ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾದಿಂದ ತಂತ್ರಜ್ಞಾನಕ್ಕೆ ಮತ್ತಷ್ಟು ಮಹತ್ವ: ಇಸ್ರೊ ಮಾಜಿ ಅಧ್ಯಕ್ಷ

ದಾವಣಗೆರೆ ವಿ.ವಿ 7ನೇ ಘಟಿಕೋತ್ಸವದಲ್ಲಿ ಇಸ್ರೊ ಮಾಜಿ ಅಧ್ಯಕ್ಷ ಕಿರಣ್ ಕುಮಾರ್
Last Updated 30 ಸೆಪ್ಟೆಂಬರ್ 2020, 16:26 IST
ಅಕ್ಷರ ಗಾತ್ರ

ದಾವಣಗೆರೆ: ಕೊರೊನಾ ಸೋಂಕು ಬಂದ ಬಳಿಕ ಜನರು ತಂತ್ರಜ್ಞಾನವನ್ನು ಹೆಚ್ಚು ಅವಲಂಬಿಸುವ ಅನಿವಾರ್ಯವನ್ನು ಸೃಷ್ಟಿಸಿದೆ ಎಂದು ಭಾರತೀಯ ಬಾಹ್ಯಕಾಶ ಸಂಶೋಧನಾ ಸಂಸ್ಥೆಯ (ಇಸ್ರೊ) ಮಾಜಿ ಅಧ್ಯಕ್ಷ ಎ.ಎಸ್.ಕಿರಣ್ ಕುಮಾರ್ ತಿಳಿಸಿದರು.

ದಾವಣಗೆರೆ ವಿಶ್ವವಿದ್ಯಾಲಯದ 7ನೇ ಘಟಿಕೋತ್ಸವವನ್ನು ಕೋವಿಡ್‌–19 ಮುನ್ನೆಚ್ಚರಿಕೆ ಕ್ರಮವಾಗಿ ವರ್ಚುವಲ್ ವಿಡಿಯೊ ಮೂಲಕ ಉದ್ಘಾಟನೆ ಮಾಡಿ ಅವರು ಮಾತನಾಡಿದರು.

ವರ್ಚುವಲ್ ಪ್ಲಾಟ್‌ಫಾರಂ, ವಿಡಿಯೊ ಕಾನ್ಫರೆನ್ಸ್, ಟೆಲಿಮೆಡಿಸಿನ್ ಹೀಗೆ ತಂತ್ರಜ್ಞಾನವೇ ಪ್ರಧಾನವಾಗುವ ಪರಿಸ್ಥಿತಿ ಸೃಷ್ಟಿಯಾಗಿದೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು, ವೈಯಕ್ತಿಕ ಸ್ವಚ್ಛತೆ ಮುಂತಾದ ಜಾಗರೂಕತೆಗಳನ್ನು ವೈದ್ಯಕೀಯ ವಿಜ್ಞಾನ ತಿಳಿಸಿಕೊಟ್ಟಿದೆ. ಹಣಪಾವತಿ, ಡಾಟಾ ಸಂಗ್ರಹ ಮೊದಲಾದ ಕಾರ್ಯಗಳಿಗೆ ತಂತ್ರಜ್ಞಾನದ ಅವಲಂಬನೆ ಹೆಚ್ಚಾಗಿದೆ ಎಂದರು.

ಇಂಟರ್ನೆಟ್‌ ಬಳಕೆ, ದೊಡ್ಡ ಮಟ್ಟದಲ್ಲಿ ಡಾಟಾ ಸಂಗ್ರಹ, ಕೃತಕ ಬುದ್ಧಿ ಮತ್ತೆಗಳನ್ನು ವೈರಸ್ ನಿಯಂತ್ರಣ ಕಾರ್ಯದಲ್ಲಿ ಹೆಚ್ಚು ಬಳಕೆ ಮಾಡಿಕೊಳ್ಳಲಾಗುತ್ತಿದೆ. ವೈದ್ಯಕೀಯ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಅಗತ್ಯವನ್ನೂ ಹೆಚ್ಚು ಮಾಡಲಾಗಿದೆ. ವೈರಸ್ ನಿಯಂತ್ರಣ ಕ್ರಮಗಳು, ವೈರಸ್ ಪತ್ತೆ ಯಂತ್ರಗಳು, ಸೋಂಕಿತರನ್ನು ತಿಳಿಸುವ ಮೊಬೈಲ್ ಅಪ್ಲಿಕೇಷನ್‌ಗಳು, ಆನ್‌ಲೈನ್ ಥೆರಪಿ, ಮನೆಯಲ್ಲೇ ಪರೀಕ್ಷೆ, ಸ್ವತಪಾಸಣೆ, ಹೀಗೆ ಎಲ್ಲ ಕಡೆ ತಂತ್ರಜ್ಞಾನವೇ ಮುಂದಿದೆ ಎಂದು ವಿವರಿಸಿದರು.

‘ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಶಿಲಾಯುಗ ಕಾಲದಿಂದಲೇ ಬಳಸಿಕೊಂಡು ಬರಲಾಗಿದೆ. ನಾಗರಿಕತೆಗಳು ಇದರ ಆಧಾರದಲ್ಲಿಯೇ ಬೆಳೆದಿದ್ದವು. ನಾವು ವಿಜ್ಞಾನ, ತಂತ್ರಜ್ಞಾನಗಳನ್ನು ಸಮಾಜ ಸಮಸ್ಯೆಗಳ ಪರಿಹಾರಕ್ಕೆ ಮಾನವೀಯ ನೆಲೆಯಲ್ಲಿ ಹೇಗೆ ಬಳಕೆ ಮಾಡಬಹುದು ಎಂದು ಯೋಚಿಸಿದರೆ ಆವಿಷ್ಕಾರಗಳಿಗೆ ಒಂದು ಅರ್ಥ ಬರುತ್ತದೆ’ ಎಂದು ತಿಳಿಸಿದರು.

ಬಾಹ್ಯಾಕಾಶಕ್ಕೆ ಸಂಬಂಧಿಸಿದಂತೆ ಭಾರಿ ಸಾಧನೆ ಮಾಡಿದ ಕೀರ್ತಿ ಇಸ್ರೊಗೆ ಸಲ್ಲುತ್ತದೆ. ಮೊದಲ ಪುಶ್‌ಬ್ರೂಂ ತಂತ್ರಜ್ಞಾನಕ್ಕೂ ಈಗಿನ ಹವಮಾನ ವಿಜ್ಞಾನ, ಸಂವಹನ, ಪ್ರಸಾರ, ಒಳಗೊಂಡಿರುವ ತಂತ್ರಜ್ಞಾನಕ್ಕೂ ಭಾರಿ ವ್ಯತ್ಯಾಸ ಇದೆ ಎಂದು ವಿವರಿಸಿದರು.

‘ಭಾರತದ ಬಾಹ್ಯಾಕಾಶ ಯೋಜನೆ ಆರಂಭದ ದಿನದಿಂದಲೂ ಉಪಗ್ರಹ ಸಂವಹನ, ಪ್ರಸಾರ, ಭೂಸರ್ವೇಕ್ಷಣೆ, ಬಾಹ್ಯಾಕಾಶ ವಿಜ್ಞಾನ ಅಧ್ಯಯನ, ಬಾಹ್ಯಾಕಾಶ ಸಾರಿಗೆ ವ್ಯವಸ್ಥೆಗಳು ಹಾಗೂ ಸಂಬಂಧಿತ ಯೋಜನೆಗಳು ವಿಶಿಷ್ಟತೆಗಳನ್ನು ರೂಢಿಸಿಕೊಂಡಿದೆ. ಭಾರತವು ಬಾಹ್ಯಾಕಾಶ ತಂತ್ರಜ್ಞಾನವನ್ನು ವಿಕೋಪ ನಿರ್ವಹಣೆ, ಬೆಸ್ತರಿಗೆ ನೆರವು ನೀಡುವಂತಹ ಜನ ಸಾಮಾನ್ಯರಿಗೆ ಉಪಯುಕ್ತ ಕ್ರಮಗಳಿಗೆ ಬಳಸುತ್ತಾ ಬಂದಿದೆ’ ಎಂದು ತಿಳಿಸಿದರು.

ಅಕಾಡೆಮಿಕ್ ಪರೀಕ್ಷೆಗಳಲ್ಲಿ ಉತ್ತೀರ್ಣರಾಗುವುದು ಒಂದು ಸಾಧನೆ. ಮುಂದೆ ನೀವು ಉನ್ನತ ಸ್ಥಾನಗಳಿಗೆ ಹೋಗಬಹುದು. ಅದರ ಜತೆಗೆ ಓದುವ ಹವ್ಯಾಸ, ಕುತೂಹಲ, ಕ್ರಿಯಾಶೀಲ ಚಿಂತನೆ, ಬದ್ಧತೆಗಳನ್ನು ಅಳವಡಿಸಿಕೊಂಡರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ. ಅಗಾಧ ಅವಕಾಶಗಳ ಜಗತ್ತು ಇದು. ಜ್ಞಾನ ಮತ್ತು ಕೌಶಲದೊಂದಿಗೆ ಅವಕಾಶಗಳನ್ನು ಬಳಸಿಕೊಳ್ಳಿ. ಮಾನವೀಯ ಮೌಲ್ಯಗಳೊಂದಿಗೆ ಜನರ ನೋವಿಗೆ, ಸಮಸ್ಯೆಗೆ ಸ್ಪಂದಿಸಿ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಐವರು ವಿದ್ಯಾರ್ಥಿಗಳಿಗೆ ಎಂಫಿಲ್, 56 ವಿದ್ಯಾರ್ಥಿಗಳಿಗೆ ಪಿ.ಎಚ್‌ಡಿ ನೀಡಲಾಯಿತು. 1,592 ಮಂದಿಗೆ ಸ್ನಾತಕೋತ್ತರ, 8,441 ಮಂದಿಗೆ ಸ್ನಾತಕ ಪದವಿ ಪ್ರದಾನ ಮಾಡಲಾಯಿತು. ಸ್ನಾತಕ ಮತ್ತು ಸ್ನಾತಕೋತ್ತರ ವಿಭಾಗದಲ್ಲಿ 34 ವಿದ್ಯಾರ್ಥಿಗಳು 62 ಚಿನ್ನದ ಪದಕ ಪಡೆದರು.

ಕುಲಪತಿ ಹಲಸೆಗೆ ಕೊರೊನಾ

ದಾವಣಗೆರೆ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಶರಣಪ್ಪ ವಿ. ಹಲಸೆ ಅವರಿಗೆ ಕೊರೊನಾ ಸೋಂಕು ಇರುವುದು ಬುಧವಾರ ಬೆಳಿಗ್ಗೆ ದೃಢಪಟ್ಟಿತ್ತು. ಹೀಗಾಗಿ ಅವರು ಘಟಿಕೋತ್ಸವದಲ್ಲಿ ಪಾಲ್ಗೊಂಡಿರಲಿಲ್ಲ. ಆನ್‌ಲೈನ್‌ ಮೂಲಕವೇ ವಿಶ್ವವಿದ್ಯಾಲಯದ ಸಾಧನೆ ಮತ್ತು ಆಗಬೇಕಾದ ಕೆಲಸಗಳ ಬಗ್ಗೆ ಮಾಹಿತಿ ನೀಡಿದರು.

ಕುಲಸಚಿವರಾದ (ಮೌಲ್ಯಮಾಪನ) ಡಾ.ಅನಿತಾ ಎಚ್‌.ಎಸ್‌. ಪದವಿ ಪ್ರದಾನ ಮಾಡಿದರು. ಡಾ.ಗೋಪಾಲ ಎಂ. ಅಡವಿರಾವ್‌, ಹಣಕಾಸು ಅಧಿಕಾರಿ ಎಲ್ಲ ವಿಭಾಗಗಳ ಡೀನ್‌ಗಳು, ಮುಖ್ಯಸ್ಥರು ಉಪಸ್ಥಿತರಿದ್ದರು.

ಗೌರವ ಡಾಕ್ಟರೇಟ್‌ ಸ್ವೀಕರಿಸಬೇಕಿದ್ದ ಕಲಬುರ್ಗಿಯ ಶರಣ ಬಸವೇಶ್ವರ ಅಪ್ಪ ಶೈಕ್ಷಣಿಕ ಸಂಸ್ಥೆಗಳ ಅಧ್ಯಕ್ಷೆ ಮಾತೋಶ್ರೀ ದಾಕ್ಷಾಯಿಣಿ ಅಪ್ಪ ಅವರು ಹೋಂ ಕ್ವಾರಂಟೈನ್‌ನಲ್ಲಿ ಇರುವುದರಿಂದ ಅವರಿಗೂ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಲಿಲ್ಲ.

ಕಾಫಿ ಪ್ಲಾಂಟೇಶನ್‌ ಮ್ಯಾನೇಜರ್‌ ಮಗನಿಗೆ ಚಿನ್ನದ ಪದಕ

ಸ್ವಂತ ಹದಿನೈದು ಎಕರೆ ಕಾಫಿತೋಟ ಮತ್ತು ಇತರೆ 500 ಎಕರೆ ಕಾಫಿ ಪ್ಲಾಂಟೇಷನ್ ಮ್ಯಾನೇಜರ್‌ ಮಗ ಎಂ.ಬಿ. ಪೊನ್ನಣ್ಣ ಮೈಕ್ರೋಬಯಾಲಜಿಯಲ್ಲಿ ಎಂ.ಎಸ್ಸಿಯಲ್ಲಿ ಎರಡು ಚಿನ್ನದ ಪದಕ ಪಡೆದಿದ್ದಾರೆ.

ಮಡಿಕೇರಿಯ ಬೋಪಣ್ಣ–ಪ್ರೀತಿ ಅವರ ಮಗ ಬೆಂಗಳೂರಿನ ಖಾಸಗಿ ಕಂಪನಿಯಲ್ಲಿ ಈಗ ಸಹಾಯಕ ವಿಜ್ಞಾನಿಯಾಗಿದ್ದಾರೆ. ಗುಣಮಟ್ಟ ನಿಯಂತ್ರಣ ವಿಷಯದ ಕುರಿತ ಸಂಶೋಧನೆಯಲ್ಲಿ ತೊಡಗಿದ್ದಾರೆ.

‘ಅಪ್ಪನ ಆಸ್ತಿ ನನಗೆ ಬರುತ್ತದೆ. ಅದು ನನ್ನ ಸಾಧನೆಯಾಗದು. ವಿಜ್ಞಾನಿಯಾಗಿ ಸಾಧನೆ ಮಾಡಬೇಕು ಎಂಬ ಆಸೆಯಿಂದ ನನ್ನದೇ ದಾರಿ ಆಯ್ಕೆ ಮಾಡಿಕೊಂಡಿದ್ದೇನೆ’ ಎಂದರು.

ಚಿನ್ನದ ಪದಕ ವಿಜೇತರ ಮಾತುಗಳು

ನಿರೀಕ್ಷೆ ಇರಲಿಲ್ಲ

ಚಿನ್ನದ ಪದಕ ಪಡೆಯುವ ವಿಶ್ವಾಸ ಇತ್ತು. ಆದರೆ, ನಾಲ್ಕು ಪದಕ ಪಡೆಯುತ್ತೇನೆ ಎಂದು ಗೊತ್ತಿರಲಿಲ್ಲ.

– ವಿನಯವತಿ ಕೆ.ವಿ., ಎಂ.ಎ ಕನ್ನಡ ಅಧ್ಯಯನದಲ್ಲಿ ಚಿನ್ನದ ಪದಕ ವಿಜೇತೆ

ಮಾಧ್ಯಮ ಕ್ಷೇತ್ರ ಬೇಡ

ಬರವಣಿಗೆ ನನ್ನ ಆಸಕ್ತಿಯ ಕ್ಷೇತ್ರ. ಇಷ್ಟಪಟ್ಟು ಜರ್ನಲಿಸಂ ಮಾಡಿದೆ. ಅದರ ಜತೆಗೆ ಪತ್ರಿಕಾರಂಗದಲ್ಲಿ ಕೆಲಸ ಮಾಡಿದೆ. ಅಂಥದ್ದೇನೂ ಇಲ್ಲ ಎಂಬುದು ಅರಿವಾಗಿದೆ. ಮುಂದೆ ಐಎಎಸ್‌ ಅಥವಾ ಕೆಎಎಸ್‌ ಪಾಸ್‌ ಮಾಡಿ ಜನರ ಸಂಪರ್ಕದಲ್ಲಿ ಇರಬೇಕು.

– ನಂದಿನಿ ಕೆ.ಎಂ., ಜರ್ನಲಿಸಂನಲ್ಲಿ ಚಿನ್ನದ ಪದಕ ವಿಜೇತೆ

ಐಎಎಸ್‌ ಕನಸು

ಮುಂದೆ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು. ಐಎಎಸ್‌ ಆಫೀಸರ್‌ ಆಗಬೇಕು. ಅಪ್ಪ, ಅಮ್ಮ, ಮಂಡ್ಯದಲ್ಲಿ ಕೃಷಿಕರಾಗಿದ್ದಾರೆ.

– ಅನಿಲ್‌ಕುಮಾರ್‌ ಬಿ.ಎಸ್‌., ಮಾರ್ಕೆಟಿಂಗ್‌ ಮ್ಯಾನೇಜ್‌ಮೆಂಟ್‌ ಸ್ಟಡೀಸ್‌ನಲ್ಲಿ ಚಿನ್ನದ ಪದಕ ವಿಜೇತ.

ಅಪ್ಪನಿಗೆ ಅರ್ಪಣೆ

ನನಗೆ ಬಿಇಡಿ ಮಾಡುವುದು ಇಷ್ಟವಿರಲಿಲ್ಲ. ಅಪ್ಪ ಒತ್ತಾಯಪೂರ್ವಕವಾಗಿ ನನ್ನನ್ನು ಬಿಇಡಿಗೆ ಸೇರಿಸಿದರು. ಈಗ ಚಿನ್ನದ ಪದಕ ಸಿಕ್ಕಿರುವುದು ಖುಷಿಯಾಗಿದೆ. ಈ ಪದಕಗಳನ್ನು ಅಪ್ಪನಿಗೆ ಅರ್ಪಿಸುತ್ತೇನೆ.

– ಉಮಾಮಹೇಶ್ವರಿ, ರಾಣೆಬೆನ್ನೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT