಿಕಾರಿಗಳು,ಗ್ರಾಮ ಪಂಚಾಯಿತಿ ಸಿಬ್ಬಂದಿ, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು, ಪೌರಕಾರ್ಮಿಕರು, ಯೋಧರಿಗೆ ಉಡುಗೊರೆ ನೀಡುವ ಮೂಲಕ ಸನ್ಮಾನಿಸಲಾಯಿತು. ಶಾಸಕ ಪ್ರೊ.ಲಿಂಗಣ್ಣ, ಶಿವಮೊಗ್ಗ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜ್ಯೋತಿಪ್ರಕಾಶ್‌, ಸುಮಾ ರೇಣುಕಾಚಾರ್ಯ, ನ್ಯಾಮತಿ ನೂತನ ತಹಶೀಲ್ದಾರ್ ರೇಣುಕಾ, ಹೊನ್ನಾಳಿ ತಹಶೀಲ್ದಾರ್ ಬಸನಗೌಡ ಕೋಟೂರ, ತಾಲ್ಲೂಕು ಪಂಚಾಯಿತಿ ಇಒ ರಾಮಭೋವಿ, ಮುಖ್ಯಾಧಿಕಾರಿ ಬಿ.ಕೆ. ಕೊಟ್ರೇಶಿ ಉಪಸ್ಥಿತರಿದ್ದರು.

ಕೃತಜ್ಞತೆ ಸಲ್ಲಿಸಿದ ಡಿಸಿ, ಎಸ್‌ಪಿ

ನ್ಯಾಮತಿ: ದಾವಣಗೆರೆ ಜಿಲ್ಲೆಯಲ್ಲಿ ಕೋವಿಡ್ 2ನೇ ಆಲೆಯ ಪ್ರಮಾಣ ಕಡಿಮೆಯಾಗಲು ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ ಹೇಳಿದರು.

‘ನಾನು ಜಿಲ್ಲೆಗೆ ಈಚೆಗೆ ವರ್ಗಾವಣೆಯಾಗಿ ಬಂದಿದ್ದು, ಇಂದಿನ ಸನ್ಮಾನ ಹಿಂದಿನ ಎಸ್‌ಪಿ ಹನುಮಂತರಾಯ ಹಾಗೂ ನಮ್ಮ ಇಲಾಖೆಯ ಪ್ರತಿಯೊಬ್ಬರಿಗೂ ಸಲ್ಲಬೇಕು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ. ರಿಷ್ಯಂತ್ ಹೇಳಿದರು.

ಆಶಾ-ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಆಯನೂರು ಆಗ್ರಹ

ನ್ಯಾಮತಿ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ವೇತನ ಹೆಚ್ಚಳಕ್ಕೆ ಸರ್ಕಾರ ಗಮನಹರಿಸಬೇಕು ಎಂದು ವಿಧಾನಪರಿಷತ್‌ ಸದಸ್ಯ ಆಯನೂರು ಮಂಜುನಾಥ ಆಗ್ರಹಿಸಿದರು.

ಕೋವಿಡ್ ಸಮಯದಲ್ಲಿ ಕುಟುಂಬದವರನ್ನು ದೂರ ಇಟ್ಟು, ಸಾವಿನ ಭೀತಿ ನಡುವೆಯೂ ಕರ್ತವ್ಯ ನಿರ್ವಹಿಸಿದ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಸೇವೆ ಅನನ್ಯ. ಇವರಿಗೆ ಕೊಡುತ್ತಿರುವ ವೇತನ ಯಾವುದಕ್ಕೂ ಸಾಲದು. ಇವರಿಗೆ ಹೆಚ್ಚಿನ ಸೌಲಭ್ಯ ಒದಗಿಸಬೇಕಿದೆ. ಹಿಡಿದ ಕೆಲಸ ಸಾಧಿಸುವ ರೇಣುಕಾಚಾರ್ಯ ಈ ವಿಷಯವನ್ನು ವಿಧಾನಸಭೆಯಲ್ಲಿ ಚರ್ಚೆಗೆ ತರಬೇಕು. ಮುಖ್ಯಮಂತ್ರಿ ಮತ್ತು ಸಚಿವ ಸುಧಾಕರ ಅವರ ಮೇಲೆ ಒತ್ತಡ ಹಾಕಬೇಕು. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸರ್ಕಾರದ ಬ್ಯಾಕ್ ಎಂಜಿನ್ ಇದ್ದಂತೆ. ಅವರೂ ಈ ವಿಚಾರದಲ್ಲಿ ಸರ್ಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿ ಮಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT